More

    ಮಣಿದ ಸರ್ಕಾರ, ಮೀಸಲು ನೀಡಲು ನಿರ್ಧಾರ: ಮೀಸಲಾತಿ ಹೆಚ್ಚಳಕ್ಕೆ ಸರ್ವಪಕ್ಷ ಸಭೆ

    ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ಒತ್ತಡಕ್ಕೆ ಕೊನೆಗೂ ಸರ್ಕಾರ ಮಣಿದಿದೆ. ಈ ವರ್ಗಗಳ ಮೀಸಲಾತಿ ಹೆಚ್ಚಳ ಕುರಿತು ಒಂದು ವಾರದ ಒಳಗೆ ಸರ್ವಪಕ್ಷ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

    ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕರ ಧರಣಿ ನಡುವೆ ಸ್ವಯಂ ಹೇಳಿಕೆ ನೀಡಿದ ಅವರು, ಮೀಸಲು ಪರಿಷ್ಕರಣೆ ಕುರಿತು ನ್ಯಾ. ನಾಗಮೋಹನ್ ದಾಸ್ ಸಮಿತಿ ಮತ್ತು ನ್ಯಾ. ಸುಭಾಷ್ ಆಡಿ ಸಮಿತಿ ವರದಿಗಳು ಸಲ್ಲಿಕೆಯಾಗಿವೆ. ಮಿಸಲು ಹೆಚ್ಚಳ ಸಂವಿಧಾನ ಮತ್ತು ಕಾನೂನಾತ್ಮಕ ವಿಚಾರ. ಈ ಸಂಬಂಧ ಸರ್ವಪಕ್ಷ ಸಭೆ ಕರೆದು ಚರ್ಚೆ ಮಾಡಿ ಮುಂದಿನ ಹೆಜ್ಜೆಗಳನ್ನು ಇಡಬೇಕಿದೆ ಎಂದು ಹೇಳಿದರು.

    ಸರ್ವಪಕ್ಷ ಸಭೆ ಬಗ್ಗೆ ಪ್ರತಿಪಕ್ಷ ನಾಯಕರೊಂದಿಗೆ ರ್ಚಚಿಸಿ ದಿನಾಂಕ ನಿಗದಿ ಪಡಿಸಲಾಗುವುದು. ಆಯಾ ಜನಾಂಗಕ್ಕೆ ನ್ಯಾಯ ಕೊಡಿಸಲು ಸರ್ಕಾರ ಬದ್ಧವಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕೊಡಿಸಬೇಕೆಂಬುದು ಸರ್ಕಾರದ ದೃಢ ನಿಶ್ಚಯ ಎಂದರು.

    ಸರ್ಕಾರದ ಸ್ಪಂದನೆ: ಕಾನೂನಾತ್ಮಕವಾಗಿ ಯಾವ ತೀರ್ಮಾನ ಕೈಗೊಳ್ಳಬೇಕು. ಯಾವ ಹೆಜ್ಜೆ ಇಡಬೇಕು ಎಂಬುದನ್ನು ರ್ಚಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಬಹುದಿನಗಳ ಬೇಡಿಕೆಗೆ ನ್ಯಾಯ ಒದಗಿಸಲು ಸರ್ವ ಪಕ್ಷದ ಸಭೆ ಕರೆಯಲಾಗುತ್ತಿದೆ. ವಾಲ್ಮೀಕಿ ಸ್ವಾಮೀಜಿಗಳು ಧರಣಿ ಕೈಬಿಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ದನಿಗೂಡಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಶಿಕ್ಷಣ ಮತ್ತು ಉದ್ಯೋಗದಲ್ಲಿ ನ್ಯಾ.ನಾಗಮೋಹನ್ ದಾಸ್ ವರದಿ ಪ್ರಕಾರ ಎಸ್ಸಿ, ಎಸ್ಟಿ ಮೀಸಲು ಪ್ರಮಾಣ ಶೇ.22 ಆಗಬೇಕು. ಒಟ್ಟಾರೆ ಮೀಸಲಾತಿ ಶೇ.56ಕ್ಕೆ ಏರಿಕೆಯಾಗಲಿದೆ. ಈ ವಿಚಾರದಲ್ಲಿ ವಿಳಂಬ ಸಲ್ಲದು. ತಕ್ಷಣ ಸರ್ವಪಕ್ಷ ಸಭೆ ಕರೆದು ತೀರ್ಮಾನ ತೆಗೆದುಕೊಳ್ಳಬೇಕು ಎಂದರು.

    ಸ್ವಾಮೀಜಿ ಧರಣಿ ಕೈಬಿಡಲು ಮನವಿ: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಮೀಸಲಾತಿ ಸಂಬಂಧ ಸರ್ವ ಪಕ್ಷಗಳ ಸಭೆ ಕರೆಯಲು ನಮ್ಮ ಪಕ್ಷದ ಬೆಂಬಲವಿದೆ. ವಾಲ್ಮೀಕಿ ಸಮುದಾಯದ ಸ್ವಾಮೀಜಿ 230 ದಿನಗಳಿಂದ ಧರಣಿ ಮಾಡುತ್ತಿದ್ದು, ಅವರು ಕೂಡಲೆ ಧರಣಿ ವಾಪಸ್ ಪಡೆಯಬೇಕು ಎಂದು ಮನವಿ ಮಾಡಿದರು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ವಾಲ್ಮೀಕಿ ಸ್ವಾಮೀಜಿಗೆ ಧರಣಿ ಹಿಂಪಡೆಯಲು ಸದನದ ಮೂಲಕ ಪ್ರಾರ್ಥನೆ ಮಾಡೋಣ ಎಂದು ತಿಳಿಸಿದರು.

    ಕಲಾಪದಲ್ಲಿ ಶೇ.99 ಸದಸ್ಯರ ಹಾಜರಾತಿ: ಹದಿನೈದನೇ ವಿಧಾನಸಭೆಯ 13ನೇ ಅಧಿವೇಶನವು 10 ದಿನಗಳ 52 ಗಂಟೆ, 14 ನಿಮಿಷ ಯಶಸ್ವಿಯಾಗಿ ನಡೆಯಿತು. ಈ ಬಾರಿ ಅಧಿವೇಶನದಲ್ಲಿ ಶೇ.99 ಹಾಜರಾತಿ ಇದ್ದು, ಕೆ.ಎಸ್. ಈಶ್ವರಪ್ಪ, ರಮೇಶ್ ಜಾರಕಿಹೊಳಿ ಅನುಪಸ್ಥಿತಿ ಇತ್ತು, ಅವರ ಗೈರಿಗೆ ಮಾಹಿತಿ ಕೊಟ್ಟಿಲ್ಲ ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ. 16 ವಿಧೇಯಕಗಳನ್ನು ಮಂಡಿಸಿದ್ದು, 14 ವಿಧೇಯಕಗಳನ್ನು ಅಂಗೀಕರಿಸಲಾಗಿದೆ. 2020ನೇ ಸಾಲಿನ ಒಂದು ವಿಧೇಯಕ ಹಿಂಪಡೆಯಾಗಿದೆ ಎಂದು ವಿವರಿಸಿದರು. ಹಾಗೆಯೇ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಎಂಬಂತೆ 15 ಸಾವಿರ ಮಂದಿ ಕಲಾಪ ವೀಕ್ಷಿಸಿದ್ದಾರೆ. ಇದು ಸದನದ ಬಗ್ಗೆ ಜನರ ಆಸಕ್ತಿ ತೋರಿಸುತ್ತದೆ ಎಂದರು.

    ಒಟ್ಟು 2152 ಪ್ರಶ್ನೆ ಸ್ವೀಕರಿಸಿದ್ದು, ಸದನದಲ್ಲಿ ಉತ್ತರಿಸಬೇಕಾದ 150 ಪ್ರಶ್ನೆಗಳ ಪೈಕಿ 150 ಪ್ರಶ್ನೆಗಳಿಗೆ ಉತ್ತರಿಸಲಾಗಿದೆ. ಲಿಖಿತ ಮೂಲಕ 1632 ಪ್ರಶ್ನೆಗಳಿಗೆ ಉತ್ತರ ಮಂಡಿಸಲಾಗಿದೆ ಎಂದು ಮಾಹಿತಿ ನೀಡಿದ ಅವರು, ಶೂನ್ಯ ವೇಳೆಯಲ್ಲಿ 27 ಸೂಚನೆ ಚರ್ಚೆ ಮಾಡಲಾಗಿದೆ ಎಂದು ಹೇಳಿದರು. ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡಲು ಸಭಾ ನಾಯಕರ ಜತೆ ಚರ್ಚೆ ನಡೆಸಲಾಗಿದೆ. ಆಯ್ಕೆ ಮಾಡಲು ನಮ್ಮ ವಿವೇಚನೆ ನೀಡಿದ್ದಾರೆ. ಬೆಳಗಾವಿಯಲ್ಲಿ ಡಿಸೆಂಬರ್​ನಲ್ಲಿ ನಡೆಯುವ ಅಧಿವೇಶನದಲ್ಲಿ ಪ್ರಶಸ್ತಿ ವಿತರಿಸಲಾಗುತ್ತದೆ ಎಂದರು.

    ಮೇಲ್ಮನೆಯಲ್ಲಿ ಸದಸ್ಯರ ಅಳಲು

    ಸಭೆಗಳಲ್ಲಿ ಶಾಸಕರಿಗೆ ಮಾತ್ರ ಮನ್ನಣೆ ನೀಡಿ ವಿಧಾನ ಪರಿಷತ್ ಸದಸ್ಯರನ್ನು ಅಧಿಕೃತವಾಗಿ ಸಭೆಗೆ ಆಹ್ವಾನಿಸದೆ ಅಗೌರವ ತೋರಿಸುವ ಅಧಿಕಾರಿಗಳ ಮೇಲೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಬೇಕು ಎಂದು ಮೇಲ್ಮನೆಯಲ್ಲಿ ಸದಸ್ಯರೆಲ್ಲರೂ ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.

    ಕಾಂಗ್ರೆಸ್​ನ ಯು.ಬಿ. ವೆಂಕಟೇಶ್ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಲ್ಲಿ ಬಸವನಗುಡಿ ವ್ಯಾಪ್ತಿಯ ಫಲಾನುಭವಿಗಳ ಆಯ್ಕೆ ಸಂದರ್ಭದಲ್ಲಿ ತಮ್ಮನ್ನು ಸಭೆಗೆ ಆಹ್ವಾನಿಸಿಲ್ಲ ಎಂದು ದೂರಿದ್ದು ಸದನದಲ್ಲಿ ಚರ್ಚೆಗೆ ಗ್ರಾಸವಾಯಿತು. ನಮಗೂ ಹೀಗೆ ಅಗೌರವ ತೋರಿಸಲಾಗುತ್ತಿದೆ ಎಂದು ಬಿಜೆಪಿಯ ಆಯನೂರು ಮಂಜುನಾಥ್, ಭಾರತಿ ಶೆಟ್ಟಿ ದೂರಿದ್ದಕ್ಕೆ ಮೇಲ್ಮನೆಯಲ್ಲಿ ಎಲ್ಲ ಸದಸ್ಯರು ಕ್ರಮ ಆಗಬೇಕು ಎನ್ನುವುದಕ್ಕೆ ಧ್ವನಿಗೂಡಿಸಿದರು.

    ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಬಸವನಗುಡಿ ಪ್ರಕರಣದಲ್ಲಿ ಏನಾಗಿದೆ ಎನ್ನುವ ಮಾಹಿತಿ ತರಿಸಿ ಲೋಪವಾಗಿದ್ದರೆ ಆ ಅಧಿಕಾರಿ ಮೇಲೆ ಕ್ರಮ ಜರುಗಿಸುತ್ತೇವೆ. ಮುಂದೆ ಈ ರೀತಿಯ ಲೋಪ ಆಗದಂತೆ ಸರ್ಕಾರ ಸೂಚನೆ ನೀಡಲಿದೆ ಎಂದರು.

    ಮೇಲ್ಮನೆ ಕಲಾಪ ಕಬಳಿಸಿದ ‘ವಕ್ಪ್ ಆಸ್ತಿ’

    ‘ವಕ್ಪ್ ಆಸ್ತಿ’ ಕಬಳಿಕೆ, ಅಕ್ರಮ ಹಂಚಿಕೆ ಕುರಿತು ಅನ್ವರ್ ಮಾಣಿಪ್ಪಾಡಿ ವರದಿ ಬಗೆಗಿನ ಗದ್ದಲ, ಪ್ರತಿಭಟನೆಯು ಮೇಲ್ಮನೆ ಕಲಾಪವನ್ನು ಶುಕ್ರವಾರ ಭಾಗಶಃ ಕಬಳಿಸಿತು. ಪ್ರಶ್ನೋತ್ತರ, ಶೂನ್ಯವೇಳೆಯಡಿ ಪ್ರಸ್ತಾಪ ಮುಗಿದ ನಂತರ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಮಾತನಾಡಿ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ರಾಗಿದ್ದ ಅನ್ವರ್ ಮಾಣಿಪ್ಪಾಡಿ ‘ವಕ್ಪ್ ಆಸ್ತಿ’ ಕುರಿತು ಸಲ್ಲಿಸಿದ ವರದಿ ಸದನದಲ್ಲಿ ಮಂಡನೆಯಾಗಿದೆ. ಸದನದ ಎಲ್ಲ ಸದಸ್ಯರಿಗೆ ಕೊಟ್ಟು ನಿಲುವಳಿ ಸೂಚನೆಯಡಿ ರ್ಚಚಿಸಲು ಅವಕಾಶ ನೀಡಬೇಕು ಎಂದು ಕೋರಿದರು.

    ಈ ವೇಳೆ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ವಕ್ಪ್​ಗೆ ಸೇರಿದ ಎರಡು ಲಕ್ಷ ರೂ. ಮೌಲ್ಯದ 27,000 ಎಕರೆ ಆಸ್ತಿ ಕಬಳಿಕೆ ಹಾಗೂ ಒತ್ತುವರಿ ಬಗ್ಗೆ ಉಲ್ಲೇಖವಿದೆ. ಆದರೆ ಶಾಸನ ರಚಿಸಿದ ಸಮಿತಿಯಲ್ಲ, ಕಾರ್ಯನಡವಳಿ ಪ್ರಕಾರ ಅವಕಾಶವಿಲ್ಲ ಎಂದು ವಾದಿಸಿದರು. ಈ ಮಾತಿಗೆ ಹರಿಪ್ರಸಾದ್ ಆಕ್ಷೇಪಿಸಿ ವರದಿ ಪ್ರತಿಯನ್ನು ನೀಡದೇ ಸಭಾನಾಯಕ ಈ ಮಾತು ಹೇಳುತ್ತಿದ್ದು, ಆಡಳಿತ ಪಕ್ಷಕ್ಕೆ ಆಪಾದನೆ ಮಾಡಲು ಮಾತ್ರ ಅವಕಾಶ ಕೊಡಬೇಡಿ ಎಂದು ಸಭಾಪತಿಗೆ ಒತ್ತಾಯಿಸಿದರು. ಕಾಂಗ್ರೆಸ್ ಎಲ್ಲ ಸದಸ್ಯರು ದನಿಗೂಡಿಸಿದರೆ, ಆಡಳಿತ ಪಕ್ಷದವರು ವಿರೋಧಿಸಿದರು.

    ಅಂಗೀಕರಿಸಿದ ಮಸೂದೆಗಳು

    • ಕರ್ನಾಟಕ ಭೂ ಕಬಳಿಕೆ ನಿಷೇಧ (ತಿದ್ದುಪಡಿ) ವಿಧೇಯಕ
    • ಕರ್ನಾಟಕ ಸ್ಟಾಂಪು (3ನೇ ತಿದ್ದುಪಡಿ) ವಿಧೇಯಕ
    • ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ತಿದ್ದುಪಡಿ) ವಿಧೇಯಕ
    • ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts