More

    ಅಂಗನವಾಡಿಗಳಿಗೆ ಜಲಜೀವನ್ ಆಸರೆ

    ನಳಗಳ ಮೂಲಕ ಶಾಶ್ವತ ನೀರಿನ ಸೌಲಭ್ಯಸ್ವಂತ ಕಟ್ಟಡಗಳಿಗೆ ಸಂಪರ್ಕ

    • ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
      ಜಿಲ್ಲೆಯಲ್ಲಿನ ಅಂಗನವಾಡಿ ಕೇಂದ್ರಗಳಿಗೆ ಶಾಶ್ವತ ನೀರಿನ ಸೌಲಭ್ಯ ಕಲ್ಪಿಸುವಲ್ಲಿ ಮುಂದಡಿ ಇಟ್ಟಿರುವ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಭಾಗಶಃ ಯಶ ಕಂಡಿದೆ.
      ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಸಹಯೋಗದಡಿ ಪ್ರತಿ ಅಂಗನವಾಡಿ ಕಟ್ಟಡಗಳಿಗೆ ಜಲಜೀವನ್ ಮಿಷನ್ ಯೋಜನೆಯಡಿ ಪೈಪ್‌ಲೈನ್ ಮೂಲಕ ತಲಾ ಎರಡೆರಡು ನಲ್ಲಿಗಳ ಸಂಪರ್ಕ ಕಲ್ಪಿಸಲಾಗಿದ್ದು, ನೀರಿಗಾಗಿ ಪರದಾಡುವ ಸನ್ನಿವೇಶವನ್ನು ದೂರ ಮಾಡಿದೆ.
      ಸ್ವಂತ ಕಟ್ಟಡಗಳಿಗೆ ಮಾತ್ರ: ಜಿಲ್ಲೆಯಲ್ಲಿ 1,277 ಅಂಗನವಾಡಿ ಕೇಂದ್ರಗಳಿದ್ದು, ಇದರಲ್ಲಿ 984 ಸ್ವಂತ ಕಟ್ಟಡಗಳಲ್ಲಿ ಅಂಗನವಾಡಿ ಕಾರ್ಯ ನಿರ್ವಹಿಸುತ್ತಿದೆ. ಜಲಜೀವನ್ ಮಿಷನ್ ಯೋಜನೆಯಡಿ ಸ್ವಂತ ಕಟ್ಟಡಗಳಿಗಷ್ಟೇ ನೀರಿನ ಸಂಪರ್ಕ ಕಲ್ಪಿಸುವ ಅವಕಾಶವಿದ್ದು, ಈ ಹಿನ್ನೆಲೆಯಲ್ಲಿ ಬಾಕಿ ಇರುವ ಅಂಗನವಾಡಿಗಳಿಗೆ ಸದ್ಯಕ್ಕೆ ಈ ಯೋಜನೆ ಅನ್ವಯಿಸುತ್ತಿಲ್ಲ. ಆದರೆ ಇದಕ್ಕೆ ಪರ್ಯಾಯವಾಗಿ ಸ್ಥಳೀಯ ಆಡಳಿತಗಳಿಂದ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
      ಗ್ರಾಮೀಣ ಪ್ರದೇಶಗಳಿಗಷ್ಟೇ ಸೀಮಿತ: ಗ್ರಾಮೀಣ ಕುಡಿಯುವ ನೀರು ಮತ್ತು ನೈಮರ್ಲ ವಿಭಾಗದ ವತಿಯಿಂದ ಜಲಜೀವನ್ ಮಿಷನ್ ಯೋಜನೆ ಅನುಷ್ಟಾನಗೊಳ್ಳುವುದರಿಂದ ಗ್ರಾಮೀಣ ಪ್ರದೇಶದಲ್ಲಿನ ಅಂಗನವಾಡಿ ಕೇಂದ್ರಗಳಿಗಷ್ಟೇ ಈ ಸೌಲಭ್ಯ ದೊರಕಿಸಿಕೊಡಲಾಗುತ್ತಿದೆ. ನಗರ ಹಾಗೂ ಪಟ್ಟಣ ವ್ಯಾಪ್ತಿಯಲ್ಲಿನ ಅಂಗವನಾಡಿಗಳು ಈ ಯೋಜನೆಯಿಂದ ವಂಚಿತವಾಗಿವೆ.
      ಎರಡು ಸಂಪರ್ಕ: ಜಲಜೀವನ್ ಮಿಷನ್ ಯೋಜನೆಯಡಿ ಅಂಗವಾಡಿಗಳಿಗೆ ಪೈಪ್‌ಲೈನ್ ಮೂಲಕ ನೀರಿನ ಸಂಪರ್ಕ ಕಲ್ಪಿಸಲಾಗಿದ್ದು, ಶೌಚಗೃಹಕ್ಕೆ ಹಾಗೂ ಇನ್ನಿತರ ಬಳಕೆಗೆ ಪ್ರತ್ಯೇಕವಾಗಿ ಎರಡು ನಳಗಳ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದ ಅಂಗನವಾಡಿ ಕೇಂದ್ರಗಳಿಗೆ ದಿನದ 24 ಗಂಟೆಯೂ ನೀರಿನ ಸೌಕರ್ಯ ದೊರೆಯಲಿದೆ. ಎಲ್ಲಿಯೂ ನೀರಿಗೆ ಪರದಾಡುವಂತ ಪರಿಸ್ಥಿತಿ ಉದ್ಭವವಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    34 ಕೇಂದ್ರಗಳಲ್ಲಿ ಕಾಮಗಾರಿ ಬಾಕಿ: ಪ್ರಸ್ತುತ ಜಲಜೀವನ್ ಮಿಷನ್ ಯೋಜನೆಯಡಿ ಪೈಪ್ ಅಳವಡಿಕೆ ಮೂಲಕ ನೀರಿನ ಸೌಲಭ್ಯ ಕಲ್ಪಿಸುವ ಯೋಜನೆ ಭರದಿಂದ ಸಾಗಿದ್ದು, ಜಿಲ್ಲೆಯಲ್ಲಿ ಸ್ವಂತ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 984 ಅಂಗನವಾಡಿಗಳ ಪೈಕಿ 34 ಅಂಗನವಾಡಿಗಳಲ್ಲಿ ಕಾಮಗಾರಿ ಬಾಕಿ ಉಳಿದಿದ್ದು ಶೀಘ್ರವೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಆರ್‌ಒ ಪ್ಲಾಂಟ್‌ಗಳಿಂದ ನೀರು ಜಲಜೀವನ್ ಮಿಷನ್ ಯೋಜನೆಯಡಿ ನೀರು ಸರಬರಾಜು ಆಗುತ್ತಿದ್ದರೂ ಇದು ಕೇವಲ ಬಳಕೆಗೋ ಅಥವಾ ಕುಡಿಯಲೂ ಬಳಸಬಹುದಾ ಎಂಬ ಗೊಂದಲವಿದೆ. ಆದ್ದರಿಂದ ಪ್ರಸ್ತುತ ಅಂಗನವಾಡಿಗಳಿಗೆ ಸ್ಥಳೀಯವಾಗಿ ಶುದ್ಧ ಕುಡಿವ ನೀರಿನ ಘಟಕಗಳ ಮೂಲಕ ಉಚಿತವಾಗಿ ನೀರು ಪೂರೈಕೆ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿನ ನೀರಿನ ಘಟಕಗಳ ಮೂಲಕ ನೀರು ತರಿಸಲಾಗುತ್ತಿದೆ. ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ಸ್ಥಳೀಯವಾಗಿರುವ ಘಟಕಗಳ ಮೂಲಕ ಕುಡಿವ ನೀರಿನ ಕೊರತೆ ಸರಿದೂಗಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಿಎಸ್‌ಆರ್ ಅನುದಾನ ಹಾಗೂ ಇಲಾಖೆಯ ಅನುದಾನದ ಮೂಲಕ ಶುದ್ಧ ಕುಡಿವ ನೀರು ಪೂರೈಕೆಗೆ ಕ್ರಮಕೈಗೊಳ್ಳುವ ಚಿಂತನೆ ಇಲಾಖೆಯದ್ದಾಗಿದೆ.


    ಜಿಲ್ಲೆಯಲ್ಲಿನ ಅಂಗನವಾಡಿ ಕೇಂದ್ರಗಳಿಗೆ ಶಾಶ್ವತ ನೀರಿನ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಗ್ರಾಮೀಣ ಕುಡಿವ ನೀರು ಮತ್ತು ನೈಮಲ್ಯ ವಿಭಾಗದ ಜಲಜೀವನ್ ಮಿಷನ್ ಯೋಜನೆಯಡಿ ಪೈಪ್‌ಲೈನ್ ಮೂಲಕ ನೀರಿನ ಸಂಪರ್ಕ ಕಲ್ಪಿಸುವ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಬಾಕಿ ಇರುವ ಕಾಮಗಾರಿಗೆ ಶೀಘ್ರ ಚಾಲನೆ ದೊರೆಯಲಿದೆ. ಮುಖ್ಯವಾಗಿ ಅಂಗನವಾಡಿಗಳಿಗೆ ಅತ್ಯಗತ್ಯವಾಗಿರುವ ನೀರಿನ ಸಮಸ್ಯೆ ಬಗೆಹರಿದಂತಾಗಿದೆ.
    ನಟರಾಜ, ಉಪನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಂ.ಗ್ರಾಮಾಂತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts