More

    ಕಲಿಕಾ ವಾತಾವರಣ ನಿರ್ಮಿಸಲು ಗ್ರಾಪಂ ಬದ್ಧ- ಅಭಿವೃದ್ಧಿ ಅಧಿಕಾರಿ ನಾಗೇಂದ್ರಪ್ಪ ಹೇಳಿಕೆ

    ಅರಕೇರಾ: ಮಕ್ಕಳ ಶೈಕ್ಷಣಿಕ ಮಟ್ಟವನ್ನು ಉತ್ತೇಜಿಸಲು ಗ್ರಾಮ ಪಂಚಾಯಿತಿ ಸಹಭಾಗಿತ್ವ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪಿಡಿಒ ನಾಗೇಂದ್ರಪ್ಪ ಹೇಳಿದರು. ಸಮೀಪದ ಮಲ್ಲೆದೇವರಗುಡ್ಡ ಗ್ರಾಪಂ ವ್ಯಾಪ್ತಿಯ ನಾಗೋಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆ, ಡಾನ್ ಬಾಸ್ಕೋ ಸಮಾಜ ಸೇವಾ ಸಂಸ್ಥೆ ಹಾಗೂ ಶ್ರುತಿ ಸಂಸ್ಕೃತಿ ಸಂಸ್ಥೆಯಿಂದ ಗುರುವಾರ ಏರ್ಪಡಿಸಿದ್ದ ವಿಶೇಷ ಮಕ್ಕಳ ಗ್ರಾಮ ಸಭೆಯಲ್ಲಿ ಮಾತನಾಡಿದರು.

    ಶಾಲೆಗಳಲ್ಲಿ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಲು ಗ್ರಾಪಂ ಬದ್ಧವಾಗಿದೆ. ಅಗತ್ಯ ಸೌಲಭ್ಯಗಳನ್ನು ತಲುಪಿಸಲು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಅಗತ್ಯವಿರುವ 12 ಸರ್ಕಾರಿ ಶಾಲೆಗಳಿಗೆ ಗ್ರಾಪಂನಿಂದ 60 ಡೆಸ್ಕ್‌ಗಳನ್ನು ವಿತರಿಸಲಾಗಿದೆ ಎಂದರು.

    ಅಮೃತ ಗ್ರಾಪಂ ಯೋಜನೆಯಡಿ ಮಲ್ಲೆದೇವರಗುಡ್ಡ ಗ್ರಾಪಂ ಆಯ್ಕೆಯಾಗಿದ್ದು, ಅದರ ಅನುದಾನದಲ್ಲಿ ಶಾಲೆಗಳ ಅಭಿವೃದ್ಧಿಗೆ ಬಳಸಿಕೊಳ್ಳಲು ಪ್ರತಿನಿಧಿಗಳೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

    ಗ್ರಾಪಂ ಅಧ್ಯಕ್ಷೆ ಬಾಲಮ್ಮ ಶಾಂತಪ್ಪ, ಎಸ್ಡಿಎಂಸಿ ಅಧ್ಯಕ್ಷೆ ಲಕ್ಷ್ಮೀ ಶರಣಬಸವ, ಮಕ್ಕಳ ಪ್ರತಿನಿಧಿಗಳಾದ ಬಸವರಾಜ, ಅನುಷಾ, ಗ್ರಾಪಂ ಸದಸ್ಯರಾದ ಶ್ರೀಕಾಂತ ನಾಯಕ ಜಲ್ಲೆ, ಪಂಪನಗೌಡ, ರಂಗಪ್ಪ, ಯಲ್ಲಮ್ಮ ಬರಮಯ್ಯ, ಸಿಆರ್‌ಪಿ ಬಿ.ಎಸ್.ಕೇಶಾಪೂರ, ಮುಖ್ಯಶಿಕ್ಷಕಿ ಅಶ್ವಿನಿ, ಆರೋಗ್ಯ ನಿರೀಕ್ಷಣಾಧಿಕಾರಿ ಪ್ರವೀಣ, ಅಂಗನವಾಡಿ ಮೇಲ್ವಿಚಾರಕಿ ಶಿವಲಕ್ಷ್ಮೀ, ಡಿಸಿಪಿಒ ತಿಕ್ಕಯ್ಯ, ಶ್ರುತಿ ಸಂಸ್ಕೃತಿ ಸಂಸ್ಥೆ ತಾಲೂಕು ಅಧ್ಯಕ್ಷ ರಾಮಣ್ಣ ಎನ್.ಗಣೇಕಲ್, ಶಿಕ್ಷಕರಾದ ಆದನಗೌಡ ಪಾಟೀಲ್, ಹಿರೇಬಸಯ್ಯ ಜಂಗಿನಮಠ ಇತರರಿದ್ದರು.

    ಆರು ತಿಂಗಳೊಳಗೆ ಪರಿಹಾರ: ನಾಗೋಲಿ, ಅಗ್ರಹಾರ, ಮಲ್ಲೆದೇವರಗುಡ್ಡ, ಜುಟ್ಟಮರಡಿ, ಬಂಡೆಗುಡ್ಡ ತಾಂಡ ಸೇರಿ ಗ್ರಾಪಂ ವ್ಯಾಪ್ತಿಯ ವಿವಿಧ ಶಾಲೆಗಳ ಮಕ್ಕಳು ಹಕ್ಕುಳನ್ನು ಪ್ರಶ್ನೆಗಳ ಮೂಲಕ ಅಧಿಕಾರಿಗಳ ಮೊರೆ ಹೋದರು. ಶಾಲೆಗಳಲ್ಲಿ ಸ್ವಚ್ಛತೆ, ಸಮತಟ್ಟು ಮೈದಾನ, ಆಟದ ಸಾಮಗ್ರಿಗಳು, ಶೌಚಗೃಹ, ಶುದ್ಧ ಕುಡಿವ ನೀರು, ಕಾಂಪೌಂಡ್, ತಟ್ಟೆ, ಗ್ಲಾಸ್ ಸೇರಿ ವಿವಿಧ ಸೌಕರ್ಯಗಳು ಸಮರ್ಪಕವಾಗಿಲ್ಲ. ಅವುಗಳನ್ನು ನಿವಾರಣೆ ಮಾಡಬೇಕು ಎಂದು ವಿದ್ಯಾರ್ಥಿಗಳಾದ ವಿಶ್ವಾಸ, ಸ್ನೇಹಾ, ವಿಕಾಸ, ಬಿಂದುಶ್ರೀ, ಅನುಷಾ, ಭಾಗ್ಯಶ್ರೀ ಒತ್ತಾಯಿಸಿದರು.

    ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳಿಗೆ ಶೌಚಗೃಹ, ಸಮವಸ್ತ್ರ, ಆಟದ ಪೀಠೋಪಕರಣಗಳ, ಕುಡಿವ ನೀರಿನ ಸೌಲಭ್ಯ ಸೇರಿ ವಿವಿಧ ಸೌಕರ್ಯಗಳನ್ನು ನೀಡಬೇಕೆಂದು ಗ್ರಾಪಂ ಗಮನಕ್ಕೆ ತಂದರು. ಇದಕ್ಕೆ ಪಿಡಿಒ ನಾಗೇಂದ್ರಪ್ಪ ಪ್ರತಿಕ್ರಿಯಿಸಿ, ವಿವಿಧ ಸರ್ಕಾರಿ ಶಾಲೆಗಳು ಹಾಗೂ ಅಂಗನವಾಡಿ ಶಾಲೆಗಳ ಮೂಲ ಸೌಕರ್ಯಗಳನ್ನು ಆರು ತಿಂಗಳೊಳಗೆ ಬಗೆಹರಿಸಿಕೊಡುವ ಭರವಸೆ ನೀಡಿದರು.

    ದೇಶದ ಒಳಿತಿಗಾಗಿ ಮತ್ತು ಅಭಿವೃದ್ಧಿಗಾಗಿ ಮಕ್ಕಳನ್ನು ರಕ್ಷಿಸುವುದು ಹಾಗೂ ಅವರ ಅವಶ್ಯಕತೆಗಳನ್ನು ಪೂರೈಸಿ ಅಭಿವೃದ್ಧಿಗೊಳಿಸುವುದು ಪ್ರತಿಯೊಬ್ಬರ ನಾಗರೀಕರ ಮತ್ತು ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ಗ್ರಾಮೀಣ ಭಾಗದಲ್ಲಿನ ಮಕ್ಕಳಿಗೆ ಉತ್ತಮ ಕಲಿಕಾ ವಾತಾವರಣ ಹಾಗೂ ಪ್ರೋತ್ಸಾಹ ನೀಡಿದರೆ ಶೈಕ್ಷಣಿಕ ಬೆಳವಣಿಗೆ ಸಾಧ್ಯ.
    | ಸಿದ್ದಲಿಂಗಪ್ಪ ಕಾಕರಗಲ್, ಮಕ್ಕಳ ಹಕ್ಕುಗಳ ಜಿಲ್ಲಾ ಸಂಯೋಜಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts