More

    ಕ್ವಾರಂಟೈನ್‌ನಲ್ಲಿದ್ದವರಿಗೆ ಹೆಜಮಾಡಿಯಲ್ಲಿ ತಡೆ, ಆಂಬುಲೆನ್ಸ್ ಚಾಲಕನಿಂದ ತಪ್ಪು ಮಾಹಿತಿ

    ಪಡುಬಿದ್ರಿ: ಕರೊನಾ ಶಂಕೆ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಕ್ವಾರಂಟೈನ್ ಮುಗಿಸಿ ಉಡುಪಿಯ ಮನೆಗೆ ತೆರಳಬೇಕಿದ್ದ ನಾಲ್ವರು ಆಂಬುಲೆನ್ಸ್ ಚಾಲಕನ ಅನುಚಿತ ವರ್ತನೆಯಿಂದಾಗಿ ಹೆಜಮಾಡಿ ಚೆಕ್‌ಪೋಸ್ಟ್‌ನಿಂದ ಮಂಗಳವಾರ ರಾತ್ರಿ ಮಂಗಳೂರಿಗೆ ವಾಪಸ್ ತೆರಳಿದ್ದಾರೆ.

    ಆಂಬುಲೆನ್ಸ್ ಚಾಲಕ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ವೇಳೆ ತನ್ನದೇ ವಾಹನ ಸಂಖ್ಯೆಯನ್ನು ಉಡುಪಿಗೂ ನೋಂದಾಯಿಸಿದ್ದ. ಪರಿಶೀಲನೆ ಬಳಿಕ ಚೆಕ್‌ಪೋಸ್ಟ್ ದಾಟಿ 100 ಮೀ. ಎದುರು ಸಾಗಿದ್ದು, ಇನ್ನೊಂದು ಆಂಬುಲೆನ್ಸ್‌ಗೆ ರೋಗಿಗಳನ್ನು ಸ್ಥಳಾಂತರಿಸಲಾಯಿತು. ಇದನ್ನು ಪ್ರಶ್ನಿಸಿದ ಚೆಕ್‌ಪೋಸ್ಟ್ ಸಿಬ್ಬಂದಿ ಅರುಣ್‌ಕುಮಾರ್ ಅವರನ್ನು ಮಂಗಳೂರು ಆಂಬುಲೆನ್ಸ್ ಚಾಲಕ ನಿಂದಿಸಿದ್ದು, ದ.ಕ. ಜಿಲ್ಲಾಧಿಕಾರಿ ಅನುಮತಿ ಮೇರೆಗೆ ಇದು ನಡೆಯುತ್ತಿದೆ ಎಂದಿದ್ದ.

    ಪಡುಬಿದ್ರಿ ಠಾಣಾಧಿಕಾರಿ ಸುಬ್ಬಣ್ಣ ಅನುಮತಿ ಪತ್ರ ಕೇಳಿದಾಗ ನಿರುತ್ತರನಾಗಿದ್ದ. ಬಳಿಕ ಉಡುಪಿಯ ಕರೊನಾ ಆಸ್ಪತ್ರೆಯಿಂದ ಬಂದಿದ್ದ ಆಂಬುಲೆನ್ಸ್‌ನಿಂದ ರೋಗಿಗಳನ್ನು ಕೆಳಗಿಳಿಸಿ, ಬಂದ ಆಂಬುಲೆನ್ಸ್‌ನಲ್ಲೇ ಮಂಗಳೂರಿಗೆ ವಾಪಸ್ ಕಳುಹಿಸಲಾಯಿತು.

    ಆಂಬುಲೆನ್ಸ್‌ನಲ್ಲಿದ್ದ ನಾಲ್ವರೂ ದ.ಕ. ಜಿಲ್ಲೆಯಲ್ಲಿ ಕ್ವಾರಂಟೈನ್ ಮುಗಿಸಿದ್ದು, ಉಡುಪಿ ಆಸ್ಪತ್ರೆಯಲ್ಲಿ ಅವರ ತಪಾಸಣೆ ನಡೆಸಿ ಹೋಂ ಕ್ವಾರೆಂಟೈನ್‌ಗೆ ಕಳುಹಿಸುವ ಪ್ರಕ್ರಿಯೆ ನಡೆಯಬೇಕಿತ್ತು. ಚೆಕ್‌ಪೋಸ್ಟ್ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ನೀಡದ ಕಾರಣ ಮತ್ತು ತಪ್ಪಾಗಿ ಎಂಟ್ರಿ ಮಾಡಿರುವುದರಿಂದ ಪ್ರಯಾಣ ಸಾಧ್ಯವಾಗಿಲ್ಲ.

    280 ಮಂದಿ ಕ್ವಾರಂಟೈನ್: ಮಂಗಳವಾರ ರಾತ್ರಿಯಿಂದ ಬುಧವಾರ ಮುಂಜಾನೆ ವರೆಗೆ ಉಡುಪಿ ಜಿಲ್ಲೆ ಪ್ರವೇಶಿಸಿದ ಅನ್ಯ ಜಿಲ್ಲೆಗಳ 180 ಹಾಗೂ ದಕ್ಷಿಣಕನ್ನಡ ಜಿಲ್ಲೆ ಪ್ರವೇಶಿಸಿದ 100 ಜನರಿಗೆ ಹೆಜಮಾಡಿ ಚೆಕ್‌ಪೋಸ್ಟ್‌ನಲ್ಲಿ ಮೊಹರು ಹಾಕಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಉಡುಪಿ ಡಿಸಿ ಸೂಚನೆಯಂತೆ ಬುಧವಾರ ಬೆಳಗ್ಗಿನಿಂದ ಅನ್ಯ ಜಿಲ್ಲೆಯಿಂದ ಆಗಮಿಸಿದವರಿಗೆ ಮೊಹರು ಹಾಕುವುದನ್ನು ಸ್ಥಗಿತಗೊಳಿಸಲಾಗಿದೆ. ಕೋವಿಡ್-19 ಸಂಬಂಧಿಸಿದ ಲಕ್ಷಣಗಳು ಕಂಡು ಬಂದಲ್ಲಿ ಮೊಹರು ಹಾಕಲು ಸೂಚಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts