More

    ಅನುಭಾವದ ಬೆಳಗು: ಮಾಯಾಮಿಥ್ಯಾತ್ವ ಸ್ವರೂಪ

    ಮಹಲಿಂಗರಂಗನಿಗೆ ಮಾಯೆಯ ಸ್ವಸ್ವರೂಪವನ್ನು ಚೆನ್ನಾಗಿ ಮನದಟ್ಟು ಮಾಡಿಸುವ ಉಮೇದು ಈ ಪ್ರಕರಣದ ಉದ್ದಕ್ಕೂ ಇದೆ. ಆದರೆ, ಸಾಧಕರು ಮಾಯೆಯನ್ನು ಅಷ್ಟು ಬೇಗನೆ ಮನಗಾಣಲು ಸಾಧ್ಯವಿಲ್ಲ. ಈ ಸಂಕಟವೂ ಮಹಲಿಂಗರಂಗನಿಗೆ ಗೊತ್ತು. ಅವನ ಮಾತು ಹೀಗುಂಟು:

    ನೆಲ್ಲಬೀಜದೊಳೊಗೆದು ತೋರುವ

    ಜಳ್ಳಿನಂದದಿ ತಿಳಿಯೆ ನಿಜವಾ

    ಗುಳ್ಳ ಬ್ರಹ್ಮದೊಳಿಲ್ಲವೆನಿಸುವ ಸುಳ್ಳಿನೀ ಮಾಯೆ; |

    ಹೊಳ್ಳು ತನ್ನೊಳಗೆಲ್ಲ ನೋಡಲು;

    ಗುಳ್ಳೆಯದಕದೊಳುದಿಸಿದಂದದಿ,

    ಸಿಳ್ಳುಗಣ್ಣಿಗೆ ಹಗಲು ಮಂಜಾಗೆಸೆದು ತೋರ್ಪಂತೆ || (8.10)

    ಅನುಭಾವದ ಬೆಳಗು: ಮಾಯಾಮಿಥ್ಯಾತ್ವ ಸ್ವರೂಪಈ ಪದ್ಯದ ಒಳಾರ್ಥವನ್ನು ಮೊದಲಿಗೆ ತಿಳಿಯೋಣ: ‘‘ಬತ್ತದ ತೆನೆಯುಂಟಷ್ಟೆ. ಆ ತೆನೆಗಳಲ್ಲಿ ಗಟ್ಟಿಬತ್ತವೂ ಉಂಟು; ಜಳ್ಳುಬತ್ತವೂ ಉಂಟು. ಅದರಂತೆ ಮಾಯೆಯು ಸತ್ತ್ವವಿಲ್ಲದ ಬತ್ತದಂತೆ ಬ್ರಹ್ಮದ ಜತೆಗೆ ಸೇರಿಕೊಂಡಿದೆ. ನೀರಿನಲ್ಲಿರುವ ನೀರಗುಳ್ಳೆಯಂತೆ, ಜಿಬುರು ತುಂಬಿದ ಕಣ್ಣಿಗೆ ಹಗಲು ಮಸುಕಾಗಿ ತೋರುವಂತೆ, ಯಾವ ನಿಜವೂ ಕಂಡುಬರುವುದಿಲ್ಲ.’’ ರೈತರು ಬತ್ತವನ್ನು ಬೆಳೆಯುತ್ತಾರೆ. ಆ ಬತ್ತದ ತೆನೆಯಲ್ಲಿ ಗಟ್ಟಿಕಾಳು ಇರುವಂತೆ ಜಳ್ಳುಕಾಳು ಇರುವುದು ಸಾಮಾನ್ಯ. ಬ್ರಹ್ಮ ಗಟ್ಟಿಕಾಳಾದರೆ; ಮಾಯೆ ಜಳ್ಳುಕಾಳು. ಬತ್ತವನ್ನು ಒಕ್ಕಣಿಸುವಾಗ ಜಳ್ಳು ಇಲ್ಲವಾಗಿ ಗಟ್ಟಿಕಾಳು ಉಳಿದುಕೊಳ್ಳುತ್ತದೆ. ಈ ಪದ್ಯದಲ್ಲಿ ಜಳ್ಳು, ಹೊಳ್ಳು, ಗುಳ್ಳೆ, ಸಿಳ್ಳು – ಎಂಬ ಅಚ್ಚಗನ್ನಡ ಪದಗಳನ್ನು ಕವಿ ಇಲ್ಲಿ ಬಳಸಿದ್ದಾನೆ. ಇಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ತಿಳಿಯುವ ಮಾಹಿತಿಯ ಮೂಲಕ ಮಹಲಿಂಗರಂಗನು ಮಾಯೆಯ ಮೂಲಕ ಮನಗಾಣಿಸುತ್ತಿದ್ದಾನೆ.

    ಇದು ಮಾಯಾಪ್ರಪಂಚ. ಇದು ಅಸಹಜವಾದರೂ ಸಹಜವಾದ ಬ್ರಹ್ಮದಲ್ಲಿ ಈ ಮಾಯೆ ಹೇಗೆ ತೋರಿಕೊಂಡೀತು? ನಾವು ದಾರಿಯಲ್ಲಿ ಹೋಗುವಾಗ ‘ಮೃಗಜಲ’ ಕಾಣುತ್ತದೆ. ಇದು ಕಾಣಬೇಕಾದರೆ ಸೂರ್ಯನ ಕಿರಣಗಳಿಂದ ಮಾತ್ರ ಸಾಧ್ಯ. ಇದೇ ರೀತಿಯಲ್ಲಿ ಹೊಗೆಯು ಬೆಂಕಿಯ ಮೂಲಕ ತೋರುವಂತೆ, ಶಾಖವು ನದಿಯಲ್ಲಿ ಸೇರಿರುವಂತೆ ಅಸಮ ತೇಜೋಮಯವಾದ ಬ್ರಹ್ಮ ಹೊಳೆಯುತ್ತದೆ. ಜಗತ್ತಿನಲ್ಲಿ ಅಪಶಕುನಗಳು ನಾನಾ ರೀತಿಯಲ್ಲಿ ತೋರಿಬರುವಂತೆ, ಗಗನದಲ್ಲಿ ದೇವಲೋಕಗಳು ಕಂಡುಬರುವಂತೆ, ಲೆಕ್ಕವಿಲ್ಲದಷ್ಟು ಬ್ರಹ್ಮಾಂಡ ತಂಡಗಳು ಬ್ರಹ್ಮದಲ್ಲಾದ ರೀತಿಯಲ್ಲಿಯೇ ಇವೆ. ನಿಜವಾಗಿ ನೋಡಿದರೆ, ಮಾಯೆ ಎಂಬುದು ಇಲ್ಲ. ಆದರೆ, ಮಾಯೆಯು ನಿಜವಾಗಿ ಇರುವಂತೆ ತೋರುತ್ತದೆ. ಈಗ ಮಹಲಿಂಗರಂಗನ ಮಾತನ್ನು ಆಲಿಸಿ:

    ದಾರು ದಂತಿವಿಕಾರದಂದದಿ

    ತೋರಿತಲ್ಲದೆ ದಂತಿಯುಳಿದಾ

    ದಾರುವನು ತಾ ಬೇರೆ ತೋರಿತೇ? ನಾಮರೂಪಗಳ |

    ತೋರಿಕೆಯ ಕಲ್ಪಿತವು ನಿಜವೇ

    ದಾರುವಿನ ಪರಿ ಬ್ರಹ್ಮ ಜಗದಾ

    ಕಾರವಾಗಿಯೆ ತೋರಿತಲ್ಲದೆ ಬೇರೆ ಜಗವಿಲ್ಲ || (8.13)

    ಈ ಪದ್ಯದ ಅರ್ಥ ಇಷ್ಟು: ‘‘ಕಟ್ಟಿಗೆಯು ಆನೆಯ ಆಕಾರದಲ್ಲಿ ತೋರುವುದಲ್ಲದೆ, ಆನೆಯಿಂದ ಬೇರೆಯಾದ ಕಟ್ಟಿಗೆಯನ್ನು ತಾನು ಬೇರೆಯಾಗಿ ತೋರುತ್ತದೆಯೆ? ಬಹುನಾಮರೂಪಗಳು ತೋರಿಕೆಯ ಕಲ್ಪಿತವಾಗಿರುವುದೇ ಹೊರತು, ಅವು ಯಾವುವೂ ನಿಜವಲ್ಲ. ಇಂತಹ ಕಟ್ಟಿಗೆಯ ರೀತಿಯಲ್ಲಿ ಬ್ರಹ್ಮವು ಜಗತ್ತಿನ ರೂಪದಲ್ಲಿ ಕಂಡುಬರುವುದೇ ಹೊರತು, ವಾಸ್ತವವಾಗಿ ಜಗತ್ತೆಂಬುದು ಇಲ್ಲ!’’ ಈ ಜಗತ್ತಿನಲ್ಲಿ ಲೋಹದಿಂದ ಮಾಡಿದ ಪ್ರತಿಮೆಗಳು ಅಸಂಖ್ಯವಾಗಿವೆ. ಇಲ್ಲಿರುವ ಆಸನ, ವಾಹನ, ವಸ್ತ್ರಾಭರಣಗಳು – ಕಂಡಕಂಡವರಿಗೆ ಆಸೆಯನ್ನು ಉಂಟುಮಾಡುತ್ತವೆ. ಇವೆಲ್ಲ ಕೇವಲ ಮಾಯಾಮೋಹಮಾತ್ರಗಳಾಗಿವೆ. ಇವೆಲ್ಲವನ್ನೂ ಗಣಿಸಿ ನೋಡಿದರೆ ಸಮಸ್ತವೂ ಬ್ರಹ್ಮಮಯವಾಗಿಯೇ ಉಂಟು.

    ಮಹಲಿಂಗರಂಗನು ಕನ್ನಡ ಕಾವ್ಯಭಾಷೆಯನ್ನು ವೇದಾಂತಭಾಷೆಯನ್ನಾಗಿ ರೂಪಿಸುತ್ತಿದ್ದಾನೆ. ಇದು ಕಷ್ಟಸಾಧ್ಯವಾದ ಕಾರ್ಯವೇನೊ ಹೌದು! ಅವನ ಅನುಭವವು ಕನ್ನಡದ ಮೂಲಕವೇ ರೂಪಿತಗೊಂಡಿದೆ. ಆದುದರಿಂದ, ವೇದಾಂತಭಾಷೆಯು ‘ಸುಲಿದ ಬಾಳೆಯ ಹಣ್ಣಿನಂತೆ’ ಆಗಿದೆ. ಮಾಯೆ-ಬ್ರಹ್ಮ ಇಂಥ ಪರಿಕಲ್ಪನೆಗಳನ್ನು ಸಂಸ್ಕೃತದಲ್ಲಿ ಸೂತ್ರಬದ್ಧವಾಗಿ ನಿರೂಪಿಸಬಹುದು. ಆದರೆ, ಅದು ಕನ್ನಡದಲ್ಲಿ ಅವತರಿಸುವಾಗ, ಸಾಮತಿಯ ಮೂಲಕವೇ ಹೇಳಬೇಕಾಗುತ್ತದೆ. ಮಹಲಿಂಗರಂಗನ ಈ ಪದ್ಯವನ್ನು ಗಮನಿಸಿ:

    ಬೆಲ್ಲದಲಿ ಬಹುವಿಧದ ಮಾಟದ

    ಬಿಲ್ವ, ಪನಸ, ರಸಾಲ, ದಾಡಿಮ

    ನೆಲ್ಲಿ, ಮೊದಲಾದಖಿಲ ಫಲಗಳ ನಾಮರೂಪುಗಳು |

    ಸೊಲ್ಲು ಮಾತ್ರಗಳೈಸೆ! ಸವಿಯಲ

    ವೆಲ್ಲ ಮಾಧುರ್ಯಂಗಳಾ ಪರಿ

    ಯೆಲ್ಲವಿವು ಪರಬೊಮ್ಮವಲ್ಲದೆ ಬೇರೆ ಜಗವಿಲ್ಲ || (8.15)

    ಈ ಪದ್ಯದ ಅರ್ಥ ಬಲು ಸರಳವಾಗಿದೆ: ‘‘ಲೋಕದಲ್ಲಿ ಹಲವು ಹಣ್ಣುಗಳುಂಟು. ಅವು ಆಕಾರದಲ್ಲಿ ಬೇರೆಬೇರೆಯಾಗಿರುವುದೇನೋ ನಿಜ. ಆದರೆ, ಸಿಹಿ ಎಲ್ಲ ಹಣ್ಣುಗಳಲ್ಲೂ ಉಂಟೇ ಉಂಟು. ಆ ಹಣ್ಣುಗಳು ಬೇರೆ ಬೇರೆ ಹೆಸರನ್ನು ಪಡೆದಿವೆಯೆಂಬುದೂ ಅಷ್ಟೇ ನಿಜ. ಆದರೆ, ಅವೆಲ್ಲವೂ ರುಚಿಯಾಗಿಯೇ ಇವೆ. ಈ ಹಣ್ಣುಗಳಂತೆಯೇ ಪರಬ್ರಹ್ಮವೊಂದೇ. ಜಗತ್ತೆಂಬುದು ಮಿಥ್ಯೆ! ಅದ್ವೆ ೖತದಲ್ಲಿ ‘‘ಬ್ರಹ್ಮಸತ್ಯಾ ಜಗನ್ಮಿಥ್ಯಾ ಜೀವೋ ಬ್ರಹ್ಮೆ ೖವ ನಾಪರಃ’’ ಎಂಬ ಮಾತನ್ನು ಮಹಲಿಂಗರಂಗ ಹಲವು ಉದಾಹರಣೆಗಳ ಮೂಲಕ ಸ್ಪಷ್ಟಪಡಿಸುತ್ತಿದ್ದಾನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts