More

    ಅರಸು ಯುಗ ಪುನರಾವರ್ತನೆಯಾಗುವುದೆ?

    ಬೆಂಗಳೂರು: ರಾಜ್ಯದಲ್ಲಿ ಭೂಸುಧಾರಣೆ ಕಾಯ್ದೆ ಎಂದಾಕ್ಷಣ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಧುತ್ತೆಂದು ಕಣ್ಮುಂದೆ ಬಂದು ನಿಲ್ಲುತ್ತಾರೆ. ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ‘ಉಳುವವನೇ ಭೂ ಒಡೆಯ’ ಎಂಬ ಕ್ರಾಂತಿಕಾರಿ ನಿರ್ಧಾರ ಜಾರಿಗೊಳಿಸಿದವರು. ಗ್ರಾಮೀಣ ಜನತೆ ಮತ್ತು ಗೇಣಿದಾರರ ಸಾಮಾಜಿಕ, ಆರ್ಥಿಕ ಸ್ಥಾನಮಾನಗಳ ಬದಲಾವಣೆ, ಕೃಷಿ ಭೂಮಿ ಹೊಂದುವುದಕ್ಕೆ ಮಿತಿ ನಿಗದಿ, ಭೂರಹಿತ ಬಡವರಿಗೆ ಹೆಚ್ಚುವರಿ ಭೂಮಿ ವಿತರಣೆ ಇತ್ಯಾದಿ ಮಹತ್ತರ ಉದ್ದೇಶಗಳನ್ನು ಸಾಕಾರಗೊಳಿಸಿ, ಇಡೀ ದೇಶದ ಗಮನಸೆಳೆದಿದ್ದರು.

    ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಆಡಳಿತದ ಚುಕ್ಕಾಣಿ ಹಿಡಿದಿರುವ ಸಿದ್ದರಾಮಯ್ಯ ಅವರು ಭೂಮಿ ಹಂಚಿಕೆ ವಿಚಾರದಲ್ಲಿ ಅರಸು ಯುಗವನ್ನು ಪುನರಾವರ್ತಿಸುವರೆ? ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ. ಪರಿಶಿಷ್ಟ ಜಾತಿಗಳ ಮತ್ತು ಪಂಗಡಗಳ (ಕೆಲವು ಭೂಮಿಗಳ ವರ್ಗಾವಣೆಯ ನಿಷೇಧ) (ಪಿಟಿಸಿಎಲ್) ತಿದ್ದುಪಡಿ ವಿಧೇಯಕ, 2023ಕ್ಕೆ ವಿಧಾನ ಪರಿಷತ್ ಕೂಡ ಗುರುವಾರ ಅಂಗೀಕಾರದ ಮುದ್ರೆಯೊತ್ತಿದೆ.

    ನಂತರ ಧನವಿನಿಯೋಗ ವಿನಿಯೋಗ ಸಂಖ್ಯೆ-2 ವಿಧೇಯಕ, 2023 ವಿಧೇಯಕ ಅಂಗೀಕಾರಕ್ಕೆ ಮುನ್ನ ನಡೆದ ಚರ್ಚೆಗೆ ಸಿದ್ದರಾಮಯ್ಯ ನೀಡಿದ ಉತ್ತರ, ಅರಸು ಯುಗದ ಮೆಲುಕು ಹಾಗೂ ಮತ್ತೆ ಮರಳುವುದೆ ? ಎಂಬ ಪ್ರಶ್ನೆ ಹುಟ್ಟಿಹಾಕಿದೆ. ಭೂರಹಿತ ದಲಿತರಿಗೆ ಸರ್ಕಾರ ಮಂಜೂರು ಮಾಡಿದ ಜಮೀನು ಅಕ್ರಮ ಪರಭಾರೆಗೆ ನಿಷೇಧವಿದ್ದರೂ ವಿವಿಧ ರೂಪಗಳಲ್ಲಿ ಪರಭಾರೆಯಾಗಿದೆ.

    ಮೂಲ ಮಂಜೂರಾತಿದಾರ ಮರುವಶ ಬಯಸಿ ಸಲ್ಲಿಸಿದ ಮೇಲ್ಮನವಿಗಳು ಸಹಾಯಕ ಆಯುಕ್ತ, ಜಿಲ್ಲಾಧಿಕಾರಿ, ಹೈಕೋಟ್, ಸುಪ್ರೀಂ ಕೋರ್ಟ್‌ಗಳಲ್ಲಿ ವಿಚಾರಣೆಗೆ ಕಾದುಕುಳಿತಿವೆ. ಈ ನಡುವೆ ಇಂತಹ ಜಮೀನುಗಳ ಮರುವಶ ಕೋರಿ ಅರ್ಜಿ ಸಲ್ಲಿಕೆಗೆ ಕಾಲಮಿತಿ ವಿಧಿಸಲು ಸಾಧ್ಯವೆ ? ಎಂದು ರಾಜ್ಯ ಸರ್ಕಾರಗಳ ಅಭಿಪ್ರಾಯಗಳನ್ನು ಸುಪ್ರೀಂ ಕೋರ್ಟ್ ಕೇಳಿದೆ.

    ದಲಿತರಿಗೆ ಮಂಜೂರಾದ ಜಮೀನು ಅವರ ಬಳಿಯೇ ಉಳಿಸಿ, ಅಕ್ರಮ ಪರಭಾರೆ ಜಮೀನು ಮರು ವಶಕ್ಕೆ ಯಾವುದೇ ಕಾಲಮಿತಿಯಿಲ್ಲವೆಂದು ರಾಜ್ಯ ಸರ್ಕಾರ ಸಾರಿದೆ. ಈ ನಿರ್ಣಯಕ್ಕೆ ಕಾನೂನು ರಕ್ಷಣೆ ನೀಡುವ ಉದ್ದೇಶದಿಂದ ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತಂದು, ಉಭಯ ಸದನಗಳ ಒಪ್ಪಿಗೆ ಪಡೆದಿದ್ದು, ದಲಿತ ಸಮುದಾಯಗಳ ದಶಕಗಳ ಕನಸು ನನಸಾಗಿದೆ.

    ಪಿಟಿಸಿಎಲ್ ತಿದ್ದುಪಡಿ ಕಾಯ್ದೆಗೆ ಅನುಮೋದನೆ ಕೋರಿ ಸರ್ಕಾರ ಕಳುಹಿಸುವ ಶಿಾರಸಿಗೆ ರಾಜ್ಯಪಾಲರ ಅಂಕಿತ ಬೀಳುತ್ತಿದ್ದಂತೆಯೇ, ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟಣೆಯೊಂದಿಗೆ ಅನುಷ್ಠಾನಕ್ಕೆ ಬರಲಿದೆ.

    ಸ್ವಯಂಚಾಲಿತ ರದ್ದು

    ಈ ಕಾಯ್ದೆ ಅನುಷ್ಠಾನಕ್ಕೆ ಬರುತ್ತಿದ್ದಂತೆಯೇ ವಿವಿಧ ನ್ಯಾಯಾಲಯಗಳಲ್ಲಿ ನನೆಗುದಿಗೆ ಬಿದ್ದಿರುವ ಅಕ್ರಮ ಪರಭಾರೆ ಮರುವಶಕ್ಕೆ ತಕರಾರು ದಾವೆಗಳು ತನ್ನಿಂದ ತಾನೇ ರದ್ದಾಗಲಿವೆ. ಅಕ್ರಮ ಪರಭಾರೆಯಿಂದಾಗಿ ನೊಂದಿರುವ ಮೂಲ ಮಂಜೂರಾತಿದಾರರು ಕಾಲಮಿತಿಯ ಹಂಗಿಲ್ಲದೆ ಮರುವಶಕ್ಕಾಗಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ ಎಂದು ಸಿದ್ದರಾಮಯ್ಯ ವಿವರಿಸಿದರು.

    ವಿವಿಧ ಮೇಲ್ಮನವಿ ಪ್ರಾಧಿಕಾರಗಳಿಗೆ ನೊಂದ ದಲಿತರು ಮರುವಶಕ್ಕಾಗಿ ಮೇಲ್ಮನವಿ ಸಲ್ಲಿಸುವ ತನಕ ಸರ್ಕಾರ ಕಾಯುತ್ತಾ ಕೂರಬಾರದು. ಅರಸು ಮಾದರಿಯಲ್ಲಿ ‘ಸಹಜ ನ್ಯಾಯ’ ಒದಗಿಸಲು ಅಕ್ರಮ ಪರಭಾರೆಯನ್ನು ಸರ್ಕಾರವೇ ಗುರುತಿಸಿ ಮರುವಶಕ್ಕೆ ಪಡೆದು, ದಲಿತರಿಗೆ ಪುನಃ ವಿತರಿಸಬೇಕು ಎಂಬ ಪ್ರಸ್ತಾಪದ ಬಗ್ಗೆಯೂ ಚಿಂತನೆ ನಡೆಸಲಾಗುವುದು ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.

    ಬಿಜೆಪಿಯ ಎಚ್.ವಿಶ್ವನಾಥ್ ಈ ವಿಷಯ ಪ್ರಸ್ತಾಪಿಸಿ, ಬೆಂಗಳೂರು ಸುತ್ತಮುತ್ತ ಬಹು ಕೋಟಿ ರೂ. ಮೌಲ್ಯದ ಸಾವಿರಾರು ಎಕರೆ ಜಮೀನು ಅಕ್ರಮ ಪರಭಾರೆಯಾಗಿದೆ.

    ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಮಿತಿಯು ಮೊದಲ ಹಂತದಲ್ಲಿ ಬೆಂಗಳೂರು ಸೇರಿ ಎಲ್ಲ ಮಹಾನಗರ ಪಾಲಿಕೆಗಳ ಆಸುಪಾಸಿನಲ್ಲಿ ಅಕ್ರಮ ಪರಭಾರೆ ಜಮೀನು ಗುರುತಿಸಿ, ಮರುವಶಕ್ಕೆ ಪಡೆದು ವಂಚಿತ ದಲಿತರಿಗೆ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts