More

    ಜನರ ಧ್ವನಿಯಾಗುವ ಅಂಗಾರ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ವಿಶ್ವಾಸ

    ಸುಳ್ಯ: ಕೃಷಿ ಮೂಲದಿಂದ ಬಂದ ಅಂಗಾರರವರು ಜನರ ಧ್ವನಿಯಾಗಿ ಕೆಲಸ ಮಾಡುತ್ತಾರೆ ಎಂದು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ವಿಶ್ವಾಸ ವ್ಯಕ್ತಪಡಿಸಿದರು. ಮೀನುಗಾರಿಕೆ ಹಾಗೂ ಬಂದರು ಸಚಿವ ಎಸ್.ಅಂಗಾರ ಅವರಿಗೆ ಸುಳ್ಯ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸಾರ್ವಜನಿಕ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಆಡಳಿತದಲ್ಲಿ ವೃತ್ತಿಪರತೆ, ಕ್ರಿಯಾಶೀಲತೆ ಜತೆಗೆ ಅಂತಃಕರಣ, ದೂರದೃಷ್ಟಿ ಇದ್ದರೆ ಹೇಗೆ ದೇಶವನ್ನು ಉತ್ತುಂಗಕ್ಕೆ ಏರಿಸಬಹುದು ಎಂಬುದಕ್ಕೆ ಪ್ರಸ್ತುತದ ಭಾರತ ಸಾಕ್ಷಿ. ರಾಜನಾದರೂ ಸಾಮಾನ್ಯರಂತೆ ಕೆಲಸ ಮಾಡುವ ಬದ್ಧತೆ ರಾಜಕಾರಣಿಯದ್ದಾಗಿರಬೇಕು ಎಂದು ಹೇಳಿದರು.
    ದೇಶದಲ್ಲಿ ಕೋವಿಡ್ ಅವಧಿಯಲ್ಲೂ ಶೇ.40 ಹೆಚ್ಚುವರಿ ರಸಗೊಬ್ಬರ ಬಳಕೆ ಆಗಿದೆ. ಇದಕ್ಕೆ ಕಾರಣ ಕೋವಿಡ್‌ನಲ್ಲೂ ಕೃಷಿ ಕ್ಷೇತ್ರ ತಲೆಯೆತ್ತಿ ನಿಂತಿರುವುದು ಎಂದರು.

    ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಅಜಾತಶತ್ರು ಅಂಗಾರರಿಗೆ ಕೆಲಸವೇ ಮಾತು. ಅನುಭವದ ಶಕ್ತಿಯಿಂದ ಅಂಗಾರರು ಕರ್ನಾಟಕದ ಶಕ್ತಿಯಾಗಿ ಬೆಳೆಯಲಿ ಎಂದು ಹಾರೈಸಿದರು. ಅಂಗಾರರ ರಾಜಕೀಯ ಗುರು ಅಣ್ಣಾ ವಿನಯಚಂದ್ರ ಅಭಿನಂದನಾ ಭಾಷಣ ಮಾಡಿದರು. ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಶಾಸಕರಾದ ಸಂಜೀವ ಮಠಂದೂರು, ಹರೀಶ್ ಪೂಂಜ, ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ರಾಜೇಶ್ ನಾಕ್, ಪ್ರತಾಪಸಿಂಹ ನಾಯಕ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ, ಮಂಗಳೂರು ಮೇಯರ್ ದಿವಾಕರ್, ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ತಾಪಂ ಅಧ್ಯಕ್ಷ ಚನಿಯ ಕಲ್ತಡ್ಕ, ಅಭಿನಂದನಾ ಸಮಿತಿ ಗೌರವಾಧ್ಯಕ್ಷ ಡಾ.ಕೆ.ವಿ.ಚಿದಾನಂದ, ಅಭಿನಂದನಾ ಸಮಿತಿ ಅಧ್ಯಕ್ಷ ಗಿರೀಶ್ ಭಾರಧ್ವಜ, ಕಾರ್ಯದರ್ಶಿ ವಿನಯ ಕಂದಡ್ಕ, ನಾರಾಯಣ ಕೇಕಡ್ಕ ಉಪಸ್ಥಿತರಿದ್ದರು.
    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಪ್ರಕಾಶ್ ರೈ ಹಾಗೂ ಜೆಡಿಎಸ್ ಮುಖಂಡ ಎಂ.ಬಿ.ಸದಾಶಿವ ಅಭಿನಂದನಾ ಮಾತುಗಳನ್ನಾಡಿದರು. ಸಮಿತಿ ಪ್ರಧಾನ ಸಂಚಾಲಕ ಎ.ವಿ.ತೀರ್ಥರಾಮ ಸ್ವಾಗತಿಸಿದರು. ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರ್ವಹಿಸಿದರು.

    ಅಭಿವೃದ್ಧಿ ಹೊಣೆಗಾರಿಕೆ: ಆರು ಬಾರಿ ಗೆದ್ದಿದ್ದಾನೆ ಎನ್ನುವುದಕ್ಕಿಂತ ನನ್ನ ಪಕ್ಷವನ್ನು ಕಾರ್ಯಕರ್ತರು ಅಷ್ಟು ಬಾರಿ ವಿಶ್ವಾಸದಿಂದ ಗೆಲ್ಲಿಸಿದ್ದಾರೆ ಎನ್ನುವುದು ನನಗೆ ಮುಖ್ಯ. ಕ್ಷೇತ್ರದ ಅಭಿವೃದ್ಧಿಯ ಸಂಪೂರ್ಣ ದೃಷ್ಟಿಕೋನ, ಹೊಣೆಗಾರಿಕೆ ನನ್ನಲ್ಲಿದೆ. ಅದನ್ನು ಮಾಡಿಯೇ ತೀರುತ್ತೇನೆ ಎಂದು ಸಚಿವ ಎಸ್.ಅಂಗಾರ ಹೇಳಿದರು. ಬಡತನದಿಂದ ಬಂದ ನನ್ನನ್ನು ಅಧಿಕಾರ ಅಲುಗಾಡಿಸದು. ಕಷ್ಟದ ನೋವುಗಳು ನಮ್ಮನ್ನು ಎಚ್ಚರಿಸುತ್ತವೆ. ನಾನು ಕಾರ್ಮಿಕ ಎಂಬುದನ್ನು ಎಂದಿಗೂ ಮರೆಯಲಾರೆ. ಪಕ್ಷದ ಧ್ಯೇಯಕ್ಕೆ ಎಂದಿಗೂ ಚ್ಯುತಿಬಾರದಂತೆ ಸಮಾಜದ ಅಭಿವೃದ್ಧಿಗೆ ದುಡಿಯುವೆ ಎಂದರು.

    ರಾಜಕಾರಣ ವ್ರತ: ಕಟ್ಟಕಡೆಯ ನಾಗರಿಕನೇ ಪ್ರಜಾಪ್ರಭುತ್ವದ ಆಧಾರ. ಆ ಜನರ ಪ್ರೀತಿಯೊಂದಿಗೆ ರಾಜಕಾರಣವನ್ನು ವ್ರತವಾಗಿ ಸ್ವೀಕರಿಸಿ ಸಾಧನೆ ಮಾಡಿದ ಕೆಲವೇ ರಾಜಕಾರಣಿಗಳಲ್ಲಿ ಅಂಗಾರ ಒಬ್ಬರು ಎಂಬ ಹೆಮ್ಮೆ ನಮ್ಮದು ಎಂದು ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

    ಅದ್ದೂರಿ ಸ್ವಾಗತ: ತುಂಬಿದ ಸಭೆಯ ಮೂಲಕ ಚೆಂಡೆ, ವಾದ್ಯ ಹಾಗೂ ಪೂರ್ಣಕುಂಭದೊಂದಿಗೆ ಅಂಗಾರ ದಂಪತಿಯನ್ನು ಸ್ವಾಗತಿಸಲಾಯಿತು. ಸಾವಿರಾರು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಸಾರ್ವಜನಿಕ ಅಭಿನಂದನಾ ಸಮಿತಿ ವತಿಯಿಂದ ಸಚಿವ ಅಂಗಾರ – ವೇದಾವತಿ ದಂಪತಿಯನ್ನು ಸನ್ಮಾನಿಸಲಾಯಿತು. 200ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರರು ಸಚಿವರಿಗೆ ಮಾಲಾರ್ಪಣೆ ಮಾಡಿ ಅಭಿನಂದಿಸಿದರು.

    ಭಾವುಕರಾದ ಅಂಗಾರ: ವೇದಿಕೆಯ ಮುಂಭಾಗಕ್ಕೆ ಸಾರ್ವಜನಿಕ ಅಭಿನಂದನೆಗೆ ಅಂಗಾರ ಅವರನ್ನು ಕರೆಯುತ್ತಿದ್ದಂತೆ ಭಾವುಕರಾದ ಅವರ ಕಣ್ಣಲ್ಲಿ ನೀರು ತುಂಬಿಕೊಂಡಿತು. ಭಾಷಣ ವೇಳೆಯಲ್ಲೂ ಸಹಕಾರ ನೀಡಿದ ಹಿರಿಯರನ್ನು ನೆನಪಿಸಿಕೊಂಡು ಹುಟ್ಟೂರಿನ ಸನ್ಮಾನಕ್ಕೆ ಆನಂದಬಾಷ್ಪ ಸುರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts