More

    ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿ ಆವರಣದಲ್ಲಿ ತಡ ರಾತ್ರಿ ಅಪರಿಚಿತರಿಂದ ಮತ್ತೆ ಗುಂಡಿನ ದಾಳಿ

    ನವದೆಹಲಿ: ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಬಳಿ ಭಾನುವಾರ ತಡರಾತ್ರಿ ಗುಂಡು ಹಾರಿಸಿದ ಮತ್ತೊಂದು ಘಟನೆ ವರದಿಯಾಗಿದೆ.

    ಗುಂಡಿನ ದಾಳಿಯಿಂದ ಯಾರಿಗೂ ಹಾನಿಯಾಗಿಲ್ಲ. ಆದರೆ ಗುಂಡಿನ ದಾಳಿಯಿಂದ ವಿದ್ಯಾರ್ಥಿಗಳು ಭೀತಿಗೊಂಡಿದ್ದಾರೆ ಎಂದು ಗುಂಡಿನ ದಾಳಿ ನಡೆದಾಗ ಸ್ಥಳದಲ್ಲಿದ್ದ ಕಾನೂನು ವಿದ್ಯಾರ್ಥಿ ಅರ್ಷಾನ್ ಅಫಾಕ್ ಹೇಳಿದ್ದಾರೆ.

    ಸ್ಕೂಟಿಯಲ್ಲಿ ಬಂದ ಇಬ್ಬರು ಭಾನುವಾರ ರಾತ್ರಿ 1 ಗಂಟೆ ವೇಳೆ ಗುಂಡು ಹಾರಿಸಿದರು. ವಿವಿಯ ಗೇಟ್​ ಸಂಖ್ಯೆ 6ರ ಬಳಿ ಮೊದಲು ಗುಂಡು ಹಾರಿಸಿದರು. ನಂತರ ಗೇಟ್​ ಸಂಖ್ಯೆ 1ರ ಬಳಿ ಗುಂಡು ಹಾರಿದ ಶಬ್ಧ ಕೇಳಿತು ಎಂದು ಅಫಾಕ್​ ಹೇಳಿದ್ದಾರೆ. ಗುಂಡು ಹಾರಿಸಿದವರು ಬಂದ ವಾಹನದ ಸಂಖ್ಯೆ ಗಮನಿಸಿದ್ದೇವೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

    ಓಖ್ಲಾದಿಂದ ಇಬ್ಬರು ಸ್ಕೂಟಿಯಲ್ಲಿ ಬಂದು ಜುಲೆನಾ ಕಡೆಗೆ ತೆರಳಿದರು ಎಂದು ವಿವಿಯ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಕೂಡಲೇ ಸ್ಥಳಕ್ಕೆ ದೆಹಲಿ ಪೊಲೀಸರು ತೆರಳಿ ಪರಿಶೀಲನೆ ನಡೆಸಿದರು. ಗುಂಡು ಹಾರಿದ ಸ್ಥಳದಲ್ಲಿ ಯಾವುದೇ ಪುರಾವೆಗಳು ದೊರೆತಿಲ್ಲ. ಗುಂಡು ಹಾರಿಸಿದವರು ಸ್ಕೂಟಿಯಲ್ಲಿ ಬಂದಿದ್ದಾರೆ ಎಂದು ಕೆಲವರು ಹೇಳಿದರೆ ಮತ್ತೆ ಕೆಲವರು ಕಾರಿನಲ್ಲಿ ಬಂದಿದ್ದಾರೆ ಎನ್ನುತ್ತಿದ್ದಾರೆ. ಹೀಗಾಗಿ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೆಚ್ಚುವರಿ ಡಿಸಿಪಿ ಕುಮಾರ್ ಜ್ಞಾನೇಶ್ ಹೇಳಿದ್ದಾರೆ.

    ಗುಂಡಿನ ದಾಳಿ ನಡೆದ ನಂತರ ವಿದ್ಯಾರ್ಥಿಗಳು ಪೊಲೀಸ್​ ಠಾಣೆ ಬಳಿ ಬಂದು ಜಮಾಯಿಸುತ್ತಿದ್ದಾರೆ. ವಿದ್ಯಾರ್ಥಿಗಳ ದೂರು ದಾಖಲಿಸಿ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಮಾಡಲಾಗುವುದು ಎಂದು ಹಿರಿಯ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts