More

    9 ದಿನದಲ್ಲಿ 55 ಲಕ್ಷ ರೂ. ಸಂಗ್ರಹ

    ಬೆಳಗಾವಿ: ಮಹಾಮಾರಿ ಕರೊನಾ ಸೋಂಕು ನಿಯಂತ್ರಿಸುವ ಉದ್ದೇಶದಿಂದ ಘೋಷಿಸಿದ್ದ ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಜಲಮಂಡಳಿ ಕೊಂಚ ಚೇತರಿಸಿಕೊಂಡಿದೆ. ಲಾಕ್‌ಡೌನ್ ಸಡಿಲಿಕೆ ಬಳಿಕ ಶುಲ್ಕ ಸಂಗ್ರಹದಲ್ಲಿ ದಾಪುಗಾಲಿಡುತ್ತಿದೆ.

    ಮೇ 17 ರಿಂದ ಇಲ್ಲಿಯವರೆಗೆ ಜಲಮಂಡಳಿಗೆ ಗ್ರಾಹಕರಿಂದ ಸುಮಾರು 55 ಲಕ್ಷ ರೂ. ನೀರಿನ ಶುಲ್ಕ ಪಾವತಿಯಾಗಿದೆ. ಇದು ಕೇವಲ ಜಲಮಂಡಳಿಯಲ್ಲಿರುವ ಶುಲ್ಕ ಕೌಂಟರ್‌ಗಳಿಂದ ಸಂಗ್ರಹವಾದ ಮೊತ್ತ. ಅದಲ್ಲದೆ ಕರ್ನಾಟಕ ಒನ್ ಸೇವಾ ಕೇಂದ್ರದಲ್ಲೂ ನೀರಿನ ಶುಲ್ಕ ಭರಿಸಿಕೊಳ್ಳಲಾಗುತ್ತಿದೆ.

    ಮೇ 17ರಿಂದ ಆರಂಭವಾಗಿರುವ ಬೆಳಗಾವಿ ದಕ್ಷಿಣ ಉಪವಿಭಾಗದ ಜಲಮಂಡಳಿ ಶುಲ್ಕ ಕೌಂಟರ್‌ನಲ್ಲಿ ಪ್ರತಿದಿನ 1.5 ಲಕ್ಷ ರೂ. ದಿಂದ 2 ಲಕ್ಷ ರೂ. ವರೆಗೆ ಶುಲ್ಕ ಸಂಗ್ರಹವಾಗುತ್ತಿದೆ. ಈ ವಿಭಾಗದಲ್ಲಿ ಒಟ್ಟಾರೆ ಸುಮಾರು 30 ಲಕ್ಷ ರೂ. ಸಂಗ್ರಹವಾಗಿದ್ದರೆ, ಉತ್ತರ ಉಪವಿಭಾಗ ವ್ಯಾಪ್ತಿಯಲ್ಲಿ ಸುಮಾರು 25 ಲಕ್ಷ ರೂ. ಶುಲ್ಕ ಸಂಗ್ರಹವಾಗಿದೆ.

    ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಾರ್ಚ್ ಅಂತ್ಯ ಹಾಗೂ ಏಪ್ರಿಲ್ ತಿಂಗಳಲ್ಲಿ ಜಲಮಂಡಳಿಗೆ ಶುಲ್ಕ ಸಂಗ್ರಹವಾಗಿರಲಿಲ್ಲ. ಕೆಲ ಗ್ರಾಹಕರು ಆನ್‌ಲೈನ್ ಮೂಲಕ ಶುಲ್ಕ ಪಾವತಿಸಿದ್ದರು. ಹೀಗಾಗಿ ಜಲಮಂಡಳಿ ಶುಲ್ಕ ಬಾಕಿಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಸರ್ಕಾರ ಲಾಕ್‌ಡೌನ್ ಸಡಿಲಿಕೆ ಮಾಡಿದ್ದರಿಂದ ಮಂದಗತಿಯಲ್ಲಿ ಚೇತರಿಸಿಕೊಳ್ಳುತ್ತಿದೆ.

    11,048 ಮನೆಗಳಿಗೆ ನಿರಂತರ ನೀರು: ದಕ್ಷಿಣ ಉಪವಿಭಾಗ ವ್ಯಾಪ್ತಿಯ ಮಧ್ಯಂತರ ನೀರು ಸರಬರಾಜು ವಲಯದಲ್ಲಿ 23,938 ನೀರಿನ ಸಂಪರ್ಕಗಳಿವೆ. ಅಲ್ಲದೇ ನಗರದ 10 ವಾರ್ಡ್‌ಗಳಲ್ಲಿ 11,048 ಮನೆಗಳಿಗೆ ‘24/7 ನಿರಂತರ ನೀರು ಸರಬರಾಜು’ ಸಂಪರ್ಕಗಳಿದ್ದು, ಇವುಗಳನ್ನು ದಕ್ಷಿಣ ಉಪವಿಭಾಗದ ಜಲಮಂಡಳಿ ಕಚೇರಿ ನಿರ್ವಹಿಸುತ್ತಿದೆ. ಹೀಗಾಗಿ ಉತ್ತರ ಉಪವಿಭಾಗಕ್ಕಿಂತ ದಕ್ಷಿಣ ಉಪವಿಭಾಗ ಕಚೇರಿಯ ಶುಲ್ಕ ಸಂಗ್ರಹದಲ್ಲಿ ಏರಿಕೆಯಾಗಿದೆ.

    ಇನ್ನು ಉತ್ತರ ಉಪವಿಭಾಗ ವ್ಯಾಪ್ತಿಯ ಮಧ್ಯಂತರ ನೀರು ಸರಬರಾಜು ವಲಯದಲ್ಲಿ 35 ಸಾವಿರ ನಳದ ಸಂಪರ್ಕಗಳಿವೆ. ಈ ಎಲ್ಲ ಗ್ರಾಹಕರು ಶುಲ್ಕ ಕಟ್ಟುವಂತೆ ಜಲಮಂಡಳಿ ಅಧಿಕಾರಿಗಳು ವಿನಂತಿಸಿದ್ದಾರೆ.

    ಏಪ್ರಿಲ್‌ನಲ್ಲಿ 1 ಕೋಟಿ ರೂ. ಗೂ ಹೆಚ್ಚು ಕೊರತೆ: ಲಾಕ್‌ಡೌನ್ ಪರಿಣಾಮದಿಂದ ಕರ್ನಾಟಕ ಒನ್ ಸೇವಾ ಕೇಂದ್ರಗಳು ಹಾಗೂ ಜಲಮಂಡಳಿ ಕೌಂಟರ್‌ಗಳು ಬಂದ್ ಆಗಿದ್ದವು. ಪರಿಣಾಮ ಏಪ್ರಿಲ್ ಒಂದೇ ತಿಂಗಳಲ್ಲಿ ಜಲಮಂಡಳಿಗೆ 1,51,86,000 ರೂ. ನೀರಿನ ಶುಲ್ಕ ಕೊರತೆ ಯಾಗಿತ್ತು. ಈಗ ಲಾಕ್‌ಡೌನ್ ಸಡಿಲಿಕೆಯಿಂದ ಕರ್ನಾಟಕ ಸೇವಾ ಕೇಂದ್ರಗಳು ಹಾಗೂ ಜಲಮಂಡಳಿ ಕಚೇರಿಗಳು ಪುನರಾರಂಭವಾಗಿದ್ದು, ಗ್ರಾಹಕರು ಸಕಾಲಕ್ಕೆ ಶುಲ್ಕ ಭರಿಸುತ್ತಿದ್ದಾರೆ.

    ಲಾಕ್‌ಡೌನ್ ಸಡಿಲಿಕೆ ಬಳಿಕ ಶುಲ್ಕ ಸಂಗ್ರಹ ಏರಿಕೆಯಾಗುತ್ತಿದೆ. ಗ್ರಾಹಕರು ಅಂತರ ಕಾಪಾಡಿಕೊಂಡು ಜಲ ಮಂಡಳಿ ಕೌಂಟರ್‌ಗಳಲ್ಲಿ ಶುಲ್ಕ ಕಟ್ಟುತ್ತಿದ್ದಾರೆ. ಮಹಾನಗರ ಪಾಲಿಕೆಯ ಕರ್ನಾಟಕ ಒನ್ ಸೇವಾ ಕೇಂದ್ರಗಳು ಕಾರ್ಯಾರಂಭವಾಗಿದ್ದು, ಈ ಕೇಂದ್ರಗಳಲ್ಲಿಯೂ ಶುಲ್ಕ ಕಟ್ಟಬಹುದು.
    | ವಿ.ಎಲ್.ಚಂದ್ರಪ್ಪ ಕಾರ್ಯಪಾಲಕ ಅಭಿಯಂತರ, ಬೆಳಗಾವಿ ಜಲಮಂಡಳಿ

    | ಜಗದೀಶ ಹೊಂಬಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts