More

    ಮನರಂಜಿಸಿದ ಹಾಲಗಂಬ ಏರುವ ಸ್ಪರ್ಧೆ, ಸತತ ಎರಡನೇ ಬಾರಿ ವಿಜಯಿಯಾದ ಹನುಮಂತ್ರಾಯ

    ಅರಕೇರಾ: ಸಮೀಪದ ಮಲ್ಲಾಪುರ ಹಾಗೂ ಸುತ್ತಲಿನ ಗ್ರಾಮಗಳ ಭಕ್ತರ ಆರಾಧ್ಯ ದೈವ ಶ್ರೀ ಆಂಜನೇಯ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ನಡೆಯಿತು.

    ಡಿ.18ರಂದು ಗ್ರಾಮ ಹಾಗೂ ಸುತ್ತಲಿನ ಸಹಸ್ರಾರು ಭಕ್ತರು ಜ್ಯೋತಿ ಹೊರುವ ಮೂಲಕ ಭಕ್ತಿ ಮೆರೆದರು. ಡೊಳ್ಳು, ವಾದ್ಯ, ಮೇಳಗಳು ಗಮನಸೆಳೆದವು. ಸಂಜೆ 6ಕ್ಕೆ ಊಟಿ ಬಸವೇಶ್ವರ ಸನ್ನಿಧಿ ಗಂಗಾಸ್ಥಳಕ್ಕೆ ತೆರಳಿ ಉದಕ ತರಲಾಯಿತು. ಬಳಿಕ ರಥವನ್ನು ಅಲಂಕರಿಸಿ, ಭಕ್ತರ ಹರಕೆಗಳೆಂದು ರಥದ ಗಾಲಿಗಳಿಗೆ ಕಾಯಿಗಳನ್ನು ಹೊಡೆಯಲಾಯಿತು. ರಾತ್ರಿ 10.30ಕ್ಕೆ ಸಹಸ್ರಾರು ಭಕ್ತರ ಮಧ್ಯೆ ಶೃಂಗಾರಗೊಂಡ ಶ್ರೀ ಆಂಜನೇಯ ರಥೋತ್ಸವ ಪಾದದಕಟ್ಟೆವರೆಗೆ ಸಾಗಿತು.

    ಡಿ.19ರಂದು ಹಾಲಗಂಬ ಉತ್ಸವ ಏರ್ಪಡಿಸಲಾಗಿತ್ತು. 83 ಅಡಿ ಎತ್ತರದ ಹಾಲುಗಂಬಕ್ಕೆ ಜಾಜು ಲೇಪನ ಮಾಡಲಾಗಿತ್ತು. ಕಂಬದ ಮೇಲೆ ಕುಳಿತ ಪೂಜಾರಿ ಸ್ಪರ್ಧಿಗಳಿಗೆ ಮೇಲಿನಿಂದ ನೀರು, ಮಜ್ಜಿಗೆ ಬಿಟ್ಟರು. ಸ್ಪರ್ಧಿಗಳು ಕಂಬ ಏರಲು ನಾ ಮುಂದು, ತಾ ಮುಂದು ಎಂದು ಪೈಪೋಟಿ ತೋರಿಸಿದ್ದು, ಸುಮಾರು 2 ತಾಸು ಜನರಿಗೆ ಮನರಂಜನೆ ನೀಡಿತು. ಹನಮಂತ್ರಾಯ ನಾಗನೇಕಿ ಸತತ ಎರಡನೇ ಬಾರಿಗೆ ಪ್ರಥಮರಾಗಿ ಕಂಬ ಏರಿ ಜಯ ಸಾಧಿಸಿದರು.

    ಜಾತ್ರಾ ಮಹೋತ್ಸವದ ಅಂಗವಾಗಿ 25ರಿಂದ 30 ಸಾವಿರ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ಶ್ರೀ ಆಂಜನೇಯನಿಗೆ ಕಾಯಿ, ಕರ್ಪೂರ, ನೈವೇದ್ಯ ಸಮರ್ಪಿಸಿ ಭಕ್ತಿ ಮೆರೆದರು. ಮೂರ್ನಾಲ್ಕು ದಿನ ವಿಜೃಂಭಣೆಯಿಂದ ಜರುಗುವ ಜಾತ್ರೆಗೆ ದೇವಸ್ಥಾನ ವಿವಿಧ ಬಗೆಯ ಹೂಗಳು ಹಾಗೂ ಬಣ್ಣ ಬಣ್ಣದ ವಿದ್ಯುತ್ ದ್ವೀಪಗಳಿಂದ ಕಂಗೊಳಿಸುತ್ತಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts