More

    ಬಿಎಸ್​ವೈ-ಅಮಿತ್ ಷಾ ಭೇಟಿ, ಬಿಜೆಪಿಯಲ್ಲಿ ಸಂಚಲನ ಸೃಷ್ಟಿ: ಯಡಿಯೂರಪ್ಪ ನಿವಾಸದಲ್ಲಿ ಉಪಾಹಾರ ಕೂಟ

    ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಷಾ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನಿವಾಸಕ್ಕೆ ಶುಕ್ರವಾರ ಆಗಮಿಸಿ ಉಪಾಹಾರ ಸೇವಿಸುವುದರೊಂದಿಗೆ ಬಿ.ವೈ. ವಿಜಯೇಂದ್ರರ ಬೆನ್ನು ತಟ್ಟಿ ಪ್ರೋತ್ಸಾಹ ನೀಡಿರುವುದು ಬಿಜೆಪಿಯಲ್ಲಿ ಸಂಚಲನ ಸೃಷ್ಟಿಸಿದೆ.

    ಯಡಿಯೂರಪ್ಪ ಅವರ ಸರ್ಕಾರಿ ನಿವಾಸ ಕಾವೇರಿಗೆ ಬೆಳಗ್ಗೆ ಉಪಹಾರಕ್ಕೆ ಷಾ ಆಗಮಿಸುವುದರೊಂದಿಗೆ ಮುಂದಿನ ಚುನಾವಣೆಗೆ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿದರು. ಆ ಮೂಲಕ ಪಕ್ಷದಲ್ಲಿ ಈಗಲೂ ಯಡಿಯೂರಪ್ಪ ಅವರೇ ಸುಪ್ರೀಂ ಎಂದು ಅವರ ವಿರೋಧಿ ಬಣಕ್ಕೆ ಸ್ಪಷ್ಟ ಸಂದೇಶ ರವಾನೆ ಮಾಡಿದರು.

    ಅಮಿತ್ ಷಾ ಅವರು ಯಡಿಯೂರಪ್ಪ ಅವರೊಂದಿಗೆ ಪ್ರಸಕ್ತ ರಾಜಕೀಯ ವಿದ್ಯಮಾನಗಳು, ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ತರುವ ಕುರಿತಂತೆ ಮಾತುಕತೆ ನಡೆಸಿರುವುದು ಬಿಜೆಪಿ ವಲಯದಲ್ಲಿ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

    ಬಿಜೆಪಿಯಲ್ಲಿ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಅವರನ್ನು ಕಡೆಗಣಿಸಲಾಗುತ್ತದೆ ಎಂಬ ಗುಮಾನಿಗಳಿದ್ದವು. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ನೇರವಾಗಿಯೆ ಟಿಕೆಟ್ ಹಂಚಿಕೆ ಯಡಿಯೂರಪ್ಪ ಅವರ ಕಿಚನ್ ಕ್ಯಾಬಿನೆಟ್​ನಲ್ಲಿ ತೀರ್ವನವಾಗುವುದಿಲ್ಲವೆಂದು ಹೇಳಿದ್ದರು. ಅದು ಯಡಿಯೂರಪ್ಪ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೇ ಪರಿಸ್ಥಿತಿ ಮುಂದುವರಿದರೆ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬುದನ್ನು ಅರಿತುಕೊಂಡೆ ಷಾ ಅವರೇ ಮುಂದಾಗಿ ಯಡಿಯೂರಪ್ಪ ಮನೆಗೆ ಭೇಟಿ ನೀಡಿದರು. ಆ ಮೂಲಕ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಾಗಿರುವ ಯಡಿಯೂರಪ್ಪ ಅವರ ಅಸಮಾಧಾನ ತಣಿಸುವ ಕೆಲಸ ಮಾಡಿದರು. ಅದು ಯಡಿಯೂರಪ್ಪ ವಿರೋಧಿ ಬಣದ ಸಂತೋಷವನ್ನು ಕಸಿದಿದೆ ಎಂದೇ ಪಕ್ಷದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.

    ಇದನ್ನೂ ಓದಿ: ಬೆರಳ ತುದಿಯಲ್ಲೇ ಇದೆ ಬದಲಿಸುವ ಶಕ್ತಿ; ಚುನಾವಣೆ ಸುಧಾರಣೆಗೆ ಆಗಲಿ ಬದಲಾವಣೆ..

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ, ಸಚಿವರಾದ ಗೋವಿಂದ ಕಾರಜೋಳ, ಬಿ. ಶ್ರೀರಾಮುಲು, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್​ಸಿಂಗ್ ಮತ್ತಿತರ ಜತೆ ಷಾ ಉಪಹಾರ ಸ್ವೀಕರಿಸಿದರು. ಈ ವೇಳೆ ಎಲ್ಲರಿಗೂ ವಿಜಯೇಂದ್ರ ಅವರೇ ಉಪಹಾರ ಬಡಿಸಿದ್ದು ಗಮನಸೆಳೆಯಿತು. ಇಡ್ಲಿ, ದೋಸೆ, ಪೊಂಗಲ್, ರಸಮಲೈ ಸ್ವೀಕರಿಸಿದರು. ಆ ಮೂಲಕ ಯಡಿಯೂರಪ್ಪ ಅವರನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಗುಮಾನಿಗಳಿಗೆಲ್ಲ ತೆರೆ ಎಳೆದರು.

    ಏನೇನು ಚರ್ಚೆ: ಯಡಿಯೂರಪ್ಪ ನಿವಾಸದಲ್ಲಿ ರಾಜ್ಯ ನಾಯಕರ ಜೊತೆ ಅಮಿತ್ ಷಾ ಅವರು ರಾಜಕೀಯ ಬೆಳವಣಿಗೆ ಕುರಿತು ಮಾತುಕತೆ ನಡೆಸಿದ್ದಾರೆ. ಚುನಾವಣಾ ಪ್ರಚಾರ, ಟಿಕೆಟ್ ಹಂಚಿಕೆ, ಪ್ರಣಾಳಿಕೆ ಸಿದ್ಧಪಡಿಸುವುದು, ಯಾವ ನಾಯಕರು ಎಲ್ಲೆಲ್ಲಿ ಪ್ರಚಾರ ನಡೆಸಬೇಕು ಎಂಬ ವಿಚಾರಗಳು ಸೇರಿ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

    ಅಮಿತ್ ಷಾ ಅವರು ನನ್ನ ಬೆನ್ನು ತಟ್ಟಿರುವುದು ನನಗೆ ಆನೆ ಬಲ ಬಂದಂತೆ ಆಗಿದೆ. ಯಡಿಯೂರಪ್ಪ ಅವರಿಗೆ ಯಾವುದೇ ಅಸಮಾಧಾನ ಇಲ್ಲ, ಹಿಂದಿನ ಬದ್ಧತೆಯಲ್ಲಿಯೇ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದಾರೆ. ನಾನು ಶಿಕಾರಿಪುರ ಕ್ಷೇತ್ರದಲ್ಲಿಯೇ ಸ್ಪರ್ಧೆ ಮಾಡಲು ಉದ್ದೇಶಿಸಿದ್ದೇನೆ. ಈಗಾಗಲೆ ಒಂದು ಸುತ್ತು ಕ್ಷೇತ್ರ ಪ್ರವಾಸ ಮಾಡಿದ್ದೇನೆ. ಆದರೂ ವರಿಷ್ಠರು ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.

    | ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯ ಉಪಾಧ್ಯಕ್ಷ

    ವಿಜಯೇಂದ್ರ ಬೆನ್ನು ತಟ್ಟಿದ ಷಾ

    ಬಿಎಸ್​ವೈ-ಅಮಿತ್ ಷಾ ಭೇಟಿ, ಬಿಜೆಪಿಯಲ್ಲಿ ಸಂಚಲನ ಸೃಷ್ಟಿ: ಯಡಿಯೂರಪ್ಪ ನಿವಾಸದಲ್ಲಿ ಉಪಾಹಾರ ಕೂಟಕಾವೇರಿ ನಿವಾಸಕ್ಕೆ ಆಗಮಿಸುತ್ತಿದ್ದಂತೆ ಅಮಿತ್ ಷಾ ಅವರನ್ನು ಯಡಿಯೂರಪ್ಪ ಹೂಗುಚ್ಚ ನೀಡಿ ಬರಮಾಡಿಕೊಳ್ಳಲು ಮುಂದಾದರು. ಈ ವೇಳೆ ಹೂಗುಚ್ಛವನ್ನು ವಿಜಯೇಂದ್ರ ಅವರಿಂದ ಕೊಡಿಸಿ ಎಂದು ಬಿಎಸ್​ವೈಗೆ ಷಾ ಸೂಚನೆ ನೀಡಿದರು. ನಂತರ ವಿಜಯೇಂದ್ರ ಅವರಿಂದ ಹೂಗುಚ್ಚ ಸ್ವೀಕರಿಸಿ ಭುಜದ ಮೇಲೆ ಕೈ ಹಾಕಿ ಬೆನ್ನು ತಟ್ಟಿದ್ದು ವಿಶೇಷವಾಗಿತ್ತು. ಯಾವ ಯಾವ ಮೋರ್ಚಾಗಳ ಸಭೆಗಳನ್ನು ಎಷ್ಟರ ಮಟ್ಟಿಗೆ ನಡೆಸಿದ್ದೀರಿ, ಸಂಘಟನೆ ಹೇಗಿದೆ ಎಂಬ ಬಗ್ಗೆ ಉಸ್ತುವಾರಿಯಾಗಿರುವ ವಿಜಯೇಂದ್ರ ಅವರಿಂದ ಕೇಳಿ ಷಾ ತಿಳಿದುಕೊಂಡರು.

    ಪ್ಯಾನ್-ಆಧಾರ್ ಲಿಂಕ್​, ಮಾ. 31 ಕಡೇ ದಿನ: ಸ್ಟೇಟಸ್​ ಚೆಕ್ ಮಾಡಿಕೊಳ್ಳುವುದು ಹೇಗೆ?

    ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ; ತುಟ್ಟಿ ಭತ್ಯೆ ಶೇ. 4 ಹೆಚ್ಚಳ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts