More

    ಅಂಜಲಿ ಸಾಧನೆ… ಅಪ್ಪನಿಗೆ ಅರ್ಪಣೆ

    ಬೆಳಗಾವಿ: ‘ನಾನು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಬೇಕು ಎಂಬುದು ತಂದೆ ರಮೇಶ ಅವರ ಕನಸಾಗಿತ್ತು. ಆದರೆ, ಜೂ. 25ರಂದು ಮೊದಲ ಪರೀಕ್ಷೆ ದಿನದಂದೇ ನಮ್ಮನ್ನಗಲಿದರು. ಆ ನೋವಿನ ಮಧ್ಯೆಯೂ ಬರೆದ ಪರೀಕ್ಷೆಯಲ್ಲಿ ಶೇ.89.76 ಅಂಕ ಸಿಕ್ಕಿರುವುದು ಖುಷಿ ತಂದಿದೆ. ಈ ಸಾಧನೆಯನ್ನು ನನ್ನಪ್ಪನಿಗೆ ಅರ್ಪಿಸುವೆ’ ಹೀಗೆಂದು ಭಾವುಕಳಾಗಿಯೇ ತನ್ನ ಶೈಕ್ಷಣಿಕ ಸಾಧನೆಯನ್ನು ‘ವಿಜಯವಾಣಿ’ಗೆ ವಿವರಿಸಿದ್ದು ಹುಕ್ಕೇರಿ ತಾಲೂಕಿನ ಯಮಕನಮರಡಿಯ ವಿದ್ಯಾವರ್ಧಕ ಸಂಘದ ಪ್ರೌಢಶಾಲೆ ವಿದ್ಯಾರ್ಥಿನಿ ಅಂಜಲಿ ಗುರವ.

    ಅಂದು ಇಂಗ್ಲಿಷ್ ವಿಷಯದ ಪರೀಕ್ಷೆ ಇತ್ತು. ಕರೊನಾ ವೈರಸ್ ಆತಂಕದ ಮಧ್ಯೆಯೂ ಹುಮ್ಮಸ್ಸಿನಿಂದ ಪರೀಕ್ಷೆ ಬರೆಯಲು ಸಿದ್ಧಳಾಗಿದ್ದೆ. ಆದರೆ, ಬೆಳಗ್ಗೆ 7.30ಕ್ಕೆ ಕೃಷಿಭೂಮಿಗೆ ತೆರಳಿದ್ದ ತಂದೆ ವಿದ್ಯುತ್ ಅವಘಡದಲ್ಲಿ ಮೃತಪಟ್ಟರು. ಈ ಅವಘಡ ಸಂಭವಿಸಿದ್ದು ನನಗೆ ಗೊತ್ತಿತ್ತು. ಆದರೆ, ತಂದೆ ಮೃತಪಟ್ಟ ವಿಷಯವನ್ನು ಕುಟುಂಬಸ್ಥರು ಮುಚ್ಚಿಟ್ಟಿದ್ದರು. ಹಾಗಾಗಿ, ಆತಂಕದಿಂದಲೇ ಹೋಗಿ ಮೊದಲ ಪರೀಕ್ಷೆ ಬರೆದೆ.

    ಮರಳಿ ಮನೆಗೆ ಬಂದಾಗ ತಂದೆಯ ಸಾವು ಖಚಿತವಾಯಿತು. ತಂದೆ ಅಂತ್ಯಕ್ರಿಯೆಯಲ್ಲಿ ಭಾಗಿಯಾದೆ. ನಂತರ ಮನೆಗೆ ಬಂದ ಶಿಕ್ಷಕರು, ಸಹಪಾಠಿಗಳು ತಂದೆ ಕನಸು ಸಾಕಾರವಾಗಬೇಕಾದರೆ ನೀನು ಪರೀಕ್ಷೆ ಬರೆಯಲೇಬೇಕು ಎಂದು ಸ್ಥೈರ್ಯ ತುಂಬಿದರು. ಕುಟುಂಬಸ್ಥರಿಂದಲೂ ಹೆಚ್ಚಿನ ಬೆಂಬಲ ಸಿಕ್ಕಿತು. ಇದರ ಲವಾಗಿ ಧೈರ್ಯದಿಂದ ಪರೀಕ್ಷೆ ಎದುರಿಸಿದೆ. ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಗಳಿಸಿದೆ. ಮುಂದೆ ಪಿಯು ವಿಜ್ಞಾನ ವಿಭಾಗಕ್ಕೆ ಪ್ರವೇಶ ಪಡೆದು ವೈದ್ಯೆಯಾಗುವ ಕನಸು ಹೊತ್ತಿರುವುದಾಗಿ ಅಂಜಲಿ ತಿಳಿಸಿದಳು.

    ಒಂದೆಡೆ ಅಣ್ಣ ಮೃತಪಟ್ಟ ವಿಷಯ ಅರಗಿಸಿಕೊಳ್ಳಲಾಗಲಿಲ್ಲ. ಮತ್ತೊಂದೆಡೆ, ಪುತ್ರಿಯ ಶೈಕ್ಷಣಿಕ ಭವಿಷ್ಯದ ಬಗ್ಗೆ ನೂರೆಂಟು ಚಿಂತೆ ಕಾಡತೊಡಗಿದವು. ಶಿಕ್ಷಕರ ನೆರವಿನೊಂದಿಗೆ ಅಂಜಲಿಯಲ್ಲಿ ಆತ್ಮವಿಶ್ವಾಸ ತುಂಬಿ, ಪರೀಕ್ಷೆ ಬರೆಯುವಂತೆ ಪ್ರೋತ್ಸಾಹಿಸಿದೆವು. ಪರೀಕ್ಷೆಯಲ್ಲಿ ಉತ್ತಮ ಅಂಕ ದೊರೆತಿರುವುದು ಸಂತಸ ತಂದಿದೆ. ಯಾವ ಕೊರತೆಯೂ ಆಗದಂತೆ ಅವಳಿಷ್ಟದಂತೆ ಮುಂದೆ ಓದಿಸುತ್ತೇವೆ.
    |ಈರಣ್ಣ ಗುರವ, ಅಂಜಲಿ ಚಿಕ್ಕಪ್ಪ

    | ಇಮಾಮಹುಸೇನ್ ಗೂಡುನವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts