More

    ಬಿಳಿ ಬಂಗಾರ ಕೈ ಬಿಟ್ಟ ಅನ್ನದಾತರು!

    ರಾಣೆಬೆನ್ನೂರ: ವಾಣಿಜ್ಯ ನಗರಿ ರಾಣೆಬೆನ್ನೂರಿನಲ್ಲಿ ಮೆಕ್ಕೆಜೋಳ ಹಾಗೂ ಹತ್ತಿ ಪ್ರಮುಖ ಬೆಳೆಯಾಗಿವೆ. ಆದರೆ, ಇತ್ತೀಚಿನ ದಿನದಲ್ಲಿ ಹತ್ತಿ ಬೆಳೆ ಅಸ್ತಿತ್ವ ಕಳೆದುಕೊಳ್ಳುತ್ತಿದ್ದು, ವರ್ಷದಿಂದ ವರ್ಷಕ್ಕೆ ಹತ್ತಿ ಬೆಳೆಯ ಪ್ರದೇಶ ಕಡಿಮೆಯಾಗುತ್ತಿದೆ. ಮತ್ತೊಂದೆಡೆ ಮೆಕ್ಕೆಜೋಳ ಬೆಳೆಯುವ ಪ್ರದೇಶ ಏರಿಕೆಯಾಗುತ್ತಿದೆ.

    ಪ್ರಸಕ್ತ ವರ್ಷ ಕೃಷಿ ಇಲಾಖೆಯು 3,360 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆ ಗುರಿ ಹೊಂದಿದೆ. ಆದರೆ, ಕೇವಲ 2 ಸಾವಿರ ಹೆಕ್ಟೇರ್ ಮಾತ್ರ ಗುರಿ ಸಾಧನೆಯಾಗಿದೆ. ಕೃಷಿ ಇಲಾಖೆ ಲೆಕ್ಕಾಚಾರಕ್ಕಿಂತಲೂ 1,360 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಕಡಿಮೆಯಾಗಿದೆ. ಇನ್ನು 39,866 ಹೆಕ್ಟೇರ್ ಪ್ರದೇಶ ಮೆಕ್ಕೆಜೋಳ ಬೆಳೆಯ ಗುರಿ ಹೊಂದಿದ್ದರೆ, 48,613 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದೆ. ಗುರಿಗಿಂತ 9 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಚ್ಚಿಗೆ ಬೆಳೆಯಲಾಗಿದೆ. ರೈತರು ವರ್ಷದಿಂದ ವರ್ಷಕ್ಕೆ ಹತ್ತಿ ಬೆಳೆ ಕಡಿಮೆ ಮಾಡಿ, ಮೆಕ್ಕೆಜೋಳದತ್ತ ಮುಖ ಮಾಡುತ್ತಿದ್ದಾರೆ.

    ಹತ್ತಿ ಕ್ಷೀಣಿಸಲು ಕಾರಣ: ಕಳೆದ ನಾಲ್ಕೈದು ವರ್ಷದಿಂದ ಹತ್ತಿ ಬೆಳೆ ಹಂತ ಹಂತವಾಗಿ ಕ್ಷೀಣಿಸುತ್ತಿದೆ. ಅಮೆರಿಕನ್ ಪಿಂಕ್ ಬೋಲ್​ವಮ್ರ್ ಕೀಟಬಾಧೆ ಹೆಚ್ಚಿನ ಪ್ರಮಾಣದಲ್ಲಿ ಹರಡಿರುವುದೆ ಇದಕ್ಕೆ ಮುಖ್ಯ ಕಾರಣ ಎಂಬುದು ಕೃಷಿ ಅಧಿಕಾರಿಗಳ ಅಭಿಪ್ರಾಯವಾಗಿದೆ.

    ಅಮೆರಿಕನ್ ಪಿಂಕ್ ಬೋಲ್​ವಮ್ರ್ ಕೀಟ ಭೂಮಿಯೊಳಗೆ ಇದ್ದು, ಹತ್ತಿ ಬೆಳೆಯುವ ಹಂತದಲ್ಲಿ ಬೀಜ ಹಾಗೂ ಕಾಯಿ ತಿನ್ನುತ್ತದೆ. ಈ ಕೀಟ ಹತ್ತಿದರೆ ಬೆಳೆಗೆ ಎಷ್ಟೇ ಔಷಧ, ಗೊಬ್ಬರ ಹಾಕಿದರೂ ಬೆಳೆ ಸಮರ್ಪಕವಾಗಿ ಬೆಳೆಯುತ್ತಿಲ್ಲ. ಹತ್ತಿ ಗಿಡ ಚೆನ್ನಾಗಿ ಬೆಳೆದರೂ ಕಾಯಿ ಉದುರಿ ಕೆಳಗೆ ಬೀಳುತ್ತಿವೆ. ಹೀಗಾಗಿ ಇಳುವರಿ ಕುಂಠಿತವಾಗುತ್ತಿದೆ.

    1 ಎಕರೆ ಹತ್ತಿ ಬೆಳೆಯಲು ಬೀಜ, ಗೊಬ್ಬರ, ಕೂಲಿ ಕಾರ್ವಿುಕರು ಸೇರಿ 20 ಸಾವಿರ ರೂಪಾಯಿ ವರೆಗೂ ಖರ್ಚು ಬರುತ್ತದೆ. ಈ ಹಿಂದೆ ಎಕರೆಗೆ 10 ಕ್ವಿಂಟಾಲ್​ನಷ್ಟು ಇಳುವರಿ ಬರುತ್ತಿತ್ತು. ಆದರೀಗ ಕೀಟ್​ಬಾಧೆಯಿಂದ ಎರಡ್ಮೂರು ಕ್ವಿಂಟಾಲ್ ಬರುತ್ತಿದೆ. ಮಾರುಕಟ್ಟೆಯಲ್ಲಿ 5 ಸಾವಿರ ರೂಪಾಯಿಗೆ 1 ಕ್ವಿಂಟಾಲ್​ನಂತೆ ಹತ್ತಿ ಮಾರಾಟ ಮಾಡಿದರೂ ಬೆಳೆಗೆ ಹಾಕಿದ ಔಷಧದ ಖರ್ಚು ಸಹ ಕೈ ಸಿಗುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ರೈತರು ಹತ್ತಿ ಬೆಳೆಯುವುದನ್ನು ಬಿಡುತ್ತಿದ್ದಾರೆ ಎಂದು ತಾಲೂಕಿನ ರಾಹುತನಕಟ್ಟಿ ರೈತ ದಿಳ್ಳೆಪ್ಪ ಕಂಬಳಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ವರ್ಷದಿಂದ ವರ್ಷಕ್ಕೆ ಕುಂಠಿತ…!: 2015-16ನೇ ಸಾಲಿನಲ್ಲಿ 22 ಸಾವಿರ ಹೆಕ್ಟೇರ್ ಹತ್ತಿ ಬಿತ್ತನೆ ಗುರಿ ಹೊಂದಿದ್ದರೆ, 10 ಸಾವಿರ ಹೆಕ್ಟೇರ್ ಸಾಧನೆಯಾಗಿತ್ತು. 2016-17ನೇ ಸಾಲಿನಲ್ಲಿ 8 ಸಾವಿರ ಹೆಕ್ಟೇರ್​ಗೆ ಇಳಿಯಿತು. 2017-18ನೇ ಸಾಲಿನಲ್ಲಿ 10 ಸಾವಿರ ಹೆಕ್ಟೇರ್ ಗುರಿ ಹೊಂದಿದ್ದರೆ, 6 ಸಾವಿರ ಹೆಕ್ಟೇರ್ ಸಾಧನೆಯಾಗಿತ್ತು. 2018-19ನೇ ಸಾಲಿನಲ್ಲಿ 5 ಸಾವಿರಕ್ಕೆ ತಲುಪಿತು. 2019-20ನೇ ಸಾಲಿನಲ್ಲಿ 9700 ಹೆಕ್ಟೇರ್ ಗುರಿ ಹೊಂದಿದ್ದರೆ, 2300 ಹೆಕ್ಟೇರ್ ಬಿತ್ತನೆಯಾಗಿತ್ತು. ಪ್ರಸಕ್ತ ವರ್ಷ ಕೇವಲ 3360 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಗುರಿಯಿದ್ದರೆ, 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ.

    ಅಮೆರಿಕನ್ ಪಿಂಕ್ ಬೋಲ್​ವಮ್ರ್ ಕೀಟ ಭೂಮಿ ಒಳಗೆ ಇರುವುದರಿಂದ ಯಾವ ರೀತಿಯ ಔಷಧ ಸಿಂಪಡಣೆ ಮಾಡಿದರೂ ಅದು ಸಾಯುವುದಿಲ್ಲ. ಈ ಕೀಟ ಹತ್ತಿ ಬಿಟ್ಟು ಬೇರೆ ಬೆಳೆಗೆ ಹತ್ತುವುದಿಲ್ಲ. ಆದ್ದರಿಂದ ಎರಡು ವರ್ಷಗಳ ಕಾಲ ರೈತರು ಸಾಮೂಹಿಕವಾಗಿ ಹತ್ತಿ ಬೆಳೆಯುವುದನ್ನು ಕೈ ಬಿಡಬೇಕು. ಅಂದಾಗ ಕೀಟಕ್ಕೆ ಆಹಾರ ದೊರಕದೆ ಸಂಪೂರ್ಣ ನಾಶವಾಗುತ್ತವೆ. ಆ ನಂತರದಲ್ಲಿ ಮತ್ತೆ ಹತ್ತಿ ಬೆಳೆಯಬಹುದು. ಈ ಬಗ್ಗೆ ಈಗಾಗಲೇ ರೈತರಲ್ಲಿ ಜಾಗೃತಿ ಮೂಡಿಸಿದ್ದೇವೆ.

    | ಶಿವಾನಂದ ಹಾವೇರಿ, ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ರಾಣೆಬೆನ್ನೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts