More

    ಕೇಂದ್ರದಿಂದ ಪ್ರಜಾತಂತ್ರ ವಿರೋಧಿ ನೀತಿ

    ಚಿಕ್ಕಮಗಳೂರು: ಭೂ ಸುಧಾರಣೆ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಮತ್ತು ಕಾರ್ವಿುಕ ಸಂಘಟನೆಗಳ ದೆಹಲಿ ಚಲೋ ಕಾರ್ಯಕ್ರಮಕ್ಕೆ ಹೊರಟಿದ್ದ ರೈತರು, ಕಾರ್ವಿುಕರ ಮೇಲೆ ಅರೆಸೇನಾ ಪಡೆಗಳ ಮೂಲಕ ರೈತರ ಹೋರಾಟ ಹತ್ತಿಕ್ಕಲು ಕೇಂದ್ರ ಸರ್ಕಾರ ಯತ್ನಿಸಿದೆ ಎಂದು ಆರೋಪಿಸಿ ರೈತ ಸಂಘ ಮತ್ತು ಹಸಿರು ಸೇನೆ ಪದಾಧಿಕಾರಿಗಳು ಕೆಎಂ ರಸ್ತೆಯಲ್ಲಿ ಬುಧವಾರ ರಸ್ತೆತಡೆ ನಡೆಸಿದರು.

    ಜಿಲ್ಲಾಧ್ಯಕ್ಷ ಡಿ.ಆರ್.ದುಗ್ಗಪ್ಪ ಗೌಡ ಮಾತನಾಡಿ, ದೆಹಲಿ ಚಲೋ ಕಾರ್ಯಕ್ರಮಕ್ಕೆ ಹೊರಟಿದ್ದ ರೈತರ, ಕಾರ್ವಿುಕರು, ಜನಸಾಮಾನ್ಯರ ಹೋರಾಟ ಹತ್ತಿಕ್ಕಲು ಸೇನೆಯನ್ನು ಬಳಸಿರುವುದು ಪ್ರಜಾತಂತ್ರ ವಿರೋಧಿ. ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಭೂ ಸುಧಾರಣೆ ಹಾಗೂ ಎಪಿಎಂಸಿ, ಕಾರ್ವಿುಕ, ವಿದ್ಯುತ್, ಅಗತ್ಯವಸ್ತುಗಳ ಕಾಯ್ದೆ ಜಾರಿಗೊಳಿಸಿ ಗ್ರಾಮಿಣ ಜನರು ಕೃಷಿಯಿಂದ ವಿಮುಖರಾಗುವಂತೆ ಮಾಡಿ ಕಾಪೋರೇಟ್ ಕಂಪನಿಗಳಿಗೆ ಅನುಕೂಲ ಕಲ್ಪಿಸಿದೆ ಎಂದು ಆರೋಪಿಸಿದರು.

    ಈಗಾಗಲೆ ಬಿತ್ತನೆ ಬೀಜದ ಸಾರ್ವಭೌಮತ್ವ ರೈತರ ಕೈತಪ್ಪಿದೆ. ಈರುಳ್ಳಿ, ಆಲೂಗಡ್ಡೆ, ಮೆಕ್ಕೆಜೋಳ, ಎಣ್ಣೆ, ಬೇಳೆಕಾಳು, ಸಿರಿಧಾನ್ಯಗಳನ್ನು ಅಗತ್ಯ ವಸ್ತುಗಳ ಕಾಯ್ದೆಯಿಂದ ಹೊರಗಿಟ್ಟಿರುವುದರಿಂದ ಇವುಗಳ ಕನಿಷ್ಠ ಬೆಂಬಲ ಬೆಲೆ ನಿರ್ಧರಿಸುವ ಹಕ್ಕು ಸರ್ಕಾರದ ಹಿಡಿತ ತಪ್ಪಿ ಬಂಡವಾಳಶಾಹಿಗಳ ಹಿಡಿತಕ್ಕೆ ನೀಡಿದಂತಾಗಿದೆ. ಹೊಸ ಕೃಷಿ ನೀತಿಯಿಂದ ಪುಷ್ಪ, ತೋಟ, ಮತ್ಸ್ಯೃಷಿ ಬದಲಾಗಿ ಗ್ರಾಮೀಣ ಜನರ ಪರಂಪರಾನುಗತವಾದ ಖನಿಜ, ಜೈವಿಕ ಸಂಪತ್ತು ಸೇರಿ ವಿವಿಧ ರೀತಿಯ ಜೀವನ ಕ್ರಮದ ಹಾಗೂ ಸಾರ್ವಭೌಮತ್ವದ ಹಕ್ಕುಗಳನ್ನು ಬಿಟ್ಟು ಬದುಕುವ ಸ್ಥಿತಿ ನಿರ್ವಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಎಪಿಎಂಸಿ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ನಿಯಂತ್ರಿಸಬೇಕು. ಡಾ. ಸ್ವಾಮಿನಾಥನ್ ವರದಿ ಜಾರಿಗೊಳಿಸಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆ ಹಿಂಪಡೆದು ಭೂ ಸುಧಾರಣೆ, ಎಪಿಎಂಸಿ ಕಾಯ್ದೆಗಳನ್ನು ಹಿಂದಿನಂತೆಯೇ ಮುಂದುವರಿಸಬೇಕು ಎಂದು ಒತ್ತಾಯಿಸಿದರು.

    ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಮಹೇಶ್ ಮಾತನಾಡಿ, ರೈತರು ಹೋರಾಟ ಮಾಡಲು ಮುಂದಾದರೆ ಹೆದ್ದಾರಿಯಲ್ಲಿ ಬೇಲಿ, ಕಂದಕ ನಿರ್ವಿುಸುತ್ತಾರೆ. ಅಶ್ರುವಾಯು ಪ್ರಯೋಗಿಸಿ ಲಾಠಿ ಚಾರ್ಜ್ ಮಾಡಿ ರೈತರನ್ನು ಬಂಧಿಸಿ ಹೋರಾಟ ಹತ್ತಿಕ್ಕಲಾಗಿದೆ. ಶೇ.65ರಷ್ಟು ರೈತರಿಗೆ ಕೃಷಿಯೇ ಆಧಾರ. ಇದರಲ್ಲಿ ಶೇ.90 ರೈತರು 2 ಹೆಕ್ಟೇರ್​ಗಿಂತ ಕಡಿಮೆ ಭೂಮಿ ಹೊಂದಿದ್ದಾರೆ. ಹೀಗಾಗಿ ಭೂ ಸುಧಾರಣೆ ಕಾಯ್ದೆ ಸಡಿಲಗೊಳಿಸಿದರೆ ರೈತರ ಭವಿಷ್ಯದ ಕನಸು ನುಚ್ಚು ನೂರಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

    ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಬಿ.ಸಿ.ದಯಾನಂದ್, ಎಂ.ಸಿ.ಬಸವರಾಜ್, ಉದ್ದೇಗೌಡ, ವೃಷಭ ರಾಜ್, ಕಡೂರು ತಾಲೂಕು ಅಧ್ಯಕ್ಷ ನಿರಂಜನಮೂರ್ತಿ, ತರೀಕೆರೆ ಅಧ್ಯಕ್ಷ ಓಂಕಾರಪ್ಪ, ಮೂಡಿಗೆರೆ ಪಿ.ಕೆ.ನಾಗೇಶ್, ಮಂಜೇಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts