More

    ಸಾಮಾನ್ಯ ಕಾರ್ಯಕರ್ತ ಶಾಸಕನಾಗಬಾರದೆ ? – ರಮೇಶ ಜಿಗಜಿಣಗಿ

    ವಿಜಯಪುರ: ಸಾಮಾನ್ಯ ಕಾರ್ಯಕರ್ತ ಶಾಸಕರಾಗಬಾರದೆ? ಹೊಸ ಮುಖಗಳಿಗೆ ಆದ್ಯತೆ ಸಿಗಬಾರದೆ? ಶ್ರೀಮಂತರೇ ರಾಜಕಾರಣ ಮಾಡಬೇಕೆ?’ ಎಂದು ಪ್ರಶ್ನಿಸಿರುವ ಸಂಸದ ರಮೇಶ ಜಿಗಜಿಣಗಿ ನಾಗಠಾಣ ಕ್ಷೇತ್ರದಿಂದ ಈ ಬಾರಿ ಬಡವ, ಸಾಮಾನ್ಯ ಕಾರ್ಯಕರ್ತರ ಹಾಗೂ ಹೊಸ ಮುಖಕ್ಕೆ ಟಿಕೆಟ್ ನೀಡಿದ್ದು ಇಡೀ ರಾಜ್ಯಕ್ಕೆ ಉತ್ತಮ ಸಂದೇಶ ರವಾನಿಸಿದಂತಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

    ನಾಗಠಾಣ ವಿಧಾನಸಭಾ ಕ್ಷೇತ್ರದಿಂದ ಡಾ.ಗೋಪಾಲ ಕಾರಜೋಳ ಅವರಿಗೆ ಟಿಕೆಟ್ ಕೊಡಿ ಎಂದು ನಾನು ವಿನಂತಿ ಮಾಡಿದ್ದೆ, ಆದರೆ ಹೈಕಮಾಂಡ್ ಬಡ, ಸಾಮಾನ್ಯ ಕಾರ್ಯಕರ್ತ ಸಂಜೀವ ಐಹೊಳಿಗೆ ಟಿಕೆಟ್ ಕೊಟ್ಟಿದೆ. ಸಂಜೀವ ಐಹೊಳಿ ನನ್ನ ಸಂಬಂಧಿಯಲ್ಲ; ನನ್ನ ಜಾತಿಯವ ಅಷ್ಟೆ. ಆತನ ಹಿಂದೆ ಯಾವ ಪ್ರಭಾವಿಗಳೂ ಇಲ್ಲ. ಪಕ್ಷ ಟಿಕೆಟ್ ನೀಡಿದ್ದು ಕೆಳಮಟ್ಟದ ಕಾರ್ಯಕರ್ತರಲ್ಲಿ ಹುಮ್ಮಸ್ಸು ತರಿಸಿದೆ. ಎಲ್ಲರೂ ಒಟ್ಟಾಗಿ ಸಾಮಾನ್ಯ ಕಾರ್ಯಕರ್ತನನ್ನು ಗೆಲ್ಲಿಸಿ ತರುತ್ತೇವೆಂದರು.

    ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಇಲ್ಲ ಎಂಬುದಕ್ಕೆ ನಾಗಠಾಣ ಕ್ಷೇತ್ರ ಉದಾಹರಣೆ. ಇಲ್ಲಿ ಗೋಪಾಲ ಕಾರಜೋಳ ಹಾಗೂ ನಾನು ಸಹ ಟಿಕೆಟ್ ಆಕಾಂಕ್ಷಿಯಾಗಿದ್ದೆವು. ಆದರೆ, ಪಕ್ಷ ಅದಕ್ಕೆ ಅವಕಾಶ ಕೊಡದೆ ಸಾಮಾನ್ಯ ವ್ಯಕ್ತಿಗೆ, ಯುವಕನಿಗೆ ಟಿಕೆಟ್ ನೀಡಿದೆ. ಇದನ್ನು ಸ್ವಾಗತಿಸಬೇಕು. ಕೆಲವು ಕ್ಷೇತ್ರಗಳಲ್ಲಿ ಅನಿವಾರ್ಯ ಎಂದು ಕಂಡು ಬಂದಲ್ಲಿ ಒಂದೇ ಕುಟುಂಬದಲ್ಲಿ ಟಿಕೆಟ್ ನೀಡಿರಬಹುದು. ಆದರೆ, ಅದನ್ನೇ ಮುಂದಿಟ್ಟುಕೊಂಡು ಬೇರೆ ಕ್ಷೇತ್ರಕ್ಕೆ ಹೋಲಿಕೆ ಮಾಡುವುದು ಸರಿಯಲ್ಲ.

    ಬಡವರು ರಾಜಕಾರಣಕ್ಕೆ ಬರಬೇಕು, ದೊಡ್ಡ ಸ್ಥಾನ ಅಲಂಕರಿಸಬೇಕು ಎನ್ನುವ ಆಶಯದೊಂದಿಗೆ ಹೈಕಮಾಂಡ್ ಈ ನಿರ್ಧಾರ ಮಾಡಿದೆ. ಇದಕ್ಕೆ ಬದ್ಧರಾಗಿ ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆ ನಡೆಸಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ರಾಜ್ಯಕ್ಕೆ ಒಳ್ಳೆಯ ಸಂದೇಶ ನೀಡಲು ಬಿಜೆಪಿ ಕಾರ್ಯಕರ್ತರು ಸಜ್ಜಾಗಿದ್ದಾರೆ ಎಂದರು.

    ನಾಗಠಾಣ ಕ್ಷೇತ್ರದ ಅಭ್ಯರ್ಥಿ ಸಂಜೀವ ಐಹೊಳ್ಳಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ, ಮುಖಂಡರಾದ ಸುರೇಶ ಬಿರಾದಾರ, ಉಮೇಶ ಕೋಳಕೂರ, ಸಂಜಯ ಪಾಟೀಲ ಕನಮಡಿ, ಮಲ್ಲಿಕಾರ್ಜುನ ಜೋಗೂರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts