More

    ಆಡಳಿತ ವಿರೋಧಿ ಅಲೆ ಲಾಭ ತಂದೀತೆ ಪಾಟೀಲರಿಗೆ ?

    ಕಾರವಾರ: ಆಡಳಿತ ವಿರೋಧಿ ಅಲೆ ಯಲ್ಲಾಫುರ- ಮುಂಡಗೋಡ ಕ್ಷೇತ್ರದಲ್ಲಿ ಜೋರಾಗಿದ್ದು, ಬಿಜೆಪಿ ಅಭ್ಯರ್ಥಿ ಸಚಿವ ಶಿವರಾಮ ಹೆಬ್ಬಾರ ವಿರೋಧಿ ಅಲೆ ಮೆಟ್ಟಿ ನಿಲ್ಲುವ ವಿಶ್ವಾಸದಲ್ಲಿದ್ದಾರೆ.
    ಯಲ್ಲಾಪುರ, ಮುಂಡಗೋಡ ತಾಲೂಕುಗಳು ಹಾಗೂ ಶಿರಸಿ ತಾಲೂಕಿನ ಬನವಾಸಿ ಹೋಬಳಿಯ ಪ್ರದೇಶಗಳನ್ನೊಳಗೊಂಡ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸಂಚರಿಸಿದಾಗ ಕಂಡುಬರುವ ಚಿತ್ರಣವಿದು.
    ಕ್ಷೇತ್ರದಲ್ಲಿ ಬಿಜೆಪಿಯಿಂದ ಶಿವರಾಮ ಹೆಬ್ಬಾರ, ಕಾಂಗ್ರೆಸ್‌ನಿಂದ ವಿ.ಎಸ್. ಪಾಟೀಲ ಹಾಗೂ ಜೆಡಿಎಸ್‌ನಿಂದ ನಾಗೇಶ ನಾಯ್ಕ ಎಂಬ ನಿವೃತ್ತ ಪ್ರಾಧ್ಯಾಪಕ ಕಣದಲ್ಲಿದ್ದಾರೆ.
    ಕಣದಲ್ಲಿ ಒಟ್ಟು ೯ ಅಭ್ಯರ್ಥಿಗಳಿದ್ದು, ಬಿಜೆಪಿ-ಕಾಂಗ್ರೆಸ್ ನಡುವೆ ನೇರಾನೇರ ೈಟ್ ಇದೆ.

    ಆಡಳಿತ ವಿರೋಧಿ ಅಲೆ

    ಕ್ಷೇತ್ರದಲ್ಲಿನ್ನೂ ಎರಡೂ ಪಕ್ಷಗಳಲ್ಲಿ ಸ್ಟಾರ್ ಪ್ರಚಾರಕರ ಆಗಮನವಾಗಿಲ್ಲ. ರೋಡ್ ಶೋದಂಥ ಅಬ್ಬರಗಳು ನಡೆಯುತ್ತಿಲ್ಲ. ಬಿಜೆಪಿಯಿಂದ ನಿಯೋಜನೆಯಾದ ಗೋವಾ ಭಾಗದ ಶಾಸಕರು, ಸಚಿವರು ಮನೆ, ಮನೆ ಪ್ರಚಾರದಲ್ಲಿ ತೊಡಗಿದ್ದಾರೆ.
    ಶಿವರಾಮ ಹೆಬ್ಬಾರ ತಮ್ಮ ಬೆಂಬಲಿಗರ ಜತೆ ವಿವಿಧ ಗ್ರಾಮಗಳಿಗೆ ತೆರಳಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಸುತ್ತಿದ್ದಾರೆ.
    ಕಾಂಗ್ರೆಸ್‌ನಿಂದ ಮಾಜಿ ಸಚಿವ ಸಂತೋಷ ಲಾಡ್ ವಿ.ಎಸ್. ಪಾಟೀಲ ಪರ ಪ್ರಚಾರ ನಡೆಸಿದ್ದರೆ. ಜೆಡಿಎಸ್ ಹೆಸರು ಕ್ಷೇತ್ರದಲ್ಲೆಲ್ಲೂ ಕೇಳಿ ಬರುತ್ತಿಲ್ಲ.

    ಪಾಟೀಲರಿಗೆ ಇಲ್ಲ ವಿರೋಧಿ

    ೨೦೦೮ರಲ್ಲಿ ಯಲ್ಲಾಪುರ ಕ್ಷೇತ್ರ ರಚನೆಯಾದಾಗ ವಿ.ಎಸ್. ಪಾಟೀಲ ಬಿಜೆಪಿಯಿಂದ ಶಾಸಕರಾಗಿದ್ದರು.
    ಮುಂದಿನ ಎರಡೂ ಚುನಾವಣೆಗಳಲ್ಲಿ ಅವರು ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಕಂಡರೂ ಪಕ್ಷದ ಮುಖಂಡರು, ಕಾರ್ಯಕರ್ತರ ಜತೆ ನಿಕಟ ಸಂಪರ್ಕ ಹೊಂದಿದ್ದರು.
    ಬಿಜೆಪಿಗೆ ಹೆಬ್ಬಾರ ಆಗಮನದಿಂದ ಕ್ಷೇತ್ರ ಕಳೆದುಕೊಂಡ ಪಾಟೀಲರು ಕಾಂಗ್ರೆಸ್ ಸೇರಿದರೂ ಬಿಜೆಪಿ ಮೂಲ ಕಾರ್ಯಕರ್ತರ ಜತೆ ನಂಟು ಇನ್ನೂ ಉಳಿಸಿಕೊಂಡಿದ್ದಾರೆ.
    ಇನ್ನೊಂದೆಡೆ ಹೆಬ್ಬಾರರು ಕಾಂಗ್ರೆಸ್ ತೊರೆದು ಬಿಜೆಪಿ ಸೇರುವಾಗ ಕೈ ಮನೆಯನ್ನು ಖಾಲಿ ಮಾಡಿಕೊಂಡು ಹೋಗಿದ್ದರು.
    ನಂತರದ ಮೂರು ವರ್ಷಗಳಲ್ಲೂ ಕಾಂಗ್ರೆಸ್ ಸಂಘಟನೆ ವ್ಯವಸ್ಥಿತವಾಗಿ ನಡೆಯದ ಕಾರಣ ಕೆಳ ಹಂತದಲ್ಲಿ ಆ ಪಕ್ಷ ಸಂಘಟನೆ ಗಟ್ಟಿಯಾಗಿಲ್ಲ. ಹಾಗಾಗಿ ವಿ.ಎಸ್. ಪಾಟೀಲ ವಿವಿಧ ಊರುಗಳಲ್ಲಿ ಬಿಜೆಪಿ ಪ್ರಮುಖರನ್ನೇ ಭೇಟಿಯಾಗಿ ಬೆಂಬಲ ಕೇಳುತ್ತಿದ್ದಾರೆ.

    ಶಿವರಾಮ ಹೆಬ್ಬಾರ ನಡವಳಿಕೆಯಿಂದ ಆನಗೋಡು, ನಂದೊಳ್ಳಿ, ದೇಹಳ್ಳಿ ಮುಂತಾದೆಡೆಯ ಮೂಲ ಬಿಜೆಪಿಗರು ಮುನಿಸಿಕೊಂಡಿದ್ದಾರೆ.
    ಕೆಲವೆಡೆ ನೇರವಾಗಿ ಅಸಮಾಧಾನ ಹೊರಹಾಕಿದ್ದರೆ, ಇನ್ನು ಕೆಲವು ನಾಯಕರು ಹೆಬ್ಬಾರ ಪರ ಪ್ರಚಾರದಿಂದ ದೂರ ಉಳಿದುಕೊಂಡಿದ್ದಾರೆ.
    ಮುಂಡಗೋಡ ಹಾಗೂ ಬನವಾಸಿ ಭಾಗದಲ್ಲಿ ನೇರವಾಗಿ ಹೆಬ್ಬಾರ ವಿರುದ್ಧ ಅಸಮಾಧಾನ ಇಲ್ಲದಿದ್ದರೂ ಅವರ ಜತೆ ಓಡಾಡುವ ಮರಿ ಪುಢಾರಿಗಳ ದೌಲತ್ತಿನ ಬಗ್ಗೆ ಜನರಲ್ಲಿ ಸಿಟ್ಟಿದೆ. ಅದನ್ನು ವಿ.ಎಸ್. ಪಾಟೀಲ ತಮ್ಮ ಮತವಾಗಿ ಪರಿವರ್ತಿಸುವ ಯತ್ನದಲ್ಲಿದ್ದಾರೆ.

    ಚರ್ಚಿತ ವಿಷಯಗಳು

    ಮುಂಡಗೋಡ, ಬನವಾಸಿಯಲ್ಲಿ ಕೈಗೊಂಡ ಕೆರೆಗೆ ನೀರು ತುಂಬಿಸುವ ಯೋಜನೆ. ಕೋವಿಡ್ ಕಿಟ್ ವಿತರಣೆ ಮುಂತಾದ ವಿಷಯಗಳ ಬಗ್ಗೆ ಶಿವರಾಮ ಹೆಬ್ಬಾರ ಹಾಗೂ ಅವರ ಪರ ಕಾರ್ಯಕರ್ತರು ಪ್ರಚಾರ ನಡೆಸಿದ್ದಾರೆ.
    ತಾವು ಮಾಡಿದ ಕಾರ್ಯಕಗಳೇ ತಮ್ಮ ಭಾರೀ ಗೆಲುವಿಗೆ ಕಾರಣವಾಗಲಿದೆ ಎಂಬುದು ಹೆಬ್ಬಾರ ಅವರ ಅಚಲ ನಿಲುವು.
    ಆದರೆ, ಕಾಂಗ್ರೆಸ್ ಅದನ್ನೇ ಉಲ್ಟಾ ಹೇಳುತ್ತಿದೆ. ‘ಅದು ಕೆರೆಗೆ ನೀರು ತುಂಬಿಸುವ ಯೋಜನೆಯಲ್ಲ ಹೆಬ್ಬಾರರ ಕಿಸೆ ತುಂಬಿಸುವ ಯೋಜನೆಯಾಗಿದೆ.
    ಬೇಸಿಗೆಯಲ್ಲಿ ರೈತರಿಗೆ ನೀರು ಬೇಕು. ಆಗ ನದಿಯಲ್ಲಿ ಹಾಗೂ ಕೆರೆಗಳಲ್ಲಿ ನೀರೇ ಇರದು’ ಎಂದು ಲೇವಡಿ ಮಾಡುತ್ತಿದ್ದಾರೆ.
    ‘ಕರೋನಾ ಅವಧಿಯಲ್ಲಿ ೬೦೦ ರೂ. ಕಿಟ್‌ಗಳಿಗೆ ೬ ಸಾವಿರ ರೂ. ಬೆಲೆ ನಿಗದಿ ಮಾಡಿ ಹೆಬ್ಬಾರ ಜನರ ತೆರಿಗೆ ಹಣವನ್ನು ಲೂಟಿ ಮಾಡಿದರು’ ಎಂದು ಕಾಂಗ್ರೆಸ್‌ನ ವಿ.ಎಸ್. ಪಾಟೀಲ ಹಾಗೂ ಅವರ ಪರ ಕಾರ್ಯಕರ್ತರು ಆರೋಪಿಸುತ್ತಿದ್ದಾರೆ.
    ೨೦೧೯ರ ಉಪ ಚುನಾವಣೆಯಲ್ಲಿ ಬಿದ್ದ ಕಾಂಗ್ರೆಸ್ ಮತಗಳು ಈಗಲೂ ತಮ್ಮ ಬೆಂಬಲಕ್ಕೆ ಬರಲಿವೆ ಎಂಬ ಲೆಕ್ಕಾಚಾರ ಪಾಟೀಲರದ್ದು.

    ಜೆಡಿಎಸ್-ಬಿಜೆಪಿ ಒಳ ಒಪ್ಪಂದ ?

    ಶಿವರಾಮ ಹೆಬ್ಬಾರ ಜೆಡಿಎಸ್ ಜತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಇದರಿಂದ ಜೆಡಿಎಸ್ ಯಲ್ಲಾಪುರದಲ್ಲಿ ದುರ್ಬಲ ಅಭ್ಯರ್ಥಿಯನ್ನು ಪ್ರತಿ ಬಾರಿ ಕಣಕ್ಕಿಳಿಸುತ್ತದೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಸಂತೋಷ ರಾಯ್ಕರ್ ಆರೋಪಿಸಿದ್ದಾರೆ.
    ಸಂತೋಷ ರಾಯ್ಕರ್ ಜೆಡಿಎಸ್ ಟಿಕೆಟ್ ಆಂಕಾಂಕ್ಷಿಯಾಗಿದ್ದರು. ನಾಗೇಶ ನಾಯ್ಕ ಅವರಿಗೆ ಟಿಕೆಟ್ ನೀಡಿದ ಕಾರಣ ಸಂತೋಷ ರಾಯ್ಕರ್ ಬೇರೆ ಪಕ್ಷದಿಂದ ಸ್ಪರ್ಧಿಸಿದ್ದು, ಮುಂಡಗೋಡಿನ ಜೆಡಿಎಸ್ ತಾಲೂಕು ಅಧ್ಯಕ್ಷ ತುಕಾರಾಂ ಹಾಗೂ ಇತರ ಬೆಂಬಲಿಗರೂ ಸಂತೋಷ ರಾಯ್ಕರ್ ಪರ ನಿಂತಿದ್ದಾರೆ ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts