More

  ಶುದ್ಧ ನೀರಿನ ಘಟಕ ನಿರುಪಯುಕ್ತ

  ಸೈಯದ್ ದೇವರಮನಿ

  ಆಲಮೇಲ: ಇಲ್ಲಿನ ವಾರ್ಡ್ ನಂ.16 ರಲ್ಲಿನ ಚಾಲುಕ್ಯರ ಕಾಲದ ಐತಿಹಾಸಿಕ ಅಕ್ಕ-ತಂಗಿಯರ ಬಾವಿ ಪಕ್ಕದಲ್ಲಿ ಅಂದಾಜು 9 ಲಕ್ಷ ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿದ್ದು, ಜನರ ಬಳಕೆಗೆ ಬಾರದಂತಾಗಿದೆ.
  ಘಟಕದ ಕಾಮಗಾರಿ ಮುಗಿದು ಒಂದು ವರ್ಷವಾದರೂ ಇನ್ನೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಒಂದು ವರ್ಷದ ಹಿಂದೆ ಸಿಂದಗಿ ಶಾಸಕ ಎಂ.ಸಿ. ಮನಗೂಳಿ ಅವರು ಸಚಿವರಾಗಿದ್ದಾಗ ಉದ್ಘಾಟನೆಯೂ ಆಗಿದೆ. ಅಂದು ಸಿಕ್ಕ ನೀರು ಇನ್ನೂ ಮರಳಿ ನಮಗೆ ಸಿಕ್ಕಿಲ್ಲ. ಈ ಘಟಕ ಮಾಡಿದ್ದಾದರೂ ಏಕೆ ? ಎನ್ನುತ್ತಾರೆ ವಾರ್ಡ್ ನಿವಾಸಿ ಅಮೀನ ಮೀರಾಸಾಬ ಬೇಪಾರಿ ಹಾಗೂ ಇತರರು.
  ವಾರ್ಡ್‌ನಲ್ಲಿ ಮೊದಲೇ ನೀರು ಸಮರ್ಪಕವಾಗಿ ಸರಬರಾಜು ಆಗುವುದಿಲ್ಲ. ಕಾಮಗಾರಿ ಮುಗಿದು ಉದ್ಘಾಟನೆಗೊಂಡರೂ ಗುತ್ತಿಗೆದಾರರು ಮತ್ತು ಅಧಿಕಾರಿಗಳ ನಿರ್ಲಕ್ಷೃದಿಂದ ನಾವು ಶುದ್ಧ ಕುಡಿಯುವ ನೀರಿನಿಂದ ವಂಚಿತರಾಗಿದ್ದೇವೆ. ಕೂಡಲೇ ಸಂಬಂಧಿತ ಅಧಿಕಾರಿಗಳು ಕ್ರಮ ಕೈಗೊಂಡು ಶುದ್ಧ ನೀರು ಸಿಗುವಂತೆ ಮಾಡದಿದ್ದರೆ ವಾರ್ಡ್ ನಿವಾಸಿಗಳೊಂದಿಗೆ ಪಟ್ಟಣ ಪಂಚಾಯಿತಿ ಮುಂಭಾಗ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ನಿವಾಸಿ ಮತಿನ ರಫೀಕ್ ಬೆಪಾರಿ, ಆಲಮೇಲ ತಾಲೂಕು ಕರವೇ ಕಾರ್ಯದರ್ಶಿ ಮಹಿಬೂಬ ಬಾಗವಾನ ಎಚ್ಚರಿಸಿದ್ದಾರೆ.

  ವಾರ್ಡ್‌ನಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸಬೇಕು ಎಂದು ಹಲವಾರು ಬಾರಿ ಸಭೆಯಲ್ಲಿ ಒತ್ತಾಯಿಸಿದ್ದೇನೆ. ಕೂಡಲೇ ಅಧಿಕಾರಿಗಳು ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸದಿದ್ದರೆ ನಾನೇ ಪಪಂ ಕಚೇರಿ ಎದುರು ಧರಣಿ ಹೋರಾಟ ಮಾಡುತ್ತೇನೆ.
  ಕಾಶೀಮ್ ಸಾಲೋಟಗಿ, 16ನೇ ವಾರ್ಡ್ ಸದಸ್ಯ

  ಕಾಮಗಾರಿ ಮುಗಿದರೂ ಇನ್ನೂ ಪಪಂಗೆ ಏಕೆ ಹಸ್ತಾಂತರ ಮಾಡಿಲ್ಲ ಎಂಬ ವರದಿ ಪಡೆದು ನಿವಾಸಿಗಳ ಹಿತದೃಷ್ಟಿಯಿಂದ ಇದೇ ವಾರದಲ್ಲಿ ಶುದ್ಧ ನೀರಿನ ಘಟಕ ಕಾರ್ಯ ಮಾಡುವಂತೆ ಮಾಡುತ್ತೇನೆ. ಸಿಬ್ಬಂದಿ ನೇಮಿಸಿ ಪ್ರತಿದಿನ ನೀರು ಸಿಗುವಂತೆ ಮಾಡುತ್ತೇನೆ.
  ಸುರೇಶ ನಾಯಕ, ಪಪಂ ಮುಖ್ಯಾಧಿಕಾರಿ, ಆಲಮೇಲ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts