More

    ಪ್ರಜೆಗಳು ನಿಜಕ್ಕೂ ಪ್ರಭುಗಳೇ?

    ಮೋಹನದಾಸ ಕಿಣಿ, ಕಾಪು

    ಹೀಗೊಂದು ಸಮಾನ ನಾಗರಿಕ ಸಂಹಿತೆಯ ಅಗತ್ಯವಿದೆ. ಇಲ್ಲಿ ಹೇಳಲು ಹೊರಟಿರುವುದು ಆ ಸಾಮಾನ್ಯ ನಾಗರಿಕ ಸಂಹಿತೆಯಲ್ಲ, ಇದು ಜನಸಾಮಾನ್ಯರ ಮತ್ತು ತಾವು ಅಸಾಮಾನ್ಯರೆಂದು ಭಾವಿಸಿಕೊಂಡಿರುವವರ ನಡುವಿನ ತಾರತಮ್ಯ ನಿವಾರಣೆಗೆ ಅಗತ್ಯವಿರುವ ಸಮಾನ ನಾಗರಿಕ ಸಂಹಿತೆ; ಅದೇ ಜನಸಾಮಾನ್ಯರ ಮತ್ತು ರಾಜಕೀಯ ಬಲ, ಧನಬಲ, ತೋಳ್ಬಲದ ಮೂಲಕ ಅಸಾಮಾನ್ಯರಾಗಿ ಮೆರೆಯುವವರ ನಡುವಿನ ಅಂತರ ಸರಿಪಡಿಸಲು ಅಗತ್ಯವಿರುವ ಕಾನೂನು.

    ಈ ಕೆಳಗಿನ ‘ಸಮಾನತೆ’ಗಳನ್ನು ಸ್ವಲ್ಪ ನೋಡಿ

    ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಭುವೆನಿಸಿಕೊಳ್ಳುವ ಸಾಮಾನ್ಯ ಮತದಾರನಿಗೆ ಒಂದು ಚುನಾವಣೆಯಲ್ಲಿ ಒಂದೇ ಮತದಾನದ ಹಕ್ಕು ಇದ್ದರೆ ಅಸಾಮಾನ್ಯ ಜನನಾಯಕರು ಒಂದಕ್ಕಿಂತ ಹೆಚ್ಚು ಎಷ್ಟಾದರೂ ಕ್ಷೇತ್ರದಲ್ಲಿ ಏಕಕಾಲದಲ್ಲಿ ಸ್ಪರ್ಧೆ ಮಾಡಬಹುದು.

    ಒಬ್ಬ ಸಾಮಾನ್ಯ ನಾಗರಿಕ ವಿಚಾರಣಾಧೀನ ಕೈದಿಯಾಗಿ ಜೈಲಲ್ಲಿದ್ದರೂ ಸಾಕು, ಆತನಿಗೆ ಮತದಾನ ಮಾಡಲು ವ್ಯವಸ್ಥೆ ಇಲ್ಲ. ಅದೇ ಜನನಾಯಕರು ಜೈಲಲ್ಲಿದ್ದರೂ (ಕಳೆದ ಕೆಲವು ವರ್ಷಗಳಿಂದ ಸವೋಚ್ಚ ನ್ಯಾಯಾಲಯದ ತೀರ್ಪಿನನ್ವಯ ಎರಡು ವರ್ಷಗಳ ಶಿಕ್ಷೆಯಾದರೆ ಸ್ಪರ್ಧಿಸುವಂತಿಲ್ಲವೆಂಬ ನಿಯಮ ಬರುವತನಕ ಅದೂ ಇರಲಿಲ್ಲ) ಶಿಕ್ಷೆ ಅನುಭವಿಸಿ ಹೊರಗೆ ಬಂದರೂ ಹಾಯಾಗಿ ಸ್ಪರ್ಧಿಸಬಹುದು, ಅಧಿಕಾರ ಅನುಭವಿಸಬಹುದು.

    ಸರ್ಕಾರಿ ನೌಕರರ ತಪ್ಪಿರಲಿ, ಇಲ್ಲದಿರಲಿ, ಒಮ್ಮೆ ಪೊಲೀಸ್ ದಾಖಲೆಗೆ ಸೇರಿದರೆ ಅವರು ಆಜೀವ ಪರ್ಯಂತ ಸರ್ಕಾರಿ ನೌಕರಿಗೆ ಅನರ್ಹರಾಗುತ್ತಾರೆ. ಆದರೆ ಅಸಾಮಾನ್ಯರಿಗೆ ತನಿಖಾ ಪ್ರಕ್ರಿಯೆಯಲ್ಲಿ ಯಾವುದೋ ಸಣ್ಣ ತಪ್ಪು ಇದ್ದ ಕಾರಣಕ್ಕೆ ತನಿಖೆಯನ್ನು ನ್ಯಾಯಾಲಯ ರದ್ದುಗೊಳಿಸಿದರೆ ಕಡತವೇ ಮುಚ್ಚಿಹೋಗುತ್ತದೆ. ಎಂದಿನಂತೆ ಅಧಿಕಾರ ಸಿಗುತ್ತದೆ. ಜನಸಾಮಾನ್ಯರಿಗೆ ಯಾವುದೇ ಸರ್ಕಾರಿ ಅಥವಾ ಖಾಸಗಿ ಉದ್ಯೋಗಕ್ಕೂ ನಿಗದಿತ ವಿದ್ಯಾರ್ಹತೆ ಅಗತ್ಯವಿದೆ. ಅದೇ ಅಸಾಮಾನ್ಯರು ಶಾಲೆಯ ಮೆಟ್ಟಿಲು ಹತ್ತದಿದ್ದರೂ ಉನ್ನತ ಶಿಕ್ಷಣ ಸಚಿವರೂ ಆಗಬಹುದು. ಸೇನೆ ಅಥವಾ ಪೊಲೀಸ್ ಇಲಾಖೆಯಲ್ಲಿ ಸಣ್ಣದೊಂದು ಉದ್ಯೋಗಕ್ಕೆ ಸೇರಬೇಕಾದರೂ ನಿರ್ದಿಷ್ಟ ವಿದ್ಯಾರ್ಹತೆಯೊಂದಿಗೆ ದೈಹಿಕವಾಗಿಯೂ ಅರ್ಹತೆ ಇರಬೇಕು. ಆದರೆ ಎದ್ದು ಓಡಾಡಲು ಬಾರದಿದ್ದವರೂ ರಕ್ಷಣಾ ಸಚಿವರೋ, ಗೃಹ ಸಚಿವರೋ ಆಗಬಹುದು. ಸರ್ಕಾರಿ ನೌಕರರು ಕಾರಣವಿರಲಿ, ಇಲ್ಲದಿರಲಿ 48 ಗಂಟೆ ಪೊಲೀಸ್ ವಶದಲ್ಲಿದ್ದರೆ ಕೆಲಸದಿಂದ ಅಮಾನತುಗೊಳಿಸಿ, ಇಲಾಖಾ ತನಿಖೆ ಆರಂಭವಾಗುತ್ತದೆ, ಮುಗಿಯಲು ಯಾವ ಕಾಲಮಿತಿಯೂ ಇರುವುದಿಲ್ಲ. ಅದರೆ ಅಸಾಮಾನ್ಯ ವರ್ಗದವರು ವಿಚಾರಣಾಧೀನ ಕೈದಿಯಾಗಿ ತಿಂಗಳುಗಟ್ಟಲೆ ಜೈಲಿನಲಿದ್ದರೂ ಜಾಮೀನಿನಲ್ಲಿ ಬಿಡುಗಡೆಯಾದರೆ ಅದ್ಧೂರಿ ಮೆರವಣಿಗೆ, ಒಡ್ಡೋಲಗ, ತಕ್ಷಣವೇ ಅಧಿಕಾರ ಚಲಾವಣೆ ಆರಂಭ. ಲಾಲುಪ್ರಸಾದ್ ಜೈಲು ಪಾಲಾದರೂ ಪತ್ನಿಯನ್ನು ಮುಖ್ಯಮಂತ್ರಿ ಮಾಡಿ ಎಂದಿನಂತೆ ಅಧಿಕಾರ ಚಲಾವಣೆ ಮಾಡುತ್ತಾರೆ. ಈಗಲೂ ಜೈಲಿನಿಂದಲೇ ಪಕ್ಷದ ಚಟುವಟಿಕೆಗಳನ್ನು ನಿಯಂತ್ರಿಸುತ್ತಾರೆ. ಅದರೆ ಸಾಮಾನ್ಯ ಸರ್ಕಾರಿ ನೌಕರ ಅಮಾನತಾದರೆ ಅವರನ್ನು ಕಚೇರಿ ಹತ್ತಿರ ಸುಳಿಯಲಿಕ್ಕೂ ಬಿಡುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ನ್ಯಾಯಾಂಗಗಳ ತೀರ್ವನಕ್ಕಿಂತಲೂ ಪ್ರಜೆಗಳ-ಜನಸಾಮಾನ್ಯರ ತೀರ್ಮಾನ ಅಂತಿಮವಾಗಿರಬೇಕಾದುದು ಧರ್ಮ. ಆದರೆ ಜನರು ಚುನಾವಣೆಯಲ್ಲಿ ತಿರಸ್ಕರಿಸಿದ ಸ್ವಯಂಘೊಷಿತ ಅಸಾಮಾನ್ಯ ಜನನಾಯಕರು, ತಮ್ಮ ಸೇವೆ ಸಂಸತ್ತಿನಲ್ಲಿ/ ವಿಧಾನ ಮಂಡಲದಲ್ಲಿ ಅಗತ್ಯವಿದೆಯೆಂದು ತಮ್ಮಷ್ಟಕ್ಕೆ ತಾವೇ ಘೊಷಿಸಿಕೊಂಡು ಹಿಂಬಾಗಿಲ ಮೂಲಕ ರಾಜ್ಯಸಭೆಗೋ ವಿಧಾನಪರಿಷತ್ತಿಗೋ ಪ್ರವೇಶಿಸುತ್ತಾರೆ. ಕೆಲ ವರ್ಗದ ಅಸಾಮಾನ್ಯರಿಗೆ ಸಂಚಾರಕ್ಕೆ ಶೂನ್ಯ ಟ್ರಾಫಿಕ್ ವ್ಯವಸ್ಥೆ ಮಾಡಲಾಗುತ್ತದೆ. ಅವರ ವಾಹನ ಮಾತ್ರವಲ್ಲ ಅವರ ಹಿಂದೆಮುಂದೆ ವಾಹನಗಳ ದಂಡೇ ಈ ಮೆರವಣಿಗೆಯಲ್ಲಿ ಸಂಚರಿಸುವಾಗ ಮುಖ್ಯ ರಸ್ತೆಗಳಲ್ಲಿ ಕನಿಷ್ಟ 15ರಿಂದ 20 ನಿಮಿಷಗಳ ಕಾಲ ಇತರೆಲ್ಲ ವಾಹನಗಳು ರಸ್ತೆಬದಿಯಲ್ಲಿ ನಿಲ್ಲಬೇಕು. ಈ ಸಂದರ್ಭದಲ್ಲಿ ಸಾಮಾನ್ಯ ರೋಗಿಯನ್ನು ಆಸ್ಪತ್ರೆಗೆ ಸ್ಥಳಾಂತರಿಸುವ ತುರ್ತು ಚಿಕಿತ್ಸಾ ವಾಹನ ಬಂದರೂ ಅದೂ ಪಕ್ಕದಲ್ಲಿ ನಿಂತು ಕಾಯಬೇಕು. ಅಸಾಮಾನ್ಯರ ಸಮಯಕ್ಕೆ ಇರುವ ಬೆಲೆ ಸಾಮಾನ್ಯರ ಜೀವಕ್ಕೆ ಇಲ್ಲ, ಆದರೂ ಪ್ರಜೆಗಳು ಪ್ರಭುಗಳು! ಒಮ್ಮೆ ಶಾಸಕರಾಗಿಯೋ, ಸಂಸದರಾಗಿಯೋ, ಸಚಿವರಾಗಿಯೋ ಆಯ್ಕೆಯಾದರೆ ಮುಗಿಯಿತು. ಅಧಿಕಾರ ಇರಲಿ, ಇಲ್ಲದಿರಲಿ ಅವರ ಮತ್ತು ಅವರ ಕುಟುಂಬಕ್ಕೆ ಪೊಲೀಸ್ ರಕ್ಷಣೆ (ಇತ್ತೀಚೆಗೆ ಮಾಜಿಗಳಿಗೆ ರಕ್ಷಣೆ ನೀಡುವ ಪದ್ಧತಿ ಕಡಿಮೆಯಾಗುತ್ತಿದೆ). ಅದೇ ತೀವ್ರ ಹಲ್ಲೆಗೋ, ಅತ್ಯಾಚಾರಕ್ಕೋ ಅಥವಾ ಕೆಲವೊಮ್ಮೆ ಆಸಿಡ್ ದಾಳಿಗೋ ಒಳಗಾದ ಪ್ರಕರಣಗಳಲ್ಲೂ ದೂರು ನೀಡಲು ಹೋದರೆ, ದಾಳಿ ಮಾಡಿದವರು/ಮಾಡಿಸಿದವರು ಅಸಾಮಾನ್ಯರಾದರೆ ಠಾಣಾ ವ್ಯಾಪ್ತಿಯ ಬಗ್ಗೆಯೋ ಅಥವಾ ಇನ್ನಾವುದೋ ತಕರಾರು ಎತ್ತಿ ದೂರು ಸ್ವೀಕರಿಸಲು ಮೀನಮೇಷ ಎಣಿಸಿದ ಪ್ರಕರಣಗಳಿವೆ. ಆದರೂ ಪ್ರಜೆಗಳು ಪ್ರಭುಗಳು! ಗಂಭೀರವಾದ ಅಪರಾಧಗಳನ್ನು ಮಾಡಿದ ಪ್ರಕರಣದಲ್ಲಿ ಕೆಲವೊಮ್ಮೆ ಅಂತಹ ವ್ಯಕ್ತಿಯ ಪರವಾಗಿ ವಾದಿಸಲು ನ್ಯಾಯವಾದಿಗಳು ಬಹಿಷ್ಕಾರ ಹಾಕುವುದುಂಟು. ಅದು ಸರಿಯೇ. ಆದರೆ ತೆರಿಗೆದಾರರ ಕೋಟ್ಯಂತರ ಹಣವನ್ನು ವಂಚಿಸಿದವರು, ಕೊಲೆ, ಅತ್ಯಾಚಾರ ಕೃತ್ಯಗಳಲ್ಲಿ ಭಾಗಿಯಾದವರು ಅಸಾಮಾನ್ಯ ವರ್ಗದವರಾದರೆ ಅವರ ಪರವಾಗಿ ವಾದಿಸಲು ಘಟಾನುಘಟಿಗಳು ಸಾಲುಗಟ್ಟಿ ನಿಲ್ಲುತ್ತಾರೆ. ಹಾಗೆ ವಾದಿಸುವುದು ವೃತ್ತಿ ಧರ್ಮವಂತೆ! ಓರ್ವ ಸರ್ಕಾರಿ ನೌಕರರ ವಿರುದ್ಧ ಸ್ಪಷ್ಟ ಆರೋಪವಿದ್ದು ಶಿಸ್ತು ಕ್ರಮ ಜಾರಿಯಲ್ಲಿದ್ದ ಪ್ರಕರಣ ಹೊರತು ಪಡಿಸಿ ಇತರ ಪ್ರಕರಣದಲ್ಲಿ ಅಂಥವರ ಪದೋನ್ನತಿ, ನಿವೃತ್ತಿ ಸೌಲಭ್ಯಗಳನ್ನು ತಡೆಹಿಡಿಯಬಾರದೆಂದು ಸ್ಪಷ್ಟ ನಿಯಮಗಳಿವೆ. ಆದರೆ ಇದು ಅಸಾಮಾನ್ಯ ವರ್ಗದ ನಾಯಕರಿಗೆ ಅನ್ವಯಿಸದು. ಸರ್ಕಾರಿ ನೌಕರರಿಗೆ ಪಿಂಚಣಿ ದೊರಕಬೇಕಾದರೆ ಕನಿಷ್ಟ 10 ವರ್ಷ ಮತ್ತು ಪೂರ್ಣ ಪಿಂಚಣಿ ದೊರೆಯಬೇಕಾದರೆ 30 ವರ್ಷಗಳ ಸೇವೆ ಸಲ್ಲಿಸಿರಬೇಕಾಗುತ್ತದೆ. ಸೇವಾ ನಿವೃತ್ತಿಯ ಕೊನೆಯ ದಿನಗಳಲ್ಲಿ ಯಾವುದೋ ಒಂದು ಅನಾಮಧೇಯ ಅರ್ಜಿ ಬಂದರೂ ಸಾಕು, ತಕ್ಷಣ ಕಡತವೊಂದು ಸೃಷ್ಟಿಯಾಗಿ ಎಲ್ಲ ಸೌಲಭ್ಯಗಳು ಸ್ಥಗಿತವಾಗುತ್ತವೆ, ಅದೂ ವರ್ಷಾನುಗಟ್ಟಲೆ! ಅದೇ ಅಸಾಮಾನ್ಯ ಜನನಾಯಕರು ಐದು ವರ್ಷಗಳ ಒಂದು ಅವಧಿ ಪೂರೈಸಿದರೂ ಸಾಕು. ಪೂರ್ಣ ಪಿಂಚಣಿ ಸಿಗುತ್ತದೆ. ಯಾವುದೇ ಸಂದರ್ಭದಲ್ಲೂ ಅವರ ಪಿಂಚಣಿ ತಡೆ ಹಿಡಿಯಲ್ಪಡುವುದಿಲ್ಲ. ಸರ್ಕಾರಿ ಉದ್ಯೋಗದಲ್ಲಿರುವ ಅಧಿಕಾರಿಗಳು, ನೌಕರರು ಜನಸೇವಕರು ಎನಿಸಲ್ಪಡುತ್ತಾರೆ. ಆದಕ್ಕಾಗಿ ಅವರಿಗೆ ವೇತನ, ಸೌಲಭ್ಯ, ಪಿಂಚಣಿ ಇತ್ಯಾದಿ ನೀಡಲಾಗುತ್ತದೆ. ಆದರೆ ಅವರು ಸೇವೆಯಲ್ಲಿ ಇರುವಷ್ಟು ಕಾಲ ಯಾವುದೇ ಲಾಭದಾಯಕ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವಂತಿಲ್ಲ. ಅಸಾಮಾನ್ಯ ಜನನಾಯಕರಿಗೂ ಅವರು ಜನಸೇವಕರೆಂಬ ಕಾರಣಕ್ಕೆ ವೇತನ, ಸೌಲಭ್ಯ, ಪಿಂಚಣಿ ಇತ್ಯಾದಿ ನೀಡಲಾಗುತ್ತದೆ. ಹಾಗಾದರೆ ಅಸಾಮಾನ್ಯರು ಸೌಲಭ್ಯಕ್ಕೆ ಮಾತ್ರ ಸಾರ್ವಜನಿಕ ಸೇವಕರು, ಉಳಿದಂತೆ?

    ಇದೆಲ್ಲ ಓದಿದ ಮೇಲೆ ಕೊನೆಯದಾಗಿ ಮೂಡುವ ಸಂಶಯ ಇಷ್ಟು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಜವಾದ ಪ್ರಭು ಯಾರು; ಸಾಮಾನ್ಯರೋ ಅಥವಾ ಅಸಾಮಾನ್ಯರೋ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts