More

    ಮೈತ್ರಿ; ಬಿಜೆಪಿಯಿಂದ ದೋಸ್ತಿ ಬಂಧ ಬೆಸೆಯಲು ಕಸರತ್ತು

    ಬೆಂಗಳೂರು: ಹ್ಯಾಟ್ರಿಕ್ ಗೆಲುವು ಸಾಧಿಸಿ ಪ್ರಧಾನಿ ಗದ್ದುಗೆ ಮೇಲೆ ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಕೂಡಿಸಲು ಬಿಜೆಪಿ ರಾಷ್ಟ್ರೀಯ ನಾಯಕರು ತಂತ್ರಗಾರಿಕೆ ಹೆಣೆದಿದ್ದಾರೆ. ಅದರ ಭಾಗವಾಗಿ ಎನ್‌ಡಿಎ ತೆಕ್ಕೆಗೆ ಜೆಡಿಎಸ್ ಸೆಳೆದುಕೊಂಡು ರಾಜ್ಯದಲ್ಲಿ ಮೂರು ಕ್ಷೇತ್ರಗಳನ್ನು ಹಂಚಿಕೆ ಮಾಡಲಾಗಿದೆ.

    ಈ ತರಹದ ಮೈತ್ರಿ ರಾಜ್ಯ ಬಿಜೆಪಿ ನಾಯಕರಿಗೆ ಹೊಸತು. ಚುನಾವಣೆ ಹೊಸ್ತಿಲಲ್ಲಿ ಇಂತಹ ತೀರ್ಮಾನ ಕೈಗೊಂಡಿರುವ ಕಾರಣ ಹೊಂದಾಣಿಕೆಗೆ ಒಗ್ಗಿಕೊಳ್ಳಲು ಪ್ರಯತ್ನ ನಡೆಯುತ್ತಿದೆ.ಆದರೆ ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಇನ್ನೂ ಸ್ಪಷ್ಟತೆ ಇಲ್ಲ.

    ಮೈತ್ರಿ ವಿಚಾರ ಜೆಡಿಎಸ್, ಬಿಜೆಪಿ ತಳಮಟ್ಟದ ನಾಯಕರನ್ನು ಇನ್ನೂ ತಲುಪಿಲ್ಲ. ಬಿಜೆಪಿ ವಿಶ್ವಾಸಕ್ಕೆ ತೆಗೆದುಕೊಂಡಂತೆ ಕಾಣುತ್ತಿಲ್ಲ. ನವದೆಹಲಿ ಹೈಕಮಾಂಡ್ ಜೆಡಿಎಸ್ ಜತೆಗಿನ ಮೈತ್ರಿಗೆ ಮುದ್ರೆ ಒತ್ತಿರುವುದರಿಂದ ರಾಜ್ಯದ ನಾಯಕರು ತುಟಿ ಬಿಚ್ಚುತ್ತಿಲ್ಲ. ಹಾಗಾಗಿ ಕೆಳ ಹಂತದಲ್ಲಿ ಸಮನ್ವಯ ಸವಾಲಾಗಿದೆ.

    ಉಭಯ ಪಕ್ಷಗಳಲ್ಲಿ ಕಾರ್ಯಕರ್ತರಲ್ಲಿ ಒಗ್ಗಟ್ಟು ಮೂಡಿಸುವುದು, ಜೆಡಿಎಸ್‌ನಲ್ಲಿ ಗೊಂದಲ, ಆತಂಕ ನಿವಾರಿಸುವುದು ತಳ ಮಟ್ಟದ ಕಾರ್ಯಕರ್ತರನ್ನು ಒಗ್ಗೂಡಿಸಿ ಕೆಲಸ ಮಾಡುವುದು ಮೈತ್ರಿ ಪಕ್ಷಗಳಿಗೆ ಸವಾಲಾಗಿದೆ.

    ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಸಮ್ಮುಖದಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಮೈತ್ರಿ ಬಗ್ಗೆ ತೀವ್ರ ಅಪಸ್ವರ ಕೇಳಿ ಬಂದಿತ್ತು. ಅಲ್ಲದೆ, ಬಿಜೆಪಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇರುವ ಕುರಿತೂ ಅಸಮಾಧಾನ ವ್ಯಕ್ತವಾಗಿತ್ತು.

    ರಾಜ್ಯದ 18 ಲೋಕಸಭಾ ಕ್ಷೇತ್ರಗಳಲ್ಲಿ ಶೇ.3-4 ರಷ್ಟು ಮತಗಳನ್ನು ವರ್ಗಾವಣೆ ಮಾಡುವ ಮೂಲಕ ಬಿಜೆಪಿಗೆ ನಾವು ಸಹಾಯ ಮಾಡಬಹುದು. ಆದರೆ ಪ್ರಾದೇಶಿಕ ಪಕ್ಷ ಎಂದು ನಮ್ಮನ್ನು ಕಡೆಗಣಿಸಲಾಗಿದೆ ಎಂದು ಅವಲತ್ತುಕೊಂಡಿದ್ದರು.

    ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರದಲ್ಲಿ ಆರಂಭದ ದಿನಗಳಲ್ಲಿ ಕಂಡ ಉತ್ಸಾಹ ಈಗ ಕಾಣುತ್ತಿಲ್ಲ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾ.ಸಿ.ಎನ್.ಮಂಜುನಾಥ್ ಬಿಜೆಪಿ ಚಿಹ್ನೆ ಮೇಲೆ ಸ್ಪರ್ಧಿಸಿರುವುದರಿಂದ ಅಲ್ಲಿ ಮಾತ್ರ ಹುಮ್ಮಸ್ಸು ಕಾಣಿಸುತ್ತಿದೆ. ಉಳಿದೆಡೆ ಇನ್ನೂ ಜೆಡಿಎಸ್ ಕಾರ್ಯಕರ್ತರಲ್ಲಿ ಯಾವುದೇ ಉಮೇದು ಕಾಣಿಸುತ್ತಿಲ್ಲ. ಆದರೆ ತಳಮಟ್ಟದ ಕಾರ್ಯಕರ್ತರ ಒಗ್ಗೂಡಿಸುವಿಕೆಗೆ ಕಾರ್ಯತಂತ್ರ ಮಾತ್ರ ಇನ್ನು ಕಾರ್ಯರೂಪಕ್ಕೆ ಬಂದಿಲ್ಲ. ಹಾಗಾಗಿ ಬೆಳಗಾವಿ ಜಿಲ್ಲೆ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ಜೆಡಿಎಸ್ ಕಾರ್ಯಕರ್ತರು ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.

    ಮೈತ್ರಿಯ ಉದ್ದೇಶ ಸಾಲ್ಯಗೊಳ್ಳಬೇಕಾದರೆ ಜಂಟಿ ಸಭೆ, ಸಮಾವೇಶ ಆಯೋಜಿಸಬೇಕಿದೆ. ಬೂತ್ ಮಟ್ಟದಲ್ಲಿ ಬಾಂಧವ್ಯ ಬೆಸೆಯಬೇಕಿದೆ. ಕಾರ್ಯಕರ್ತರು ಒಗ್ಗಟ್ಟಿನಲ್ಲಿ ಕೆಲಸ ಮಾಡಲು ಉಭಯ ಪಕ್ಷಗಳ ನಾಯಕರು ಜಂಟಿಯಾಗಿ ಕರೆ ಕೊಡಬೇಕಿದೆ.

    2019ರಲ್ಲಿ ಕಾಂಗ್ರೆಸ್‌ಮತ್ತು ಜೆಡಿಎಸ್ ಒಟ್ಟಾಗಿ ಚುನಾವಣೆ ಎದುರಿಸಿದಾಗ ಇಬ್ಬರ ನಡುವೆ ಹೊಂದಾಣಿಕೆ ಕಂಡುಬಂದಿರಲಿಲ್ಲ. ಇದರಿಂದ ಬಿಜೆಪಿಗೆ ಲಾಭವಾಯಿತು. ಈ ಹಿಂದಣ ಚರಿತ್ರೆಯನ್ನು ನೆನಪಿನಲ್ಲಿಟ್ಟುಕೊಂಡು ಮುಂದಣ ಹೆಜ್ಜೆ ಇಡಬೇಕಾದ ಹೊಣೆಗಾರಿಕೆ ಎರಡೂ ಪಕ್ಷಗಳಲ್ಲಿದೆ.

    ಹಲವುಕಡೆ ಜೆಡಿಎಸ್ ಬೆಂಬಲ ನಿರ್ಣಾಯಕ

    ಹಾಸನ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯ ಬೆಂಬಲವು ಜೆಡಿಎಸ್‌ಗೆ ನಿರ್ಣಾಯಕವಾಗಲಿದೆ. ಜೆಡಿಎಸ್ ಬೆಂಬಲವು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಹೆಚ್ಚು ಸಹಾಯ ಮಾಡುತ್ತದೆ. ಹಲವು ಸ್ಥಾನಗಳ ಹೊರತಾಗಿ ಮೈಸೂರು, ತುಮಕೂರು ಮತ್ತು ಚಿಕ್ಕಬಳ್ಳಾಪುರದಲ್ಲಿ ಒಕ್ಕಲಿಗ ಸಮುದಾಯದ ಮತಗಳನ್ನು ಸೆಳೆಯಲು ಬಿಜೆಪಿಗೆ ಜೆಡಿಎಸ್‌ನ ಅಗತ್ಯವಿದೆ. ಬೀದರ್ ಕ್ಷೇತ್ರದಲ್ಲಿ ಬಿಜೆಪಿಗೆ ಜೆಡಿಎಸ್ ನೆರವಿನ ಅಗತ್ಯವಿದೆ. ಉತ್ತರ ಕರ್ನಾಟಕ ಮತ್ತು ಕರಾವಳಿ ಕರ್ನಾಟಕದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯಲಿದ್ದು, ಹಲವು ಕಡೆ ಬಿಜೆಪಿಗೆ ಜೆಡಿಎಸ್‌ನ ಬಲ ಬೇಕಿದೆ.

    ದೋಸ್ತಿ ಬೆಸೆಯಲು ಕೇಸರಿಪಡೆ ಕಸರತ್ತು

    – ಹಾಸನ, ಮಂಡ್ಯ, ಕೋಲಾರ ಲೋಕಸಭೆ ಕ್ಷೇತ್ರಗಳಿಗೆ ಮೊದಲ ಆದ್ಯತೆ
    – ಉಭಯ ಪಕ್ಷಗಳ ಸಂಘಟನೆ ಬಲಿಷ್ಠವಾಗಿರುವ ವಿಧಾನಸಭೆ ಕ್ಷೇತ್ರಗಳ ಗುರುತು
    – ಸ್ವಪಕ್ಷದ ವಿವಿಧ ಹಂತದ ಮುಖಂಡರು, ಕಾರ್ಯಕರ್ತರಿಗೆ ವಸ್ತುಸ್ಥಿತಿ ಅರಿವು
    – ವೈಯಕ್ತಿಕ ಹಿತ ಬದಿಗೊತ್ತಿ ರಾಷ್ಟ್ರದ ಹಿತಕ್ಕಾಗಿ ಜೆಡಿಎಸ್ ಮೈತ್ರಿಯ ಮನವರಿಕೆ
    – ಬೂತ್, ಮಂಡಲ, ಜಿಲ್ಲಾ ಹಂತದಲ್ಲಿ ಒಂದೇ ವೇದಿಕೆಯಡಿ ತರಲು ಜಂಟಿ ಸಭೆ
    – ಪಕ್ಷ ಅಧಿಕಾರಕ್ಕೆ ತರಲು ಒಗ್ಗೂಡಿ ಶ್ರಮಿಸಿದವರಿಗೆ ಉತ್ತಮ ಅವಕಾಶದ ಭರವಸೆ
    – ಎರಡನೇ ಹಂತದಲ್ಲಿ ಕಲ್ಯಾಣ ಕರ್ನಾಟಕ ಲೋಕಸಭೆ ಕ್ಷೇತ್ರಗಳಿಗೆ ಹೆಚ್ಚಿನ ಗಮನ
    – ಬೀದರ್, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಸಂಘಟನೆ ಸದೃಢ ಪಟ್ಟಿ ಸಿದ್ಧ
    – ಎರಡೂ ಪಕ್ಷಗಳ ಸಂಘಟನೆ ದುರ್ಬಲವಾಗಿರುವೆಡೆ ಜಂಟಿ ತಂತ್ರಗಾರಿಕೆಗೆ ಚಿಂತನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts