More

    ಅಂಗನವಾಡಿ ಕೇಂದ್ರಗಳಿಗೆ ಹೈಟೆಕ್ ಸ್ಪರ್ಶ

    ಬೆಳಗಾವಿ: ನಗರ, ಗ್ರಾಮೀಣ ಪ್ರದೇಶಗಳಲ್ಲಿ ಬಡ, ಕೂಲಿ ಕಾರ್ಮಿಕರ ಮಕ್ಕಳ ‘ಗುರುಕುಲ’ ಎಂದೇ ಗುರುತಿಸಿಕೊಂಡ ಸರ್ಕಾರಿ ಅಂಗನವಾಡಿ ಕೇಂದ್ರಗಳಿಗೆ ಸದ್ಯ ಹೈಟೆಕ್ ಸ್ಪರ್ಶ ನೀಡಲಾಗುತ್ತಿದೆ. ಬಾಲಸ್ನೇಹಿ ಕಾರ್ಯಕ್ರಮ ಅನುಷ್ಠಾನಗೊಳಿಸಿ ಮಕ್ಕಳ ಹಾಜರಾತಿ ಹೆಚ್ಚಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

    ನಗರ ಪ್ರದೇಶಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಚಿಕ್ಕ ಮಕ್ಕಳಿಗಾಗಿ ನಡೆಸುತ್ತಿರುವ ನರ್ಸರಿ ಮಾದರಿಯಲ್ಲಿಯೇ ಸರ್ಕಾರಿ ಅಂಗನವಾಡಿಗಳಿಗೆ ಮೂಲ ಸೌಕರ್ಯ, ಆಧುನಿಕರ ಸಲಕರಣೆ ಒದಗಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಯೋಜನೆ ರೂಪಿಸಿದೆ. ಅಲ್ಲದೆ, ಗ್ರಾಪಂಗಳ ನಿಧಿ-2 ಮತ್ತು ವಿವಿಧ ಯೋಜನೆಗಳಲ್ಲಿ ಉಳಿಕೆಯಾಗಿರುವ ಅನುದಾನವನ್ನು ಅಂಗನವಾಡಿ ಕೇಂದ್ರಗಳ ಅಭಿವೃದ್ಧಿಗೆ ಬಳಸಲು ನಿರ್ಧರಿಸಿದೆ.

    ಬಾಲಸ್ನೇಹಿ ಕಾರ್ಯಕ್ರಮ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಂಗನವಾಡಿ ಕೇಂದ್ರಗಳ ನಿರ್ವಹಣೆ, ಮಕ್ಕಳಿಗೆ ಆಹಾರ ಸೇರಿದಂತೆ ಇನ್ನಿತರ ಸೌಕರ್ಯಕ್ಕಾಗಿ ವಾರ್ಷಿಕ ನೂರಾರು ಕೋಟಿ ರೂ. ವೆಚ್ಚ ಮಾಡುತ್ತಿದೆ. ಆದರೆ, ಖಾಸಗಿ ಶಿಕ್ಷಣ ಸಂಸ್ಥೆಗಳು ನಡೆಸುತ್ತಿರು ನರ್ಸರಿಗಳಿಗೆ ಸ್ಪರ್ಧೆ ನೀಡಲು ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಖಾಸಗಿ ಶಾಲೆಯವರಂತೆಯೇ ಮಕ್ಕಳ ಕಲಿಕೆಗೆ ಲಭ್ಯವಿರುವ ಆಟದ ವಸ್ತುಗಳು, ಮೈದಾನ, ಕಲಿಕಾ ಪುಸ್ತಕ ಇನ್ನಿತರ ಸೌಕರ್ಯಗಳನ್ನು ಸರ್ಕಾರಿ ಅಂಗನವಾಡಿ ಕೇಂದ್ರಗಳಿಗೆ ಕಲ್ಪಿಸುವ ಉದ್ದೇಶದಿಂದಲೇ ಬಾಲಸ್ನೇಹಿ ಕಾರ್ಯಕ್ರಮ ರೂಪಿಸಲಾಗಿದೆ.

    ದುಂದು ವೆಚ್ಚಕ್ಕೆ ಕಡಿವಾಣ: ಗ್ರಾಪಂಗಳ ನಿಧಿ-2 ಖಾತೆಯಲ್ಲಿ ತೆರಿಗೆಯಿಂದ ಸಂಗ್ರಹವಾಗಿರುವ ಲಕ್ಷಾಂತರ ರೂ. ಹಣ ಹಾಗೂ ವಿವಿಧ ಯೋಜನೆಗಳಿಂದ ಉಳಿಕೆಯಾಗುತ್ತಿರುವ ಅನುದಾನವನ್ನು ಚರಂಡಿ, ರಸ್ತೆ, ಬೀದಿ ದೀಪ ಇನ್ನಿತರ ಹೆಸರಿನಲ್ಲಿ ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆ ಹಣವನ್ನು ಅಂಗನವಾಡಿ ಕೇಂದ್ರಗಳ ಅಭಿವೃದ್ಧಿ ಹಾಗೂ ಮೂಲ ಸೌಕರ್ಯ ಬಳಕೆ ಮಾಡಲು ಜಿಲ್ಲಾ ಪಂಚಾಯಿತಿಯು ಗ್ರಾಪಂಗಳಿಗೆ ಸೂಚನೆ ನೀಡಿದೆ.

    ಸಮಗ್ರ ಅಭಿವೃದ್ಧಿಗೆ ಕ್ರಮ: ರಾಜ್ಯದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ 1.15 ಲಕ್ಷಕ್ಕೂ ಅಧಿಕ ಅಂಗನವಾಡಿ ಕೇಂದ್ರಗಳಲ್ಲಿ 6 ತಿಂಗಳುಗಳಿಂದ 6 ವರ್ಷದ ವರೆಗೆ ಸುಮಾರು 45 ರಿಂದ 51 ಲಕ್ಷದಷ್ಟು ಮಕ್ಕಳು ಕಲಿಯುತ್ತಿದ್ದಾರೆ. ಈ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಆದರೆ, ಅಂಗನವಾಡಿ ಕೇಂದ್ರಗಳಲ್ಲಿ ಮೂಲ ಸೌಕರ್ಯ ಕೊರತೆ, ಸಿಬ್ಬಂದಿ ಸಮಸ್ಯೆ ಇನ್ನಿತರ ಕಾರಣಗಳಿಂದ ಮಕ್ಕಳ ಹಾಜರಾತಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಂಗನವಾಡಿ ಕೇಂದ್ರಗಳನ್ನು ಸಮಗ್ರ ಅಭಿವೃದ್ಧಿ ಪಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬೆಳಗಾವಿ ಜಿಪಂ ಅಧಿಕಾರಿಗಳು ತಿಳಿಸಿದ್ದಾರೆ.

    ಕೇಂದ್ರಗಳಲ್ಲಿ ಏನೇನು ಸೌಲಭ್ಯ?l: ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು ಸರ್ಕಾರಿ ಮತ್ತು ಖಾಸಗಿ ಕಟ್ಟಡದಲ್ಲಿ 5,326 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದೆ. ಈ ಕೇಂದ್ರಗಳಲ್ಲಿ ಸುಮಾರು 4.13 ಲಕ್ಷ ಮಕ್ಕಳು ಇದ್ದಾರೆ. ಆಯಾ ಗ್ರಾಪಂಗಳ ನಿಧಿ-2 ಹಣದಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಬೇಬಿ ಶೌಚಗೃಹ, ಗೋಡೆಗಳಿಗೆ ಗ್ರಾಮೀಣ ಚಿತ್ರಕಲೆ ಬಿಡಿಸುವುದು, ಉದ್ಯಾನವನ ನಿರ್ಮಾಣ, ಕಟ್ಟಡದ ಸುತ್ತ ಆವರಣಗೋಡೆ, ವಿವಿಧ ಆಟದ ವಸ್ತುಗಳು, ಶುದ್ಧ ಕುಡಿಯುವ ನೀರು ಸೌಲಭ್ಯ, ವಿದ್ಯುತ್, ಫ್ಯಾನ್, ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಗೋಡೆ ಬರಹ ಸೇರಿ ಇನ್ನಿತರ ಸೌಲಭ್ಯ ಕಲ್ಪಿಸಲಾಗುತ್ತಿದೆ. ಇದಕ್ಕಾಗಿ ಕನಿಷ್ಠ 20 ರಿಂದ 50 ಸಾವಿರ ರೂ. ವರೆಗೆ ಖರ್ಚು ಮಾಡಲಾಗುತ್ತಿದೆ ಎಂದು ಬೆಳಗಾವಿ ಜಿಪಂ ಉಪ ಕಾರ್ಯದರ್ಶಿ ಎಸ್.ಬಿ. ಮುಳ್ಳಳ್ಳಿ ತಿಳಿಸಿದ್ದಾರೆ.

    ಹಳ್ಳಿಗಳಲ್ಲಿನ ಅಂಗನವಾಡಿ ಕೇಂದ್ರಗಳನ್ನು ಅಭಿವೃದ್ಧಿ ಪಡಿಸಿ ಬಾಲಸ್ನೇಹಿ ಕೇಂದ್ರಗಳನ್ನಾಗಿಸಲು ಹಾಗೂ ಜಿಲ್ಲೆಯಲ್ಲಿ 400ಕ್ಕೂ ಅಧಿಕ ಅಂಗನವಾಡಿ ಕೇಂದ್ರಗಳ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ.
    |ಎಚ್.ವಿ. ದರ್ಶನ ಜಿಪಂ ಸಿಇಒ

    | ಮಂಜುನಾಥ ಕೋಳಿಗುಡ್ಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts