More

    ಜಗದಗಲ| ಕೊಲ್ಲಿಯಲ್ಲಿ ಕೊನೆಯಿಲ್ಲದ ಅಮೆರಿಕದ ಹಸ್ತಕ್ಷೇಪ

    ಹಿಟ್ಲರ್ ಸೋವಿಯೆತ್-ವಿರೋಧಿ ಹೇಳಿಕೆಗಳನ್ನು ಪುಂಖಾನುಪುಂಖವಾಗಿ ನೀಡುತ್ತಲೇ, ತನಗೆ ಬೇಕಾದ್ದೆಲ್ಲವನ್ನೂ ಗಳಿಸಿಕೊಂಡು, ಕೊನೆಗೆ ಮಾಸ್ಕೋದ ಜತೆಗೇ ಮಿತ್ರತ್ವ ಸಾಧಿಸಿ ಬ್ರಿಟನ್, ಫ್ರಾನ್ಸ್ ಹಾಗೂ ಅಮೆರಿಕಗಳ ವಿರುದ್ಧವೇ ತಿರುಗಿಬಿದ್ದಾಗ ಅವು ಇಂಗು ತಿಂದ ಮಂಗನಂತಾದದ್ದೂ ಐತಿಹಾಸಿಕ ಸತ್ಯ.

    ಜಗದಗಲ| ಕೊಲ್ಲಿಯಲ್ಲಿ ಕೊನೆಯಿಲ್ಲದ ಅಮೆರಿಕದ ಹಸ್ತಕ್ಷೇಪ2001 ಸೆಪ್ಟೆಂಬರ್ 11ರಂದು ನ್ಯೂಯಾರ್ಕ್​ನ ವಿಶ್ವ ವ್ಯಾಪಾರ ಕೇಂದ್ರ ಮತ್ತು ವಾಷಿಂಗ್​ಟನ್​ನಲ್ಲಿರುವ ಅಮೆರಿಕದ ರಕ್ಷಣಾ ಇಲಾಖೆಯ ಕಾರ್ಯಾಲಯವಾದ ಪೆಂಟಗನ್ ಮೇಲೆ ಅಲ್-ಖಯೀದಾ ಮೂಲಭೂತವಾದಿಗಳು ದಾಳಿಯೆಸಗಿದ ನಂತರ ಅಂತಾರಾಷ್ಟ್ರೀಯ ಭಯೋತ್ಪಾದನೆಯ ವಿರುದ್ಧ ಸಮರ ಘೊಷಿಸಿದ ಅಧ್ಯಕ್ಷ ಜಾರ್ಜ್ ಬುಷ್ ಜ್ಯೂನಿಯರ್ ಹೇಳಿದ್ದು: ‘ಈ ಸಮರ ಹಲವಾರು ಪ್ರದೇಶಗಳಲ್ಲಿ, ಹಲವಾರು ವರ್ಷಗಳವರೆಗೆ ಸಾಗುತ್ತದೆ’. ಬುಷ್ ಹೇಳಿದಂತೆ ಹದಿನೆಂಟು ವರ್ಷಗಳ ಹಿಂದೆ ಅಫ್ಘಾನಿಸ್ತಾನದಲ್ಲಿ ಆರಂಭವಾದ ಈ ಸಮರ ಇರಾಕ್​ಗೆ ಹಬ್ಬಿ ಈಗ ಇರಾನ್​ನ ಬಾಗಿಲಿಗೆ ಬಂದು ನಿಂತಿದೆ. ಕಳೆದವಾರದ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಬಂದ ಕೆಲವು ಪ್ರಶ್ನೆಗಳು ಈ ನಿರಂತರ ಯುದ್ಧದ ಮೂಲದ ಕುರಿತಾಗಿದ್ದವು. ಅವುಗಳಿಗೆ ಉತ್ತರಿಸುವ ಪ್ರಯತ್ನವನ್ನು ಎರಡು ಭಾಗಗಳ ಈ ಲೇಖನದಲ್ಲಿ ಮಾಡುತ್ತಿದ್ದೇನೆ.

    ದ್ವಿತೀಯ ಮಹಾಯುದ್ಧದಲ್ಲಿ ಜಪಾನ್ ಅನ್ನು ಮಣಿಸಿದ ಅಮೆರಿಕ ಮತ್ತೆ ತನ್ನ ಸೇನೆಯೊಂದಿಗೆ ಏಷ್ಯಾ ಖಂಡಕ್ಕೆ ಧಾವಿಸಿದ್ದು 1965ರಲ್ಲಿ, ವಿಯೆಟ್ನಾಂಗೆ. 1950-60ರ ದಶಕಗಳಲ್ಲಿ ಆಗ್ನೇಯ ಏಷ್ಯಾದಲ್ಲಿ ‘ಕಲ್ಪಿತ’ ಶತ್ರುಗಳ ‘ನಿಗ್ರಹ’ಕ್ಕೆಂದು ವಿಯೆಟ್ನಾಂಗೆ ಪ್ರವೇಶಿಸಿದ ಅಮೆರಿಕ ಎಂಟು ವರ್ಷಗಳ ಅಮಾನವೀಯ ಸಮರದ ನಂತರ ಕಳೆದುಕೊಂಡದ್ದು, ಕಾಣೆಯಾದವರೂ ಸೇರಿ, ಐವತೆôದು ಸಾವಿರ ಸೈನಿಕರು! ಖರ್ಚು ಮಾಡಿದ ಹಣ ನೂರೈವತ್ತು ಬಿಲಿಯನ್ ಡಾಲರ್​ಗಳು! ಯುದ್ಧ ಮುಗಿದಾಗ ಅಮೆರಿಕದ ಎಲ್ಲ ಪ್ರಯತ್ನಗಳೂ ವ್ಯರ್ಥವಾಗಿ, ವಿಯೆಟ್ನಾಂನಲ್ಲಿ ಅಮೆರಿಕ ವಿರೋಧಿ ಕಮ್ಯೂನಿಸ್ಟ್ ಪಡೆಗಳು ಮೇಲುಗೈ ಸಾಧಿಸಿ ಅಧಿಕಾರ ಹಿಡಿದವು! ವಿಯೆಟ್ನಾಂ ದುರಂತಕ್ಕೆ ಕಾರಣವಾದ ನಿರ್ಧಾರಗಳನ್ನು ಕೈಗೊಂಡದ್ದು ಹ್ಯಾರಿ ಟ್ರೂಮನ್​ನಿಂದ ರಿಚರ್ಡ್ ನಿಕ್ಸನ್​ವರೆಗೆ ಐವರು ಅಧ್ಯಕ್ಷರುಗಳು. ಆ ಕಾರಣಗಳಿಂದಾಗಿ ವಿಶ್ಲೇಷಣಕಾರ ಜಾನ್ ಸ್ಟೋಯ್ಸಿಂಗರ್​ನಿಂದ ‘ಐದು ಅಂಕಗಳ ಒಂದು ಗ್ರೀಕ್ ದುರಂತ ನಾಟಕ’ ಎಂದು ಬಣ್ಣಿಸಿಕೊಂಡ ವಿಯೆಟ್ನಾಂ ಯುದ್ಧದ ಮರುಕಳಿಕೆಯಂತೆ ಅಫ್ಘಾನಿಸ್ತಾನ ಮತ್ತು ಇರಾಕ್​ನಲ್ಲೂ ಅಮೆರಿಕದ ಎಲ್ಲ ಪ್ರಯತ್ನಗಳೂ ವ್ಯರ್ಥವಾಗಿ, ಅದರ ವಿರೊಧಿಗಳು ಮೇಲುಗೈ ಸಾಧಿಸುವ ಸ್ಥಿತಿ ನಿರ್ವಣವಾಗಿದೆ. ಒಂದೇ ವ್ಯತ್ಯಾಸ ವೆಂದರೆ ವಿಯೆಟ್ನಾಂನಲ್ಲಿ ಅಮೆರಿಕ ‘ಕಂಡಿದ್ದ’ ವಿರೋಧಿಗಳು ಉಳಿದ ಜಗತ್ತಿಗೇನೂ ವಿರೋಧಿ ಗಳಾಗಿರಲಿಲ್ಲ, ಆದರೆ ಅಫ್ಘಾನಿಸ್ತಾನ ಮತ್ತು ಇರಾಕ್​ನಲ್ಲಿನ ಅಮೆರಿಕ-ವಿರೋಧಿಗಳು ವಿಶ್ವಶಾಂತಿಗೇ ಪಿಡುಗಾಗಿದ್ದಾರೆ.

    ಪರ್ಶಿಯನ್ ಕೊಲ್ಲಿ ಪ್ರದೇಶದಲ್ಲಿ ಇಂದಿನ ಅಮೆರಿಕನ್ ಮಿಲಿಟರಿ ಕಾರ್ಯಾ ಚರಣೆಯ ಮೂಲವನ್ನು ಶೋಧಿಸಬೇಕಾದರೆ ನಾವು ನಾಲ್ಕು ದಶಕಗಳ ಹಿಂದಕ್ಕೆ ಹೋಗಬೇಕು. ಅದೆಲ್ಲವೂ ಆರಂಭವಾದದ್ದು 1979ರಲ್ಲಿ ಇರಾನ್​ನಲ್ಲಿ ಅಮೆರಿಕದ ಮಿತ್ರ ಷಾ ಪತನಗೊಂಡು ಇಸ್ಲಾಮಿಕ್ ಮೂಲಭೂತವಾಗಿ ಅಯಾತೊಲ್ಲಾ ಖೊಮೇನಿ ಅಧಿಕಾರಕ್ಕೆ ಬಂದಾಗ. ಪ್ರಾರಂಭದಲ್ಲಿ ಸ್ನೇಹಯುತವಾಗಿಯೇ ಮುಂದುವರಿದ ಇರಾನ್-ಅಮೆರಿಕ ಸಂಬಂಧಗಳು ತೆಹರಾನ್​ನಲ್ಲಿನ ಅಮೆರಿಕನ್ ದೂತಾವಾಸದ ಮೇಲೆ ಇರಾನಿ ರೆವಲ್ಯೂಷನರಿ ಗಾರ್ಡ್ಸ್​ ಆಕ್ರಮಣದಿಂದಾಗಿ ತೀವ್ರವಾಗಿ ಘಾಸಿಗೊಂಡವು. ಇರಾನೀ ಸೈನಿಕರು 52 ಅಮೆರಿಕನ್ನರನ್ನು ಒತ್ತೆಯಾಳುಗಳಾಗಿಟ್ಟುಕೊಂಡದ್ದನ್ನು ಅಮೆರಿಕದ ವಿರುದ್ಧದ ನಡೆ ಎಂದಷ್ಟಲ್ಲದೆ ‘ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ’ ಮತ್ತು ಆ ಕಾರಣದಿಂದಲೇ ಅದು ವಿಶ್ವಶಾಂತಿಗೆ ಮಾರಕ ಎಂದು ಅಮೆರಿಕ ತಿಳಿದರೆ, ಪಶ್ಚಿಮದ ನಾಗರಿಕತೆಗಳ ಮೌಲ್ಯಗಳ ಬಗ್ಗೆ ತೀವ್ರ ಅಸಹನೆ ಹಾಗೂ ಕಡುವಿರೋಧವನ್ನು ಮೈಗೂಡಿಸಿಕೊಂಡಿದ್ದ ಇರಾನಿ ನಾಯಕ ಖೊಮೇನಿ ಪಾಶ್ಚಿಮಾತ್ಯ ನಾಗರಿಕತೆಯ ಸಂಕೇತವಾದ ಅಮೆರಿಕ ವಿರುದ್ಧ ಕಿಡಿ ಕಾರತೊಡಗಿದ. ಮುಂದೆ ವಿಶ್ವಶಾಂತಿಗೆ ಪಿಡುಗಾಗಿ ಬೆಳೆಯಬಹುದಾದ ಈ ಅಮೆರಿಕ-ವಿರೋಧಿ ಇಸ್ಲಾಮಿಕ್ ಮೂಲಭೂತವಾದವನ್ನು ಮೊಳಕೆಯಲ್ಲೇ ಚಿವುಟಿಹಾಕಬೇಕೆಂದು ನಿರ್ಧರಿಸಿದ ಜಿಮ್ಮಿ ಕಾರ್ಟರ್ ಸರ್ಕಾರಕ್ಕೆ ತಕ್ಷಣಕ್ಕೆ ಮಿತ್ರನಾಗಿ ಕಂಡದ್ದು ನೆರೆಯ ಇರಾಕ್​ನ ಅಧ್ಯಕ್ಷ ಸದ್ದಾಂ ಹುಸೇನ್. ಪಶ್ಚಿಮ ಏಷ್ಯಾದಲ್ಲಿ ಮೂಲಭೂತವಾದಿ ಖೊಮೇನಿಯ ಪ್ರಭಾವವನ್ನು ಮಟ್ಟಹಾಕಲು ಇರಾನ್​ನ ಐತಿಹಾಸಿಕ ಶತ್ರುವಾದ ಇರಾಕ್​ನ ಸೆಕ್ಯೂಲರ್ ಸರ್ಕಾರವೇ ಸಮರ್ಪಕ ಎಂದು ಅಮೆರಿಕ ಭಾವಿಸಿತು. ಸದ್ದಾಂ ಹುಸೇನ್ ಒಬ್ಬ ಸರ್ವಾಧಿಕಾರಿಯಾಗಿದ್ದ ಎಂಬ ವಾಸ್ತವ ಆಗ ಗೌಣವಾಗಿಬಿಟ್ಟಿತು. ಹೀಗಾಗಿಯೇ 1980ರ ಸೆಪ್ಟೆಂಬರ್​ನಲ್ಲಿ ಇರಾನ್ ವಿರುದ್ಧ ಸದ್ದಾಂ ಎಸಗಿದ ದಾಳಿಗೆ ಅಮೆರಿಕ ಬೆಂಬಲ ನೀಡಿತು. ಈ ಇರಾನ್-ಇರಾಕ್ ಸಮರ ಅಮೆರಿಕ-ವಿರೋಧಿ ಖೊಮೇನಿ ಸರ್ಕಾರವನ್ನು ನಿರ್ವೀರ್ಯಗೊಳಿಸುತ್ತದೆ ಹಾಗೂ ತನ್ಮೂಲಕ ಪಶ್ಚಿಮ ಏಷ್ಯಾದಲ್ಲಿ ಅಮೆರಿಕ-ವಿರೋಧಿ ಭಾವನೆಗಳು ಮತ್ತು ವಿಶ್ವಶಾಂತಿಗೆ ಬರಬಹುದಾದ ಪಿಡುಗುಗಳು ಕ್ಷೀಣಗೊಳ್ಳುತ್ತವೆ ಎಂದು ಜಿಮ್ಮಿ ಕಾರ್ಟರ್ ಸರ್ಕಾರ ಭಾವಿಸಿತು. ಸದ್ದಾಂ ಹುಸೇನ್ ಇರಾನ್​ನೊಡನೆ ನಡೆಸುತ್ತಿರುವುದು ‘ಪಶ್ಚಿಮದ ಸಮರ’ ಅಂದರೆ ಅಮೆರಿಕ ಪರವಾದ ಸಮರ ಎಂದು ಕಾರ್ಟರ್ ಸರ್ಕಾರ ತಿಳಿಯಿತು. ಆದರೆ ಆ ಸಮಯದಲ್ಲಿ ಅಮೆರಿಕ ಗುರುತಿಸಲಾಗದೇ ಹೋದ ವಾಸ್ತವವೆಂದರೆ ಸದ್ದಾಂ ತನ್ನ ನೆರೆದೇಶದೊಡನೆ ನಡೆಸುತ್ತಿದ್ದುದು ಪಶ್ಚಿಮದ ಸಮರವಾಗಿರಲಿಲ್ಲ, ಬದಲಾಗಿ ‘ಷತ್-ಅಲ್-ಅರಬ್’ ನೆಲ-ಜಲ ಗಡಿಗಳನ್ನು ತನ್ನ ದೇಶಕ್ಕೆ ಅನುಕೂಲಕರವಾಗುವಂತೆ ಮಾರ್ಪಡಿಸುವುದಾಗಿತ್ತು.

    ಅಮೆರಿಕದ ಬೆಂಬಲವನ್ನು ಹಾಗೂ ಈ ಮೊದಲೇ ಘನಿಷ್ಟವಾಗಿದ್ದ ಸೋವಿಯೆತ್ ಸ್ನೇಹವನ್ನೂ ಸದ್ದಾಂ ಚೆನ್ನಾಗಿಯೇ ಬಳಸಿಕೊಂಡ. ಇಷ್ಟಾಗಿಯೂ, ‘ಪ್ರಥಮ ಕೊಲ್ಲಿ ಯುದ್ಧ’ ಎಂದು ಕರೆಸಿಕೊಂಡ ಎಂಟು ವರ್ಷಗಳ ಆ ಯುದ್ಧದಲ್ಲಿ ಮೇಲುಗೈ ಸಾಧಿಸಿದ ಇರಾನ್​ನಿಂದ ತನ್ನ ದೇಶದ ಮಾನವನ್ನೂ, ತನ್ನ ಅಧ್ಯಕ್ಷಸ್ಥಾನವನ್ನೂ ಆತ ಉಳಿಸಿ ಕೊಂಡದ್ದು ಅಮೆರಿಕ ಮತ್ತು ಸೋವಿಯೆತ್ ಯೂನಿಯನ್​ಗಳ ಬೆಂಬಲದಿಂದಲೇ. ಈ ಬೆಂಬಲವೇ ಅವನನ್ನು ಮತ್ತೊಂದು ದುಸ್ಸಾಹಸಕ್ಕೆ ಪ್ರೇರೇಪಿಸಿತು.

    ಇರಾನ್-ಇರಾಕ್ ಸಮರ 1988ರಲ್ಲಿ ಮುಕ್ತಾಯಗೊಂಡ ಎರಡೇ ವರ್ಷಗಳಲ್ಲಿ ಕ್ಷುಲ್ಲಕ ಹಾಗೂ ಅಸಂಬದ್ಧ ಕಾರಣಗಳನ್ನೊಡ್ಡಿ ಸದ್ದಾಂ ನೆರೆಯ ಪುಟ್ಟ ಕುವೈತ್ ಮೇಲೆ ದಾಳಿಯೆಸಗಿ ಅದನ್ನು ಆಕ್ರಮಿಸಿಕೊಂಡು ಅದು ತನ್ನ ದೇಶದ ಹತ್ತೊಂಬತ್ತನೇ ಪ್ರಾಂತ್ಯ ಎಂದು ಘೊಷಿಸಿದ. ಆದರೀಗ ವಿವಿಧ ಕಾರಣಗಳಿಂದಾಗಿ ಅಂತಾರಾಷ್ಟ್ರೀಯ ರಾಜಕಾರಣ ಬದಲಾಗಿತ್ತು. ಇರಾನ್​ನ ಅಮೆರಿಕ-ವಿರೋಧಿ ಭಾವನೆಗಳು ಹೊರರೂಪದಲ್ಲಿ ಕುಸಿದಂತೆ ಕಾಣುತ್ತಿದ್ದವು, ಜತೆಗೆ ಅಮೆರಿಕದ ಜಾಗತಿಕ ವಿರೋಧಿ ಸೋವಿಯೆತ್ ಯೂನಿಯನ್ ಪತನದ ಹಾದಿಯಲ್ಲಿತ್ತು. ಈ ಬದಲಾದ ಸಂದರ್ಭದಲ್ಲಿ ಸದ್ದಾಂನ ಕುವೈತ್ ಆಕ್ರಮಣ ಒಂದು ಅನಗತ್ಯ ಹಾಗೂ ಅಪಾಯಕಾರಿ ಬೆಳವಣಿಗೆಯೆಂದು ತೀರ್ವನಿಸಿ ಅದನ್ನು ತೆರವುಗೊಳಿಸಲು ಅಮೆರಿಕದ ಜಾರ್ಜ್ ಬುಷ್ ಸೀನಿಯರ್ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿತು. ವಿಶ್ವದ ಬಹುತೇಕ ರಾಷ್ಟ್ರಗಳ ಬೆಂಬಲವನ್ನು ಪಡೆದ ಅಮೆರಿಕ ವಿಶ್ವಸಂಸ್ಥೆಯ ಮೂಲಕ ಸದ್ದಾಂನ ಮೇಲೆ ರಾಜತಾತ್ರಿಕ ಒತ್ತಡ ಹಾಕಿತು. ಅವನದಕ್ಕೆ ಸೊಪ್ಪು ಹಾಕದೇಹೋದಾಗ ಮೊದಲೇ ಎಚ್ಚರಿಸಿದ್ದಂತೆ ಅಮೆರಿಕ ನೇತೃತ್ವದ ಅಂತಾರಾಷ್ಟ್ರೀಯ ಸೇನೆ ಇರಾಕ್​ನ ಮೇಲೆ ದಾಳಿಯೆಸಗಿ ಕುವೈತ್ ಅನ್ನು ವಿಮೋಚನೆಗೊಳಿಸಿತು. ಈ ಯುದ್ಧದಲ್ಲಿ ಅಮೆರಿಕಕ್ಕೆ ಸಂಪೂರ್ಣ ಸಹಕಾರ ನೀಡಿದ್ದು ಮುಸ್ಲಿಂ ರಾಷ್ಟ್ರಗಳ ನಾಯಕ ಸೌದಿ ಅರೇಬಿಯಾ.

    ‘ದ್ವಿತೀಯ ಕೊಲ್ಲಿ ಯುದ್ಧ’ ಎಂದು ಕರೆಸಿಕೊಂಡ ಆ ಯುದ್ಧದ ಬಗ್ಗೆ ನಿಮಗೊಂದು ಮುಖ್ಯ ವಿಷಯ ಹೇಳಬೇಕು. ಸದ್ದಾಂನ ಕುವೈತ್ ಆಕ್ರಮಣದಿಂದಾಗಿ ತನಗೆ ಹಾಗೂ ಪಶ್ಚಿಮ ದೇಶಗಳಿಗೆ ತೈಲಪೂರೈಕೆಯಲ್ಲಿ ತಡೆಯುಂಟಾಗುತ್ತದೆ ಎಂದು ಅಮೆರಿಕ ಹೆದರಿದ್ದರಿಂದಲೇ ಅದು ಕಳೆದ ಹತ್ತುವರ್ಷಗಳಿಂದ ತಾನೇ ಸಾಕಿ ಕೊಬ್ಬಿಸಿದ್ದ ಸದ್ದಾಂಗೆ ಮಾರಣಾಂತಿಕ ಪೆಟ್ಟು ಕೊಟ್ಟು ಅವನು ಕುವೈತ್​ನಿಂದ ಕಾಲ್ತೆಗೆಯುವಂತೆ ಮಾಡಿತೆಂದು ಸಾಮಾನ್ಯ ನಂಬಿಕೆ. ಆದರೆ ವಾಸ್ತವ ಸಂಗತಿ ಬೇರೆಯೇ ಇದೆ.

    ಸದ್ದಾಂ ಹುಸೇನ್ 1990 ಆಗಸ್ಟ್ 2ರಂದು ಕುವೈತ್ ಅನ್ನು ಆಕ್ರಮಿಸಿಕೊಂಡ ನಂತರದ ಎರಡು-ಮೂರು ತಿಂಗಳುಗಳಲ್ಲಿ ಅಮೆರಿಕ ಅಲ್ಲದೆ ಯೂರೋಪಿನ ರಾಜಕೀಯ ಹಾಗೂ ರಾಜತಾಂತ್ರಿಕ ವಲಯಗಳಲ್ಲಿ ಮತ್ತೆ ಮತ್ತೆ ಚರ್ಚೆಗೊಳಗಾದ ಪ್ರಶ್ನೆಗಳು ಎರಡು: ಒಂದು-‘ಸದ್ದಾಂ ಹುಸೇನ್ ಪಶ್ಚಿಮ ಏಷ್ಯಾದ ಹಿಟ್ಲರ್ ಆಗಿ ಬೆಳೆಯುತ್ತಿದ್ದಾನೆಯೇ?’ ಎರಡು-‘ಹಿಟ್ಲರ್​ನ ವಿಷಯದಲ್ಲಿ ಪಶ್ಚಿಮದ ರಾಷ್ಟ್ರಗಳು ಮಾಡಿದ ತಪ್ಪನ್ನೇ ಈಗ ಸದ್ದಾಂನ ವಿಷಯದಲ್ಲೂ ಮಾಡುತ್ತಿವೆಯೇ?’ ಈ ಸಂದರ್ಭದಲ್ಲಿ ಬ್ರಿಟನ್​ನ ಮಾಜಿ ಪ್ರಧಾನಮಂತ್ರಿ ವಿನ್​ಸ್ಟನ್ ರ್ಚಚಿಲ್ ಹೇಳಿದ್ದ ಒಂದು ಮಾತು ವ್ಯಾಪಕವಾಗಿ ಚರ್ಚೆಗೊಳಗಾಯಿತು. ಎರಡನೇ ಮಹಾಯುದ್ಧಕ್ಕೆ ರ್ಚಚಿಲ್ ನೇರವಾಗಿ ಬ್ರಿಟನ್ ಸೇರಿದಂತೆ ಪಶ್ಚಿಮದ ರಾಷ್ಟ್ರಗಳನ್ನೇ ದೂಷಿಸಿದ್ದರು. ಅವರ ಪ್ರಕಾರ, ಹಿಟ್ಲರ್ 1935-36ರಲ್ಲಿ ವರ್ಸೆಲ್ಸ್ ಶಾಂತಿ ಒಪ್ಪಂದವನ್ನು ಉಲ್ಲಂಘಿಸಿ ರೈನ್​ಲ್ಯಾಂಡ್​ನಲ್ಲಿ ಸೇನೆಯನ್ನಿರಿಸಿದಾಗ ಪಶ್ಚಿಮದ ರಾಷ್ಟ್ರಗಳು ಸುಮ್ಮನಿದ್ದುದ್ದು ಅವನ ಧೈರ್ಯವನ್ನು ಹೆಚ್ಚಿಸಿತು. ಈ ಧೈರ್ಯವೇ ಅವನು ಮುಂದಿನ ಎರಡೇ ವರ್ಷಗಳಲ್ಲಿ ನೆರೆಯ ಆಸ್ಟ್ರಿಯಾ ಹಾಗೂ ಝೆಕೊಸ್ಲೊವೇಕಿಯಾ ದೇಶಗಳನ್ನು ಆಕ್ರಮಿಸಿಕೊಳ್ಳಲು ಪ್ರೇರೇಪಿಸಿತು. ಬ್ರಿಟನ್ ಮತ್ತು ಫ್ರಾನ್ಸ್ ಆಗಲೂ ಸುಮ್ಮನಿದ್ದುವಷ್ಟೇ ಅಲ್ಲ, ಹಿಟ್ಲರ್​ನ ದುರಾಕ್ರಮಣಗಳನ್ನು ಬಹಿರಂಗವಾಗಿ ಒಪ್ಪಿಕೊಂಡವು! ಇದರಿಂದ ಇನ್ನೂ ಕೊಬ್ಬಿದ ಹಿಟ್ಲರ್ ಸೋವಿಯೆತ್ ಯೂನಿಯನ್ ಜೊತೆಗೂಡಿ ಪೋಲ್ಯಾಂಡ್ ದೇಶವನ್ನು ಹರಿದು ಹಂಚಿಕೊಳ್ಳಲು ಹೊರಟಾಗ ವಾರ್ಸಾದ ಜತೆಗಿನ ತನ್ನ ಒಪ್ಪಂದದ ಕಟ್ಟುಪಾಡಿಗೆ ಒಳಗಾಗಿ ಬ್ರಿಟನ್ ಜರ್ಮನಿಯ ಮೇಲೆ ಯುದ್ಧ ಸಾರಿತು, ಎರಡನೆಯ ಮಹಾಯುದ್ಧ ಆರಂಭವಾಯಿತು.

    ‘ಹಿಟ್ಲರ್​ನನ್ನು ನಾವು ರೈನ್​ಲ್ಯಾಂಡ್​ನಲ್ಲೇ ತಡೆದಿದ್ದರೆ ಅವನು ನೆರೆಯ ದೇಶಗಳ ಮೇಲೆ ಒಂದೊಂದಾಗಿ ಆಕ್ರಮಣವೆಸಗುತ್ತಿರಲಿಲ್ಲ, ಬಲಿಷ್ಠ ಶಾಂತಿಕಂಟಕನಾಗಿ ಬೆಳೆಯುತ್ತಿರಲಿಲ್ಲ, ಘೊರ ಹಾರೂ ದೀರ್ಘ ಮಹಾಯುದ್ಧದಲ್ಲಿ ಕಾದಾಡುವ ಸಂಕಷ್ಟಕ್ಕೆ ನಾವು ಒಳಗಾಗುತ್ತಿರಲಿಲ್ಲ’ ಎಂದು ರ್ಚಚಿಲ್ ಸ್ಪಷ್ಟವಾಗಿ ಹೇಳಿದ್ದರು. ಅವರ ಮಾತು ನಿಜ. ಸೋವಿಯೆತ್ ಯೂನಿಯನ್ ಅನ್ನು ಬಗ್ಗುಬಡಿದು ಅಲ್ಲಿ ತಲೆಯೆತ್ತಿರುವ ಕಮ್ಯೂನಿಸ್ಟ್ ವ್ಯವಸ್ಥೆಯನ್ನು ಬೇರುಸಹಿತ ಕಿತ್ತೊಗೆಯುವುದಾಗಿ ಹಿಟ್ಲರ್ ಬುಡುಬುಡುಕೆ ಅಲ್ಲಾಡಿಸಿದಾಗ ಅದನ್ನು ನಂಬಿದ ಪಶ್ಚಿಮದ ರಾಷ್ಟ್ರಗಳು ಅವನ ಎಲ್ಲ ‘ಸಣ್ಣಪುಟ್ಟ’ ತಪ್ಪುಗಳನ್ನು ಮನ್ನಿಸಿ, ಮುಂದೊಂದು ದಿನ ಅವನು ರಷ್ಯಾದ ಮೇಲೆ ದಾಳಿಯೆಸಗುವುದನ್ನೇ ಬಾಯಿಬಿಟ್ಟುಕೊಂಡು ಕಾದದ್ದು ಐತಿಹಾಸಿಕ ಸತ್ಯ. ಹಿಟ್ಲರ್ ಸೋವಿಯೆತ್-ವಿರೋಧಿ ಹೇಳಿಕೆಗಳನ್ನು ಪುಂಖಾನುಪುಂಖವಾಗಿ ನೀಡುತ್ತಲೇ, ತನಗೆ ಬೇಕಾದ್ದೆಲ್ಲವನ್ನೂ ಗಳಿಸಿಕೊಂಡು, ಕೊನೆಗೆ ಮಾಸ್ಕೋದ ಜತೆಗೇ ಮಿತ್ರತ್ವ ಸಾಧಿಸಿ ಬ್ರಿಟನ್, ಫ್ರಾನ್ಸ್ ಹಾಗೂ ಅಮೆರಿಕಗಳ ವಿರುದ್ಧವೇ ತಿರುಗಿಬಿದ್ದಾಗ ಅವು ಇಂಗು ತಿಂದ ಮಂಗನಂತಾದದ್ದೂ ಅಷ್ಟೇ ಐತಿಹಾಸಿಕ ಸತ್ಯ.

    ಸದ್ದಾಂನ ವಿಷಯದಲ್ಲಿ ಆದದ್ದೂ ಸರಿಸುಮಾರು ಇದೇ. ಇರಾನ್​ನಲ್ಲಿ ತಲೆಯೆತ್ತಿದ ಪಶ್ಚಿಮ-ವಿರೋಧಿ ಮುಸ್ಲಿಂ ಮೂಲಭೂತವಾದವನ್ನು ಇವನು ಮೊಳಕೆಯಲ್ಲೇ ಚಿವುಟಿಹಾಕುತ್ತಾನೆಂದು ನಂಬಿದ ಅಮೆರಿಕ ಮತ್ತಿತರ ಪಶ್ಚಿಮದ ರಾಷ್ಟ್ರಗಳು ಅವನ ಇರಾನ್ ವಿರುದ್ಧದ ಸಮರಕ್ಕೆ ಸಹಕಾರ ನೀಡಿದವು. ಅದರಿಂದ ಕೊಬ್ಬಿದ ಅವನು ಕುವೈತ್ ಅನ್ನು ಆಕ್ರಮಿಸಿಕೊಂಡ. ಪಶ್ಚಿಮದ ರಾಷ್ಟ್ರಗಳು ಇದನ್ನೂ ಸಹಿಸಿಕೊಂಡರೆ ಅವನ ಮುಂದಿನ ಯೋಜನೆ ಏನಿರಬಹುದು? ಸೌದಿ ಅರೇಬಿಯಾದ ಜತೆ ಇರಾಕ್​ನ ಗಡಿತಂಟೆಗಳಿವೆ, ಅದೂ ತೈಲಭರಿತ ಪ್ರದೇಶಗಳ ಬಗ್ಗೆ. ಈ ಗಡಿಸಮಸ್ಯೆಯನ್ನು ತನ್ನ ದೇಶದ ಪರವಾಗಿ ಪರಿಹರಿಸಿಕೊಳ್ಳಲು ಸದ್ದಾಂ ಪ್ರಯತ್ನಿಸಿದರೆ? ಅವನು ಕಾಲು ಕೆರೆದು ಪಶ್ಚಿಮ ಏಷ್ಯಾದ ಅತೀ ಬಲಾಢ್ಯ ಹಾಗೂ ವಿಶ್ವದ ಪ್ರಮುಖ ತೈಲ ನಿರ್ಯಾತಕ ಸೌದಿ ಅರೇಬಿಯಾವನ್ನು ಯುದ್ಧಕ್ಕೆಳೆದರೆ? ವಿಶ್ವದ ಆರ್ಥಿಕ ಹಾಗೂ ರಾಜಕೀಯ ಸ್ಥಿತಿಗತಿಗಳ ಮೇಲೆ ಅದರ ಪರಿಣಾಮ ಭೀಕರ. ಅದನ್ನು ತಡೆಯಬೇಕಾದರೆ ಸದ್ದಾಂಗೆ ಕುವೈತ್​ನಲ್ಲೇ ಬುದ್ಧಿ ಕಲಿಸಿ ಅವನ ರೆಕ್ಕೆಪುಕ್ಕಗಳನ್ನು ಕತ್ತರಿಸಿಬಿಡಬೇಕು! ಸದ್ದಾಂ ‘ಹಿಟ್ಲರ್​ನ ಪಶ್ಚಿಮ ಏಷ್ಯಾ ಅವತಾರ’ವಾಗುವುದನ್ನು ತಪ್ಪಿಸಲೇಬೇಕು! ಅಮೆರಿಕ ಮತ್ತದರ ಮಿತ್ರದೇಶಗಳು ಕುವೈತ್ ವಿಮೋಚನೆ ನೆಪದಲ್ಲಿ ಸದ್ದಾಂನ ಸೇನೆಯನ್ನು ಬಗ್ಗುಬಡಿದು ಅವನ ಶಕ್ತಿಗುಂದಿಸಹೊರಟಿದ್ದರ ಹಿಂದಿನ ನಿಜವಾದ ಕಾರಣ ಇದು.

    ತಮ್ಮ ಉದ್ದೇಶದಲ್ಲಿ ಅವೇನೋ ಸಫಲವಾದವು. ಆದರೆ ಮುಂದಿನ ಒಂದು ದಶಕದಲ್ಲಿ ಇತಿಹಾಸ ಮತ್ತೊಂದು ತಿರುವು ತೆಗೆದುಕೊಳ್ಳಲಿತ್ತು. ಅದನ್ನು ಮುಂದಿನ ವಾರ ನೋಡೋಣ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts