More

    ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತ ನಡೆಸುವ ಪ್ರಯತ್ನ

    ಸಾಗರ: ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಐದೂ ಗ್ಯಾರಂಟಿಗಳನ್ನು ಪೂರೈಸಿದ್ದೇವೆ. ಜನರ ನಿರೀಕ್ಷೆಗಳಿಗೆ ತಕ್ಕಂತೆ ಆಡಳಿತ ನಡೆಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ಎಂದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

    ಕಂದಾಯ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಿರುವ 9.65 ಕೋಟಿ ರೂ. ವೆಚ್ಚದ ನೂತನ ಆಡಳಿತ ಸೌಧವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
    ನಮ್ಮ ಗ್ಯಾರಂಟಿಯನ್ನು ನಂಬಿ ನೀವು ನಮಗೆ ಅಧಿಕಾರ ನೀಡಿದ್ದೀರಿ. ನೀವು ನೀಡಿದ ಅಧಿಕಾರವನ್ನು ಜನರಿಗಾಗಿ ಸದ್ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಹಿಂದಿನ ಸರ್ಕಾರ ಚುನಾವಣೆ ಪೂರ್ವದಲ್ಲಿ ನಾರಾಯಣಗುರು ವಸತಿ ಶಾಲೆಗೆ 12 ಕೋಟಿ ರೂ. ಮಂಜೂರು ಮಾಡಿತ್ತು. ಆದರೆ ಬಿಡುಗಡೆ ಮಾಡಿರಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 18 ಕೋಟಿ ರೂ. ಮಂಜೂರು ಮಾಡಿದ್ದಾರೆ. ಮಹಿಳೆಯರಿಗೆ ಶಕ್ತಿ ಯೋಜನೆ, ಕುಟುಂಬಕ್ಕೆ ಅನುಕೂಲವಾಗುವಂತೆ ಗೃಹಜ್ಯೋತಿ ಯೋಜನೆ ಜಾರಿಗೆ ತಂದಿದೆ ಎಂದರು.
    ಕಾಗೋಡು ತಿಮ್ಮಪ್ಪ ಅವರು ಆಡಳಿತ ಸೌಧ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಅವರ ಉಪಸ್ಥಿತಿಯಲ್ಲೇ ನೂತನ ಕಟ್ಟಡ ಉದ್ಘಾಟನೆ ಮಾಡಲಾಗಿದೆ. ಜನರ ಕೆಲಸ, ಸಮಸ್ಯೆಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು. ರಾಜ್ಯ ಸರ್ಕಾರ ಉತ್ತಮ ಕೆಲಸ ಮಾಡಬೇಕಾದರೆ ಕೇಂದ್ರ ಸರ್ಕಾರದ ಸಹಾಯವೂ ಅಗತ್ಯ. ಮುಂದಿನ ದಿನಗಳಲ್ಲಿ ಅದಕ್ಕೆ ಧ್ವನಿಯಾಗುವ ವ್ಯಕ್ತಿಯನ್ನು ಆಯ್ಕೆ ಮಾಡುವತ್ತ ನಾವು ಗಮನ ಹರಿಸಬೇಕು ಎಂದರು.
    ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಸಾಗರ ದಿನೇದಿನೆ ಬೆಳೆಯುತ್ತಿದೆ. ಅಂದು ಮಾವನ ಆಡಳಿತ ಸೌಧ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದು, ಇದೀಗ ಅಳಿಯನ ಅವಧಿಯಲ್ಲಿ ಲೋಕಾರ್ಪಣೆಯಾಗಿದೆ. ಮೂಲ ಸೌಲಭ್ಯಕ್ಕಾಗಿ 5.20 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
    ಕಳೆದ ಅವಧಿಯಲ್ಲಿ ಸರ್ಕಾರ ಮಿನಿ ವಿಧಾನ ಸೌಧಕ್ಕೆ ನಯಾಪೈಸೆಯನ್ನೂ ಬಿಡುಗಡೆ ಮಾಡಲಿಲ್ಲ. ಕಾಗೋಡು ತಿಮ್ಮಪ್ಪ ಕಂದಾಯ ಸಚಿವರಾಗಿದ್ದಾಗ 9.65 ಕೋಟಿ ರೂ. ಬಿಡುಗಡೆ ಮಾಡಿಸಿದ್ದರು. ಮಾವ ಹಣ ಬಿಡುಗಡೆ ಮಾಡಿಸಿದ್ದು, ಈಗ ಅಳಿಯ ಗೋಪಾಲ ಕೃಷ್ಣ ಬೇಳೂರು ಉದ್ಘಾಟನೆ ಮಾಡುವ ಯೋಗ ದೊರೆತಿದೆ. ನಾನು ಸಹ ಇದರ ಅಭಿವೃದ್ದಿಗೆ ಹೆಚ್ಚುವರಿಯಾಗಿ 5 ಕೋಟಿ ರೂ. ಹಣ ಮಂಜೂರು ಮಾಡಿಸಿದ್ದು ಶೀಘ್ರ ಬಿಡುಗಡೆಯಾಗಲಿದೆ ಎಂದರು.
    ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಉಪವಿಭಾಗಾಧಿಕಾರಿ ಆರ್.ಯತೀಶ್, ತಹಶೀಲ್ದಾರ್ ಕಲೀಂವುಲ್ಲಾ ಖಾನ್, ಪಿಡಬ್ಲುೃಡಿ ಎಇಇ ಮಂಜುನಾಥ್, ನಾಗೇಶ್ ಬ್ಯಾಲದ್, ಬಿ.ಎನ್.ಮಂಜುನಾಥ್, ಡಿ.ತುಕಾರಾಂ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts