More

    ‘ಅನುಗ್ರಹ ಕೊಡುಗೆ’ ಹಣ ಬಿಡುಗಡೆ ; ಫಲಾನುಭವಿಗೆ ನೇರ ವರ್ಗಾವಣೆ

    ತುಮಕೂರು: ಕುರಿ, ಮೇಕೆಗಳ ಆಕಸ್ಮಿಕ ಸಾವಿನ ಸಂದರ್ಭದಲ್ಲಿ ರೈತರಿಗೆ ನೆರವಾಗಲು ನೀಡುತ್ತಿದ್ದ ಕುರಿಗಾಹಿಗಳ ಮಹತ್ವಾಕಾಂಕ್ಷಿ ಪರಿಹಾರಧನ ಕಾರ್ಯಕ್ರಮ ‘ಅನುಗ್ರಹ ಕೊಡುಗೆ’ಯ ಬಾಕಿ ಹಣ ಬಿಡುಗಡೆಯಾಗಿದ್ದು, 1212 ಕುರಿಗಾಹಿಗಳ ಖಾತೆಗೆ ನೇರ ವರ್ಗಾವಣೆಯಾಗಿದೆ.

    ಜಿಲ್ಲೆಯಲ್ಲಿ 2019-20ನೇ ಸಾಲಿನಲ್ಲಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದ 3 ಸಾವಿರಕ್ಕೂ ಹೆಚ್ಚು ಕುರಿಗಾಹಿಗಳ ಪೈಕಿ ಸರ್ಕಾರ ಜಿಲ್ಲೆಯ 1212 ಜನರಿಗೆ 68.29 ಲಕ್ಷ ರೂಪಾಯಿ ಬಿಡುಗಡೆ ಮಾಡಿದ್ದು, ಇನ್ನುಳಿದ 1800 ಜನರಿಗೆ 78ಲಕ್ಷ ರೂ. ಬಾಕಿ ಉಳಿಸಿಕೊಂಡಿದೆ.
    ಜಿಲ್ಲೆಯಲ್ಲಿ ಅತೀ ಹೆಚ್ಚು 17 ಲಕ್ಷ ಕುರಿ, ಮೇಕೆಗಳನ್ನು ಸಾಕಲಾಗಿದೆ. 10 ಸಾವಿರಕ್ಕೂ ಹೆಚ್ಚು ಕುಟುಂಬಗಳ ಪ್ರಮುಖ ಕಸುಬು ಕುರಿ ಕಾಯುವುದೇ ಆಗಿದೆ. ಸರ್ಕಾರದಿಂದ ನೀಡಿರುವ 68.29 ಲಕ್ಷ ರೂ.ಗಳಲ್ಲಿ ಜಿಲ್ಲೆಯ 10 ತಾಲೂಕಿಗಳಿಗೆ ಹಂಚಿಕೆ ಮಾಡಲಾಗಿದ್ದು, ಚಿಕ್ಕನಾಯಕನಹಳ್ಳಿ ತಾಲೂಕಿಗೆ ಅತೀ ಹೆಚ್ಚು 10.25ಲಕ್ಷ ರೂ. ನೀಡಲಾಗಿದೆ.

    ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಈ ಕಾರ್ಯಕ್ರಮಕ್ಕೆ ಹಣ ಮೀಸಲಿಟ್ಟಿಲ್ಲ ಎಂಬ ಕಾರಣಕ್ಕೆ 2020ರ ನಂತರ ಕುರಿಗಾಹಿಗಳಿಂದ ಹೊಸ ಅರ್ಜಿಗಳನ್ನು ಪಡೆಯದ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಈ ಹಿಂದೆ ಬಾಕಿ ಉಳಿಸಿಕೊಂಡಿದ್ದ ಅರ್ಜಿಗಳಿಗಷ್ಟೇ ಹಣ ನೀಡುತ್ತಿದೆ. ಕಳೆದೆರೆಡು ವರ್ಷದಿಂದ ಕುರಿ ಕಳೆದುಕೊಂಡು ಕಂಗಾಲಾಗಿದ್ದ ಕುರಿಗಾಹಿಗಳಿಗೆ ಸ್ವಲ್ಪ ಭರವಸೆ ಉಳಿದಿದೆ.

    ರಾಜ್ಯ ಸರ್ಕಾರದ 2020-21ನೇ ಸಾಲಿನ ಆಯವ್ಯಯದ ಸಂಪುಟ-3 ಅಭಿಯಾಚನೆ ಸಂಖ್ಯೆ-2, ಪುಟ ಸಂಖ್ಯೆ 67ರಲ್ಲಿ ಅನುಗ್ರಹ ಕೊಡುಗೆ (ಎಕ್ಸ್-ಗ್ರೇಶಿಯಾ) ಲೆಕ್ಕ ಶೀರ್ಷಿಕೆ ಅಡಿಯಲ್ಲಿ ಅನುದಾನ ನಿಗದಿಯಾಗದಿರುವ ಹಿನ್ನೆಲೆಯಲ್ಲಿ ಕುರಿ, ಮೇಕೆಗಳು ಆಕಸ್ಮಿಕ ಮರಣಕ್ಕೆ ಕುರಿಗಾರರಿಂದ ಅರ್ಜಿ ಸ್ವೀಕರಿಸದಿರುವುದು ಸೂಕ್ತ ಎಂದು ಇಲಾಖೆ ಆದೇಶದಲ್ಲಿ ತಿಳಿಸಲಾಗಿದೆ.

    ಏನಿದು ’ಅನುಗ್ರಹ ಕೊಡುಗೆ’ ಯೋಜನೆ?:ಕುರಿ, ಮೇಕೆ ಆಕಸ್ಮಿಕ ಮರಣ ಹೊಂದಿದಲ್ಲಿ ಹಾಗೂ ದೃಢೀಕೃತ ಸಂಕ್ರಾಮಿಕ ರೋಗದಲ್ಲಿ ಮೃತಪಟ್ಟ ಪ್ರಕರಣದಲ್ಲಿ ವಿಮೆಗೆ ಒಳಪಡದ 6 ತಿಂಗಳು ಮೇಲ್ಪಟ್ಟ ಪ್ರತಿ ಕುರಿ/ಮೇಕೆಗೆ 5000 ರೂ., ಹಾಗೂ ಆರು ತಿಂಗಳ ಒಳಗಿನ ಮರಿಗೆ 2500ರೂ. ಸಹಾಯಧನ ನೀಡುವ ಕಾರ್ಯಕ್ರಮ ಇದಾಗಿದೆ. ಪ್ರಸ್ತುತ ಈ ಕಾರ್ಯಕ್ರಮಕ್ಕೆ ಎಳ್ಳುನೀರು ಬಿಟ್ಟಂತಾಗಿದೆ.

    ಡಿಬಿಟಿ ಮೂಲಕ ಪರಿಹಾರ ವಿತರಣೆ: ರಾಜ್ಯದಲ್ಲಿ ಇದೇ ಮೊದಲು ಎಂಬಂತೆ ಪಶುಪಾಲನಾ ಇಲಾಖೆ ಅನುಗ್ರಹ ಯೋಜನೆಗೆ ‘ಲಾನುಭವಿಗೆ ನೇರ ವರ್ಗಾವಣೆ’(ಡಿಬಿಟಿ) ಮೂಲಕ ಪರಿಹಾರ ಹಣ ವರ್ಗಾಹಿಸಿದೆ. ಸೆ.4ರಂದು ಎಲ್ಲ ಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಿದ್ದು ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಲಾಗಿದೆ.

    ಬಿಡುಗಡೆಯಾದ ಹಣ: ಗುಬ್ಬಿ 4.32 ಲಕ್ಷ ರೂಪಾಯಿ, ಕೊರಟಗೆರೆ 2.57 ಲಕ್ಷ ರೂಪಾಯಿ, ಕುಣಿಗಲ್ 3.42 ಲಕ್ಷ ರೂಪಾಯಿ, ಪಾವಗಡ 3.70 ಲಕ್ಷ ರೂಪಾಯಿ, ತಿಪಟೂರು 5.65 ಲಕ್ಷ ರೂಪಾಯಿ, ತುಮಕೂರು 2.82 ಲಕ್ಷ ರೂಪಾಯಿ, ತುರುವೇಕೆರೆ 7.30 ಲಕ್ಷ ರೂಪಾಯಿ, ಮಧುಗಿರಿ 2.62 ಲಕ್ಷ ರೂಪಾಯಿ, ಚಿ.ನಾ.ಹಳ್ಳಿ 10.25 ಲಕ್ಷ ರೂಪಾಯಿ, ಶಿರಾ 2.55 ಲಕ್ಷ ರೂಪಾಯಿ,
    ಒಟ್ಟು 68.29 ಲಕ್ಷ ರೂಪಾಯಿ.

    ಕುರಿ, ಮೇಕೆ ಸಾಕಾಣಿಕೆ ಮಾಡುತ್ತಿರುವ ಬಹುತೇಕರು ಬಡವರಾಗಿದ್ದಾರೆ, ಆಕಸ್ಮಿಕವಾಗಿ ಸಾವನ್ನಪ್ಪುವ ಕುರಿ, ಮೇಕೆಗೆ ನೀಡುತ್ತಿದ್ದ ಧನಸಹಾಯ ನಿಲ್ಲಿಸಿರುವುದು ಸರಿಯಲ್ಲ, ಕೂಡಲೇ ಸರ್ಕಾರ ಅರ್ಜಿ ಸ್ವೀಕರಿಸಲು ಅವಕಾಶ ನೀಡಬೇಕು, ಈ ಹಿಂದೆ ಅರ್ಜಿ ಸಲ್ಲಿಸಿ, ಬಾಕಿ ಇರುವ ಪರಿಹಾರ ವಿತರಿಸಬೇಕು.
    ಈರಕಾಟಯ್ಯ, ಶಿರಾ

    ಅನುಗ್ರಹ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದ್ದ ಅರ್ಜಿಗಳಿಗೆ ಸರ್ಕಾರ ಅನುದಾನ ನೀಡಿದ್ದು ಉಳಿದವರಿಗೆ ಕೂಡಲೇ ಪರಿಹಾರ ಮೊತ್ತ ಬರಲಿದೆ. ಜಿಲ್ಲೆಯಲ್ಲಿ 12 ಲಕ್ಷ ಕುರಿ, 6ಲಕ್ಷ ಮೇಕೆ ಸಾಕಾಣಿಕೆ ಮಾಡಲಾಗುತ್ತಿದ್ದು 2020ರ ನಂತರ ಯೋಜನೆಗೆ ಅರ್ಜಿ ಪಡೆಯಲು ಸರ್ಕಾರದಿಂದ ನಿರ್ದೇಶನ ಬಂದಿಲ್ಲ.
    ಡಾ.ಕೆ.ನಾಗಣ್ಣ ಸಹಾಯಕ ನಿರ್ದೇಶಕ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts