More

    ಹಾನಗಲ್ಲನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಂದ ರಸ್ತೆ ತಡೆ

    ಹಾನಗಲ್ಲ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಟ್ಟಣದ ಮಹಾತ್ಮ ಗಾಂಧಿ ವೃತ್ತದಲ್ಲಿ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.

    ಸಿಐಟಿಯು ಸಹಯೋಗದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸರ್ಕಾರದ ವಿರುದ್ಧ ಘೊಷಣೆಗಳನ್ನು ಕೂಗುತ್ತ ಕೆಲಕಾಲ ರಸ್ತೆತಡೆ ನಡೆಸಿದರು. ನಂತರ ಸಿಡಿಪಿಒ ಕಚೇರಿಗೆ ತೆರಳಿ ಸಿಡಿಪಿಒ ಸಿ.ರಂಗನಾಥ ಅವರಿಗೆ ಮನವಿ ಸಲ್ಲಿಸಿದರು.

    ಇತ್ತಿಚೆಗೆ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್​ಫೋನ್ ನೀಡಿದ್ದು, ಅವು ಕಳಪೆಯಾಗಿವೆ. ಅಲ್ಲದೆ, ನೆಟ್​ವರ್ಕ್ ಸಿಗದ ಫೋನ್​ಗಳಾಗಿದ್ದು, ಜನಗಣತಿ ಮತ್ತಿತರ ಸರ್ವೆ ಕಾರ್ಯಗಳಲ್ಲಿ ತೊಂದರೆಯಾಗುತ್ತಿವೆ. ಅಂತಹ ಮೊಬೈಲ್​ಗಳನ್ನು ವಾಪಸ್ ಪಡೆಯಬೇಕು ಮತ್ತು ಮಾತೃಪೂರ್ಣ ಯೋಜನೆಯ ಫಲಾನುಭವಿಗಳಾದ ಗರ್ಭಿಣಿಯರು ಅಂಗನವಾಡಿಗೆ ಬರಲು ಹಿಂಜರಿಯುತ್ತಿದ್ದು ಅವರಿಗೆ ಟಿಎಚ್​ಆರ್ ಅನುಮೋದನೆ ನೀಡಬೇಕು. ಹಿಂದಿನ ಸರ್ಕಾರದಲ್ಲಿ ಘೊಷಿಸಿದಂತೆ ಪ್ರತಿ ಅಂಗನವಾಡಿ ಕಾರ್ಯಕರ್ತೆಯರಿಗೆ 1000 ರೂ. ಗೌರವ ಧನ ಹೆಚ್ಚಿಸಬೇಕು.

    ತಾಲೂಕಿನ ಬಹುತೇಕ ಅಂಗನವಾಡಿ ಕೇಂದ್ರಗಳು ಶಿಥಿಲಾವ್ಯಸ್ಥೆಗೆ ತಲುಪಿದ್ದು, ಮಳೆಗಾಲದಲ್ಲಿ ಬೀಳುವ ಆತಂಕ ಎದುರಾಗಿದೆ. ಕೂಡಲೇ ಅಂಥ ಅಂಗನವಾಡಿ ಕಟ್ಟಡಗಳನ್ನು ಗುರುತಿಸಿ ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡಬೇಕು. ಸರ್ಕಾರದ ಬೇರೆ ಬೇರೆ ಇಲಾಖೆಗಳ ಕೆಲಸ ನಿರ್ವಹಣೆಯನ್ನು ಯಾವುದೇ ಕಾರಣಕ್ಕೂ ಇನ್ನು ಮುಂದೆ ಅಂಗನವಾಡಿ ಕಾರ್ಯಕರ್ತೆಯರು ಮಾಡುವುದಿಲ್ಲ ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರವಾಗಿ ಪ್ರತಿಭಟಿಸಲಾಗುವುದೆಂದು ಮನವಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

    ಸಿಐಟಿಯು ಅಧ್ಯಕ್ಷೆ ರಾಜೇಶ್ವರಿ ಹಿರೇಮಠ, ಕಾರ್ಯದರ್ಶಿ ಕುಸುಮಾ ಬೋವೇರ, ಖಜಾಂಚಿ ಮಂಜುಳಾ ಮಡಿವಾಳರ, ಸಿದ್ದಮ್ಮ ಚೌಟಿ, ನಿರ್ಮಲಾ ದಿಬ್ಬಣ್ಣನವರ, ಮುತ್ತವ್ವ ಕೊಂಡೋಜಿ, ನೀಲಗಂಗಾ ಕಾಳೇರ, ಸರಸ್ವತಿ ಪೂಜಾರ, ಭುವನೇಶ್ವರಿ ಶೆಟ್ಟರ, ಕಮಲಾಕ್ಷಿ ಹೋತನಹಳ್ಳಿ, ಸರೋಜಾ ಮಂಟೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts