More

    ಅಂಗನವಾಡಿಗಳಲ್ಲಿ ಕರೊನಾ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ ; ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಡಿಸಿ ಲತಾ ಸೂಚನೆ

    ಚಿಕ್ಕಬಳ್ಳಾಪುರ: ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಕರೊನಾ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ಲತಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸೂಚನೆ ನೀಡಿದರು.

    ಎಚ್.ಎಸ್ ಗಾರ್ಡನ್ ಅಂಗನವಾಡಿ ಕೇಂದ್ರದಲ್ಲಿ ಜಿಲ್ಲಾಡಳಿತ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಅಂಗನವಾಡಿ ಮಕ್ಕಳ ಪ್ರವೇಶೋತ್ಸವನ್ನು ಕೇಕ್ ಕತ್ತರಿಸಿ ಅಂಗನವಾಡಿ ಚಿಣ್ಣರಿಗೆ ತಿನಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

    ಸರ್ಕಾರದ ನಿರ್ದೇಶನದಂತೆ ಬಹು ತಿಂಗಳ ನಂತರ ಅಂಗನವಾಡಿಗಳು ಆರಂಭಗೊಳ್ಳುತ್ತಿರುವುದು ಸಂತಸದ ಬೆಳವಣಿಗೆ. ಮಕ್ಕಳ ಸುರಕ್ಷತೆ ಬಹಳ ಮುಖ್ಯವಾಗಿದ್ದು, ಅಂಗನವಾಡಿ ಕೇಂದ್ರಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಅಂಗನವಾಡಿಗಳ ಮಕ್ಕಳು ಬಹಳ ಚಿಕ್ಕವರಾಗಿದ್ದು, ಮುಗ್ಧರಾಗಿದ್ದು ಹೆಚ್ಚಿನ ಕಾಳಜಿ ಹಾಗೂ ಉತ್ತಮ ಪಾಲನೆಯ ಅವಶ್ಯಕತೆ ಇದೆ ಎಂದರು.

    ಕೇಂದ್ರಗಳಲ್ಲೂ ಕರೊನಾ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಕೋವಿಡ್ ಅಧಿಕವಿದ್ದ ಸಂದರ್ಭದಲ್ಲಿ ಅಂಗನವಾಡಿ, ಆಶಾ ಮತ್ತು ಆರೋಗ್ಯ ಕಾರ್ಯಕರ್ತೆಯರು ಬಹಳ ಕಷ್ಟ ಪಟ್ಟು ಕೆಲಸ ಮಾಡಿರುವುದು ಶ್ಲಾನೀಯ. ಮುಂದಿನ ದಿನಗಳಲ್ಲೂ ಮಕ್ಕಳಿಗೆ ಸೋಂಕು ಹರಡದಂತೆ ನಿಗಾವಹಿಸಬೇಕು ಎಂದು ಸಲಹೆ ನೀಡಿದರು.

    ಶಾಲಾ ಮಕ್ಕಳಿಗೆ ಸೋಂಕು ಬಂದಿಲ್ಲ: ಜಿಲ್ಲೆಯಲ್ಲಿ ಈಗಾಗಲೇ 1ನೇ ತರಗತಿ ಹಾಗೂ ಅದಕ್ಕೂ ಮೇಲ್ಪೃಟ್ಟ ಎಲ್ಲ ತರಗತಿಯ ಶಾಲೆಗಳು ಆರಂಭಗೊಂಡು ಯಶಸ್ವಿಯಾಗಿ ನಡೆಯುತ್ತಿವೆ ಎಂದ ಡಿಸಿ ಲತಾ, ಜಿಲ್ಲೆಯಲ್ಲಿ ಇಲ್ಲಿಯವರೆಗೆ ಯಾವ ಶಾಲಾ ವಿದ್ಯಾರ್ಥಿಗೆ ಸೋಂಕು ಬಂದಿಲ್ಲ. ಅದೇ ರೀತಿ ಅಂಗನವಾಡಿ ಕೇಂದ್ರಗಳಲ್ಲೂ ಕರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಜತೆಗೆ ಪ್ರತಿ ಮಗುವಿನ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಕರೊನಾ ಕಡಿಮೆಯಾಗಿದೆ ಎಂಬ ಭಾವನೆಯಲ್ಲಿ ಯಾರೂ ನಿರ್ಕ್ಷ್ಯ ವಹಿಸಬಾರದು. ಸಕ್ರಿಯ ಪ್ರಕರಣಗಳನ್ನು ಶೂನ್ಯಕ್ಕೆ ತರಲು ಸಹಕಾರ ನೀಡಬೇಕು. ಪಾಲಕರು ಮಕ್ಕಳ ಆರೋಗ್ಯದ ಕಡೆಗೆ ಗಮನಹರಿಸಬೇಕು. ಆಕಸ್ಮಿಕವಾಗಿ ಮಕ್ಕಳು ಅನಾರೋಗಕ್ಕೆ ತುತ್ತಾಗಿ, ಜ್ವರ, ಕೆಮ್ಮು, ನೆಗಡಿ ಸೇರಿ ಸಾಮಾನ್ಯ ರೋಗ ಲಕ್ಷಣಗಳನ್ನು ಹೊಂದಿರುವಾಗ ಅಂಗನವಾಡಿಗೆ ಕಳುಹಿಸಬಾರದು. ಮಕ್ಕಳು ಸಣ್ಣ ಪ್ರಮಾಣದಲ್ಲಿ ಅನಾರೋಗ್ಯಕ್ಕೆ ಒಳಗಾದರೂ ತಕ್ಷಣವೇ ಚಿಕಿತ್ಸೆ ಕೊಡಿಸಬೇಕು ಎಂದು ಡಿಸಿ ಸಲಹೆ ನೀಡಿದರು.

    ಪುಟಾಣಿಗಳಿಗೆ ಅಕ್ಕರೆಯ ಸ್ವಾಗತ: ಪುಟಾಣಿ ಮಕ್ಕಳೊಂದಿಗೆ ಸಂವಾದ ನಡೆಸಿದ ಜಿಲ್ಲಾಧಿಕಾರಿ ಲತಾ, ಬಹುದಿನಗಳ ನಂತರ ಅಂಗನವಾಡಿ ಕೇಂದ್ರಕ್ಕೆ ಆಗಮಿಸಿರುವ ಬಗ್ಗೆ ಮಕ್ಕಳಲ್ಲಿನ ಅಭಿಪ್ರಾಯ ಹಾಗೂ ಮಕ್ಕಳ ಯೋಗಕ್ಷೇಮ ವಿಚಾರಿಸಿದರು. ಮಕ್ಕಳ ಪ್ರವೇಶೋತ್ಸವ ಅಂಗವಾಗಿ ಎಚ್.ಎಸ್ ಗಾರ್ಡನ್‌ನ ಅಂಗನವಾಡಿ ಕೇಂದ್ರವನ್ನು ಅಲಂಕರಿಸಲಾಗಿತ್ತು. ಚಿಣ್ಣರು ಬರುತ್ತಿದ್ದಂತೆ ಅಂಗನವಾಡಿ ಕಾರ್ಯಕರ್ತೆಯರು ಹೂವು, ಚಾಕೋಲೇಟ್, ಬಿಸ್ಕೆಟ್ ನೀಡಿ ಸ್ವಾಗತಿಸಿದರು.

    ಜಿಪಂ ಸಿಇಒ ಪಿ.ಶಿವಶಂಕರ್, ನಗರಸಭೆ ಅಧ್ಯಕ್ಷ ಆನಂದರೆಡ್ಡಿ ಬಾಬು, ಪೌರಾಯುಕ್ತ ಮಹಂತೇಶ್, ಸದಸ್ಯೆ ಸ್ವಾತಿ ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಅಶ್ವತ್ಥಮ್ಮ, ಶಿಶು ಅಭಿವೃದ್ಧಿ ಅಧಿಕಾರಿ ಗಂಗಾಧರ್ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts