More

    ಅನ್ನದಾತನ ಪಾತ್ರೆಗೆ ಕೈ ಹಾಕಿದ ಸರ್ಕಾರ: ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆರೋಪ

    ರಾಮನಗರ: ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ಬೀಜ ಕಾಯ್ದೆ, ಭೂ ಸ್ವಾಧೀನ ಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ಅನ್ನದಾತನ ಅಕ್ಷಯ ಪಾತ್ರೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈ ಹಾಕಿ ವಿದೇಶಿ ಕಂಪನಿಗಳಿಗೆ ರತ್ನಗಂಬಳಿ ಹಾಸಲು ಹೊರಟಿವೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದರು.

    ನಗರದ ಎಪಿಎಂಸಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ ಕೆಲವು ವರ್ಷಗಳಿಂದ ಸಕ್ಕರೆ ಕಾರ್ಖಾನೆಗಳಿಂದ ಬಾಕಿ ಉಳಿದಿರುವ 3 ಸಾವಿರ ಕೋಟಿ ರೂ.ಗಳನ್ನು ರೈತರಿಗೆ ಕೊಡಿಸಲಾರದ ಸರ್ಕಾರ ಬೀಜ, ಮಾರುಕಟ್ಟೆ, ಭೂಮಿ ಎಲ್ಲವನ್ನೂ ಪಡೆದು ರೈತರನ್ನು ಬೀದಿಗೆ ತಳ್ಳುವ ವಿದೇಶಿ ಕಂಪನಿಗಳಿಂದ ನ್ಯಾಯ ಕೊಡಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

    ದೇಶದ ರಕ್ಷಣಾ ಕ್ಷೇತ್ರ, ಬಾಹ್ಯಾಕಾಶ, ವಾಯು ಪ್ರದೇಶಗಳನ್ನು ಕೇಂದ್ರ ಸರ್ಕಾರ ಖಾಸಗೀಕರಣ ಮಾಡಿದೆ. ಜತೆಗೆ, ಖನಿಜ, ವಿದ್ಯುತ್, ಬಂದರುಗಳು ಹೀಗೆ ಹಲವಾರು ಕ್ಷೇತ್ರಗಳು ಖಾಸಗೀಕರಣವಾಗುತ್ತಿದ್ದು, ಇನ್ನು ಸಂಸತ್‌ಭವನ, ವಿಧಾನಸೌಧ, ಪಂಚಾಯಿತಿಗಳು ಬಾಕಿ ಉಳಿದಿವೆ. ಇವುಗಳನ್ನೂ ಖಾಸಗೀಕರಣ ಮಾಡಿ ಮನೆಗೆ ಹೋಗಿ ಎಂದು ತಾಕೀತು ಮಾಡಿದರು.

    ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಖಾಸಗೀರಣವನ್ನು ಹಿಂಪಡೆಯಬೇಕು ಹಾಗೂ ರೈತರಿಗೆ ಮರಣ ಶಾಸನದಂತಿರುವ ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ಬೀಜ ಕಾಯ್ದೆ, ಭೂ ಸ್ವಾಧೀನ ಕಾಯ್ದೆಗಳಿಗೆ ತಿದ್ದುಪಡಿ ತಂದು ಅವುಗಳನ್ನು ಜಾರಿ ಮಾಡುವುದನ್ನು ನಿಲ್ಲಿಸಬೇಕು. ಇಲ್ಲವಾದರೆ ಸಂಘಟನೆ ವತಿಯಿಂದ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

    ರೈತಸಂಘದ ಬಟ್ಟಹಳ್ಳಿ ಭೈರೇಗೌಡ, ಜಿಲ್ಲಾ ಮುಖಂಡರಾದ ಭೈರೇಗೌಡ, ಅನಂತರಾಮ್, ಕೃಷ್ಣಪ್ಪ ಮುಂತಾದವರು ಇದ್ದರು.

    ಹೋರಾಟ ಹತ್ತಿಕ್ಕಬೇಡಿ: ಉತ್ತರ ಕರ್ನಾಟಕ ಭಾಗದಲ್ಲಿ ಕೃಷ್ಣೆ ಸೇರಿ 7 ನದಿಗಳ ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಇನ್ನೂ ಮನೆ ನಿರ್ಮಿಸಿಕೊಟ್ಟಿಲ್ಲ. ಇದನ್ನು ಕೇಳಲು ಬೆಳಗಾವಿಯಲ್ಲಿ ಪ್ರತಿಭಟನೆ ಮಾಡಲು ಮುಂದಾಗಿರುವ ಜನರನ್ನು ಆಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೇ ಬಂಧಿಸುವ ಮೂಲಕ ಹೋರಾಟ ಹತ್ತಿಕ್ಕುವ ಕೆಲಸವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಡುತ್ತಿದ್ದಾರೆ. ಇದು ಯಾವ ಸೀಮೆ ಸರ್ಕಾರ ಎಂದು ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು. ರೈತರ ಸಮಸ್ಯೆ ಆಲಿಸಲು ನಿಮಗೆ ವ್ಯವಧಾನ ಇಲ್ಲ, ಸಮಸ್ಯೆ ಪರಿಹಾರ ಮಾಡಲು ನಿಮಗೆ ಸಾಧ್ಯವಿಲ್ಲ ಎನ್ನುವುದಾದರೆ ನಿಮ್ಮದು ನಾಚಿಕೆಗೇಡಿನ ಸರ್ಕಾರ ಎಂದು ಜರಿದರು.

    ಚೀನಾ ನಡೆ ಖಂಡನೀಯ: ಚೀನಾ ದೇಶ ಭಾರತದೊಂದಿಗೆ ನಡೆದುಕೊಳ್ಳುತ್ತಿರುವ ರೀತಿ ಖಂಡನೀಯ ಎಂದು ಚಂದ್ರಶೇಖರ್ ಕಿಡಿಕಾರಿದರು. ಪ್ರಧಾನಿ ನರೇಂದ್ರ ಮೋದಿ ಅವರು ಕೂಡಲೇ ಈ ಘಟನೆ ಸಂಬಂಧ ಜಗತ್ತಿನ ಗಮನ ಸೆಳೆಯುವ ಕೆಲಸ ಮಾಡಬೇಕು. ವಿಶ್ವ ಸಂಸ್ಥೆ ಸೇರಿ ಪ್ರಮುಖ ರಾಷ್ಟ್ರಗಳು ಚೀನಾ ವಿರುದ್ಧ ನಿಲ್ಲುವಂತಹ ಪೂರಕವಾದ ವಾತಾವರಣ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts