More

    ಆತಂಕದ ಕೋಟೆಯೊಳಗೆ ಪರೀಕ್ಷೆ

    ಬೆಳಗಾವಿ: ಕೋವಿಡ್-19 ಆತಂಕದ ಮಧ್ಯೆಯೂ ಜಿಲ್ಲೆಯಲ್ಲಿ ಜೂ. 18ರಂದು ಸುಗಮವಾಗಿ ಪಿಯುಸಿ ದ್ವಿತೀಯ ವರ್ಷದ ಇಂಗ್ಲಿಷ್ ಪರೀಕ್ಷೆ ನಡೆಸುವ ನಿಟ್ಟಿನಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ಸಜ್ಜಾಗಿದ್ದಾರೆ. ಅಗತ್ಯ ಸಿದ್ಧತೆ ನಡೆದಿದೆ.

    ಈ ನಡುವೆ, ಕರೊನಾ ವೈರಸ್ ಆತಂಕದಿಂದಾಗಿ ಬೇರೆ ಜಿಲ್ಲೆಗಳಲ್ಲಿ ಓದುತ್ತಿದ್ದ 1,572 ವಿದ್ಯಾರ್ಥಿಗಳು ಬೆಳಗಾವಿಗೆ ಮರಳಿದ್ದು, ಅವರೂ ಇಲ್ಲಿಯೇ ಪರೀಕ್ಷೆ ಎದುರಿಸಲಿದ್ದಾರೆ. ಮಾರ್ಚ್ ತಿಂಗಳಲ್ಲಿ ನಡೆದ ಪರೀಕ್ಷೆ ವೇಳೆ, ಪ್ರತಿ ಕೊಠಡಿಯಲ್ಲಿ 30 ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ, ಈಗ ದೈಹಿಕ ಅಂತರ ಕಾಪಾಡುವ ದೃಷ್ಟಿಯಿಂದ ಆ ಸಂಖ್ಯೆಯನ್ನು 24ಕ್ಕೆ ಇಳಿಸಲಾಗಿದೆ. ಇದರಿಂದಾಗಿ ಕೆಲ ಕೇಂದ್ರಗಳಲ್ಲಿ ಕೊಠಡಿಗಳ ಸಮಸ್ಯೆ ಸೃಷ್ಟಿಯಾಗಿದೆ.

    ಸುರಕ್ಷತೆಗೂ ಒತ್ತು: ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 34 ಕೇಂದ್ರಗಳಿದ್ದು, 21,818 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಚಿಕ್ಕೋಡಿಯಲ್ಲಿ 45 ಕೇಂದ್ರಗಳಲ್ಲಿ 26,559 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಪರೀಕ್ಷೆಯಲ್ಲಿ ಯಾವುದೇ ಗೊಂದಲ ತಲೆದೋರದಂತೆ ಎಚ್ಚರ ವಹಿಸುವ ಜತೆಗೆ, ಮಕ್ಕಳ ಆರೋಗ್ಯ ಸುರಕ್ಷತೆ ದೃಷ್ಟಿಯಿಂದಲೂ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.

    ಬೇರೆ ಜಿಲ್ಲೆಯಲ್ಲಿ ನೋಂದಣಿ: ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಕೇಂದ್ರಗಳಲ್ಲಿ ಬೇರೆ ಜಿಲ್ಲೆಗಳ 743 ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ, ಚಿಕ್ಕೋಡಿಯಲ್ಲಿ 829 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಆದರೆ, ಬೆಳಗಾವಿಯ 52, ಚಿಕ್ಕೋಡಿಯ 2 ಸೇರಿ ಇಲ್ಲಿನ 54 ವಿದ್ಯಾರ್ಥಿಗಳಷ್ಟೇ ಬೇರೆ ಜಿಲ್ಲೆಗಳಲ್ಲಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ.
    ಹೊರರಾಜ್ಯದ 71 ವಿದ್ಯಾರ್ಥಿಗಳು: ಮಹಾರಾಷ್ಟ್ರದಲ್ಲಿ ವಾಸವಿದ್ದರೂ ಹಲವು ವಿದ್ಯಾರ್ಥಿಗಳು ಜಿಲ್ಲೆಯ ಪಿಯು ಕಾಲೇಜುಗಳಲ್ಲಿ ಕನ್ನಡ ಮಾಧ್ಯಮದಲ್ಲೇ ಓದುತ್ತಿದ್ದಾರೆ.

    ಲಾಕ್‌ಡೌನ್ ಅವಧಿಯಲ್ಲಿ ಕೆಲವರು ಮಹಾರಾಷ್ಟ್ರ ಮತ್ತು ಗೋವಾಕ್ಕೆ ಸಂಬಂಧಿಕರ ಮನೆಗೆ ತೆರಳಿದ್ದಾರೆ. ಹಾಗಾಗಿ, ಹೊರರಾಜ್ಯಗಳಿಂದ ಇಲ್ಲಿ ಪರೀಕ್ಷೆಗೆ ಬರುವ 71 ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬೆಳಗಾವಿ ಜಿಲ್ಲಾಡಳಿತ ಅಂತಾರಾಜ್ಯ ಪಾಸ್ ವ್ಯವಸ್ಥೆ ಮಾಡಿದೆ.

    ಹೆಚ್ಚುವರಿ ಕೊಠಡಿ, ಹೊರಗಿನವರಿಗೆ ಪ್ರತ್ಯೇಕ ವ್ಯವಸ್ಥೆ: 800ಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿರುವ ಬೆಳಗಾವಿಯ ಮೂರು, ಖಾನಾಪುರ, ರಾಮದುರ್ಗ ತಾಲೂಕಿನ ಕಟಕೋಳ, ಚಿಕ್ಕೋಡಿ ತಾಲೂಕಿನ ಮಜಲಟ್ಟಿ, ಬೇಡಕಿಹಾಳ, ರಾಯಬಾಗ ಮತ್ತು ಗೋಕಾಕದ ತಲಾ ಒಂದು ಪರೀಕ್ಷಾ ಕೇಂದ್ರದಲ್ಲಿ ಕೊಠಡಿಗಳ ಅಭಾವ ಸೃಷ್ಟಿಯಾಗಿದೆ. ಅಂಥ ಕಡೆಗಳಲ್ಲಿ 500 ಮೀಟರ್ ಅಂತರದಲ್ಲಿರುವ ಬೇರೆ ಪ್ರಾಥಮಿಕ, ಪ್ರೌಢಶಾಲೆಗಳು ಅಥವಾ ಪದವಿ ಕಾಲೇಜುಗಳ ಕೊಠಡಿಗಳನ್ನು ಹೆಚ್ಚುವರಿಯಾಗಿ ಬಳಸಿಕೊಳ್ಳಲು ಇಲಾಖೆ ತೀರ್ಮಾನಿಸಿದೆ.

    ಇನ್ನು, ಬೇರೆ ಕಡೆಯಿಂದ ಬಂದಿರುವ ವಿದ್ಯಾರ್ಥಿಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂಡ್ರಿಸಿ ಪ್ರತಿಯೊಬ್ಬರಿಗೆ ಮಾಸ್ಕ್, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ. ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಿದ ನಂತರವೇ ಕೇಂದ್ರದೊಳಗೆ ಪ್ರವೇಶ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕರೊನಾ ಸೋಂಕು ಹರಡುವಿಕೆ ನಿಯಂತ್ರಣಕ್ಕಾಗಿ ಅನುಸರಿಸಬೇಕಿರುವ ಕ್ರಮಗಳ ಕುರಿತು ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರಿಗೆ ನಿರ್ದೇಶನ ನೀಡಲಾಗಿದೆ. ಪ್ರತಿ ಕೇಂದ್ರದಲ್ಲಿ ಆರೋಗ್ಯ ಸಹಾಯಕರನ್ನು ನೇಮಿಸಲಾಗುತ್ತದೆ. ಅನಾರೋಗ್ಯ ಲಕ್ಷಣ ಕಂಡುಬಂದ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾದ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುವುದು. ಪಾಲಕರು ಆತಂಕಗೊಳ್ಳಬೇಕಿಲ್ಲ.
    | ರಾಜಶೇಖರ ಪಟ್ಟಣಶೆಟ್ಟಿ ಡಿಡಿಪಿಯು, ಬೆಳಗಾವಿ ಶೈಕ್ಷಣಿಕ ಜಿಲ್ಲೆ

    ಪಿಯುಸಿ ಪರೀಕ್ಷೆ ಬರೆಯುವವರ ಸುರಕ್ಷತೆ ದೃಷ್ಟಿಯಿಂದ ಅಗತ್ಯಕ್ರಮ ಮುನ್ನೆಚ್ಚರಿಕೆ ವಹಿಸಿದ್ದೇವೆ. ವಿದ್ಯಾರ್ಥಿಗಳು ಯಾವುದೇ ಆತಂಕಕ್ಕೆ ಒಳಗಾಗದೆ, ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು.
    |ಎಸ್.ಡಿ. ಕಾಂಬಳೆ ಡಿಡಿಪಿಯು, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ

    |ಇಮಾಮಹುಸೇನ್ ಗೂಡುನವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts