More

    ಆನವಟ್ಟಿಯಲ್ಲಿ ರಾತ್ರೋ ರಾತ್ರಿ ಜೆಸಿಬಿ ಆರ್ಭಟ

    ಶಿವಮೊಗ್ಗ: ಆನವಟ್ಟಿಯಲ್ಲಿ ರಸ್ತೆ ಅಗಲೀಕರಣಕ್ಕಾಗಿ ಆನವಟ್ಟಿ-ಹಾನಗಲ್-ಶಿರಾಳಕೊಪ್ಪ ಮುಖ್ಯರಸ್ತೆಯ ಸರ್ವೇ ನಂ.60ರಲ್ಲಿ ವಾಸವಾಗಿರುವ ನಿರಾಶ್ರಿತರಿಗೆ ಯಾವುದೇ ನೋಟಿಸ್, ಮುನ್ಸೂಚನೆ ನೀಡದೇ ಏಕಾಏಕಿ ಜೆಸಿಬಿಗಳ ಮೂಲಕ ಮನೆಗಳನ್ನು ತೆರವು ಮಾಡಿರುವುದನ್ನು ಖಂಡಿಸಿ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್.ರಾಜು ನೇತೃತ್ವದಲ್ಲಿ ಸಂತ್ರಸ್ತರು ಮಂಗಳವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
    18 ವಾಸದ ಹಂಚಿನ ಮನೆ ಮತ್ತು ತಗಡು ಮನೆಗಳನ್ನು ಪಪಂ ಮುಖ್ಯಾಧಿಕಾರಿ, ಉಪ ತಹಸೀಲ್ದಾರ್, ನಾಡಕಚೇರಿ ಅಧಿಕಾರಿಗಳು ಪೊಲೀಸ್ ಭದ್ರತೆಯಲ್ಲಿ ರಾತ್ರೋರಾತ್ರಿ ಬಂದು ಮನೆಗಳನ್ನು ಕೆಡವಿ ಜನರನ್ನು ಬೀದಿಗೆ ತಳ್ಳಿದ್ದಾರೆ ಎಂದು ದೂರಿದರು.
    ಮನೆಯಲ್ಲಿದ್ದ ಮಕ್ಕಳು, ವಯಸ್ಕರನ್ನೂ ಎಳೆದು ತಂದು ಹೊರ ಹಾಕಿದ್ದಾರೆ. ಮನೆಯಲ್ಲಿದ್ದ ಸಾಮಗ್ರಿ, ದಾಖಲೆಗಳು, ಬಟ್ಟೆ ಬರೆ ತುಂಬಿಕೊಳ್ಳಲು ಸಹ ಬಿಡದೆ ಕಾರ್ಯಾಚರಣೆ ನಡೆಸಿದ್ದಾರೆ. ಇದರಿಂದ ಬಡಜನರು ಅಪಾರ ಪ್ರಮಾಣದ ನಷ್ಟವನ್ನು ಎದುರಿಸುವಂತಾಗಿದ್ದು ಮನೆ ಕಳೆದುಕೊಂಡ ಸಂತ್ರಸ್ತರ ಗೋಳು ಹೇಳತೀರದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
    ಅಧಿಕಾರಿಗಳ ನಡೆಯಿಂದ ಮಕ್ಕಳಿಂದ ವಯಸ್ಕರವರೆಗೆ ಬೀದಿಬದಿ ವಾಸಿಸುವಂತಾಗಿದೆ. ಮಾನಸಿಕವಾಗಿ ನೊಂದು ರಸ್ತೆಬದಿ ಮರಗಳ ನೆರಳನ್ನು ಆಶ್ರಯಿಸುವಂತಾಗಿದೆ. ಏಕಾಏಕಿ ತೆರವುಗೊಳಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿದೆ ಎಂದು ಆಗ್ರಹಿಸಿದರು.
    ಮೊಹಮ್ಮದ್ ಜಾಫರ್, ಬೆಳ್ಳಮ್ಮ, ಕುತೇಜಾ ಬೀ, ಆಮೀರ್ ಖಾನ್, ಸಾಧಿಕ್, ಖಾದರ್, ಅಮೀನಾ ಪ್ರತಿಭಟನೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts