More

    ಅಡಕೆಗೆ ಹಿಂಗಾರ ರೋಗಬಾಧೆ

    ಕಡಬ: ಕಳೆದ ವರ್ಷ ಪ್ರಾಕೃತಿಕ ವಿಕೋಪದಲ್ಲಿ ಅಡಕೆ ಇಳುವರಿಯ ಏರಿಳಿತ ಕಂಡು ಕಂಗಾಲಾಗಿದ್ದ ರೈತನಿಗೆ ಈ ಬಾರಿ ಅಡಕೆ ಹಿಂಗಾರಕ್ಕೆ ನಿಗೂಢ ರೋಗಬಾಧೆ ಆವರಿಸಿ ಮತ್ತೊಂದು ಹೊಡೆತ ಬಿದ್ದಿದೆ.
    ಕಡಬ ತಾಲೂಕು ಪೆರಾಬೆ ಗ್ರಾಮದ ಇಡಾಳ ಶ್ರೀಧರ ಗೌಡ ಎಂಬುವರ ಅಡಕೆ ತೋಟ ಸಂಪೂರ್ಣ ಈ ರೋಗಕ್ಕೆ ಆಹುತಿಯಾಗಿದೆ. ಅಡಕೆ ಫಸಲು ಬದಲು ಕೇವಲ ಒಣಗಿದ ಹಿಂಗಾರವೆ ಕಾಣುತ್ತಿದೆ. ಶ್ರೀಧರ ಗೌಡರಿಗೆ ಸುಮಾರು ಆರುನೂರು ಅಡಕೆ ಮರಗಳ ಅಡಕೆ ತೋಟವಿದೆ. ಹದಿನೇಳು ವರ್ಷ ಹರೆಯದ ಅಡಕೆ ಮರಗಳಿವು. ಈ ತೋಟದಲ್ಲಿ ಏನಿಲ್ಲವೆಂದರೂ ವರ್ಷಕ್ಕೆ ಹನ್ನೆರಡು ಕ್ವಿಂಟಾಲ್ ಅಡಕೆ ಪಡೆಯುತ್ತಾರೆ. ಈ ವರ್ಷದ ಬೆಳೆಗೆ ನಿಗೂಢ ರೋಗ ಬಾಧೆ ಆವರಿಸಿ ಕೇವಲ ಇಪ್ಪತ್ತೈದು ಕೆ.ಜಿ ಅಡಕೆ ಸಿಗುವಷ್ಟರ ಮಟ್ಟಿಗೆ ನಿಂತಿದೆ.
    ಎರಡು ತಿಂಗಳಿಂದ ನಿರಂತರವಾಗಿ ಈ ರೋಗ ಕಾಡುತ್ತಿದೆ. ಮಳೆಗಾಲ ಪ್ರಾರಂಭವಾದರೂ ಹಿಂಗಾರ ಒಣಗುವುದು ಮಾತ್ರ ನಿಲ್ಲುವುದಿಲ್ಲ. ಸಾಮಾನ್ಯವಾಗಿ ಆಷಾಢ ಮಾಸದಲ್ಲಿ ಹೊರತುಪಡಿಸಿ ಉಳಿದ ಸಮಯದಲ್ಲಿ ಅಡಕೆ ಹಿಂಗಾರ ಬಿಡುತ್ತಿರುತ್ತದೆ. ಶ್ರೀಧರ ಗೌಡರ ತೋಟದಲ್ಲಿ ಬಿಟ್ಟು ಬಿಡದೆ ರೋಗ ಆವರಿಸಿ ಈ ಒಂದು ವರ್ಷದ ಅಡಕೆ ಫಸಲನ್ನೇ ಕಳೆದುಕೊಂಡಂತಾಗಿದೆ.

    ಕಳೆದ ಬೇಸಿಗೆಯಲ್ಲಿ ಅಡಕೆ ಹಿಂಗಾರ ಒಣಗುವ ರೋಗ ಪ್ರಾರಂಭವಾಗಿ ಮಳೆಗಾಲ ಪ್ರಾರಂಭವಾದರೂ ಅದು ನಿಲ್ಲುವ ಸೂಚನೆ ಇಲ್ಲ. ಈ ವರ್ಷ ಅಡಕೆ ಫಸಲು ಸಿಗುವ ಯಾವುದೇ ನಿರೀಕ್ಷೆ ಇಲ್ಲ. ಏಕೆಂದರೆ ಹಿಂಗಾರ ಒಣಗಿ ಕಾಯಿ ಬಿಡಲೇ ಇಲ್ಲ. ಇನ್ನು ಫಸಲು ಎಲ್ಲಿಂದ ಬರಬಹುದು, ಸಾವಯವ ಕೃಷಿ ಮಾಡಿದರೂ ರೋಗಬಾಧೆ ಕಂಡು ಬಂದಿದೆ.
    ಶ್ರೀಧರ ಗೌಡ ಇಡಾಳ, ನೊಂದ ರೈತ

    ಶಿಲೀಂಧ್ರದಿಂದ ಬರುವ ರೋಗ ಸಾಮಾನ್ಯವಾಗಿ ಜನವರಿಯಿಂದ ಜೂನ್ ತನಕ ಇರುತ್ತದೆ. ಅಡಕೆ ಮರದಲ್ಲಿ ಉಳಿದಿರುವ ಒಣ ಹಿಂಗಾರದಿಂದಲೂ ರೋಗ ಹರಡುತ್ತದೆ. ಅಡಕೆ ಕೀಳುವಾಗ ನಾವು ಅಡಕೆ ಮರದ ಒಣ ಹಿಂಗಾರವನ್ನೂ ಕಿತ್ತು ಸ್ವಚ್ಛ ಮಾಡಬೇಕು. ಡೈಟಿನಿಯಂ 45ನ್ನು ಪ್ರತೀ ಲೀಟರ್‌ಗೆ ಮೂರು ಗ್ರಾಂ ಸೇರಿಸಿ ಜನವರಿ- ಫೆಬ್ರವರಿ ಹಂಗಾಮಿನಲ್ಲಿ ಸಿಂಪಡಣೆ ಮಾಡಬೇಕು. ಕಡಿಮೆಯಾಗದಿದ್ದರೆ 45 ದಿನಗಳ ಬಳಿಕ ಮತ್ತೆ ಸಿಂಪಡಣೆ ಮಾಡಬೇಕು. ಇದರಿಂದ ನಿರ್ಮೂಲನೆಯಾಗುತ್ತದೆ. ಅಥವಾ ಟರ್ಬನ್ ಡೈಸೋಯಿಮ್ ಕೆಮಿಕಲ್‌ನ್ನು 2 ಲೀ. ನೀರಿಗೆ ಮೂರು ಗ್ರಾಂ ಬೆರೆಸಿ ಸಿಂಪಡಿಸಿದರೆ ಉತ್ತಮ.
    ಡಾ.ನಾಗರಾಜ್ ಪಾಡಿಯೊಪ್ಪಾರ್, ಮುಖ್ಯಸ್ಥರು, ಅಡಕೆ ಸಂಶೋಧನಾ ಕೇಂದ್ರ ಶಿವಮೊಗ್ಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts