More

    ಅಡಕೆಗಿಲ್ಲ ಕರೊನಾ ಭಯ

    ಶ್ರವಣ್ ಕುಮಾರ್ ನಾಳ, ಪುತ್ತೂರು
    ಕ್ಯಾಂಪ್ಕೊದಿಂದ ಅಡಕೆ ಖರೀದಿ ಸಂಪೂರ್ಣ ಸ್ಥಗಿತಗೊಂಡಿದ್ದು, ಬೆಲೆ ಇಳಿಕೆಯಾಗಿದೆ ಎಂದು ಪ್ರಚಾರ ಮಾಡಿ ರೈತರಿಂದ ಕಡಿಮೆ ಬೆಲೆಗೆ ಅಡಕೆ ಪಡೆದುಕೊಳ್ಳುವ ದಂಧೆ ಮುಕ್ತ ಮಾರುಕಟ್ಟೆಯಲ್ಲಿ ಕಂಡುಬಂದಿದೆ.
    ಕರೊನಾ ವೈರಸ್ ಭೀತಿ ಹಿನ್ನಲೆಯಲ್ಲಿ ಶಿವಮೊಗ್ಗ, ದಾವಣಗೆರೆ, ಸಿರಸಿ, ಉತ್ತರಕನ್ನಡ ಹೊರತುಪಡಿಸಿ ಉಳಿದೆಲ್ಲ ಕ್ಯಾಂಪ್ಕೊ ಅಡಕೆ ಕೇಂದ್ರಗಳಲ್ಲಿ ಖರೀದಿ ಸ್ಥಗಿತಗೊಂಡಿದೆ. ಮುಕ್ತ ಮಾರುಕಟ್ಟೆ ಕೂಡ ಸಂಪೂರ್ಣ ಬಂದ್ ಆಗಿದ್ದು ಧಾರಣೆ ಇಳಿಕೆಯಾಗಿದೆ ಎಂಬ ಪ್ರಚಾರ ಹಬ್ಬುತ್ತಿದೆ. ಕಳೆದ ವಾರ ಮಾರುಕಟ್ಟೆಯಲ್ಲಿ ಹೊಸ ಅಡಕೆ 267-270 ರೂ, ಹಳೇ ಅಡಕೆ 300-305 ರೂ. ಧಾರಣೆ ಸ್ಥಿರವಾಗಿದ್ದರೂ, ಪ್ರಸ್ತುತ ವರ್ತಕರು ರೈತರನ್ನು ಸಂಪರ್ಕಸಿ ಕಡಿಮೆ ಬೆಳೆಗೆ ಅಡಕೆ ಖರೀದಿ ಮಾಡುವ ಜಾಲ ಹೆಚ್ಚಾಗಿದೆ.

    ಅಡಕೆ ಬೆಲೆ ಇಳಿಕೆಯಾಗಿದೆ ಎಂದು ಸುದ್ದಿ ಹಬ್ಬಿಸಿ ರೈತರಿಂದ ಕಡಿಮೆ ಬೆಲೆಗೆ ಪಡೆದುಕೊಳ್ಳುವ ವರ್ತಕರ ದಂಧೆ ತಡೆಯಲು ಕ್ಯಾಂಪ್ಕೊ ಮಹತ್ತರ ಯೋಜನೆ ರೂಪಿಸಿದ್ದು, ಸ್ಥಳೀಯ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಅಡಕೆ ಪ್ಲಜ್ ಲೋನ್ ನೀಡುವಂತೆ ನಿರ್ದೇಶನ ನೀಡಿದೆ. ಬಹುತೇಕ ಸ್ಥಳೀಯ ಕೃಷಿ ಪತ್ತಿನ ಸಹಕಾರಿ ಸಂಘಗಳು ಒಪ್ಪಿಗೆಯನ್ನೂ ಸೂಚಿಸಿದೆ. ಪ್ರತಿ ಕೆಜಿ ಅಡಕೆಗೆ ಸರಾಸರಿ 250 ರೂ. ಬೆಲೆ ನಿಗದಿಪಡಿಸಿ, ಒಟ್ಟು ಅಡಕೆ ಮೌಲ್ಯದ ಶೇ.50ರಷ್ಟು ಕಡಿಮೆ ಬಡ್ಡಿ ಅಥವಾ ಬಡ್ಡಿರಹಿತ(ಸಹಕಾರಿ ಸಂಘದ ವಿವೇಚನೆಗೆ ಬಿಟ್ಟದ್ದು) ಲೋನ್ ವ್ಯವಸ್ಥೆ ಬೆಳೆಗಾರರಿಗೆ ನೀಡುವಂತೆ ಮನವಿ ಮಾಡಿದೆ.

    ಬೆಲೆ ಇಳಿಕೆ ಅಸಾಧ್ಯ
    ಅಡಕೆ ಖರೀದಿ, ಆಮದು, ರಫ್ತು ಸಂಪೂರ್ಣ ಸ್ಥಗಿತಗೊಂಡಿರುವುದು ನಿಜ. ಆದರೆ ಈ ಬಾರಿ ಅಡಕೆ ಇಳುವರಿ, ಅಡಕೆ ವ್ಯಾಪಾರ ಗಮನಿಸಿದರೆ ಬೆಲೆ ಇಳಿಕೆ ಅಸಾಧ್ಯ. ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅಡಕೆ ದಾಸ್ತಾನು ಕೊರತೆಯಾಗಿದೆ. ಬೇಡಿಕೆ ಹೆಚ್ಚಾಗಿದ್ದು, ಪೂರೈಕೆಗೆ ಬೇಕಾದಷ್ಟು ಇಳುವರಿ ಈ ಬಾರಿ ಆಗಿಲ್ಲ. ಆದ್ದರಿಂದ ಅಡಕೆ ಬೆಳೆಗಾರರು ಯಾವುದೇ ಭಯ, ಗಾಳಿ ಸುದ್ದಿಗೆ ಕಿವಿಗೊಡದೆ ಕಡಿಮೆ ಬೆಲೆಗೆ ಅಡಕೆ ಮಾರಾಟ ಮಾಡಬಾರದೆಂದು ಕ್ಯಾಂಪ್ಕೊ ಅಧ್ಯಕ್ಷ ಸತೀಶ್ಚಂದ್ರ ತಿಳಿಸಿದ್ದಾರೆ.

    ಮನೆಮನೆ ಸಂಪರ್ಕದಲ್ಲಿ ವರ್ತಕರು
    ಅಡಕೆ ಬೆಳೆ ಇಳಿಕೆಯಾಗಿದೆ ಎಂದು ಪ್ರಚಾರ ಹಬ್ಬಿಸುವ ವರ್ತಕರು ಬೆಳೆಗಾರರ ಮನೆಗಳನ್ನು ಸಂಪರ್ಕಸಿ 200-210 ರೂ. ಧಾರಣೆಯಲ್ಲಿ ಅಡಕೆ ಖರೀದಿಸುವುದು ಹೆಚ್ಚಾಗತೊಡಗಿದೆ. ಧಾರಣೆ ಇಳಿಕೆಯಾಗಿದೆ ಎಂಬ ಗಾಳಿ ಸುದ್ದಿ ನಂಬಿ ಬಹುತೇಕ ರೈತರು ವರ್ತಕರನ್ನು ಸಂಪರ್ಕಿಸಿರುವುದೂ ಹಲವೆಡೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಅಡಕೆ ಪ್ಲೆಜ್‌ಲೋನ್‌ಗೆ ಅವಕಾಶ ನೀಡುವಂತೆ ಕ್ಯಾಂಪ್ಕೊ ಮನವಿಯನ್ನು ಬಹುತೇಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಪುರಸ್ಕರಿಸಿದೆ.

    ಪ್ರಸ್ತುತ ಭಾರತದಲ್ಲಿ ಅಡಕೆ ದಾಸ್ತಾನು ಕೊರತೆ ಇದೆ. ಅಡಕೆ ಬೇಡಿಕೆ ಹೆಚ್ಚಾಗಿದ್ದು, ಅಡಕೆ ಮಾರುಕಟ್ಟೆ ಧಾರಣೆ ಇಳಿಕೆಯಾಗಲು ಸಾಧ್ಯವಿಲ್ಲ. ಅಡಕೆ ಬೇಡಿಕೆ ಹೆಚ್ಚಾಗಿದ್ದರೂ ಕರೊನ ವೈರಸ್ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆ ಸ್ಥಗಿತಗೊಂಡಿದೆ. ರೈತರ ಹಿತದೃಷ್ಟಿಯಿಂದ ಸರ್ಕಾರ ಅಡಕೆ ಖರೀದಿಗೆ ಅವಕಾಶ ನೀಡಿದರೆ ಕ್ಯಾಂಪ್ಕೊ ಸಿದ್ದವಿದೆ.
    ಸತೀಶ್ಚಂದ್ರ ಎಸ್.ಆರ್., ಕ್ಯಾಂಪ್ಕೊ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts