More

    ಆಂಧ್ರದ ಎಲೂರಿನಲ್ಲಿ ನಿಗೂಢ ರೋಗ: 290 ಮಂದಿ ಅಸ್ವಸ್ಥ, ಓರ್ವ ಸಾವು, ವೈದ್ಯರಿಗೂ ಕಗ್ಗಂಟಾದ ಕಾರಣ

    ವಿಜಯವಾಡ: ಕರೊನಾ ನಡುವೆಯೇ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಎಲೂರು ಪಟ್ಟಣದಲ್ಲಿ ನಿಗೂಢ ರೋಗವೊಂದು ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿದೆ. ಪಟ್ಟಣದ ಸುಮಾರು 290 ಮಂದಿ ಅಸ್ವಸ್ಥಗೊಂಡು ನಿನ್ನೆ ತಡರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದು, ನಿಗೂಢ ರೋಗಕ್ಕೆ ಓರ್ವ ಬಲಿಯಾಗಿದ್ದಾರೆ.

    ಎಲುರಿನ ಉತ್ತರ ಬೀದಿ, ದಕ್ಷಿಣ ಬೀದಿ, ಅರುಂಧತಿಪೇಟೆ ಮತ್ತು ಅಶೋಕ ನಗರ ನಿವಾಸಿಗಳು ತೀವ್ರ ಅಸ್ವಸ್ಥಗೊಂಡಿದ್ದು, ಎಲ್ಲರೂ ಎಲೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದ್ದಕ್ಕಿದ್ದಂತೆ ತಲೆ ನೋವು, ವಾಂತಿ, ತಲೆ ತಿರುಗುವಿಕೆ ಮತ್ತು ಮೂರ್ಛೆರೋಗ ಮುಂತಾದ ಲಕ್ಷಣಗಳು ಕಾಣಿಸಿಕೊಂಡಿತು ಎಂದು ಇಲ್ಲಿನ ನಿವಾಸಿಗಳು ತಿಳಿಸಿದ್ದಾರೆ. ಆದರೆ, ಅಸ್ವಸ್ಥಗೊಳ್ಳಲು ಕಾರಣ ಏನೆಂಬುದು ಮಾತ್ರ ಇನ್ನು ತಿಳಿದಿಲ್ಲ.

    ರೋಗಿಗಳ ಸ್ಥಿತಿ ಸದ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. 7 ಮಂದಿಯ ಸ್ಥಿತಿ ಚಿಂತಾಜನಕವಾಗಿದ್ದು, ಉತ್ತಮ ಚಿಕಿತ್ಸೆಗಾಗಿ ವಿಜಯವಾಡದ ಆಸ್ಪತ್ರೆಗೆ ಶಿಫಾರಸು ಮಾಡಲಾಗಿದೆ. ವಾಕರಿಕೆ ಮತ್ತು ಮೂರ್ಛೆ ಹೋಗಿ ಭಾನುವಾರ ವಿಜಯವಾಡದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ 45 ವರ್ಷದ ವ್ಯಕ್ತಿಯೊಬ್ಬ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

    ಇನ್ನು ಘಟನೆಗೆ ಕಲುಷಿತ ನೀರು ಸೇವನೆಯೇ ಕಾರಣ ಇರಬಹುದು ಎಂದು ಅಂದಾಜಿಸಲಾಗಿದೆ. ಆದರೆ, ನಿಖರ ಕಾರಣವನ್ನು ಸಂಬಂಧಪಟ್ಟ ಅಧಿಕಾರಿಗಳು ಇನ್ನು ತಿಳಿಸಿಲ್ಲ. ವೈದ್ಯಾಧಿಕಾರಿಗಳು ಅಸ್ವಸ್ಥಗೊಂಡ ಜನರ ಪ್ರದೇಶಗಳಿಗೆ ಭೇಟಿ ನೀಡಿ ನೀರು ಮತ್ತು ರಕ್ತದ ಮಾದರಿಯನ್ನು ಪಡೆದುಕೊಂಡಿದ್ದು ಪರೀಕ್ಷೆಗೆ ಒಳಪಡಿಸಿದ್ದಾರೆ. ಅಲ್ಲದೆ, ಆ ಪ್ರದೇಶದಲ್ಲಿ ಪ್ರತಿಯೊಬ್ಬರ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗಿದ್ದು, ಅಸಲಿ ಕಾರಣ ತಿಳಿದುಕೊಳ್ಳುವ ಪ್ರಯತ್ನ ನಡೆದಿದೆ.

    ಇದನ್ನೂ ಓದಿ: ನಮ್ಮಲ್ಲಿ ಚುನಾವಣೆಗಳು ಇಷ್ಟು ಚೆಂದ, ಏಕೆ ಗೊತ್ತಾ?! : ಚಕ್ರವರ್ತಿ ಸೂಲಿಬೆಲೆ ಅವರ ವಿಶ್ವಗುರು ಅಂಕಣ

    ಆಂಧ್ರ ಡಿಸಿಎಂ ಮತ್ತು ಆರೋಗ್ಯ ಸಚಿವ ಅಲ್ಲ ಕಲಿಕೃಷ್ಣ ಶ್ರೀನಿವಾಸ್​ ಎಲೂರಿನ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಅಸ್ವಸ್ಥಗೊಂಡ ಎಲ್ಲರನ್ನೂ ಪ್ರತ್ಯೇಕವಾಗಿ ಮಾತನಾಡಿಸಿದ್ದಾರೆ. ಘಟನೆಗೆ ಕಾರಣ ಏನೆಂಬುದನ್ನು ತಿಳಿಯುವ ಪ್ರಯತ್ನ ನಡೆಯುತ್ತಿದೆ ಎಂಬುದನ್ನು ವೈದ್ಯರ ಬಳಿ ಸಚಿವರು ಮಾಹಿತಿ ಪಡೆದುಕೊಂಡಿದ್ದಾರೆ.

    ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಸ್ಥಳದಲ್ಲಿ ತಕ್ಷಣಕ್ಕೆ ಬೇಕಾದ ಅಗತ್ಯ ನೆರವನ್ನು ಎಲ್ಲರಿಗೂ ನೀಡಲಾಗುತ್ತಿದೆ. ಮನೆ ಮನೆಗೂ ತೆರಳಿ ಚಿಕಿತ್ಸೆ ನೀಡಲು ಆರೋಗ್ಯ ಶಿಬಿರಗಳನ್ನು ಸಂಯೋಜಿಸಲಾಗಿದೆ ಎಂದು ಸಚಿವರು ಇದೇ ವೇಳೆ ಹೇಳಿದರು.

    46 ಮಕ್ಕಳು ಮತ್ತು 76 ಮಹಿಳೆಯರು ಸೇರಿದಂತೆ 292 ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಇವರಲ್ಲಿ 140 ಮಂದಿ ಡಿಸ್ಚಾರ್ಜ್​ ಆಗಿದ್ದಾರೆ. 5 ಮಂದಿಯನ್ನು ವಿಜಯವಾಡ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಕೆಲ ರೋಗಿಗಳಿಗೆ ಖಾಸಗಿ ಆಸ್ಪತ್ರೆಯಲ್ಲೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಚಿವ ಶ್ರೀನಿವಾಸ್​ ತಿಳಿಸಿದರು.

    ಆಂಧ್ರ ಸಿಎಂ ವೈಎಸ್​ ಜಗನ್​ ಮೋಹನ್​ ರೆಡ್ಡಿ ಸಹ ಘಟನೆ ತನಿಖೆಗೆ ಆದೇಶಿಸಿದ್ದು, ಅಗತ್ಯ ನೆರವು ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸೋಮವಾರ ಆಸ್ಪತ್ರೆಗೆ ಭೇಟಿ ನೀಡುವುದಾಗಿ ಹೇಳಿದ್ದಾರೆ. (ಏಜೆನ್ಸೀಸ್​)

    ಅಧಿಕ ಬಡ್ಡಿಗಾಗಿ ಪೀಡಿಸುತ್ತಿದ್ದ ಫೈನಾನ್ಶಿಯರ್ ಮನೆ ಮೇಲೆ ಸಿಸಿಬಿ ದಾಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts