ಹಿರೇಕೆರೂರ: ರಟ್ಟಿಹಳ್ಳಿ, ಹಿರೇಕೆರೂರ ತಾಲೂಕಿನ ಗ್ರಾಮೀಣ ಹಾಗೂ ಜಿಲ್ಲಾ ಮುಖ್ಯರಸ್ತೆಗಳ ಸುಧಾರಣೆ ಮತ್ತು ನಿರ್ವಹಣೆ ದೃಷ್ಟಿಯಿಂದ ಮೇಲ್ದರ್ಜೆಗೇರಿಸಲು ಲೋಕೋಪಯೋಗಿ ಇಲಾಖೆಗೆ ಸಲ್ಲಿಸಿದ್ದ ಪ್ರಸ್ತಾವನೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅನುಮೋದನೆ ನೀಡಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ಪಟ್ಟಣದ ಗೃಹ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರೇಕೆರೂರ, ರಟ್ಟಿಹಳ್ಳಿ ತಾಲೂಕಿನ ಗ್ರಾಮೀಣ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳು ಪದೇ ಪದೆ ಹಾಳಾಗುತ್ತಿದ್ದು, ಇವುಗಳನ್ನು ಅಭಿವೃದ್ಧಿಪಡಿಸಲು ಅನುದಾನದ ಕೊರತೆ ಉಂಟಾಗುತ್ತಿತ್ತು. ಆದ್ದರಿಂದ ಈ ರಸ್ತೆಗಳನ್ನು ಮೇಲ್ದರ್ಜೆಗೇರಿಸುವಂತೆ ಲೋಕೋಪಯೋಗಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಂತೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗ್ರಾಮೀಣ ರಸ್ತೆಗಳನ್ನು 36 ಕಿ.ಮೀ. ಜಿಲ್ಲಾ ಮುಖ್ಯ ರಸ್ತೆಗಳನ್ನಾಗಿ ಹಾಗೂ 95.87 ಕಿ.ಮೀ ಜಿಲ್ಲಾ ಮುಖ್ಯರಸ್ತೆಗಳನ್ನು ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲು ಅನುಮೋದನೆ ದೊರೆತಿದೆ. ಇದರಿಂದ ಉತ್ತಮ ರಸ್ತೆಗಳು ನಿರ್ವಣವಾಗುವ ಮೂಲಕ ಎರಡೂ ತಾಲೂಕಿನ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದರು.
ಗ್ರಾಮೀಣ ರಸ್ತೆಗಳನ್ನು ಜಿಲ್ಲಾ ಮುಖ್ಯರಸ್ತೆಗಳನ್ನಾಗಿಸಿ ಮೇಲ್ದರ್ಜೆಗೇರಿಸಿದ್ದು, ಇದರಲ್ಲಿ ರಟ್ಟಿಹಳ್ಳಿ ತಾಲೂಕಿನ ತೋಟಗಂಟಿಯಿಂದ (ಕೋಡ, ಅಣಜಿ) ಪರ್ವತಸಿದ್ಧಗೇರಿ, ಜೋಕನಾಳ, ಗಲಗಿನಕಟ್ಟಿ 10 ಕಿ.ಮೀ. ರಸ್ತೆ. ಕಡೂರು, ಬುಳ್ಳಾಪುರ, ಕಿರಗೇರಿ 8 ಕಿ.ಮೀ., ಕುಡಪಲಿ, ಬುಳ್ಳಾಪುರ 8 ಕಿ.ಮೀ., ಬಾಗಲಕೋಟೆ-ಬಿಳಿಗಿರಿರಂಗನಬೆಟ್ಟ ರಸ್ತೆಯ ಬಡಾಸಂಗಾಪುರ, ಕುಡಪಲಿ 5 ಕಿ.ಮೀ., ಗಂಗಾಯಿಕೊಪ್ಪ, ಯತ್ತಿನಹಳ್ಳಿ ಎಂ.ಎಂ. ತಾಂಡಾ, ಕಣವಿಸಿದ್ಧಗೇರಿ 5 ಕಿ.ಮೀ. ಒಳಗೊಂಡಿದೆ. ಜಿಲ್ಲಾ ಮುಖ್ಯರಸ್ತೆಗಳನ್ನು ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಿದೆ. ಇದರಲ್ಲಿ ರಾಜ್ಯ ಹೆದ್ದಾರಿ 76 ಅನ್ನು ಸಂರ್ಪಸುವ ಹಲಗೇರಿ ಹುಲಿಕಲ್ಲು(ಹಿರೇಕೆರೂರು, ಮಾಸೂರು, ಕೋಡಮಗ್ಗಿ, ಹಳ್ಳೂರು) ಮಾರ್ಗದ 47.45 ಕಿ.ಮೀ., ಕೋಡ, ಅಣಜಿ 32 ಕಿ.ಮೀ., ಯಕ್ಕುಂಬಿ, ಹಾವೇರಿ ಸಾಗರ ಹೆದ್ದಾರಿಯಲ್ಲಿನ ಮಡ್ಲೂರು, ಸಾತೇನಹಳ್ಳಿ, ಚಿಕ್ಕೊಣತಿ, ಚಿಕ್ಕೇರೂರು, ದಾಸನಕೊಪ್ಪ, ಹಂಸಭಾವಿ ಮಾರ್ಗದ 16.42 ಕಿ.ಮೀ. ಸೇರಿದಂತೆ ಒಟ್ಟು 95.47 ಕಿಲೋಮಿಟರ್ ರಸ್ತೆ ಅಭಿವೃದ್ಧಿಗೆ ಅನುಮೋದನೆ ದೊರೆತಿದೆ ಎಂದರು.