More

    ಜನಸಾಮಾನ್ಯರ ಜಾತ್ರೆಗೆ ಸುತ್ತೂರು ಸುಕ್ಷೇತ್ರ ಸಜ್ಜು

    ನಂಜನಗೂಡು: ನಾಡಿನ ಪರಂಪರೆ ಹಾಗೂ ಸಂಸ್ಕೃತಿಯನ್ನು ಎತ್ತಿಹಿಡಿಯುವ ಹಾಗೂ ಕೃಷಿಗೆ ಪೂರಕವಾಗಿ ರೈತರಿಗೆ ಉಪಯುಕ್ತ ಮಾಹಿತಿ ನೀಡುವ ಜನಸಾಮಾನ್ಯರ ಜಾತ್ರೆ ಎಂದೇ ಪ್ರಸಿದ್ಧಿ ಪಡೆದಿರುವ ಸುತ್ತೂರು ಜಾತ್ರಾ ಮಹೋತ್ಸವಕ್ಕೆ ಸುಕ್ಷೇತ್ರ ಸಜ್ಜಾಗಿದೆ.

    ಫೆ.6ರಿಂದ 11ರವರೆಗೆ ಜಾತ್ರೆ ನಡೆಯಲಿದ್ದು, ಜನಾಕರ್ಷಣೆ ಹೆಚ್ಚಿಸುವ ಸಲುವಾಗಿ ವಿಭಿನ್ನತೆಗೆ ಸುತ್ತೂರು ವೀರಸಿಂಹಾಸನಾ ಮಹಾಸಂಸ್ಥಾನ ಮಠ ತನ್ನನ್ನು ತೆರೆದುಕೊಂಡಿದೆ. ಜಾತ್ರೆಯ ಪ್ರಮುಖ ಆಕರ್ಷಣೆಯಾಗಿರುವ ವಸ್ತುಪ್ರದರ್ಶನ, ಕೃಷಿ ಮೇಳಕ್ಕೆ ಅಂತಿಮ ಸ್ಪರ್ಶ ನೀಡಲಾಗಿದೆ. ಮಹಾದಾಸೋಹಕ್ಕಾಗಿ ಸಿದ್ಧತಾ ಕಾರ್ಯ ಪೂರ್ಣಗೊಂಡಿದೆ. ಜಾತ್ರೆಯನ್ನು ಕಣ್ತುಂಬಿಕೊಳ್ಳಲು ದೇಶ, ವಿದೇಶ ಸೇರಿದಂತೆ ರಾಜ್ಯದ ನಾನಾ ಭಾಗದಿಂದ ಆಗಮಿಸುವ ಲಕ್ಷಾಂತರ ಭಕ್ತರ ಆತಿಥ್ಯವಹಿಸಲು ಸಕಲ ತಯಾರಿ ನಡೆದಿದೆ.

    ಮಠದ ಗದ್ದುಗೆ ಆವರಣದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗಿದೆ. ನಿತ್ಯ ಎರಡು ಪ್ರತ್ಯೇಕ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಈ ವೇದಿಕೆಯಲ್ಲಿಯೇ ಬೆಳಗ್ಗೆ ಹಾಗೂ ರಾತ್ರಿ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸಲಿವೆ.

    ಉಚಿತ ಸಾಮೂಹಿಕ ವಿವಾಹಕ್ಕೆ ಶಾಲಾ ಕಟ್ಟಡಗಳ ಸಂಕೀರ್ಣ ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಿಸಿ ಐದು ಸಾವಿರಕ್ಕೂ ಹೆಚ್ಚು ಆಸನ ವ್ಯವಸ್ಥೆ ಮಾಡಲಾಗಿದೆ. ಇದೇ ವೇದಿಕೆಯಲ್ಲಿ ಚಿತ್ರಸಂತೆ, ದೇಸಿ ಆಟಗಳ ಕಲರವಕ್ಕೂ ಅನುವು ಮಾಡಿಕೊಳ್ಳಲಾಗಿದೆ. ಇದರ ಕೂಗಳತೆ ದೂರದಲ್ಲಿ ಕುಸ್ತಿ ಅಖಾಡವನ್ನು ಸಿದ್ಧಪಡಿಸಲಾಗಿದೆ.

    ಮಠದ ಗದ್ದುಗೆಯ ಸಮುಚ್ಚಯ, ವಸತಿನಿಲಯಗಳು, ಅತಿಥಿಗೃಹ, ಶಾಲಾ ಕಟ್ಟಡಗಳ ಸಂಕೀರ್ಣ ಸೇರಿದಂತೆ ಪ್ರಮುಖ ಕಟ್ಟಡಗಳಿಗೆ ವಿದ್ಯುತ್ ದೀಪಾಲಂಕಾರ ಕೈಗೊಳ್ಳಲಾಗಿದೆ. ಗಣ್ಯರ ಆಗಮನಕ್ಕಾಗಿ ಶಾಲಾ ಮೈದಾನದಲ್ಲಿ ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಿಸಲಾಗುತ್ತಿದೆ. ಮೈಸೂರು ಹಾಗೂ ನಂಜನಗೂಡು ಕಡೆಯಿಂದ ಸುತ್ತೂರು ಪ್ರವೇಶಿಸುವ ಮಾರ್ಗದಲ್ಲಿ ಬೃಹತ್ ಸ್ವಾಗತ ಕಮಾನ್ ಗೇಟ್ ನಿರ್ಮಿಸಲಾಗಿದೆ.

    ಆಯಕಟ್ಟಿನ ಸ್ಥಳಗಳಲ್ಲಿ ಕುಡಿಯುವ ನೀರು, ತಾತ್ಕಾಲಿಕ ಶೌಚಗೃಹ, ಮಾಹಿತಿ ಕೇಂದ್ರ ತೆರೆದು ಜಾತ್ರೆಗೆ ಆಗಮಿಸುವ ಭಕ್ತರಿಗೆ ನೆರವಿನ ವ್ಯವಸ್ಥೆ ಕಲ್ಪಿಸಲಾಗಿದೆ. ವಾಣಿಜ್ಯ ವ್ಯಾಪಾರ ವಹಿವಾಟಿಗಾಗಿ ಶಾಲಾ ಕಟ್ಟಡಗಳ ಸಂಕೀರ್ಣ, ರಸ್ತೆ ಬದಿಯಲ್ಲಿ ತಾತ್ಕಾಲಿಕ ಅಂಗಡಿಗಳಿಗೆ ಅನುವು ಮಾಡಿಕೊಡಲಾಗಿದೆ.

    25 ಲಕ್ಷ ಭಕ್ತರಿಗೆ ದಾಸೋಹ: ಆರು ದಿನಗಳ ಜಾತ್ರೆಯಲ್ಲಿ ಪ್ರತಿದಿನ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ವೇಳೆ ಲಕ್ಷೋಪಾದಿ ಭಕ್ತರಿಗೆ ಮಹಾದಾಸೋಹ ಕಲ್ಪಿಸಲು ಶ್ರೀಮಠ ಮುಂದಾಗಿದೆ. ಗದ್ದುಗೆಗೆ ಹೊಂದಿಕೊಂಡಂತೆ ಮಹಾ ದಾಸೋಹ ಕೇಂದ್ರ ತೆರೆಯಲಾಗಿದೆ. ಮಹಿಳೆಯರು, ಪುರುಷರು ಹಾಗೂ ಸ್ವಯಂ ಸೇವಕರಿಗೆ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಲಾಗಿದೆ.

    ವಿಶೇಷ ಆಹ್ವಾನಿತರಿಗೆ ಜೆಎಸ್‌ಎಸ್ ವಿದ್ಯಾರ್ಥಿನಿಲಯ, ರಾಜೇಂದ್ರ ಅತಿಥಿಗೃಹ, ಕೃಷಿ ವಿಜ್ಞಾನ ಕೇಂದ್ರ, ಊರ ಮಠ, ವಸ್ತುಪ್ರದರ್ಶನ ಆವರಣ ಹಾಗೂ ಹರಗುರು ಚರಮೂರ್ತಿಗಳಿಗೆ ಆಶ್ರಮದಲ್ಲಿ ದಾಸೋಹ ನಡೆಯಲಿದೆ.

    ದಾಸೋಹಕ್ಕಾಗಿ ಈಗಾಗಲೇ ಉಗ್ರಾಣದಲ್ಲಿ ಅಗತ್ಯ ದಾಸ್ತಾನು ಶೇಖರಿಸಲಾಗಿದೆ. ರಾಯಚೂರು ಜಿಲ್ಲೆಯ ಸಿಂಧನೂರಿನಿಂದ ಒಂದು ಸಾವಿರ ಕ್ವಿಂಟಾಲ್ ಅಕ್ಕಿ, 1500 ಅಡುಗೆ ಎಣ್ಣೆ ಕ್ಯಾನ್, 25 ಟನ್ ಬೆಲ್ಲ, 250 ಕ್ವಿಂಟಾಲ್ ತೊಗರಿಬೇಳೆ, ಬಣ್ಣಾರಿ ಶುಗರ್ಸ್‌ ಕಾರ್ಖಾನೆ ಯಿಂದ 200 ಕ್ವಿಂಟಾಲ್ ಸಕ್ಕರೆ, 25 ಸಾವಿರ ತೆಂಗಿನಕಾಯಿ, 500 ಕೆ.ಜಿ. ನಂದಿನಿ ತುಪ್ಪ, ತಲಾ 800 ಕೆ.ಜಿ. ಗೋಡಂಬಿ ದ್ರಾಕ್ಷಿ ಪೂರೈಕೆಯಾಗಿದೆ. ಪ್ರತಿನಿತ್ಯ 8 ಸಾವಿರ ಲೀಟರ್ ಹಾಲು ಹಾಗೂ 28 ಸಾವಿರ ಲೀಟರ್ ಮೊಸಲು ಪೂರೈಕೆಯಾಗಲಿದೆ. ಇದಕ್ಕಾಗಿ ಪ್ರತ್ಯೇಕ ಶೇಖರಣಾ ಘಟಕ ತೆರೆಯಲಾಗಿದೆ. ಮೈಸೂರು, ಗುಂಡ್ಲುಪೇಟೆ ಹಾಗೂ ಪಾಂಡವಪುರ ಎಪಿಎಂಸಿಯಿಂದ ಪ್ರತಿದಿನ ತರಕಾರಿಯನ್ನು ಸೇವಾರ್ಥದಾರರು ಒದಗಿಸಲಿದ್ದಾರೆ.

    ದಾಸೋಹ ಸಿದ್ಧಪಡಿಸಲು 500 ಬಾಣಸಿಗರು ಹಾಗೂ ಸುತ್ತಮುತ್ತಲಿನ ಹಳ್ಳಿಗರು, ಸಂಘ ಸಂಸ್ಥೆಗಳು, ಜೆಎಸ್‌ಎಸ್ ಸಂಸ್ಥೆಗಳ ನೌಕರರು ಸೇರಿ 5000 ಜನರು ತೊಡಗಿಸಿಕೊಳ್ಳಲಿದ್ದಾರೆ. 36 ಬೃಹತ್ ಒಲೆಗಳಲ್ಲಿ ದಾಸೋಹ ಸಿದ್ಧಗೊಳ್ಳಲಿದೆ. ಒಮ್ಮೆಗೆ 36 ಬೃಹತ್ ಕೊಪ್ಪರಿಕೆಗಳಲ್ಲಿ ಐದು ಕ್ವಿಂಟಾಲ್ ಅನ್ನ ತಯಾರಿಸಲಾಗುತ್ತದೆ. ಸಿದ್ಧನಂಜ ದೇಶಿಕೇಂದ್ರ ಮಂಪಟದಲ್ಲಿ 100 ಕ್ವಿಂಟಾಲ್ ವಿವಿಧ ಸಿಹಿ ಖಾದ್ಯ ತಯಾರಿ ಪ್ರತ್ಯೇಕವಾಗಿ ಆಗಲಿದೆ. ಆರು ದಿನಗಳವರೆಗೂ ಮಹಾದಾಸೋಹ ತಯಾರಿಗೆ ಅಗತ್ಯ ಸೌದೆ ಸಂಗ್ರಹಿಸಲಾಗಿದೆ.

    ಕೃಷಿ ಮೇಳ ಆಕರ್ಷಣೆ: ಮೂರು ಎಕರೆ ಪ್ರದೇಶದಲ್ಲಿ ಕೃಷಿ ಮೇಳ ಆಯೋಜಿಸಲಾಗಿದೆ. ಪ್ರಸಕ್ತ ವರ್ಷ ಬರಗಾಲ ಎದುರಾಗಿರುವ ಹಿನ್ನೆಲೆಯಲ್ಲಿ ಹನಿ ಹನಿಗೂ ಭರಪೂರ ತೆನೆ ಶೀರ್ಷಿಕೆಯಡಿ ಕಡಿಮೆ ನೀರಿನ ಬಳಕೆ ಮಾಡಿ ಲಾಭದಾಯಕ ಬೆಳೆ ತೆಗೆಯುವ ಕುರಿತು ರೈತರಿಗೆ ಅರಿವು ಮೂಡಿಸುವ ಕೃಷಿ ಮೇಳ ರೈತರನ್ನು ಆಕರ್ಷಿಸಲಿದೆ. 30 ದಿನದಿಂದ 90 ದಿನದೊಳಗೆ ಬೆಳೆಯಬಹುದಾದ 160 ಬೆಳೆಗಳ ಪ್ರಾತ್ಯಕ್ಷಿತೆ ಕಾಣಬಹುದಾಗಿದೆ. ಸಿರಿಧಾನ್ಯ ಹಾಗೂ ತೋಟಗಾರಿಕೆ ಬೆಳೆಗಳಿಗೆ ಒತ್ತು ನೀಡಲಾಗಿದೆ.

    ತಂತ್ರಜ್ಞಾನವನ್ನು ಅಳವಡಿಸಿಕೊಂಡು ಆಧುನಿಕ ಕೃಷಿ ಪದ್ಧತಿಯನ್ನು ಕೈಗೊಳ್ಳುವ ಬಗ್ಗೆ ರೈತರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಒಂದು ಎಕರೆ ಪ್ರದೇಶದಲ್ಲಿ 90 ಬೆಳೆಗಳ ಕೃಷಿ ಬ್ರಹ್ಮಾಂಡ ನಿರ್ಮಿಸಲಾಗಿದೆ. ಬಿತ್ತನೆ ಬೀಜ ಹಾಗೂ ಕೃಷಿ ಸಂಶೋಧನೆಗಳ ಪ್ರದರ್ಶನಕ್ಕಾಗಿ ಮಳಿಗೆ ತೆರೆಯಲಾಗಿದೆ.

    ಈ ಬಾರಿ ವಿಶೇಷವೆಂದರೆ ವಿಭಾಗಾವಾರು ಬೆಳೆಗಳ ಬಗ್ಗೆ ಪೂರ್ಣ ವಿವರವನ್ನು ತಿಳಿದುಕೊಳ್ಳುವ ಸಲುವಾಗಿ ಕ್ಯೂಆರ್ ಕೋಡ್ ವ್ಯವಸ್ಥೆಯನ್ನು ಮಾಡಲಾಗಿದೆ. ತಮ್ಮ ಮೊಬೈಲ್‌ನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಮಾಡಿದರೆ ಬೆಳೆಗಳನ್ನು ಬೆಳೆಯುವ ವಿಧಾನ ಹಾಗೂ ಎಲ್ಲ ರೀತಿಯ ಸಂಪೂರ್ಣ ಮಾಹಿತಿಯನ್ನು ರೈತರಿಗೆ ಒದಗಿಸುವ ವಿನೂತನ ಪ್ರಯತ್ನ ನಡೆಯಲಿದೆ.

    ವಸ್ತುಪ್ರದರ್ಶನ: ಈ ಬಾರಿ ವಸ್ತುಪ್ರದರ್ಶನದಲ್ಲಿ 350 ಮಳಿಗೆಗಳನ್ನು ತೆರೆಯಲಾಗುತ್ತಿದೆ. ವಾಣಿಜ್ಯ, ಗುಡಿ ಕೈಗಾರಿಕೆ, ಕೈಮಗ್ಗ, ಸರ್ಕಾರಿ ವಲಯ ಹಾಗೂ ಜೆಎಸ್‌ಎಸ್ ಸಂಸ್ಥೆಗಳ ಶೈಕ್ಷಣಿಕ, ಆರೋಗ್ಯ, ತಾಂತ್ರಿಕ ವಿಭಾಗಗಳಲ್ಲಿ ಮಳಿಗೆ ಹಂಚಿಕೆ ಮಾಡಲಾಗಿದೆ. ಜೆಎಸ್‌ಎಸ್ ಅಂತರ ಸಂಸ್ಥೆಗಳ ಸಾಂಸ್ಕೃತಿಕ ಉತ್ಸವಕ್ಕಾಗಿ ಬೃಹತ್ ವೇದಿಕೆ ನಿರ್ಮಿಸಲಾಗಿದ್ದು, ಪ್ರತಿನಿತ್ಯ ರಸದೌತಣ ಉಣಬಡಿಸಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts