More

    ಮಧ್ಯವರ್ತಿ ತಡೆಗೆ ಎಪಿಎಂಸಿ ಕಾಯ್ದೆ ತಿದ್ದುಪಡಿ

    ಮಂಗಳೂರು: ಮಧ್ಯವರ್ತಿಗಳ ಹಾವಳಿಯಿಂದ ರೈತರನ್ನು ಪಾರು ಮಾಡಲು ಮತ್ತು ರೈತರ ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಹಾಗೂ ನೇರ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಎಪಿಎಂಸಿ ಕಾಯ್ದೆಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್‌ಕುಮಾರ್ ಕಟೀಲ್ ಹೇಳಿದರು.

    ನಗರದ ಟಿವಿ ರಮಣ ಪೈ ಸಭಾಂಗಣದಲ್ಲಿ ಶುಕ್ರವಾರ ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ ಹಾಗೂ ಕಿಸಾನ್ ಸಮ್ಮಾನ್ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಈ ಹಿಂದೆ ರೈತರ ಹೆಸರಲ್ಲಿ ಮತ ಪಡೆದು ಸರ್ಕಾರ ರಚಿಸಿದವರು ರೈತರ ಬದುಕಿಗೆ ಭದ್ರತೆ ಒದಗಿಸುವ ಯಾವುದೇ ಒಳ್ಳೆಯ ಕಾರ್ಯಕ್ರಮಗಳನ್ನು ಜಾರಿಗೆ ತಂದಿರಲಿಲ್ಲ. ರೈತರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ವಾಜಪೇಯಿ ಪ್ರಧಾನಿಯಾಗಿದ್ದ ಸಂದರ್ಭ ದೇಶಕ್ಕೆ ಪ್ರಥಮ ಬಾರಿಗೆ ಕಿಸಾನ್ ಕಾರ್ಡ್ ಪರಿಚಯಿಸಿದರು ಎಂದರು.

    ರೈತರ ಕಣ್ಣೀರು ಒರೆಸಿದರೆ ಮಾತ್ರ ದೇಶದ ಕಣ್ಣೀರು ಒರೆಸಲು ಸಾಧ್ಯ ಎಂಬ ಚಿಂತನೆಯನ್ನು ವಾಜಪೇಯಿ ಹೊಂದಿದ್ದರು. ಈಗ ವಾಜಪೇಯಿ ಅವರ ರಾಷ್ಟ್ರೀಯ ಚಿಂತನೆ, ದೇಶದ ಅಭಿವೃದ್ಧಿಯ ದಿಸೆಯಲ್ಲಿ ಅವರು ತೋರಿಸಿದ ಮಾರ್ಗದಲ್ಲಿ ಪ್ರಧಾನಿ ಮೋದಿಯವರು ಸಾಗುತ್ತಿದ್ದಾರೆ. ಆದ್ದರಿಂದ ರೈತರ ಸ್ವಾಭಿಮಾನ ಜೀವನಕ್ಕೆ ಪೂರಕವಾಗಿ ವಾರ್ಷಿಕ 6 ಸಾವಿರ ರೂ.ಗಳನ್ನು ರೈತರ ಖಾತೆಗಳಿಗೆ ನೇರವಾಗಿ ವರ್ಗಾಯಿಸುವ ಕಿಸಾನ್ ಸಮ್ಮಾನ್ ಯೋಜನೆಯನ್ನು ಕಳೆದ ವರ್ಷದಿಂದ ಆರಂಭಿಸಿದ್ದಾರೆ ಎಂದು ಹೇಳಿದರು.

    ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ರೈತ ಮುಖಂಡ ಕಡಮಜಲು ಸುಭಾಷ್ ರೈ, ಶಾಸಕರಾದ ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ಸಂಜೀವ ಮಠಂದೂರು, ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್, ಮೇಯರ್ ದಿವಾಕರ್, ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ. ಅಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್, ಮುಡಾ ಅಧ್ಯಕ್ಷ ರವಿಶಂಕರ್ ಮಿಜಾರ್ ಉಪಸ್ಥಿತರಿದ್ದರು. ಮಂಗಳೂರು ಎಪಿಎಂಸಿ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ ಸ್ವಾಗತಿಸಿದರು. ವಸಂತ ಅಣ್ಣಳಿಕೆ ವಂದಿಸಿದರು.

    ಸಭಾಂಗಣವೇ ಹಸಿರುಮಯ: ಯಾವಾಗಲೂ ಕೇಸರಿ ಶಲ್ಯದಲ್ಲಿ ಕಾಣಿಸಿಕೊಳ್ಳುತ್ತಿರುವ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಕಿಸಾನ್ ಸಮ್ಮಾನ್ ಕಾರ್ಯಕ್ರಮಕ್ಕೆ ಪೂರಕವಾಗಿ ಹಸಿರು ಶಲ್ಯ ಧರಿಸಿ ಗಮನ ಸೆಳೆದರು. ಅಟಲ್ ಜನ್ಮದಿನ ಹಾಗೂ ಕಿಸಾನ್ ಸಮ್ಮಾನ್ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣ ವೀಕ್ಷಿಸಲು ವೇದಿಕೆಯಲ್ಲೇ ಎಲ್‌ಇಡಿ ಪರದೆ ವ್ಯವಸ್ಥೆ ಮಾಡಲಾಗಿತ್ತು.

    ಉಡುಪಿಯಲ್ಲಿ ಹಲವು ಕಾರ್ಯಕ್ರಮ:  ಉಡುಪಿ ಬಿಜೆಪಿ ಜಿಲ್ಲಾ ವೈದ್ಯಕೀಯ ಪ್ರಕೋಷ್ಠ ವತಿಯಿಂದ ಜಿಲ್ಲಾ ಸರ್ಕಾರಿ ಆಸ್ಪತ್ರೆ ಸಹಯೋಗದಲ್ಲಿ ಶುಕ್ರವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರ 96ನೇ ಹುಟ್ಟುಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ ನಡೆಯಿತು. ಜಿಲ್ಲಾ ಯುವಮೋರ್ಚಾ ವತಿಯಿಂದ ನೀಲಾವರ ಗೋಶಾಲೆಯಲ್ಲಿ ಗೋಹತ್ಯೆ ನಿಷೇಧ ಮಸೂದೆ ಸ್ವಾಗತಿಸಿ ಗೋಶಾಲೆಯನ್ನು ಸ್ವಚ್ಛಗೊಳಿಸಿ, ಗೋಪೂಜೆ ನೆರವೇರಿಸಲಾಯಿತು. ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಶ್ರೀಕೃಷ್ಣ ಬಾಲನಿಕೇತನ ಅನಾಥಶ್ರಮಕ್ಕೆ ಆಹಾರ ಸಾಮಗ್ರಿ ನೀಡಲಾಯಿತು.

    ದೇಶದ 9 ಕೋಟಿ ರೈತರ ಖಾತೆಗೆ 18,000 ಕೋಟಿ ರೂ. ಮೊತ್ತವನ್ನು ಕೇಂದ್ರ ಸರ್ಕಾರ ನೇರ ಪಾವತಿ ಮಾಡುತ್ತಿದೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ರೈತರಿಗೆ ನೇರ ಮಾರುಕಟ್ಟೆ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಒದಗಿಸಿದೆ. ರೈತರು ಅಪಪ್ರಚಾರಕ್ಕೆ ಒಳಗಾಗದೆ ಸದುದ್ದೇಶ ಹೊಂದಿರುವ ಎಪಿಎಂಸಿ ಕಾಯ್ದೆ ತಿದ್ದುಡಿಯನ್ನು ಬೆಂಬಲಿಸಬೇಕು.
    – ಕೋಟ ಶ್ರೀನಿವಾಸ ಪೂಜಾರಿ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts