More

    ಪತ್ರಿಕೆ, ಪುಸ್ತಕ ಮಳಿಗೆಗೆ ಅವಕಾಶ ಕೊಡಿ

    ಯಲ್ಲಾಪುರ: ಪಟ್ಟಣದಲ್ಲಿ ಸುಮಾರು 6 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ವಿುಸಲಾಗಿದೆ. ಆದರೆ, ಅಲ್ಲಿ ಪುಸ್ತಕ, ಪತ್ರಿಕೆಗಳ ಮಾರಾಟಕ್ಕೆ ಮಳಿಗೆ ಇಲ್ಲದಿರುವುದು ವಿಪರ್ಯಾಸದ ಸಂಗತಿ ಎಂದು ಮಾತೃಭೂಮಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಶ್ರೀರಂಗ ಕಟ್ಟಿ ಹೇಳಿದರು.

    ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ, ಓದುಗರಿಗೆ ಪುಸ್ತಕ, ದಿನಪತ್ರಿಕೆಗಳು ಲಭ್ಯವಾಗುವಂತೆ ಪುಸ್ತಕ ಮಳಿಗೆಗೆ ಅವಕಾಶ ನೀಡಬೇಕು ಎಂದು ಒಂದು ವರ್ಷದಿಂದ ಹೋರಾಟ ನಡೆಸಲಾಗುತ್ತಿದೆ. ಸಚಿವ ಹೆಬ್ಬಾರ ಅವರಿಗೆ ಈ ಕುರಿತು ಮೂರು ಬಾರಿ ಮನವಿ ಸಲ್ಲಿಸಲಾಗಿದೆ. ವಾಕರಸಾ ನಿಗಮದ ಅಧ್ಯಕ್ಷ ವಿ.ಎಸ್. ಪಾಟೀಲ ಅವರಿಗೂ ಮನವಿ ಸಲ್ಲಿಸಿದ್ದೇವೆ. ಅವರಿಬ್ಬರೂ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಕರೆ ಮಾಡಿ, ಪ್ರತಿ ಬಸ್ ನಿಲ್ದಾಣದಲ್ಲೂ ಪುಸ್ತಕ ಮಳಿಗೆಗೆ ಅವಕಾಶ ನೀಡುವಂತೆ ಆದೇಶಿಸಿದ್ದಾರೆ. ಆದರೆ, ಅಧಿಕಾರಿಗಳು ಅವರ ಆದೇಶಕ್ಕೂ ಮನ್ನಣೆ ನೀಡಿಲ್ಲ. ಅಧಿಕಾರಿಗಳ ಕನ್ನಡ ವಿರೋಧಿ ನೀತಿ, ಓದುಗ ಸಂಸ್ಕೃತಿಯನ್ನು ಹತ್ತಿಕ್ಕುವ ಧೋರಣೆ ಖಂಡನೀಯ ಎಂದರು.

    ಪುಸ್ತಕ, ಪತ್ರಿಕೆಗಳ ಮಾರಾಟಕ್ಕೆ ವಾಣಿಜ್ಯೇತರ ಮಳಿಗೆಗೆ ಅವಕಾಶ ನೀಡಬೇಕು. ಶೀಘ್ರ ಇದರ ಟೆಂಡರ್ ಪ್ರಕ್ರಿಯೆ ನಡೆಸಬೇಕು. ಇದಕ್ಕೆ ಆಗಸ್ಟ್ 5 ರವರೆಗೆ ಗಡುವು ನೀಡಲಾಗುವುದು. ಅಷ್ಟರೊಳಗೆ ಈ ಪ್ರಕ್ರಿಯೆಗೆ ಚಾಲನೆ ದೊರೆಯದೇ ಹೋದಲ್ಲಿ ಬಸ್ ತಡೆದು, ನಿಲ್ದಾಣಕ್ಕೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

    ಹೋರಾಟಕ್ಕೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಇತರ ಸಂಘಟನೆಗಳೂ ಬೆಂಬಲ ನೀಡಿವೆ. ಪಪಂ ಸದಸ್ಯ ಸೋಮೇಶ್ವರ ನಾಯ್ಕ, ಸಾಮಾಜಿಕ ಕಾರ್ಯಕರ್ತ ಮಂಜುನಾಥ ಹಿರೇಮಠ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts