More

    ಸ್ಯಾಂಡಲ್​ವುಡ್​ಗೆ ಹೊಸಬರ ಆನೆಬಲ ಮುದ್ದೆ ತಿನ್ನುವ ಸ್ಪರ್ಧೆಯೇ ಸಿನಿಮಾ ಆಯ್ತು..

    ಕನ್ನಡ ಚಿತ್ರರಂಗದಲ್ಲಿ ಇತ್ತಿಚೆಗೆ ಲವ್, ಫ್ಯಾಮಿಲಿ ಸೆಂಟಿಮೆಂಟ್, ಒಂದೆರೆಡು ಫೈಟ್ ಈ ಅಂಶಗಳನ್ನೇ ಪ್ರಧಾನವನ್ನಾಗಿಸಿ ಸಿನಿಮಾ ಮಾಡುವವರ ಸಂಖ್ಯೆಯೇ ಹೆಚ್ಚು. ನಮ್ಮ ನಾಡು-ನುಡಿಯ ಹಿರಿಮೆ, ಜನಪದ ಕಲೆಗಳ ಶ್ರೀಮಂತಿಕೆ, ಗ್ರಾಮೀಣ ಸಂಸ್ಕೃತಿಯ ಸೊಗಡು ತಿಳಿಸುವ ಚಿತ್ರಗಳು ಬಂದಿರುವುದು ತೀರಾ ವಿರಳ. ಆದರೆ ಜನಪದ ಕಲೆೆ, ಆಚರಣೆಗಳ ಕುರಿತು ಮೂಲಕಥೆ ಹೊಂದಿ ನಿರ್ವಣವಾಗಿರುವ ಚಿತ್ರ ‘ಆನೆಬಲ’.

    ‘ಮಂಡ್ಯ ಜಿಲ್ಲೆಯಲ್ಲಿ ಮುದ್ದೆ ತಿನ್ನುವ ಸ್ಪರ್ಧೆ ನಡೆಯುತ್ತದೆ. ಈ ಸ್ಪರ್ಧೆಗೆ ಇಲ್ಲಿ ಅಪಾರ ಮಹತ್ವ ನೀಡಲಾಗುತ್ತದೆ. ಹೀಗಾಗಿ ಅದನ್ನೇ ಕಥಾವಸ್ತು ಮಾಡಿಕೊಂಡು ನೈಜ ಘಟನೆಗೆ ಹಾಸ್ಯ ಮತ್ತು ಗ್ರಾಮೀಣ ಟಚ್ ನೀಡಿ ‘ಆನೆಬಲ’ ಚಿತ್ರ ಮಾಡಲಾಗಿದೆ. ‘ರಾಗಿಮುದ್ದೆ ಸ್ಪರ್ಧೆ, ಹಳ್ಳಿಯಲ್ಲಿ ನಡೆಯುವ ಸಾಮಾಜಿಕ ಕೆಲಸಗಳಿಗೆ ನಾಯಕ ಹಾಗೂ ತಂಡ ಹೇಗೆ ಕೆಲಸ ಮಾಡುತ್ತದೆ ಎಂಬುದರ ಸುತ್ತ ಕಥೆ ಸುತ್ತುತ್ತದೆ’ ಎಂದು ಸಿನಿಮಾ ಬಗ್ಗೆ ಹೇಳುತ್ತಾರೆ ನಿರ್ದೇಶಕ ಸೂನಗಹಳ್ಳಿ ರಾಜು.

    ರಾಜೇಂದ್ರ ಸಿಂಗ್ ಬಾಬು, ರಮೇಶ್ ಅರವಿಂದ್, ಇಂದ್ರಜಿತ್ ಲಂಕೇಶ್, ಪುರುಷೋತ್ತಮ್ ಸೇರಿ ಅನೇಕ ನಿರ್ದೇಶಕರ ಜತೆ 15 ವರ್ಷ ಕೆಲಸ ಮಾಡಿ ಸಿನಿಮಾ ಆಳ-ಅಗಲ ಅರಿತಿದ್ದ ಸೂನಗಹಳ್ಳಿ ರಾಜು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ‘ಆನೆಬಲ’ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶಕರಾಗಿದ್ದಾರೆ. ಚಿತ್ರಕ್ಕೆ ಎ.ವಿ.ವೇಣುಗೋಪಾಲ್ ಅಡಕಿಮಾರನಹಳ್ಳಿ ಬಂಡವಾಳ ಹೂಡಿದ್ದಾರೆ. ‘ಆನೆಬಲ’ಕ್ಕೆ ಬಲ ತುಂಬಿದ್ದು 120ಕ್ಕೂ ಅಧಿಕ ಕಲಾವಿದರು. ಇದರಲ್ಲಿ ಶೇ.90ರಷ್ಟು ಮಂದಿ ಹೊಸಬರೇ. ಅಲ್ಲದೆ, ಎಲ್ಲರೂ ತಮ್ಮ ತಮ್ಮ ಪಾತ್ರಕ್ಕೆ ತಾವೇ ಡಬ್ಬಿಂಗ್ ಮಾಡಿರುವುದು ಚಿತ್ರದ ವಿಶೇಷ’ ಎನ್ನುತ್ತಾರೆ ನಿರ್ದೇಶಕ ರಾಜು.

    ನಾಯಕನಾಗಿ ಕಲಾನಿರ್ದೇಶಕರಾದ ಈಶ್ವರಿಕುಮಾರ್ ಪುತ್ರ ಸಾಗರ್ ಅಭಿನಯಿಸಿದ್ದು, ಈ ಮೊದಲು ‘ರಂಗಾದ ಹುಡುಗರು’ ಚಿತ್ರ ಮಾಡಿದ ಅನುಭವ ಅವರಿಗಿದೆ. ‘ಆನೆಬಲ’ ಚಿತ್ರ ಬಿಡುಗಡೆಗೂ ಮುನ್ನವೇ ತಮ್ಮ ಪ್ರತಿಭೆಯಿಂದ ತಮಿಳಿನ ‘ಕೇಕಾದು’ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಇನ್ನು ನಾಯಕಿಯಾಗಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ಪ್ರತಿಭೆ ರಕ್ಷಿತಾ ಎಂಟ್ರಿ ಕೊಟ್ಟಿದ್ದಾರೆ. ಮಲ್ಲರಾಜು, ಚಿರಂಜೀವಿ, ಹರೀಶ್, ಗೌತಮ್ ಮುತ್ತುರಾಜ್, ಶ್ರೇಷ್ಠ, ಉದಯ್, ಕೆಂಚೇಗೌಡ, ಶಿವಕುಮಾರ್ ಚಿತ್ರದ ಪ್ರಮುಖ ತಾರಾವರ್ಗದಲ್ಲಿದ್ದಾರೆ. ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ನಿರ್ದೇಶಕ ರಾಜು, ಡಾ. ವಿ.ನಾಗೇಂದ್ರ ಪ್ರಸಾದ್, ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ. ‘ಲೂಸಿಯಾ’ ಖ್ಯಾತಿಯ ಪೂರ್ಣಚಂದ್ರ ತೇಜಸ್ವಿ ಸಂಗೀತ, ಜೆ.ಟಿ. ಬೆಟ್ಟೆಗೌಡ ಕೀಲಾರ ಛಾಯಾಗ್ರಹಣ, ಬಿ.ಎಸ್.ಕೆಂಪರಾಜು ಸಂಕಲನ ಚಿತ್ರಕ್ಕಿದೆ. ಸೆನ್ಸಾರ್​ನಿಂದ ಯು/ಎ ಪ್ರಮಾಣ ಪತ್ರ ಪಡೆದುಕೊಂಡಿರುವ ‘ಆನೆಬಲ’, ಫೆಬ್ರವರಿ ಮೊದಲ ವಾರದಲ್ಲಿ ಬಿಡುಗಡೆ ಆಗಲಿದೆ.

     ಶಿವರಾಯ ಪೂಜಾರಿ ಬೆಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts