More

    ಅಲ್ಲಾಪೂರ ಕೆರೆ ಒಡೆಯುವ ಭೀತಿ!

    ಕುಂದಗೋಳ: ತಾಲೂಕಿನಲ್ಲಿ ಕಳೆದ 15 ದಿನಗಳಂದ ಸುರಿಯುತ್ತಿರುವ ನಿರಂತರ ಮಳೆಗೆ ಅಲ್ಲಾಪೂರ ಗ್ರಾಮದ ಕೆರೆಯ ಬದುವು ಒಡೆದು ಅಪಾರ ಪ್ರಮಾಣದ ನೀರು ಪೋಲಾಗಿದೆ.

    ಕೆರೆಯ ಬದುವು ಮೂರ್ನಾಲ್ಕು ದಿನಗಳ ಹಿಂದೆಯೇ ಒಡೆದಿದೆ. ಈ ಕುರಿತು ತಹಸೀಲ್ದಾರ್ ಹಾಗೂ ತಾಪಂ ಇಒ ಗಮನಕ್ಕೆ ತಂದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.

    ಈ ಗ್ರಾಮದಲ್ಲಿ 1500 ಜನಸಂಖ್ಯೆ ಇದ್ದು, ಕುಡಿಯಲು ಇದೇ ಕೆರೆಯ ನೀರನ್ನು ಅವಲಂಬಿಸಿದ್ದಾರೆ. ಇನ್ನು ಜಾನುವಾರು ಹಾಗೂ ದಿನನಿತ್ಯದ ಬಳಕೆಗೂ ಇದೇ ಕೆರೆಯನ್ನೇ ನೆಚ್ಚಿಕೊಂಡಿದ್ದಾರೆ.

    ಕೆರೆಯ ಬದುವು ಒಡೆದಿರುವುದನ್ನು ಗ್ರಾಮಸ್ಥರು ಗಮನಿಸಿ ಕೆರೆಯ ಬದುವಿಗೆ ಉಸುಕು ಹಾಗೂ ಮಣ್ಣಿನ ಚೀಲಗಳನ್ನು ತುಂಬಿ ಮಿಜ್ಜಿ ಕಟ್ಟಿ ಹಾಕಿದರೂ ಬದುವು ಒಡೆಯುವುದು ನಿಲ್ಲುತ್ತಿಲ್ಲ. ಕೆರೆಗೆ ದಿನದಿಂದ ದಿನಕ್ಕ ಒಳಹರಿವಿನ ಪ್ರಮಾಣ ಹೆಚ್ಚುತ್ತಿದೆ. ಇದು ಹೀಗೆ ಮುಂದುವರಿದರೆ ಗ್ರಾಮಕ್ಕೂ ನೀರು ನುಗ್ಗುವ ಅಪಾಯ ಇದೆ ಎಂದು ಗ್ರಾಮಸ್ಥರು ವಿವರಿಸುತ್ತಿದ್ದಾರೆ.

    ಈ ಕೆರೆ 6 ಎಕರೆ 20 ಗುಂಟೆ ವಿಸ್ತೀರ್ಣ ಹೊಂದಿದೆ. ಈ ಕೆರೆಗೆ ಪಕ್ಕದ ಜಮೀನುಗಳಿಂದ ನೀರು ಹರಿದು ಬರುತ್ತದೆ. ಈ ಕೆರೆ ಒಮ್ಮೆ ತುಂಬಿದರೆ ಮೂರ್ನಾಲ್ಕು ವರ್ಷ ನೀರಿನ ಸಮಸ್ಯೆ ಇರುವುದಿಲ್ಲ. ಆದರೆ, ಹೀಗೆ ನೀರು ಪೋಲಾದರೆ ಬೇರೆ ನೀರಿನ ಮೂಲ ಇಲ್ಲದ್ದರಿಂದ ಮುಂದಿನ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕರ ಎದುರಾಗಲಿದೆ ಎಂದು ಗ್ರಾಮದ ಶಿವಲಿಂಗಪ್ಪ ಅಂಗಡಿ ತಮ್ಮ ಅಳಲು ತೊಂಡಿಕೊಂಡರು.

    ಕೆರೆ ಬದುವು ಒಡೆಯಲು ಕಾರಣ

    ನಿರಂತರ ಮಳೆ ಸುರಿಯುತ್ತಿರುವ ಕಾರಣ ಸುತ್ತಮುತ್ತಲಿನ ಜಮೀನುಗಳಿಲ್ಲಿನ ಪಾರ ಪ್ರಮಾಣದ ನೀರು ಕೆರೆಗೆ ಹರಿದುಬರುತ್ತಿದೆ. ಕೆರೆ ತುಂಬಿ ಹೊರ ಹೋಗುವ ಸ್ಥಳದಲ್ಲಿ ಮೊದಲೇ ಬಿರುಕು ಬಿಟ್ಟಿತ್ತು. ಈಗ ನೀರಿನ ಸಂಗ್ರಹ ಹೆಚ್ಚಾಗುತ್ತಿದ್ದಂತೆ ಬಿರುಕು ಬಿಟ್ಟ ಸ್ಥಳ ಒಡೆದು ನೀರು ಹೊರಹೋಗುತ್ತಿದೆ. ಕೆರೆಗೆ ಹರಿದು ಬರುವ ನೀರಿನ ಪ್ರಮಾಣ ಹೀಗೆ ಮುಂದುವರಿದರೆ ಕೆರೆ ಒಡೆದು ಸುತ್ತಲಿನ ಜಮೀನುಗಳು ಜಲಾವೃತವಾಗಿ ಗ್ರಾಮಕ್ಕೂ ನೀರು ನುಗ್ಗುವ ಆತಂಕ ಗ್ರಾಮಸ್ಥರಿಗೆ ಎದುರಾಗಿದೆ.

    ಇಂದು ಕಾರ್ವಿುಕರನ್ನು ಕರೆದುಕೊಂಡು ಬಂದು ಬದುವು ಗಟ್ಟಿ ಮಾಡಿದ್ದೇವೆ. ಸದ್ಯಕ್ಕೆ ನೀರು ಹೊರಹೋಗುವ ಪ್ರಮಾಣ ನಿಂತಿದೆ. ನಾಳೆ ಬೆಳಗ್ಗೆ ಹೋಗಿ ಮತ್ತೆ ಕೆರೆ ವೀಕ್ಷಿಸುತ್ತಿವೆ. – ಬಸವರಾಜ ಕೊಳೆರಿ, ಗುಡೇನಕಟ್ಟಿ ಗ್ರಾಪಂ ಪಿಡಿಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts