More

    ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಬಜೆಟ್‌ನಲ್ಲಿ ಹಣ ಮೀಸಲಿಡಿ

    ಭಟ್ಕಳ: ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರೂ ಜಿಲ್ಲೆಗೆ ಒಂದು ಸೂಕ್ತವಾದ ಮೆಡಿಕಲ್ ಕಾಲೇಜು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲವಾಗಿದೆ. ಇದರಿಂದ ಪ್ರತಿನಿತ್ಯ ಜಿಲ್ಲೆಯ ನೂರಾರು ಜನರು ಸೂಕ್ತ ಚಿಕಿತ್ಸೆ ಸಿಗದೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಕುಮಟಾಕ್ಕೆ ಘೋಷಣೆಯಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಹಣ ಬಿಡುಗಡೆ ಮಾಡಬೇಕು ಎಂದು ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಆಗ್ರಹಿಸಿದರು.

    ಕುಮಟಾದಿಂದ ಆರಂಭವಾಗಿದ್ದ ಸ್ವಾಭಿಮಾನಿ ಪಾದಯಾತ್ರೆಯು ಬುಧವಾರ ಪಟ್ಟಣಕ್ಕೆ ಆಗಮಿಸಿ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರ ಕಚೇರಿಗೆ ತೆರಳಿ ಮನವಿ ಸಲ್ಲಿಸಿ ಅವರು ಮಾತನಾಡಿದರು.

    ದೇಶದ ಪ್ರತಿಯೊಬ್ಬ ವ್ಯಕ್ತಿಗೆ ಆಹಾರ, ಆರೋಗ್ಯ ಹಾಗೂ ಮೂಲಸೌಕರ್ಯ ಒದಗಿಸುವ ಜವಾಬ್ದಾರಿ ಮತ್ತು ಕರ್ತವ್ಯ ಸರ್ಕಾರದ್ದಾಗಿದೆ. ಆದರೆ, ಉತ್ತರ ಕನ್ನಡ ಜಿಲ್ಲೆ ಇನ್ನೂ ಅನೇಕ ಅಭಿವೃದ್ಧಿ ಕಾರ್ಯಗಳಿಂದ ವಂಚಿತವಾಗಿದೆ. ಜಿಲ್ಲೆಯಿಂದ ನಿತ್ಯ 300 ಕ್ಕೂ ಹೆಚ್ಚು ಜನ ಚಿಕಿತ್ಸೆಗಾಗಿ ಮಂಗಳೂರು ಹಾಗೂ ಬೇರೆಡೆಗೆ ಹೋಗುತ್ತಾರೆ. ಮಾರ್ಗ ಮಧ್ಯದಲ್ಲಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಕುಮಟಾಕ್ಕೆ ಮಂಜೂರಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಈ ಸಲ ಬಜೆಟ್‌ನಲ್ಲಿ ಹಣ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.

    ಅನಂತಮೂರ್ತಿ ಹೆಗಡೆ ಚಾರಿಟಬಲ್ ಟ್ರಸ್ಟ್‌ನ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಜಿಲ್ಲೆಯ 50 ಕ್ಕೂ ಹೆಚ್ಚು ಸಂಘಟನೆಗಳು, ಉತ್ತರ ಕನ್ನಡ ಜಿಲ್ಲೆಯ ಸಮಸ್ತ ನಾಗರಿಕರ ಬೆಂಬಲದೊಂದಿಗೆ ‘ಆಸ್ಪತ್ರೆ ನೀಡಿ ಜೀವ ಉಳಿಸಿ’ ಎಂಬ ಧ್ಯೇಯ ವಾಕ್ಯದೊಂದಿಗೆ ಸ್ವಾಭಿಮಾನದ ಪಾದಯಾತ್ರೆ ಹೊರಟು ಅಪಾರ ಜನ ಬೆಂಬಲದೊಂದಿಗೆ 60 ಕಿಮೀ ಸಾಗಿ, ಬುಧವಾರ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರ ಆಪ್ತ ಸಹಾಯಕ ನಾಗರಾಜ ನಾಯ್ಕ ಅವರಿಗೆ ಮನವಿ ಸಲ್ಲಿಸಲಾಯಿತು. ಕೇಶವ ನಾಯ್ಕ, ವಿವೇಕ ನಾಯ್ಕ, ಶ್ರೀನಿವಾಸ ನಾಯ್ಕ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts