More

    ಅನುಮೋದನೆ ಅವಧಿ ಕಡಿತ: ಸಚಿವ ಜಗದೀಶ ಶೆಟ್ಟರ್ ಭರವಸೆ, ಸಿಐಐ ಸದಸ್ಯರ ವಾರ್ಷಿಕ ಸಭೆ

    ಬೆಂಗಳೂರು: ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ (ಎಫ್​ಡಿಐ) ರಾಜ್ಯ 3ನೇ ಸ್ಥಾನದಲ್ಲಿದೆ. ಇದನ್ನು ಮೊದಲ ಸ್ಥಾನಕ್ಕೇರಿಸಲು ಯೋಜನೆಗಳಿಗೆ ಅನುಮೋದನೆ ನೀಡುವ ಅವಧಿ ಕಡಿಮೆ ಮಾಡಲಾಗುವುದು ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.

    ನಗರದಲ್ಲಿ ಗುರುವಾರ ಏರ್ಪಡಿಸಿದ್ದ ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ವಾರ್ಷಿಕ ಸದಸ್ಯರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಹೂಡಿಕೆದಾರರಿಗೆ ರಾಜ್ಯ ಮೊದಲ ಆಯ್ಕೆಯಾಗಿದೆ. ಹೊಸ ಯೋಜನೆಗಳ ಆರಂಭಕ್ಕೆ ಅನುಮೋದನೆ ನೀಡಲು ಕರ್ನಾಟಕ ಭೂ ಸುಧಾರಣಾ ಕಾಯ್ದೆಯ ನಿಬಂಧನೆಗಳಿಗೆ ತಿದ್ದುಪಡಿ ತರಲಾಗುತ್ತಿದೆ. ಇದರಲ್ಲಿ ಭೂಸ್ವಾಧೀನ ಮತ್ತು ಪರಿವರ್ತನೆ ಎರಡಕ್ಕೂ ತಿದ್ದುಪಡಿ ಮಾಡಿ, ಯೋಜನೆಗಳಿಗೆ ಅನುಮತಿ ನೀಡುವ ಅವಧಿಯನ್ನು 60ರಿಂದ 30 ದಿನಗಳಿಗೆ ಇಳಿಸಲಾಗುವುದು ಎಂದರು.

    ಸಂದೀಪ್ ಸಿಂಗ್ ಆಯ್ಕೆ: ಟಾಟಾ ಹಿಟಾಚಿ ಕನ್​ಸ್ಟ್ರಕ್ಷನ್ ಮಷಿನರಿ ಕಂಪನಿ ಪ್ರೖೆವೇಟ್ ಲಿ.ನ ಎಂಡಿ ಸಂದೀಪ್ ಸಿಂಗ್ 2020-2021ನೇ ಸಾಲಿನ ಸಿಐಐ ಕರ್ನಾಟಕ ರಾಜ್ಯ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾದರು. 3ಎಂ ಇಂಡಿಯಾ ಲಿ.ನ ಎಂಡಿ ರಮೇಶ್ ರಾಮದುರೈ ಉಪಾಧ್ಯಕ್ಷರಾಗಿ ಆಯ್ಕೆಯಾದರು.

    ಕರ್ನಾಟಕವು ದೇಶದ ಅತಿದೊಡ್ಡ ಸಾಫ್ಟ್​ವೇರ್ ರಫ್ತುದಾರ ರಾಜ್ಯವಾಗಿದೆ. ಜಾಗತಿಕವಾಗಿ ಅತಿದೊಡ್ಡ ಆರಂಭಿಕ ಪರಿಸರ ವ್ಯವಸ್ಥೆಗಳಲ್ಲಿ ಹೊಂದಿದ್ದು, ಏರೋಸ್ಪೇಸ್, ಡಿಫೆನ್ಸ್, ಆಟೋಮೊಬೈಲ್ಸ್ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆ ಮಾಡುತ್ತಿದೆ. 2018-19ನೇ ಸಾಲಿನಲ್ಲಿ ಸರಕು ಸೇವೆ ರಫ್ತಿನಲ್ಲಿ ದೇಶದಲ್ಲೇ 2ನೇ ಸ್ಥಾನ ಪಡೆದಿದೆ. ನೀತಿ ಆಯೋಗ ಬಿಡುಗಡೆ ಮಾಡಿರುವ ಇಂಡಿಯಾ ಇನ್ನೋವೇಶನ್ ಇಂಡೆಕ್ಸ್ -2019ರಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಸಿಕ್ಕಿದೆ ಎಂದು ಜಗದೀಶ ಶೆಟ್ಟರ್ ಹೇಳಿದರು.

    5 ಕ್ಷೇತ್ರಗಳಲ್ಲಿ ಇಸ್ರೇಲ್ ಸಹಕಾರ: ಕರ್ನಾಟಕದಲ್ಲಿ ನೀರು, ಕೃಷಿ, ಸೈಬರ್ ಭದ್ರತೆ, ರಕ್ಷಣೆ ಮತ್ತು ಆರೋಗ್ಯ ಸೇರಿ 5 ಕ್ಷೇತ್ರಗಳಲ್ಲಿ ಸಹಕರಿಸಲು ಇಸ್ರೇಲ್ ಸಿದ್ಧವಿದೆ. ಸ್ಥಳೀಯ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಜತೆಗೆ ನಮ್ಮ ತಂತ್ರಜ್ಞಾನವನ್ನು ಹಂಚಿಕೊಳ್ಳಲು ಸಿದ್ಧವಿರುವುದಾಗಿ ದಕ್ಷಿಣ ಭಾರತದಲ್ಲಿನ ಇಸ್ರೇಲ್​ನ ರಾಯಭಾರಿ ಡಾನಾ ಕುರ್ಶ್ ತಿಳಿಸಿದರು.

    ನ.3ರಿಂದ 5ರವರೆಗೆ ಇನ್ವೆಸ್ಟ್ ಕರ್ನಾಟಕ: ‘ಇನ್ವೆಸ್ಟ್ ಕರ್ನಾಟಕ-2020’ ಜಾಗತಿಕ ಹೂಡಿಕೆದಾರರ ಸಭೆ ನ.3ರಿಂದ 5ರವರೆಗೆ ಬೆಂಗಳೂರಿನಲ್ಲಿ ಆಯೋಜನೆ ಗೊಳ್ಳಲಿದೆ ಎಂದು ಜಗದೀಶ ಶೆಟ್ಟರ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts