More

    ಅವಿರೋಧ ಆಯ್ಕೆ ಬಹುತೇಕ ಖಚಿತ

    ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 4 ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆಗೆ ಆ. 23ರಂದು ಚುನಾವಣೆ ನಿಗದಿಯಾಗಿದೆ. ಎಲ್ಲ 4 ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಆಡಳಿತಾರೂಢ ಬಿಜೆಪಿಗೆ ಸಿಗಲಿದ್ದು, ಪೂರ್ವ ನಿಗದಿಯಂತೆ ಅವಿರೋಧ ಆಯ್ಕೆ ಬಹುತೇಕ ಖಚಿತ.

    ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿಗೆ ಶಿವಾನಂದ ಮೆಣಸಿನಕಾಯಿ, ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ ಸುರೇಶ ಬೆದರೆ, ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಗೆ ವಿಜಯಾನಂದ ಶೆಟ್ಟಿ ಹಾಗೂ ಲೆಕ್ಕಗಳ ಸ್ಥಾಯಿ ಸಮಿತಿಗೆ ರಾಧಾಬಾಯಿ ಸಪಾರೆ ಅಧ್ಯಕ್ಷರಾಗುವುದು ಈಗಾಗಲೇ ನಿರ್ಧಾರವಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

    ಪ್ರತಿ ಸಮಿತಿಯ 7 ಸದಸ್ಯರಲ್ಲಿ ಬಿಜೆಪಿಯ ನಾಲ್ವರು ಹಾಗೂ ಕಾಂಗ್ರೆಸ್ಸಿನ ಮೂವರು ಇದ್ದಾರೆ. ಆಯಾ ಸಮಿತಿಯ ಸದಸ್ಯರು ಆಯಾ ಸಮಿತಿಯ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗೆ ಮತ ಚಲಾಯಿಸಬೇಕು. ಹಾಗಾಗಿ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಬೇಕಾದ ನಿರ್ಣಾಯಕ 4 ಮತಗಳು ಖಾತರಿಯಾಗಿರುವುದರಿಂದ ಬಿಜೆಪಿಗೆ ನಾಲ್ಕೂ ಅಧ್ಯಕ್ಷ ಪಟ್ಟ ನಿಶ್ಚಿತ. ಬಿಜೆಪಿ ಅಭ್ಯರ್ಥಿ ವಿರುದ್ಧ ಸ್ವಪಕ್ಷೀಯರೇ ಸ್ಪರ್ಧೆ ಮಾಡುವ ಸಾಧ್ಯತೆಗಳಿಲ್ಲ.

    ರಾಜಕೀಯ ಲೆಕ್ಕಾಚಾರ: ಹು-ಧಾ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಸತತ 3ನೇ ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. 3ನೇ ಅವಧಿಯ ಮೊದಲ ವರ್ಷಕ್ಕೆ ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನವನ್ನು ಅನುಭವಿಗಳಿಗೆ ನೀಡಲು ಪಕ್ಷದ ಮುಖಂಡರು ನಿರ್ಧರಿಸಿದ್ದಾರೆ. ಶಿವಾನಂದ ಮೆಣಸಿನಕಾಯಿ, ವಿಜಯಾನಂದ ಶೆಟ್ಟಿ ಹಾಗೂ ರಾಧಾಬಾಯಿ ಸಫಾರೆ ಹಿರಿಯ ಸದಸ್ಯರು. ಸುರೇಶ ಬೆದರೆ ಮಾತ್ರ ಪಾಲಿಕೆಗೆ ಮೊದಲ ಬಾರಿ ಆಯ್ಕೆಯಾದವರು.

    ಇದರಲ್ಲಿ ರಾಜಕೀಯ ಲೆಕ್ಕಾಚಾರವು ಅಡಗಿದೆ. ಉಪ ಮೇಯರ್ (ಉಮಾ ಮುಕುಂದ) ಹಾಗೂ ಸಭಾ ನಾಯಕ (ತಿಪ್ಪಣ್ಣ ಮಜ್ಜಗಿ) ಸ್ಥಾನವು ಹು-ಧಾ ಸೆಂಟ್ರಲ್ ವಿಧಾನಸಭೆ ಹಾಗೂ ಮೇಯರ್ (ಈರೇಶ ಅಂಚಟಗೇರಿ) ಸ್ಥಾನ ಧಾರವಾಡ ವಿಧಾನಸಭೆ ಕ್ಷೇತ್ರಕ್ಕೆ ನೀಡಿರುವುದರಿಂದ ಈ ಎರಡೂ ಕ್ಷೇತ್ರಗಳಿಗೆ ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಈ ಬಾರಿ ಇಲ್ಲ. ಹಾಗಾಗಿ ಹು-ಧಾ ಪೂರ್ವ ಹಾಗೂ ಪಶ್ಚಿಮ ವಿಧಾನಸಭೆ ಕ್ಷೇತ್ರಗಳಿಗೆ ತಲಾ 2 ಸ್ಥಾನಗಳನ್ನು ಹಂಚಿಕೆ ಮಾಡಲು ಬಿಜೆಪಿ ಮುಖಂಡರು ಈಗಾಗಲೇ ನಿರ್ಧರಿಸಿದ್ದಾರೆ.

    ಜುಲೈ 11ರಂದು ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆ ಚುನಾವಣೆ ನಡೆದಿತ್ತು. ಆಗ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರ ಸಮ್ಮುಖದಲ್ಲಿ ಚುನಾವಣೆ ಪ್ರಕ್ರಿಯೆ ಜರುಗಿತ್ತು. ಅಧ್ಯಕ್ಷರ ಆಯ್ಕೆ ಚುನಾವಣೆಗೆ ಮೇಯರ್ ಈರೇಶ ಅಂಚಟಗೇರಿ ಅವರೇ ಅಧ್ಯಕ್ಷಾಧಿಕಾರಿಯಾಗಿ ಕಾರ್ಯನಿರ್ವಹಿಸುವರು.

    ಲೆಕ್ಕಗಳ ಸ್ಥಾಯಿ ಸಮಿತಿ ಸದಸ್ಯರಾಗಿರುವ ಕಾಂಗ್ರೆಸ್​ನ ಸಂದಿಲಕುಮಾರ ಅವರಿಗೆ ಪಾಲಿಕೆಯ ಕಾರ್ಯಚಟುವಟಿಕೆಯಲ್ಲಿ ಭಾಗವಹಿಸದಂತೆ ನಿರ್ಬಂಧ ಹೇರಿರುವುದರಿಂದ ಅವರಿಗೆ ಸ್ಥಾಯಿ ಸಮಿತಿಗಳ ಅಧ್ಯಕ್ಷ ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶ ಇರುವುದಿಲ್ಲ.

    ಸ್ಥಾಯಿ ಸಮಿತಿ ಸದಸ್ಯರಿವರು

    *ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ: ಬಿಜೆಪಿಯ ಶಿವಾನಂದ ಮೆಣಸಿನಕಾಯಿ, ಚಂದ್ರಿಕಾ ಮೇಸ್ತ್ರಿ, ಸತೀಶ ಹಾನಗಲ್, ಸರಸ್ವತಿ ಧೋಂಗಡಿ, ಕಾಂಗ್ರೆಸ್ಸಿನ ಇಮ್ರಾನ್ ಎಲಿಗಾರ, ಮಂಜುನಾಥ ಬಡಕುರಿ, ಇಲಿಯಾಸ್ ಮನಿಯಾರ.

    * ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ: ಬಿಜೆಪಿಯ ಶಿವಪ್ಪ ಯಾವಗಲ್, ಸುರೇಶ ಬೆದರೆ, ದುರ್ಗಮ್ಮ ಬಿಜವಾಡ, ಮಹಾದೇವಪ್ಪ ನರಗುಂದ, ಕಾಂಗ್ರೆಸ್ಸಿನ ಕವಿತಾ ಕಬ್ಬೇರ, ಸುನೀತಾ ಬುರಬುರೆ, ಪ್ರಕಾಶ ಕುರಹಟ್ಟಿ.

    *ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ: ಬಿಜೆಪಿಯ ವಿಜಯಾನಂದ ಶೆಟ್ಟಿ, ಕಿಶನ್ ಬೆಳಗಾವಿ, ಪೂಜಾ ಶೇಜವಾಡಕರ, ಶಂಕರ ಶೆಳಕೆ, ಕಾಂಗ್ರೆಸ್ಸಿನ ಗೀತಾ ಹೊಸಮನಿ, ರಾಜಶೇಖರ ಕಮತಿ, ಮಂಗಳಮ್ಮ ಹಿರೇಮನಿ.

    *ಲೆಕ್ಕಗಳ ಸ್ಥಾಯಿ ಸಮಿತಿ: ಬಿಜೆಪಿಯಿಂದ ರಾಧಾಬಾಯಿ ಸಪಾರೆ, ಅನಿತಾ ಚಳಗೇರಿ, ರೂಪಾ ಶೆಟ್ಟಿ, ಜೆಡಿಎಸ್​ನ ಲಕ್ಷ್ಮಿ ಹಿಂಡಸಗೇರಿ, ಕಾಂಗ್ರೆಸ್ಸಿನಿಂದ ಅಕ್ಷತಾ ಅಸುಂಡಿ, ಗಣೇಶ ಮುಧೋಳ, ಸಂದಿಲಕುಮಾರ ಎಸ್.

    ಜುಲೈ 11ರಂದು ಆಯ್ಕೆಯಾದ ಸ್ಥಾಯಿ ಸಮಿತಿಗಳ ಸದಸ್ಯರ ಹೆಸರು ರಾಜ್ಯಪತ್ರದಲ್ಲಿ (ಗೆಜೆಟ್) ಈಗಾಗಲೇ ಪ್ರಕಟವಾಗಬೇಕಿತ್ತು. 1 ತಿಂಗಳು ಕಾದು ನೋಡಿದೆವು. ಪಾಲಿಕೆಯ ಆಡಳಿತ ಹಾಗೂ ದಿನನಿತ್ಯದ ಕಾರ್ಯ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋಗಬೇಕಾಗಿರುವುದರಿಂದ ಆ. 23ರಂದು ಬೆಳಗ್ಗೆ 11 ಗಂಟೆಗೆ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸುತ್ತಿದ್ದೇವೆ.

    | ಈರೇಶ ಅಂಚಟಗೇರಿ, ಪಾಲಿಕೆ ಮೇಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts