More

    ಪರಿಹಾರಕ್ಕಾಗಿ ನಾಲೆ ಬಂದ್ ಮಾಡಿದ ರೈತ


    ಅರಕೇರಾ: ಜೀವನಕ್ಕೆ ಆಧಾರವಾಗಿದ್ದ ಭೂಮಿಯನ್ನು ನಾರಾಯಣಪುರ ಬಲದಂಡೆ 9ಎ ಕಾಲುವೆ ನಿರ್ಮಾಣಕ್ಕೆ ನೀಡಿದ ಶಾವಂತಗಲ್ ರೈತನಿಗೆ ಅತ್ತ ಪರಿಹಾರವೂ ಇಲ್ಲ. ಇತ್ತ ಭೂಮಿಯೂ ಇಲ್ಲ. ಇಷ್ಟಕ್ಕೆಲ್ಲ ಕಾರಣ ಅಧಿಕಾರಿಗಳು ಮಾಡಿದ ಎಡವಟ್ಟು. 15ವರ್ಷ ಕಳೆದರೂ ಪರಿಹಾರ ಸಿಗದೆ ಬೇಸತ್ತ ರೈತ ಬಸವರಾಜ ಬಾಡ್ಲ ಮಂಗಳವಾರ ಕಾಲುವೆಯನ್ನೇ ಬಂದ್ ಮಾಡಿ ನೀರಾವರಿ ಇಲಾಖೆ ಅಧಿಕಾರಿಗಳ ಚಳಿ ಬಿಡಿಸಿದ್ದಾರೆ.

    ಸರ್ವೇ 71 (ಸದ್ಯ 65)ರಲ್ಲಿ ಬಸವರಾಜ ಬಾಡ್ಲ ಜಮೀನಿನಲ್ಲಿ ಕಾಲುವೆ ಹಾದುಹೋಗಿದ್ದು, 1.30 ಎಕರೆ ಜಮೀನನ್ನು ನಾಲೆ ನಿರ್ಮಾಣಕ್ಕೆ ನೀಡಿದ್ದಾರೆ. 2008ರಲ್ಲಿ ಕಾಲುವೆ ಕಾಮಗಾರಿ ಆರಂಭವಾಗಿದ್ದು ಸದರಿ ನಾಲೆ 10ಕ್ಕೂ ಹೆಚ್ಚು ರೈತರ ಜಮೀನಿನಲ್ಲಿ ಹಾದುಹೋಗಿದೆ. ಈ ಎಲ್ಲ ರೈತರಿಗೂ ಪರಿಹಾರ ಸಿಕ್ಕಿದ್ದು, ಬಸವರಾಜ ಬಾಡ್ಲಗೆ ಇದುವರೆಗೂ ಬಿಡಿಗಾಸೂ ಬಂದಿಲ್ಲ. ಇದಕ್ಕೆ ಕಾರಣ ಅಧಿಕಾರಿಗಳ ನಿರ್ಲಕ್ಷೃ.

    ಬಸವರಾಜ ಬಾಡ್ಲ 15 ವರ್ಷಗಳಿಂದ ಪರಿಹಾರಕ್ಕಾಗಿ ಕಚೇರಿಗೆ ಅಲೆದು, ಅಧಿಕಾರಿಗಳನ್ನು ಭೇಟಿ ಮಾಡಿ ಸುಸ್ತಾದರೇ ವಿನಃ ಯಾರೊಬ್ಬರೂ ರೈತನ ನೋವಿಗೆ ಸ್ಪಂದಿಸಲೇ ಇಲ್ಲ. ಇದರಿಂದ ಬೇಸತ್ತ ರೈತ ಬಸವರಾಜ, ಕಾಲುವೆಗೆ ಜೆಸಿಬಿ ಮೂಲಕ ಮಣ್ಣು ಹಾಕಿ ನೀರು ಸ್ಥಗಿತಗೊಳಿಸಿದ್ದರು. ಇದರಿಂದ ತಬ್ಬಿಬ್ಬಾದ ವಿವಿಧ ಇಲಾಖೆ ಅಧಿಕಾರಿಗಳು, ಸ್ಥಳಕ್ಕೆ ದೌಡಾಯಿಸಿ ರೈತನ ಮನವೊಲಿಸಲು ಯತ್ನಿಸಿದರು.

    ಎಸಿ ರಜಿನಿಕಾಂತ್ ಚೌವ್ಹಾಣ್, ತಹಸೀಲ್ದಾರ್ ಶ್ರೀನಿವಾಸ್ ಚಾಪೇಲ್, ನೀರಾವರಿ ಇಲಾಖೆ ಎಇಇ ಮನೋಹರ್ ಜಾಧವ್, ಡಿವೈಎಸ್ಪಿ, ಸಿಪಿಐ ಖಾಜಾಹುಸೇನ್ ರೈತನ ಜತೆ ಚರ್ಚಿಸಿ 10 ದಿನಗಳಲ್ಲಿ ಪರಿಹಾರ ನೀಡುವುದಾಗಿ ಲಿಖತ ಭರವಸೆ ನೀಡಿದ್ದಾರೆ. ಇದರಿಂದ ರೈತ ಹೋರಾಟವನ್ನು ಹಿಂಪಡೆದು ಮಣ್ಣು ತೆರವುಗೊಳಿಸಿದ್ದಾನೆ. ಈ ಹಿಂದೆ ಡಿ.14ರಂದು ಕಾಲುವೆ ಮುಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಾರಿ ಅಧಿಕಾರಿಗಳು ಲಿಖಿತ ಭರವಸೆ ನೀಡಿದ್ದಾರೆ.

    ಆಫೀಸರ್ಸ್‌ ವಿರುದ್ಧ ಆಕ್ರೋಶ: ಶಾವಂತಗಲ್ ಹತ್ತಿರದ ಎನ್‌ಆರ್‌ಬಿ 9ಎ ಕಾಲುವೆ ನಿರ್ಮಾಣಕ್ಕೆ 2008ರಲ್ಲಿ ಕಾಮಗಾರಿ ನಿರ್ಮಾಣಕ್ಕೆ ಸರ್ವೇ ಮಾಡಿದ್ದು 11 ರೈತರ ಜಮೀನಿನಲ್ಲಿ ಕಾಲುವೆ ಹಾದುಹೋಗಿದೆ. 10 ರೈತರಿಗೆ ಪರಿಹಾರ ನೀಡಿದ ಅಧಿಕಾರಿಗಳು ಬಸವರಾಜ ಬಾಡ್ಲಗೆ ಪರಿಹಾರ ನೀಡಿರಲಿಲ್ಲ. ಸರ್ವೇ ನಂಬರ್ ಎಡವಟ್ಟಿನಿಂದ ಬಸವರಾಜಗೆ ಬರಬೇಕಿದ್ದ ಸುಮಾರು 8.70 ಲಕ್ಷ ರೂ. ಬೇರೆ ರೈತನ ಖಾತೆಗೆ ಜಮಾ ಮಾಡಲಾಗಿತ್ತು. ಆದರೆ, ಪರಿಹಾರ ಬಾರದ ರೈತ ಬಸವರಾಜ 8 ವರ್ಷಗಳಿಂದ ಕಚೇರಿ ಅಲೆದರೂ ಪ್ರಯೋಜನವಾಗಿರಲಿಲ್ಲ. ಅಧಿಕಾರಿಗಳ ಎಡವಟ್ಟಿನಿಂದ ಬಸವರಾಜಗೆ ಅನ್ಯಾಯವಾಗಿತ್ತು. ಇದರಿಂದ ಬೇಸತ್ತ ರೈತ ಕಾಲುವೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು.

    ಹಲವು ವರ್ಷಗಳಿಂದ ನೀರಾವರಿ ಇಲಾಖೆ, ತಾಲೂಕು ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ಅಲೆದು ಸುಸ್ತಾಗಿದ್ದೇನೆ. ನನಗೆ ಬರಬೇಕಾದ ಪರಿಹಾರ ಬೇರೆ ರೈತನ ಖಾತೆಗೆ ಹಾಕಿದ್ದಾರೆ. ಕಾಲುವೆಗಾಗಿ 1.30 ಎಕರೆ ಜಮೀನು ಕಳೆದುಕೊಂಡಿದ್ದೇನೆ. ದಿಕ್ಕು ತೋಚದಂತಾಗಿ ಕೊನೆಗೆ ಕಾಲುವೆ ಬಂದ್ ಮಾಡಿದ್ದೇನೆ. 10 ದಿನದಲ್ಲಿ ಪರಿಹಾರ ನೀಡುವುದಾಗಿ ಲಿಖತ ಭರವಸೆ ನೀಡಿದ್ದಾರೆ.
    | ಬಸವರಾಜ ಬಾಡ್ಲ, ಭೂಮಿ ಕಳೆದುಕೊಂಡ ರೈತ

    ಭೂಮಿ ಕಳೆದುಕೊಂಡ ರೈತನಿಗೆ ಪರಿಹಾರ ನೀಡುವುದಾಗಿ ದಂಡಾಧಿಕಾರಿಗಳ ಸಮ್ಮುಖದಲ್ಲಿ ಮನವೊಲಿಸಿ, ವೋಚರ್ ನೀಡಲಾಗಿದೆ. ಪರಿಹಾರ ನೀಡುವಂತೆ ಕೆಬಿಜಿಎನ್‌ಎಲ್ ಬಾಗಲಕೋಟೆ ಮುಖ್ಯ ಕಚೇರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರ ರೈತನಿಗೆ ಪರಿಹಾರ ಹಣ ಜಮೆ ಮಾಡಲಾಗುವುದು.
    | ಮನೋಹರ ಜಾಧವ್, ಎಇಇ, ಎನ್‌ಆರ್‌ಬಿಸಿ, ಚಿಕ್ಕಹೊನ್ನಕುಣಿ ವಿಭಾಗ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts