More

    ಅನಾಥ ಹಾದಿ, ಮುಳುಗುವ ಬಡಾವಣೆ

    ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬಹಳಷ್ಟು ಕಡೆ ಅವ್ಯವಸ್ಥೆ ಪ್ರತಿಬಿಂಬಿಸುತ್ತದೆ. ಗಟಾರು ಇಲ್ಲದ ಸಿಸಿ ರಸ್ತೆ, ಸಾಧಾರಣ ಮಳೆ ಬಂದರೆ ಜಲಾವೃತಗೊಳ್ಳುವ ಬಡಾವಣೆ, ಅನಾಥ ರಸ್ತೆ…ಇಂಥ ದುರವಸ್ಥೆಯನ್ನು ಹಳೇಹುಬ್ಬಳ್ಳಿ ಆನಂದನಗರ ಸುತ್ತಮುತ್ತ ಪ್ರದೇಶಗಳಲ್ಲಿ ಕಾಣಬಹುದು.

    ಹಳೇಹುಬ್ಬಳ್ಳಿ ನಿಜಕ್ಕೂ ಒಂದಿಷ್ಟು ಹಿಂದುಳಿದ ಪ್ರದೇಶ. ಇಲ್ಲಿಯ ಜನರಿಗೆ ಮೂಲ ಸೌಕರ್ಯಗಳು ಗಗನಕುಸುಮ. ಆದರೂ, ಕೆಲವೆಡೆ ಸಿಸಿ ರಸ್ತೆಗಳು ನಿರ್ವಣವಾಗಿವೆ. ಅಭಿವೃದ್ಧಿಯೆಂದರೆ ಸಿಸಿ ರಸ್ತೆ ಎಂದು ಚುನಾಯಿತ ಪ್ರತಿನಿಧಿಗಳು ಭಾವಿಸಿದಂತಿದೆ. ಹಾಗಾಗಿ ಉಳಿದವೆಲ್ಲ ನಗಣ್ಯ!

    ಕೇಂದ್ರ ರಸ್ತೆ ನಿಧಿ (ಸಿಆರ್​ಎಫ್) ಅನುದಾನದಡಿ ಹಳೇ ಹುಬ್ಬಳ್ಳಿ ಹೆಗ್ಗೇರಿ ಕಾಲನಿ ಕ್ರಾಸ್​ನಿಂದ ಆನಂದನಗರ (ಮುಖ್ಯರಸ್ತೆ) ದವರೆಗೆ ಕಾಂಕ್ರೀಟ್ ರಸ್ತೆ ನಿರ್ವಿುಸಲಾಗಿದೆ. ಒಂದು-ಒಂದೂವರೆ ವರ್ಷದ ಹಿಂದೆ ಕಾಮಗಾರಿ ಪೂರ್ಣಗೊಂಡಿದೆ. ಗಟಾರ ಇಲ್ಲದ ಸಿಸಿ ರಸ್ತೆ ಇದು. ರಸ್ತೆಯ ಎರಡೂ ಬದಿಯಲ್ಲಿ ಅಲ್ಲಲ್ಲಿ ಪೂರ್ಣವಾಗಿ ಮುಚ್ಚಿದ, ಕೆಲವೆಡೆ ಒಂದು ಅಡಿಯಷ್ಟು ಆಳವಿಲ್ಲದ ಕಚ್ಚಾ ಗಟಾರವನ್ನು ಕಾಣಬಹುದು. ಕೆಲವೆಡೆ ಕಸ ತುಂಬಿ ಕಚ್ಚಾ ಗಟಾರವೂ ಮುಚ್ಚಿ ಹೋಗಿದೆ.

    ಹುಬ್ಬಳ್ಳಿಯಲ್ಲಿ ವಿವಿಧೆಡೆ ಸಿಆರ್​ಎಫ್ ಅನುದಾನದಲ್ಲಿಯೇ ಸಿಸಿ ರಸ್ತೆ ನಿರ್ವಣಕ್ಕೂ ಪೂರ್ವ ಗಟಾರ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ, ಹಳೇಹುಬ್ಬಳ್ಳಿ ಆನಂದನಗರದಲ್ಲಿ ಸಿಸಿ ರಸ್ತೆಗೆ ಗಟಾರವಿಲ್ಲ. ನಗರದಲ್ಲಿ ಎಲ್ಲಿಯೂ ಸಿಆರ್​ಎಫ್ ಅನುದಾನದ ಸಿಸಿ ರಸ್ತೆಗೆ ಏಕರೂಪತೆ ಎಂಬುದು ಇಲ್ಲ. ಇಲ್ಲಿ ಗಟಾರವೇ ಇಲ್ಲ. ಕೇಂದ್ರ ಸರ್ಕಾರದ ನೂರಾರು ಕೋಟಿ ರೂ. ಅನುದಾನವನ್ನು ಸ್ಥಳೀಯ ಆಡಳಿತ ಯಂತ್ರ ವಿವೇಕ ಮತ್ತು ವಿವೇಚನೆ ಇಲ್ಲದೇ ಬಳಸಿಕೊಂಡಿರುವುದಕ್ಕೆ ಇಂಥ ಹಲವು ಉದಾಹರಣೆಗಳು ಸಿಗುತ್ತವೆ.

    ಹೆಗ್ಗೇರಿ ಕ್ರಾಸ್​ನಿಂದ ಆನಂದನಗರ ಮುಖ್ಯ ರಸ್ತೆಯ ಕಥೆ ಇದಾದರೆ, ಇದಕ್ಕೆ ವಿರುದ್ಧ ದಿಕ್ಕಿನಲ್ಲಿರುವ ಕಾರವಾರ ರಸ್ತೆಗೆ ಕೂಡುವ ರಸ್ತೆಯನ್ನು ಅನಾಥವನ್ನಾಗಿ ಮಾಡಲಾಗಿದೆ. ಪಾಲಿಕೆಯ ವಾರ್ಡ್ ಸಂಖ್ಯೆ 39 ಹಾಗೂ 41ನ್ನು ಇಬ್ಭಾಗಿಸುವ ಈ ರಸ್ತೆ ಭೌಗೋಳಿಕವಾಗಿ ವಾರ್ಡ್ ಸಂಖ್ಯೆ 39ಕ್ಕೆ ಸೇರಿದೆ. ರ್ತಾಕವಾಗಿ ಶಾಸಕ ಅರವಿಂದ ಬೆಲ್ಲದ ಅವರ ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತದೆ. ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹಾಗೂ ಶಾಸಕ ಬೆಲ್ಲದ ಅವರಿಗೆ ಸ್ಥಳೀಯರು ಹಲವು ಬಾರಿ ರಸ್ತೆ ಸರಿಪಡಿಸುವಂತೆ ಮನವಿ ಮಾಡಿದ್ದಾರೆ. ರಸ್ತೆ ತನಗೆ ಸೇರಿದ್ದರೂ ದುರಸ್ತಿಗೆ ಹಣವಿಲ್ಲವೆಂದು ಪಾಲಿಕೆ ಕೈ ತೊಳೆದುಕೊಂಡಿದೆ. ಈ ರಸ್ತೆ ದುರಸ್ತಿಗೆ 1.25 ಕೋ. ರೂ. ಅಂದಾಜು ವೆಚ್ಚವನ್ನು ಪಾಲಿಕೆ ಸಿದ್ಧಪಡಿಸಿತ್ತು. ಆದರೆ, ಈವರೆಗೂ ಕಾಮಗಾರಿ ಕೈಗೊಂಡಿಲ್ಲ. ಪರಿಣಾಮ ರಸ್ತೆ ತುಂಬಾ ತಗ್ಗು-ಗುಂಡಿ. ಗುಂಡಿಯಲ್ಲಿ ರಸ್ತೆ ಇದ್ದಂತೆ ಭಾಸವಾಗುತ್ತದೆ. ಮೇಲಾಗಿ ಕುಡಿಯುವ ನೀರಿನ ಪೈಪ್​ಲೈನ್ ಒಡೆದಿದೆ. ಒಳಚರಂಡಿ ಚೇಂಬರ್ ನಿರಂತರ ಉಕ್ಕುತ್ತಿರುತ್ತದೆ. ಇದರಿಂದ ರಸ್ತೆ ಗುಂಡಿಯಲ್ಲಿ ನೀರು ನಿಂತು ಸಂಚಾರ ಅಧ್ವಾನವಾಗಿದೆ. ಈ ದುಸ್ಥಿತಿಯಲ್ಲೂ ಅನಿವಾರ್ಯವಾಗಿ ಪಾದಚಾರಿಗಳು, ವಾಹನ ಸವಾರರು ಸಂಚರಿಸಬೇಕಾಗಿದೆ.

    ಗಣೇಶನಗರ ಅಯೋಮಯ: ಮಳೆಗಾಲದಲ್ಲಿ ಗಣೇಶನಗರ ಬಡಾವಣೆ ಮುಳುಗಡೆಯಾಗುತ್ತದೆ. ಇಲ್ಲಿ 60ಕ್ಕೂ ಹೆಚ್ಚು ಸುಸಜ್ಜಿತ ಮನೆಗಳಿವೆ. ಬಡಾವಣೆಯ ರಸ್ತೆಯಲ್ಲಿ ಎಲ್ಲಿಯೂ ಗಟಾರವೇ ಇಲ್ಲ. ಕಳೆದ ವರ್ಷ ಮಳೆಗಾಲದಲ್ಲಿ 3 ಅಡಿಯಷ್ಟು ನೀರು ನಿಂತಿತ್ತು. ಮಳೆ ನೀರಿಗಿಂತ ಪಕ್ಕದ ನಾಲಾ ನೀರು ಹರಿದು ಬಂದು ಜನಜೀವನ ಅಸ್ತವ್ಯಸ್ಥಗೊಳಿಸುತ್ತದೆ. ಭಾರಿ ಮಳೆಯ ದಿನಗಳಲ್ಲಿ ಮನೆ ಖಾಲಿ ಮಾಡಿ ಬೇರೆಡೆ ವಾಸಿಸುವುದು ಇಲ್ಲಿಯ ನಿವಾಸಿಗಳಿಗೆ ತಪ್ಪದ ಗೋಳು.

    ಗಣೇಶನಗರ ಬಡಾವಣೆಯಲ್ಲಿ ಗಟಾರವೇ ಇಲ್ಲ. ಮಳೆಗಾಲದಲ್ಲಿ ಮಳೆ ನೀರಿಗಿಂತ ಪಕ್ಕದ ನಾಲಾದ ಕೊಳಚೆ ನೀರು ಹರಿದು ಬರುತ್ತದೆ. ಕಳೆದ ವರ್ಷ ಗಣೇಶನಗರದ 3 ರಸ್ತೆಗಳು ಜಲಾವೃತಗೊಂಡಿದ್ದವು. 3 ಅಡಿಗಳಷ್ಟು ನೀರು ನಿಂತಿತ್ತು. ಕೆಲ ದಿನ ಮನೆ ಬಿಟ್ಟು ಬೇರೆಡೆ ವಾಸವಿದ್ದೆವು. ಗಟಾರ ನಿರ್ವಿುಸುವಂತೆ ಸ್ಥಳೀಯ ನಿವಾಸಿಗಳು ಜನಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದಾರೆ.

    | ಕುಮುದ್ವತಿ ಪಾಟೀಲ ಗಣೇಶನಗರ ನಿವಾಸಿ

    ಕಾರವಾರ ರಸ್ತೆಯಿಂದ ಹೆಗ್ಗೇರಿ ಕಾಲನಿ ಕ್ರಾಸ್​ವರೆಗೆ ಪಾಲಿಕೆ ಸಾಮಾನ್ಯ ನಿಧಿಯಡಿ 69 ಲಕ್ಷ ರೂ.ಗಳಲ್ಲಿ ರಸ್ತೆ, 43 ಲಕ್ಷ ರೂ.ಗಳಲ್ಲಿ ಗಟಾರ ಹಾಗೂ 7 ಲಕ್ಷ ರೂ. ವೆಚ್ಚದಲ್ಲಿ ಒಳಚರಂಡಿ ಕಾಮಗಾರಿ ಯನ್ನು ಶೀಘ್ರದಲ್ಲೇ ಕೈಗೊಳ್ಳ ಲಾಗುವುದು.

    | ಸಿದ್ದಗೊಂಡ, ಎಇಇ, ಪಾಲಿಕೆ ವಲಯ ಕಚೇರಿ ನಂ. 7

    ಕಾರವಾರ ರಸ್ತೆಯಿಂದ ಹೆಗ್ಗೇರಿ ಕಾಲನಿ ಕ್ರಾಸ್​ವರೆಗೆ ರಸ್ತೆ ದುರಸ್ತಿಗೆ 2 ವರ್ಷಗಳ ಹಿಂದೆಯೇ ಸಚಿವ ಜಗದೀಶ ಶೆಟ್ಟರ್, ಶಾಸಕ ಅರವಿಂದ ಬೆಲ್ಲದ, ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದೇವೆ. ಮುಂದೆ ಕಾಂಕ್ರೀಟ್ ರಸ್ತೆ ನಿರ್ವಣವಾಗಿದೆ. ಈ ರಸ್ತೆ ಅನಾಥವಾಗಿದೆ.

    | ಮಾರುತಿ ಗಾರವಾಡ ಹಳೇ ಹುಬ್ಬಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts