More

    ಸರ್ಕಾರದ ನೀತಿಯಿಂದ ಅಂಗನವಾಡಿಗೆ ಆಪತ್ತು

    ಶಿವಮೊಗ್ಗ: ಅಂಗನವಾಡಿ ಕೇಂದ್ರಗಳು ಇರುವ ಗ್ರಾಮ ಇಲ್ಲವೇ ಪ್ರದೇಶಗಳಲ್ಲಿ ರಾಜ್ಯ ಸರ್ಕಾರ ಶಿಶುಪಾಲನಾ ಕೇಂದ್ರ ಹಾಗೂ ಶಾಲಾ ಪೂರ್ವ ಶಿಕ್ಷಣ ತರಗತಿಗಳನ್ನು ತೆರೆಯಲು ಮುಂದಾಗಿರುವುದನ್ನು ಖಂಡಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಫೆಡರೇಷನ್ ನೇತೃತ್ವದಲ್ಲಿ ಅಂಗವಾಡಿ ಕಾರ್ಯಕರ್ತೆಯರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

    ಅಂಗನವಾಡಿ ಕೇಂದ್ರಗಳನ್ನು ಅನ್ಯ ಯೋಜನೆಗಳ ಬಳಸಿಕೊಳ್ಳಲು ಮುಂದಾಗಿರುವುದರಿಂದ ಇದು ಭವಿಷ್ಯದಲ್ಲಿ ಅಂಗನವಾಡಿಗಳ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ. ಈಗಾಗಲೇ ಉದ್ಯೋಗಖಾತ್ರಿಯಲ್ಲಿ ಕೆಲಸ ಮಾಡುವವರ ಮಕ್ಕಳಿಗಾಗಿ ಶಿಶುಪಾಲನಾ ಕೇಂದ್ರ ತೆರೆಯಲಾಗುತ್ತಿದೆ. 4-5 ವರ್ಷದ ಮಕ್ಕಳಿಗೆ ರಾಜ್ಯ ಸರ್ಕಾರ ಶಾಲಾ ಪೂರ್ವ ಶಿಕ್ಷಣ ತರಗತಿಗಳನ್ನು ಆರಂಭಿಸಲು ಮುಂದಾಗಿದೆ. ಇದರಿಂದಾಗಿ ಭವಿಷ್ಯದಲ್ಲಿ ಅಂಗನವಾಡಿಗಳಿಗೆ ಮಕ್ಕಳೇ ಇಲ್ಲದ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
    ಅಂಗನವಾಡಿಗಳನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮಕೈಗೊಳ್ಳಬೇಕು. ಅನಗತ್ಯವಾಗಿ ಬೇರೆ ಕೇಂದ್ರಗಳನ್ನು ಆರಂಭಿಸುವುದರಿಂದ ಅಂಗನವಾಡಿಗಳ ಕಾರ್ಯನಿರ್ವಹಣೆಗೆ ತೊಂದರೆ ಉಂಟಾಗುವುದರ ಜತೆಗೆ ಸರ್ಕಾರದ ಹಣ ವೃಥಾ ಪೋಲಾಗುತ್ತದೆ. ಇದರಿಂದ ನೈಜ ಉದ್ದೇಶ ಈಡೇರುವುದಿಲ್ಲ ಎಂದು ಪ್ರತಿಭಟನಾನಿರತರು ಅಭಿಪ್ರಾಯಪಟ್ಟರು.
    ಚುನಾವಣೆಗೂ ಮುನ್ನಾ ಕಾಂಗ್ರೆಸ್ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ನೀಡಿದ್ದ ಭರವಸೆಯನ್ನು ಈಡೇರಿಸಬೇಕೆಂದು ಇದೇ ಸಂದರ್ಭದಲ್ಲಿ ಒತ್ತಾಯಿಸಲಾಯಿತು. ಕಾರ್ಯಕರ್ತೆಯರ ಸಹಾಯಧನವನ್ನು 15 ಸಾವಿರ ರೂ.ಗೆ ಹಾಗೂ ಸಹಾಯಕಿಯರಿಗೆ 10 ಸಾವಿರ ರೂ.ಗೆ ಹೆಚ್ಚಳ ಮಾಡುವುದಾಗಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಭರವಸೆ ನೀಡಿದ್ದರು. ನಿವೃತ್ತರಿಗೆ ಮೂರು ಲಕ್ಷ ರೂ. ಇಡುಗಂಟು ನೀಡುವುದಾಗಿ ತಿಳಿಸಲಾಗಿತ್ತು. ಇವೆಲ್ಲವನ್ನೂ ಈಡೇರಿಸಲು ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿದರು.
    ಖಾಲಿಯಿರುವ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಯನ್ನು ಶೀಘ್ರವೇ ಭರ್ತಿ ಮಾಡಬೇಕು. ಸಾದಿಲ್ವಾರು ಹಣವನ್ನು ಹೆಚ್ಚಿಸಬೇಕು. ಮಾರಣಾಂತಿಕ ಕಾಯಿಲೆಗೊಳಗಾದವರ ನಿವೃತ್ತಿಗೆ ಅವಕಾಶ ನೀಡಿ ಪರಿಹಾರ ಒದಗಿಸಬೇಕು. ಕಳಪೆ ಮೊಬೈಲ್‌ಗಳನ್ನು ಹಿಂಪಡೆಬೇಕು. ಮಿನಿ ಟ್ಯಾಬ್‌ಗಳನ್ನು ಒದಗಿಸಬೇಕೆಂದು ಒತ್ತಾಯಿಸಿದರು.
    ಫೆಡರೇಷನ್‌ನ ಜಿಲ್ಲಾಧ್ಯಕ್ಷ ಕೆ.ಸಿ.ವಿಶಾಲಾ, ಗೌರವಾಧ್ಯಕ್ಷೆ ಸುಶೀಲಾಬಾಯಿ, ಭದ್ರಾವತಿ ತಾಲೂಕು ಅಧ್ಯಕ್ಷೆ ವೇದಾವತಿ, ತೀರ್ಥಹಳ್ಳಿ ತಾಲೂಕು ಅಧ್ಯಕ್ಷ ಗಾಯತ್ರಿ ಹೆಗಡೆ, ಸಾಗರ ತಾಲೂಕು ಅಧ್ಯಕ್ಷೆ ಪುಷ್ಪಾ, ಪ್ರಮುಖರಾದ ಲೀಲಾವತಿ, ಗೀತಾ, ಶ್ಯಾಮಲಾ, ಕುಸುಮಾ, ಜಯಶೀಲಾ, ಜುಬೇದಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts