More

    ಜೆಡಿಎಸ್‌ಗೆ ‘ಮೈತ್ರಿ’ ಧರ್ಮಸಂಕಟ

    ಮಂಜುನಾಥ ತಿಮ್ಮಯ್ಯ ಮೈಸೂರು


    ಮೈತ್ರಿ ಧರ್ಮದ ಸಂಕಷ್ಟದಿಂದಾಗಿ ಜೆಡಿಎಸ್ ಪಕ್ಷವು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಕಳೆದ ಒಂದು ದಶಕದಿಂದ ಸ್ಪರ್ಧೆಯನ್ನೇ ಮಾಡಿಲ್ಲ. ಇದು ಈ ಸಲವೂ ಪುನರಾವರ್ತನೆಯಾಗಿದ್ದು, ಹೀಗೆ ಕ್ಷೇತ್ರ ‘ತ್ಯಾಗ’ ಮಾಡಿ ಪಕ್ಷಕ್ಕೆ ಪೆಟ್ಟುಕೊಟ್ಟಿದೆ..!


    ಈ ಕ್ಷೇತ್ರದಿಂದ ಜೆಡಿಎಸ್ 2014ರ ಲೋಕಸಭಾ ಚುನಾವಣೆಯಲ್ಲೇ ಸ್ಪರ್ಧೆ ಮಾಡಿದ್ದೇ ಕೊನೆ. ಬಳಿಕ ಅದು ಪೈಪೋಟಿ ಮಾಡಲೇ ಇಲ್ಲ.

    ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ರಾಜ್ಯದಲ್ಲಿ ಬರೀ ಮಂಡ್ಯ, ಹಾಸನ ಮತ್ತು ಕೋಲಾರ ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿದೆ. ಮೈಸೂರು ಸೇರಿದಂತೆ ಯಾವ ಕ್ಷೇತ್ರದಲ್ಲೂ ಸ್ಪರ್ಧೆ ಮಾಡುತ್ತಿಲ್ಲ.


    ಜೆಡಿಎಸ್ ಈ ಸಲ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. 28 ಕ್ಷೇತ್ರಗಳ ಪೈಕಿ ಬಿಜೆಪಿಯು ಜೆಡಿಎಸ್‌ಗೆ ಬರೀ 3 ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದೆ. ಇದರಿಂದಾಗಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರವೂ ಕೈತಪ್ಪಿದೆ. ಇದು ಕ್ಷೇತ್ರದ ಮೇಲೆ ಪಕ್ಷದ ಹಿಡಿತ ಸಡಿಲಕ್ಕೆ ನಾಂದಿ ಹಾಡಿದೆ.


    ಕಳೆದ 2019ರ ಲೋಕಸಭಾ ಚುನಾವಣೆಯಲ್ಲೂ ಜೆಡಿಎಸ್ ಸ್ಪರ್ಧೆ ಮಾಡಿರಲಿಲ್ಲ. ಜೆಡಿಎಸ್-ಕಾಂಗ್ರೆಸ್ ಪಕ್ಷಗಳೆರಡು ಮೈತ್ರಿ ಮಾಡಿಕೊಂಡು ಎಲೆಕ್ಷನ್ ಎದುರಿಸಿದ್ದವು. ಸೀಟು ಹಂಚಿಕೆ ಸೂತ್ರದ ಪ್ರಕಾರ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟು, ಜೆಡಿಎಸ್ ಸ್ಪರ್ಧೆಯಿಂದ ಹಿಂದೆ ಸರಿದು ಬೆಂಬಲ ಕೊಟ್ಟಿತ್ತು. ಈ ಪಕ್ಷದ ಇತಿಹಾಸದಲ್ಲೇ ಕಣದಿಂದ ಹಿಂದೆ ಸರಿದ ಮೊದಲ ಚುನಾವಣೆ.

    ಬಳಿಕ 2024ರ ಈಗಿನ ಚುನಾವಣೆಯಲ್ಲೂ ಸ್ಪರ್ಧಾ ಅಂಗಳದಿಂದ ಹೊರಗೆ ಉಳಿದುಕೊಂಡಿದೆ. ಬಿಜೆಪಿಗೆ ಬೆಂಬಲ ನೀಡಿದೆ. ಹೀಗಾಗಿ, ಕಳೆದ ಎರಡು ಚುನಾವಣೆಯಲ್ಲೂ ಜಾ.ದಳ ಸೊನ್ನೆ ಸುತ್ತಿರುವುದೇ ಸಾಧನೆ ಎನಿಸಿದೆ. ಈ ನಡುವೆ, ತನ್ನ ಬಲವನ್ನು ಕುಗ್ಗಿಸಿಕೊಂಡು, ಅನ್ಯಪಕ್ಷಕ್ಕೆ ಶಕ್ತಿ ತುಂಬಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ.


    ಕ್ಷೇತ್ರದ ಮೇಲೆ ಅಸ್ತಿತ್ವ ಸಾಧಿಸಲು ಜೆಡಿಎಸ್‌ಗೆ ಈವರೆಗೂ ಸಾಧ್ಯವಾಗಿಲ್ಲ.


    ಹಳೇ ಮೈಸೂರು ಪ್ರಾಂತ್ಯದಲ್ಲೇ ಇದು ಪ್ರತಿಷ್ಠಿತ ಕ್ಷೇತ್ರ. ತನ್ನಲ್ಲಿರುವ ವಿಧಾನಸಭಾ ಕ್ಷೇತ್ರಗಳನ್ನು ಎರಡು ಜಿಲ್ಲೆಗಳಿಗೆ ಹಂಚಿಕೆ ಮಾಡಿ ಮತ್ತೊಂದು ಜಿಲ್ಲೆಯನ್ನು ಇಡೀ ಆಗಿ ತನ್ನೊಂದಿಗೆ ಸೇರಿಸಿಕೊಂಡಿರುವ ಅಪರೂಪದ ಕ್ಷೇತ್ರ ಇದು. ಇಂತಹವೊಂದು ಕ್ಷೇತ್ರದ ಮೇಲೆ ಅಸ್ತಿತ್ವ ಸಾಧಿಸಲು ಜೆಡಿಎಸ್‌ಗೆ ಈವರೆಗೂ ಸಾಧ್ಯವಾಗಿಲ್ಲ. ಹಳೇ ಮೈಸೂರು ಪ್ರಾಂತ್ಯದಲ್ಲಿ ಜೆಡಿಎಸ್ ಪ್ರಬಲವಾಗಿದೆ.

    ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ಗೆ ತಕ್ಕ ತಿರುಗೇಟು ಕೊಡುತ್ತಿದೆ. ಮೈಸೂರು ಜಿಲ್ಲೆಯಲ್ಲಿ ಬಲಿಷ್ಠವಾಗಿದೆ. ಕೊಡಗು ಜಿಲ್ಲೆಯಲ್ಲಿ ಸಂಘಟನೆ ದುರ್ಬಲವಾಗಿದೆ. ಲೋಕಸಭಾ ಚುನಾವಣೆ ಹೊರತುಪಡಿಸಿ ಉಳಿದ ಎಲ್ಲ ಚುನಾವಣೆಗಳಲ್ಲೂ ಕಾಂಗ್ರೆಸ್, ಬಿಜೆಪಿಗೆ ಪ್ರಬಲ ಪೈಪೋಟಿ ಕೊಟ್ಟಿದೆ. ಆದರೆ ಲೋಕಸಭಾ ಚುನಾವಣೆಯಲ್ಲಿ ಮಾತ್ರ ಅದು ಸಾಧ್ಯವೇ ಆಗಿಲ್ಲ. ಕ್ಷೇತ್ರ ವ್ಯಾಪ್ತಿಯಲ್ಲಿ ಯೋಜನಾಬದ್ಧವಾಗಿ ಪಕ್ಷ ಸಂಘಟನೆ ಮಾಡುವಲ್ಲಿ, ಕಾರ್ಯಕರ್ತರ ಪಡೆ ಕಟ್ಟಿಕೊಳ್ಳಲು, ನಾಯಕರನ್ನು ಬೆಳೆಸುವಲ್ಲಿ ಅದು ವಿಫಲವಾಗಿದೆ.


    ಕಣದಿಂದ ದೂರ …ದೂರ…!


    2014ರಲ್ಲಿ ಸ್ಪರ್ಧೆ ಮಾಡಿದ್ದ ಜೆಡಿಎಸ್‌ಗೆ ಜಯ ಗಳಿಸಲು ಸಾಧ್ಯವಾಗಿರಲಿಲ್ಲ. ಆದರೆ, ರಾಷ್ಟ್ರೀಯ ಪಕ್ಷಗಳಿಗೆ ಪೈಪೋಟಿ ನೀಡುವ ಮೂಲಕ 3ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು. ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ(5,03,908 ಮತ), ಕಾಂಗ್ರೆಸ್ ಅಭ್ಯರ್ಥಿ ಎಚ್.ವಿಶ್ವನಾಥ್ (4,72,300 ಮತ) ನಡುವಿನ ಕದನದಲ್ಲಿ ಜೆಡಿಎಸ್ ಅಭ್ಯರ್ಥಿ ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ (1,38,587 ಮತ) ಸ್ಪರ್ಧೆ ಮಾಡಿದ್ದರು. ಬಳಿಕ ನಡೆದ 2019ರ ಚುನಾವಣಾ ಕಣದಲ್ಲಿ ಜೆಡಿಎಸ್ ಕಾಣಿಸಿಕೊಳ್ಳಲಿಲ್ಲ. ಈಗಿನ ಚುನಾವಣಾ ಅಖಾಡದಿಂದಲೂ ಜಾ.ದಳ ನಾಪತ್ತೆಯಾಗಿದೆ.
    ಜೆಡಿಎಸ್ ಒಮ್ಮೆಯೂ ಗೆದ್ದಿಲ್ಲ

    1951ರಿಂದ 17 ಚುನಾವಣೆ ಕಂಡಿರುವ ಈ ಕ್ಷೇತ್ರವು ಮೊದಲಿನಿಂದಲೂ ಕೈ ಭದ್ರಕೋಟೆ. ಇಲ್ಲಿ ಜೆಡಿಎಸ್ ಒಮ್ಮೆಯೂ ಗೆದ್ದಿಲ್ಲ. 12 ಬಾರಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಮೊದಲ ಚುನಾವಣೆಯಲ್ಲಿ ಕಿಸಾನ್ ಮಜ್ದೂರ್ ಪ್ರಜಾ ಪಕ್ಷ ಒಮ್ಮೆ ಮತ್ತು ಬಿಜೆಪಿ 4 ಬಾರಿ ಗೆದ್ದಿದೆ. ಅದರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸಿ.ಎಚ್. ವಿಜಯಶಂಕರ್, ಪ್ರತಾಪ್ ಸಿಂಹ ಅವರೇ ತಲಾ ಎರಡು ಬಾರಿ ಗೆಲುವು ಕಂಡಿದ್ದಾರೆ.

    ಆದರೆ ಮೈಸೂರು ಭಾಗದಲ್ಲಿ ಜೆಡಿಎಸ್ ಬೇರುಗಳು ಬಲವಾಗಿವೆ. ಇದನ್ನು ಆಧರಿಸಿ ಈ ಕ್ಷೇತ್ರವನ್ನು ಪಡೆದುಕೊಳ್ಳಲು ಹಕ್ಕು ಮಂಡಿಸಲು ಅದು ಈ ಸಲವೂ ವಿಫಲವಾಗಿದೆ. ಈ ಸಲ ಬಿಜೆಪಿಗೆ ಕ್ಷೇತ್ರವನ್ನು ಬಿಟ್ಟುಕೊಟ್ಟಿದೆ. ಇದು ಬಿಜೆಪಿಗೆ ವರದಾನವಾದರೆ, ಜೆಡಿಎಸ್‌ಗೆ ಹಿನ್ನಡೆ ಆಗುವುದು ನಿಶ್ಚಿತ. ಇದು ಭವಿಷ್ಯದ ದೃಷ್ಟಿಯಲ್ಲಿ ಪಕ್ಷಕ್ಕೆ ಇನ್ನಷ್ಟು ಹಾನಿ ಉಂಟು ಮಾಡಿದೆ.

    ತನ್ನ ಬಲವನ್ನು ಕುಗ್ಗಿಸಿಕೊಂಡು, ಅನ್ಯಪಕ್ಷಕ್ಕೆ ಶಕ್ತಿ ತುಂಬಿದ ಜೆಡಿಎಸ್


    ಕಳೆದ ಬಾರಿ ಕ್ಷೇತ್ರ ಬಿಟ್ಟುಕೊಟ್ಟ ಕಾಂಗ್ರೆಸ್ ಪಕ್ಷವು ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲಿ ತನ್ನ ಸಾಮರ್ಥ್ಯವನ್ನು ಗಣನೀಯವಾಗಿ ವೃದ್ಧಿಸಿಕೊಂಡಿದೆ. ಎಂಟು ಕ್ಷೇತ್ರಗಳ ಪೈಕಿ ನರಸಿಂಹರಾಜ, ಚಾಮರಾಜ, ಪಿರಿಯಾಪಟ್ಟಣ, ಮಡಿಕೇರಿ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದಿರುವ ಕಾಂಗ್ರೆಸ್ ತನ್ನ ನೆಲೆಯನ್ನು ವಿಸ್ತರಿಸಿಕೊಂಡಿದೆ.


    ತನ್ನ ಬಲವನ್ನು ಹೆಚ್ಚಿಸಿಕೊಂಡಿರುವ ಕೈ ಪಡೆ ಹೊಸ ಚೈತನ್ಯ ಪಡೆದುಕೊಂಡಿತು. ಆದರೆ ಜೆಡಿಎಸ್ ಕುಸಿತ ಕಂಡಿತು. ಜೆಡಿಎಸ್ ಹುಣಸೂರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾತ್ರ ಜಯ ಸಾಧಿಸಿತು. ಪಿರಿಯಾಪಟ್ಟಣ ಕ್ಷೇತ್ರವನ್ನು ಜೆಡಿಎಸ್ ಕಳೆದುಕೊಂಡಿತು. ಕೃಷ್ಣರಾಜ ಕ್ಷೇತ್ರ ಮಾತ್ರ ಬಿಜೆಪಿ ತೆಕ್ಕೆಯಲ್ಲಿದೆ.

    ಈ ಸಲ ಜೆಡಿಎಸ್ ಪಕ್ಷವು ಮೈತ್ರಿ ಮಾಡಿಕೊಂಡಿರುವ ಬಿಜೆಪಿಗೂ ಸಂಘಟನಾ ಬಲವೃದ್ಧಿಸಿಕೊಳ್ಳಲು ಈ ಚುನಾವಣೆ ಪರೋಕ್ಷವಾಗಿ ನೆರವಾಗಲಿದೆ. ಜಾ.ದಳದ ಬೆಂಬಲ, ಸಂಘಟನೆ ಶಕ್ತಿಯನ್ನು ಉಪಯೋಗಿಸಿಕೊಂಡು ಇಡೀ ಕ್ಷೇತ್ರಾದ್ಯಂತ ಬಿಜೆಪಿ ತನ್ನ ಸಾಮರ್ಥ್ಯ ವಿಸ್ತರಣೆ ಮಾಡಿಕೊಳ್ಳುವುದು ಖಚಿತ. ಆದರೆ ಜೆಡಿಎಸ್ ಬೆಳೆವಣಿಗೆಗೆ ನೀರೆಯುವವರು ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts