More

    ಕಸದ ಸಮಸ್ಯೆಗೆ ದೊರಕದ ಮುಕ್ತಿ

    ಅಂತೋಣಿ ಪಿ.ವಿ. ಸಿದ್ದಾಪುರ
    ಜಿಲ್ಲೆಯ ದೊಡ್ಡ ಗ್ರಾಮ ಪಂಚಾಯಿತಿಗಳ ಸಾಲಿಗೆ ಸೇರುವ, ಶರವೇಗದಲ್ಲಿ ಬೆಳೆಯುತ್ತಿರುವ ಸಿದ್ದಾಪುರ ಪಟ್ಟಣದಲ್ಲಿ ಕಸದ ಸಮಸ್ಯೆಗೆ ಮುಕ್ತಿ ದೊರಕಿಲ್ಲ.
    ದಿನದಿಂದ ದಿನಕ್ಕೆ ವ್ಯಾಪಾರೋದ್ಯಮ ಮೇಲೆರುತ್ತಿರುವುದರ ಜತೆಗೆ ಅನೈರ್ಮಲ್ಯವೂ ಕೂಡ ಹೆಚ್ಚಾಗುತ್ತಿದೆ. ಪಟ್ಟಣದ ಕಸ ಸಮರ್ಪಕ ರೀತಿಯಲ್ಲಿ ವಿಲೇವಾರಿಯಾಗದೆ ಸಮಸ್ಯೆಗೆ ತಾಂಡವವಾಡುತ್ತಿದೆ. ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯದೆ ಸಮಸ್ಯೆ ಉಂಟಾಗುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಇದೆ.

    ಅನೈರ್ಮಲ್ಯದಿಂದ ಈ ವ್ಯಾಪ್ತಿಯಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಕಳೆದ ಹತ್ತು ದಿನಗಳಲ್ಲಿ 10 ಜನರಿಗೆ ಡೆಂೆ ಕಾಣಿಸಿಕೊಂಡಿದ್ದು, ಜನರಲ್ಲಿ ಇನ್ನಷ್ಟು ಆತಂಕ ಮೂಡಿಸಿದೆ. ವ್ಯವಸ್ಥಿತ ರೀತಿಯಲ್ಲಿ ಕಸ ವಿಲೇವಾರಿಗೆ ಗ್ರಾಮಸ್ಥರು 50 ವರ್ಷಗಳಿಂದ ಒತ್ತಾಯ ಮಾಡುತ್ತಿದ್ದಾರೆ. ಆದರೆ ಇದು ಫಲಪ್ರದ ಕಂಡಿಲ್ಲ. ಸಂತೆ ಮಾರುಕಟ್ಟೆ ಸೇರಿದಂತೆ ಸುತ್ತಮುತ್ತಲ ರಸ್ತೆಯಲ್ಲಿ ತ್ಯಾಜ್ಯದ ದುರ್ವಾಸನೆ ಬೀರುತ್ತಿದ್ದು, ಜನರು ಮೂಗು ಮುಚ್ಚಿಕೊಂಡು ತಿರುಗಾಡುವಂತಾಗಿದೆ.
    ಸಿದ್ದಾಪುರದಿಂದ ಕರಡಿಗೋಡು ಕಡೆ ತೆರಳುವ ರಸ್ತೆ ಬದಿಯ ಚರಂಡಿ ಕಟ್ಟಿಕೊಂಡು, ತಿಂಗಳು ಕಳೆದರೂ ಗ್ರಾ.ಪಂ. ತೆರವುಗೊಳಿಸಲು ಮುಂದಾಗಿಲ್ಲ ಎಂದು ಸ್ಥಳೀಯ ಸುರೇಶ್ ಆರೋಪಿಸಿದ್ದಾರೆ.

    ಸಿದ್ದಾಪುರದಲ್ಲಿ ಪ್ರತಿ ಭಾನುವಾರ ವಾರದ ಸಂತೆ ನಡೆಯುತ್ತದೆ. ಸುತ್ತಮುತ್ತಲಿನ ಊರುಗಳಿಂದ ಸಾವಿರಾರು ಜನರು ಆಗಮಿಸುತ್ತಾರೆ. ಮಾರುಕಟ್ಟೆ ಬಳಿಯೇ ಕಸ ವಿಲೇವಾರಿ ಮಾಡಿರುವುದರಿಂದ ಜನರು ಸಮಸ್ಯೆ ಅನುಭವಿಸುವಂತಾಗಿದೆ. ಅಲ್ಲದೆ ಅಕ್ಕಪಕ್ಕದ ಮನೆಯವರು ದುರ್ವಾಸನೆಯ ನಡುವೆಯೇ ಬದುಕಬೇಕಾಗಿದೆ. ತ್ಯಾಜ್ಯವನ್ನು ಎಲ್ಲೆಂದರಲ್ಲೇ ಸುರಿಯುವುದರಿಂದ ಬೀದಿ ನಾಯಿಗಳ ಹಾವಳಿ ಕೂಡ ಹೆಚ್ಚಾಗಿದ್ದು, ಕಸವನ್ನು ಎಳೆದಾಡಿ ಇನ್ನಷ್ಟು ಅನೈರ್ಮಲ್ಯಗೊಳಿಸುತ್ತಿವೆ. ಕಸ ವಿಲೇವಾರಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಗ್ರಾ.ಪಂ ಚಿಂತಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸಮ್ಮದ್ ಒತ್ತಾಯಿಸಿದ್ದಾರೆ.

    ನ್ಯಾಯಾಲಯ ಮೆಟ್ಟಿಲೇರಿದ ಪ್ರಕರಣ: ಘಟ್ಟದಳ ಬದಿ ಕಸ ವಿಲೇವಾರಿಗೆ ಸಿದ್ದಾಪುರ ಗ್ರಾಪಂನಿಂದ ಜಾಗ ಗುರುತಿಸಲಾಗಿದೆ. ಆದರೆ, ಈ ಜಾಗದ ಸಮೀಪ ತೋಡಿನಲ್ಲಿ ನೀರು ಹರಿಯುತ್ತಿರುವುದರಿಂದ ಹಾಗೂ ಪಕ್ಕದಲ್ಲೇ ಶಾಲೆ ಇರುವುದರಿಂದ ಬದಲಿ ಜಾಗ ಗುರುತಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಅಲ್ಲದೆ ಕಸ ವಿಲೇವಾರಿಗೆ ಗುರುತಿಸಿರುವ ಜಾಗ ನಮ್ಮದು ಎಂದು ವ್ಯಕ್ತಿಯೊಬ್ಬರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಇನ್ನು ಪಂಚಾಯಿತಿಗೆ ಸಂಬಂಧಿಸಿದ ಯಾವುದೇ ಜಾಗ ಇಲ್ಲ. ಕಂದಾಯ ಇಲಾಖೆಗೆ ಸೇರಿದ ಜಮೀನುಗಳೇ ಅಧಿಕವಿದ್ದು, ವಿವಿಧ ಕಾರಣಗಳಿಂದಾಗಿ ಈ ಜಾಗ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts