More

    ವೀರಶೈವ ಲಿಂಗಾಯತರನ್ನು ಒಡೆಯುವುದೇ ಕಾಂಗ್ರೆಸ್ ಷಢ್ಯಂತ್ರ: ಅನಿಲ ಮೆಣಸಿನಕಾಯಿ

    ವಿಜಯವಾಣಿ ಸುದ್ದಿಜಾಲ ಗದಗ
    ಈ ಮೊದಲಿನಿಂದಲೂ ವೀರಶೈವ ಲಿಂಗಾಯತರ ಒಗ್ಗಟ್ಟನ್ನು ಕಾಂಗ್ರೆಸ್ ಒಡೆಯುತ್ತಲೆ ಬಂದಿದೆ. ಕಾಂಗ್ರೆಸ್ಸಿನ ಈ ಷಡ್ಯಂತ್ರ ಇಂದು ನಿನ್ನೆಯದಲ್ಲ. ಅಖಂಡ ಧಾರವಾಡ ಜಿಲ್ಲೆಯಾಗಿದ್ದ ಸಮಯದಲ್ಲಿಯೇ ತಮ್ಮ ರಾಜಕೀಯ ಲಾಭಕ್ಕೆ ಸಮಾಜವನ್ನು ಕಾಂಗ್ರೆಸ್ ಒಡೆಯುತ್ತ ಬಂದಿದೆ ಎಂದು ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಆರೋಪಿಸಿದರು.
    ರಾಜ್ಯ ಸರ್ಕಾರ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಡಿ ಮೀಸಲಾತಿ ಕಲ್ಪಿಸಿರುವ ಹಿನ್ನೆಲೆಯಲ್ಲಿ ತಾಲೂಕಿನ ಮುಳಗುಂದ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
    ಗದಗ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತರಿಗೆ ಅನ್ಯಾಯವಾಗುತ್ತಿದೆ. ಇದಕ್ಕೆ ಕಾಂಗ್ರೆಸ್ ಮುಖಂಡರೇ ಕಾರಣ. ಲಿಂಗಾಯತ ಸಮಾಜಗಳ ಅಧ್ಯಕ್ಷರು, ಮುಖಂಡರನ್ನು ಕಪಿಮುಷ್ಠಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಮುಕಂಡರು ಬರೀ ರಾಜಕೀಯ ಮಾಡುತ್ತ ಬಂದಿದ್ದಾರೆ ಎಂದು ಪರೋಕ್ಷವಾಗಿ ಎಚ್.ಕೆ. ಪಾಟೀಲ ವಿರುದ್ಧ ಆರೋಪ ಮಾಡಿದರು. ಆ ಮೂಲಕ ವೀರಶೈವ ಲಿಂಗಾಯತ ಸಮಾಜ ಮತಗಳನ್ನು ಹಾಕಿಸಿಕೊಂಡು ಗೆಲ್ಲುತ್ತ ಬಂದಿದ್ದಾರೆ ಎಂದು ಅವರು ಆರೋಪಿಸಿದರು.
    ಕಾಂಗ್ರೆಸ್ನಲ್ಲಿದ್ದ ಸಿದ್ದಣ್ಣ ಪಲ್ಲೇದ ಅವರಿಗೆ ಅನ್ಯಾಯ ಮಾಡಿದ್ದರಿಂದ ಬಿಜೆಪಿಗೆ ಬಂದು ಯಶಸ್ವಿಯಾದರು. ನಮ್ಮಲ್ಲಿ ಒಳಪಂಗಡಗಳು ಇರುವುದು ನಿಜ. ನಮ್ಮ ಮನೆಯಲ್ಲಿ ಮಾತ್ರ ಇದನ್ನು ಪಾಲನೆ ಮಾಡುತ್ತೇವೆ. ಸಮಾಜ ಎಂಬ ವಿಷಯ ಬಂದಾಗ ನಾವೆಲ್ಲರೂ ಒಂದೇ ಎಂಬುದನ್ನು ಈಗಾಗಲೇ ಸಾಬೀತು ಮಾಡಿದ್ದೇವೆ. ಆದ್ದರಿಂದಲೇ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮುಖಭಂಗವಾಯಿತು ಎಂದು ಅನಿಲ ಮೆಣಸಿನಕಾಯಿ ಆರೋಪಿಸಿದರು. ಪಂಚಮಸಾಲಿ ಸಮಾಜ ಬಾಂಧವರು ವೀರಶೈವ ಲಿಂಗಾಯತ ಸಮಾಜದ ಪ್ರಮುಖ ಅಂಗವಾಗಿದ್ದಾರೆ. ಸಮಾಜಕ್ಕಾಗಿ ನ್ಯಾಯ ಕೊಡಿಸುವ ಕೆಲಸ ಸರ್ಕಅರ ಮಾಡಿದೆ. ಪಂಚಮಸಾಲಿ ಬಾಂಧವರು ಸಮಾಜದ ಪ್ರತಿ ಶುಭ ಕಾರ್ಯಗಳಲ್ಲಿ ಮುಂಚೂಣಿಯಲ್ಲಿ ಕಾರ್ಯ ಮಾಡುತ್ತಿದ್ದಾರೆ. ಹೀಗಾಗಿ ಪಂಚಮಸಾಲಿ ಸಮಾಜ ಗೌಡರು ಎಂಬ ಅಭಿದಾನವನ್ನೂ ಪಡೆದುಕೊಂಡಿದ್ದಾರೆ ಎಂಬುದು ಹೆಮ್ಮೆಯ ಸಂಗತಿ ಎಂದು ಅನಿಲ ಮೆಣಸಿನಕಾಯಿ ಹೇಳಿದರು. ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದಣ್ಣ ಪಲ್ಲೇದ, ಯುವ ಮುಖಂಡ ಅನೀಲ ಮೆಣಸಿನಕಾಯಿ ಅವರನ್ನು ಸನ್ಮಾನಿಸಲಾಯಿತು.
    ಅಯ್ಯಪ್ಪ ಅಂಗಡಿ, ಭದ್ರೇಶ ಕುಸಲಾಪೂರ, ವಸಂತ ಪಡಗದ, ಬುದ್ದಪ್ಪ ಮಾಡಳ್ಳಿ, ಕಾಂತಿಲಾಲ ಬನ್ಸಾಲಿ, ಕಾಶಪ್ಪ, ಬಸನಗೌಡ ಪಾಟೀಲ, ಪರಮೇಶ ನಾಯಕ, ದ್ಯಾಮಣ್ಣ ನೀಲಗುಂದ, ಮಂಜುನಾಥ ಗುಡದೂರ, ಶರಣಪ್ಪಗೌಡ ಬಳ್ಳೊಳ್ಳಿ, ಮುತ್ತಣ್ಣ ಬೆಂತೂರ, ಬಸವಣ್ಣೆಪ್ಪ ಚಿಂಚಲಿ, ವೀರೇಶ ಇನಾಮತಿ, ಈರಣ್ಣ ಬಾಳಿಕಾಯಿ, ಈರಣ್ಣ ಮದ್ನೂರ, ಪ್ರಕಾಶ ಲದ್ದಿ, ಸುರೇಶಗೌಡ ಬಶೆಟ್ಟಿ, ಶೇಖಪ್ಪ ಕಟ್ಟಿಮನಿ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts