More

    Web Exclusive | ಹಾಲೇಬೇಲೂರಿನಲ್ಲಿ ಸಿಕ್ಕಿದ್ದ ಪುರಾತನ ಮೂರ್ತಿ, ವಾಸುದೇವ: ಸಂಶೋಧಕ ಡಾ.ಎನ್. ರಮೇಶ್

    | ಮಂಜು ಬನವಾಸೆ ಹಾಸನ

    ಸಕಲೇಶಪುರ ತಾಲೂಕಿನ ಹಾಲೇಬೇಲೂರಿನಲ್ಲಿ ಮರಳು ಗಣಿಗಾರಿಕೆ ವೇಳೆ ಪತ್ತೆಯಾಗಿರುವ ಪುರಾತನ ವಿಗ್ರಹ ಚನ್ನಕೇಶವಸ್ವಾಮಿಯದ್ದಲ್ಲ, ಬದಲಿಗೆ ಅದು ವಿಷ್ಣುವಿನ ಅವತಾರಗಳಲ್ಲಿ ಒಂದಾದ ವಾಸುದೇವನದು ಎಂದು ಇತಿಹಾಸ ಸಂಶೋಧಕ, ಹಿರಿಯ ಶಸ್ತ್ರಚಿಕಿತ್ಸಕ ಡಾ.ಎನ್. ರಮೇಶ್ ಬೆಳಕು ಚೆಲ್ಲಿದ್ದಾರೆ. ಬಿ.ಎಲ್.ರೈಸ್ ಅವರ ಎಪಿಗ್ರಫಿ ಆಫ್ ಕರ್ನಾಟಕ ಹಾಗೂ ಹಿರಿಯ ಇತಿಹಾಸ ತಜ್ಞ ಶೀತನ ಶಾಸ್ತ್ರಿಗಳ ಬರಹಗಳಲ್ಲಿ ಹಾಲೇಬೇಲೂರಿನ ವಾಸುದೇವ ದೇವಾಲಯದ ಶಾಸನದ ವಿವರಗಳು ಉಲ್ಲೇಖವಾಗಿರುವ ಮಾಹಿತಿಯನ್ನು ಅವರು ತೆರೆದಿಟ್ಟಿದ್ದಾರೆ.

    ಕದಂಬ ರಾಣಿ ಕಟ್ಟಿಸಿದ ದೇವಾಲಯ: ಹಾಲೇಬೇಲೂರಿನಲ್ಲಿ ಸಿಕ್ಕಿರುವ ಶಿಲಾಶಾಸನ ವಾಸುದೇವನ ವಿಗ್ರಹ ಪ್ರತಿಷ್ಠಾಪನೆ ಹಾಗೂ ದೇವಾಲಯ ನಿರ್ವಣದ ಬಗ್ಗೆ ಖಚಿತವಾದ ಮಾಹಿತಿಯನ್ನು ಒಳಗೊಂಡಿದೆ. ಕದಂಬ ವಂಶದ ರಾಣಿ, ದುದ್ದರಸನ ಪತ್ನಿ, ಮಹಾಪರಾಕ್ರಮಿ ದಯಾಸಿಂಹನ ತಾಯಿ ಮೇಚಲಾದೇವಿ ಹಿಂದು ದಿನಾಂಕ ಶ್ರೀ ಶಕ ವರ್ಷ1017 ಯುವ ಸಂವತ್ಸರ ಚೈತ್ರ ಶುದ್ಧ ಬುಧವಾರ (ಕ್ರಿ.ಶ.1095ರ ಮಾರ್ಚ್ 14) ದೇವಾಲಯದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಹಾಲೇಬೇಲೂರಿನ ಗ್ರಾಮದ ಮೂಲ ಹೆಸರು ಹಾರುವ ಬೆಲಹೂರುಷ, ದೇವತಾ ಮೂರ್ತಿ ವಾಸುದೇವ ಎನ್ನುವ ಮಾಹಿತಿ ಅದರಲ್ಲಿದೆ.

    ಮೇಚಲಾದೇವಿ ಮೇಚಲ ಸಮುದ್ರ ಎನ್ನುವ ಕೆರೆಯನ್ನೂ ಕಟ್ಟಿಸಿದ್ದಾರೆ. ದೇವಾಲಯವನ್ನು ಕಟ್ಟಿಸಿ ಶ್ರೀ ವಾಸುದೇವನ ಪ್ರತಿಷ್ಠೆ ಮಾಡಿಸಿದ್ದಾರೆ. ದೇವರಿಗೆ ಭೋಗ, ಪೂಜಾ ವಿಧಿಗಳಿಗಾಗಿ ಹುಣಸೆಗದ್ದೆಯನ್ನು ಆಕೆ ಹೊನ್ನುಕೊಟ್ಟು ಖರೀದಿಸಿ ದೇವಾಲಯಕ್ಕೆ ಕೊಟ್ಟಿದ್ದಾಳೆ. ಅಲ್ಲದೆ ಕುಂಬಾರಹಳ್ಳಿಯನ್ನು ದೇವರ ಬ್ರಹ್ಮಹಳ್ಳಿ ಎಂದು ಮರುನಾಮಕರಣ ಮಾಡಿ ಐವರು ಬ್ರಾಹ್ಮಣರಿಗೆ ದತ್ತಿ ನೀಡಿದ್ದಾರೆ ಎಂದು ಬರೆಯಲಾಗಿದೆ.

    ಕೇಶವನಲ್ಲ, ವಾಸುದೇವ: ಹಾಲೇ ಬೇಲೂರಿನಲ್ಲಿ ದೊರಕಿರುವ ವಿಗ್ರಹ ಚನ್ನಕೇಶವನದ್ದಲ್ಲ, ಬದಲಿಗೆ ಅದು ವಾಸುದೇವನದ್ದು ಎನ್ನುವ ಡಾ.ರಮೇಶ್, ಇದಕ್ಕಾಗಿ ಎಪಿಗ್ರಫಿ ಆಫ್ ಕರ್ನಾಟಕದಲ್ಲಿನ ಶಾಸನವನ್ನು ಉಲ್ಲೇಖಿಸುವ ಜತೆಗೆ ಬೇಲೂರಿನ ಚನ್ನಕೇಶವಸ್ವಾಮಿ ವಿಗ್ರಹ ಹಾಗೂ ಈಗ ದೊರಕಿರುವ ವಿಗ್ರಹದಲ್ಲಿನ ಭಿನ್ನತೆಗಳನ್ನು ವಿಶ್ಲೇಷಿಸಿದ್ದಾರೆ. ಚನ್ನಕೇಶವನ ವಿಗ್ರಹದಲ್ಲಿ ಗದೆ ಎಡಗೈನಲ್ಲಿದ್ದರೆ, ವಾಸುದೇವನ ಬಲಗೈನಲ್ಲಿ ಗದೆಯಿದೆ. ವಿಗ್ರಹದ ಪಕ್ಕದಲ್ಲಿ ತಿಭಂಗಿಯಲ್ಲಿ ನಿಂತಿರುವ ಮನುಷ್ಯನ ಚಿತ್ರವಿದೆ. ಎಡಗಡೆ ಒಂದು ಹಸು-ಕರು ಚಿತ್ರವಿದ್ದು ಪೂಜಾರ್ಹವಾಗಿರುವ ಮೂರ್ತಿ ಎನ್ನುತ್ತಾರವರು.

    Web Exclusive | ಹಾಲೇಬೇಲೂರಿನಲ್ಲಿ ಸಿಕ್ಕಿದ್ದ ಪುರಾತನ ಮೂರ್ತಿ, ವಾಸುದೇವ: ಸಂಶೋಧಕ ಡಾ.ಎನ್. ರಮೇಶ್
    ವಾಸುದೇವನ ವಿಗ್ರಹ

    ಮರಳು ಸೇರಿದ್ದು ಹೇಗೆ?: ದಯಾಸಿಂಹನಂತಹ ಪರಾಕ್ರಮಿ ಎಂದು ಬಣ್ಣಿಸಿರುವ ರಾಜನ ತಾಯಿ ಪ್ರತಿಷ್ಠಾಪಿಸಿದ ಮೂರ್ತಿ ಮರಳು ಸೇರಿದ್ದು ಹೇಗೆ ಎನ್ನುವ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲದಿರುವುದರಿಂದ ಈ ಬಗ್ಗೆ ಹೆಚ್ಚಿನ ಸಂಶೋಧನೆ ಅಗತ್ಯವಾಗಿದೆ. ಸಾಮಾಜಿಕ ಸ್ಥಿತ್ಯಂತರಗಳು, ಇಲ್ಲವೇ ದಾಳಿಕೋರರ ಲೂಟಿಗಳ ಸಮಯದಲ್ಲಿ ವಿಗ್ರಹವನ್ನು ರಕ್ಷಿಸಲು ಸ್ಥಳೀಯರು ಅದನ್ನು ಮರಳಿನಲ್ಲಿ ಹೂತಿಟ್ಟು ಪಲಾಯನ ಮಾಡಿರುವ ಸಾಧ್ಯತೆಯೂ ಇದೆ. ಶಿಲಾಶಾಸನದಲ್ಲಿ ಕೇವಲ ವಾಸುದೇವ ಮೂರ್ತಿಯ ವಿಗ್ರಹವಿದ್ದು, ಉತ್ಖನನ ನಡೆದರೆ ಇನ್ನಷ್ಟು ವಿಗ್ರಹ, ದೇವಾಲಯಗಳ ಪಳೆಯುಳಿಕೆ ದೊರೆತು ಜಿಲ್ಲೆಯ ಇತಿಹಾಸದ ಮೇಲೆ ಇನ್ನಷ್ಟು ಬೆಳಕು ಚೆಲ್ಲುವ ಸಾಧ್ಯತೆಯೂ ಇದೆ.

    ಕದಂಬರು ಆಳಿದ್ದರೇ?: ಹಾಲೇಬೇಲೂರಿನ ಶಿಲಾ ಶಾಸನದಲ್ಲಿ ವಾಸುದೇವ ವಿಗ್ರಹವನ್ನು ಪ್ರತಿಷ್ಠಾಪಿಸಿರುವ ರಾಣಿ ಮೇಚಲಾದೇವಿಯನ್ನು ಕದಂಬ ವಂಶದ ರಾಣಿ ಎಂದು ಉಲ್ಲೇಖಿಸಿರುವುದು ಹೊಯ್ಸಳ ವಾಸ್ತುಶಿಲ್ಪವನ್ನು ಹೊಂದಿರುವ ವಾಸುದೇವ ವಿಗ್ರಹವನ್ನು ಕದಂಬರು ಪ್ರತಿಷ್ಠಾಪಿಸಿದರೆ ಎನ್ನುವ ಪ್ರಶ್ನೆ ಹುಟ್ಟುಹಾಕಿದೆ.

    Web Exclusive | ಹಾಲೇಬೇಲೂರಿನಲ್ಲಿ ಸಿಕ್ಕಿದ್ದ ಪುರಾತನ ಮೂರ್ತಿ, ವಾಸುದೇವ: ಸಂಶೋಧಕ ಡಾ.ಎನ್. ರಮೇಶ್
    ಸಕಲೇಶಪುರ ತಾಲೂಕು ಹಾಲೇಬೇಲೂರಿನಲ್ಲಿರುವ ಶಿಲಾಶಾಸನ

    ಹಾಲೇಬೇಲೂರಿನಲ್ಲಿ ದೊರಕಿರುವ ವಾಸುದೇವನ ವಿಗ್ರಹ ಹಾಗೂ ಅಲ್ಲಿನ ದೇವಾಲಯದ ಬಗ್ಗೆ ಇನ್ನಷ್ಟು ಸಂಶೋಧನೆಗಳು ನಡೆಯಬೇಕು. ಪುರಾತತ್ವ ಇಲಾಖೆ ಇತ್ತ ಗಮನಹರಿಸಬೇಕು. ವಿಗ್ರಹಕ್ಕೆ ಯಾವುದೇ ಧಕ್ಕೆಯೂ ಆಗದಿರುವುದರಿಂದ ಅದು ಪೂಜಾರ್ಹವಾಗಿದ್ದು, ಅದು ಅಲ್ಲಿಯೇ ಪ್ರತಿಷ್ಠಾಪನೆಗೊಂಡು ನಿತ್ಯ ಪೂಜೆಗಳು ನೆರವೇರಬೇಕು.

    | ಡಾ.ಎನ್.ರಮೇಶ್ ಇತಿಹಾಸ ಸಂಶೋಧಕ, ಶ್ರಸ್ತ್ರಚಿಕಿತ್ಸಾ ತಜ್ಞ

    Web Exclusive | ಹಾಲೇಬೇಲೂರಿನಲ್ಲಿ ಸಿಕ್ಕಿದ್ದ ಪುರಾತನ ಮೂರ್ತಿ, ವಾಸುದೇವ: ಸಂಶೋಧಕ ಡಾ.ಎನ್. ರಮೇಶ್
    ಎಪಿಗ್ರಫಿ ಆಫ್ ಕರ್ನಾಟಕದಲ್ಲಿ ಉಲ್ಲೇಖವಾಗಿರುವ ಹಾಲೇ ಬೇಲೂರಿನ ವಾಸುದೇವ ದೇವಾಲಯ ಪ್ರತಿಷ್ಠಾಪನೆ ಸಮಾರಂಭ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts