More

    ಜಗದೆಲ್ಲೆಡೆ ನಾರಿಯರ ಸಾಧನೆ

    ಸವದತ್ತಿ: ಪುರುಷ ಪ್ರಧಾನ ಸಮಾಜವಿದ್ದರೂ ಮಹಿಳೆಯರಿಗೆ ವಿಶೇಷ ಸ್ಥಾನ ನೀಡಲಾಗಿದ್ದು, ಮಹಿಳೆಯರು ಇದೀಗ ಎಲ್ಲ ರಂಗಗಳಲ್ಲಿಯೂ ಕಾರ್ಯ ನಿರ್ವಹಿಸುವಷ್ಟು ಸ್ವಾವಲಂಬಿಗಳಾಗಿದ್ದಾರೆ ಎಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಮೆಚ್ಚುಗೆ ವ್ಯಕ್ತಪಡಿಸಿದರು.

    ಸ್ಥಳೀಯ ಮಾಮನಿ ಕಲ್ಯಾಣ ಮಂಟಪದಲ್ಲಿ ಭಾನುವಾರ ರಾಜ್ಯ ನೌಕರರ ಸಂಘ ಹಾಗೂ ಸರ್ಕಾರಿ ಶಾಲಾ ಶಿಕ್ಷಕರ ಸಂಘದಿಂದ ಜರುಗಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ರಾಜ್ಯ, ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರ ಕುರಿತಾಗಿ ನಮ್ಮ ಸರ್ಕಾರ ಪೊಲೀಸ್ ನೇಮಕಾತಿಯಲ್ಲಿ ಶೇ. 33 ರಷ್ಟು ಮೀಸಲಾತಿ ನೀಡಿದೆ. ಜಿಲ್ಲಾಧಿಕಾರಿ, ರಾಜ್ಯದ ಸರ್ಕಾರಿ ಮುಖ್ಯ ಕಾರ್ಯದರ್ಶಿ ಸೇರಿದಂತೆ ಶಿಕ್ಷಕ ವೃತ್ತಿಯಲ್ಲಿ ಮಹಿಳೆ, ಪುರುಷರಿಗೆ ಸಮನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಬಣ್ಣಿಸಿದರು.

    ಪ್ರತಿಭಾ ಪುರಸ್ಕಾರದಿಂದ ಇನ್ನುಳಿದವರಿಗೆ ಪ್ರೋತ್ಸಾಹ ದೊರೆತು ಅವರು ಕೂಡ ಸಾಧಕರ ಪ್ರಶಸ್ತಿಗೆ ಭಾಜನರಾಗಬೇಕು. ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಎಲ್ಲ ಅಧಿಕಾರಿಗಳು ಜನರ ಕುಂದು-ಕೊರತೆ ಅರಿತು ಕೆಲಸ ನಡೆಸಿದಲ್ಲಿ ಸಮಾಜದ ಬೆಳವಣಿಗೆ ಉತ್ತಮ ರೀತಿಯಲ್ಲಿ ಕಾಣಬಹುದಾಗಿದೆ. ತಾಲೂಕಿನ ಕೆ. ಶಿವಾಪುರದಲ್ಲಿ 8 ಕೋಟಿ ರೂ. ಅನುದಾನದಲ್ಲಿ ವೀರರಾಣಿ ಕಿತ್ತೂರ ಚನ್ನಮ್ಮ ವಸತಿ ಶಾಲೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಪಡಿಸಲಾಗಿದೆ ಎಂದರು.

    ಪೋಲಿಯೋ ಮುಕ್ತ ಭಾರತದಂತೆ ಅನಕ್ಷರಸ್ಥ ಮುಕ್ತ ಭಾರತ ನಿರ್ಮಾಣದತ್ತ ಸರ್ಕಾರಗಳು ಶಿಕ್ಷಣಕ್ಕಾಗಿ ಸಾಕಷ್ಟು ಯೋಜನೆ ಜಾರಿಗೆ ತಂದಿವೆ. ಸರ್ವಶಿಕ್ಷಣ ಅಭಿಯಾನ, ಬೈಸಿಕಲ್, ಭಾಗ್ಯಲಕ್ಷ್ಮೀ ಯೋಜನೆಗಳು ಪ್ರಮುಖವಾಗಿವೆ. ಶಿಕ್ಷಕರು ತಾರತಮ್ಯ ಮಾಡದೆ ಎಲ್ಲ ಮಕ್ಕಳ ಉಜ್ವಲ ಭವಿಷ್ಯ ರೂಪಿಸುತ್ತ ಗಮನ ನೀಡಬೇಕು ಎಂದು ಶಿಕ್ಷಕರಿಗೆ ಕರೆ ನೀಡಿದರು.

    ಲೋಕಾಯುಕ್ತ ಪೊಲೀಸ್ ಅಧೀಕ್ಷಕಿ ಯಶೋದಾ ವಂಟಗೋಡಿ ಮಾತನಾಡಿ, ಅಂಕ ಗಳಿಕೆಗಿಂತ ಜ್ಞಾನಾರ್ಜನೆ ಮುಖ್ಯ. ಅಂಕ ಗಳಿಸುವ ಒತ್ತಡಕ್ಕೆ ಸಿಲುಕಿಸದೆ ಅವರಲ್ಲಿನ ಪ್ರತಿಭೆ ಗುರುತಿಸಿ ಸೂಕ್ತ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡಿ ಮಾದರಿ ವ್ಯಕ್ತಿಯನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.

    ರತ್ನಾ ಮಾಮನಿ ಮಾತನಾಡಿ, ಮಹಿಳೆ ಸುಶಿಕ್ಷಿತವಾದಲ್ಲಿ ಸಂಸ್ಕಾರ ವೃದ್ಧಿಯಾಗುತ್ತದೆ. ಆಡಂಬರದ ಜೀವನ ಬದಿಗಿಟ್ಟು ಸರಳ ಸಾಂಪ್ರದಾಯಿಕ ಜೀವನ ಸಾಗಲಿ. ಕನಿಷ್ಠ 10 ನೇ ತರಗತಿವರೆಗೆ ಮಕ್ಕಳು ಪಾಲಕರ ಜೊತೆಗಿರಲಿ. ನನ್ನ ಮಗಳನ್ನು ಐಪಿಎಸ್ ಅಧಿಕಾರಿಯನ್ನಾಗಿ ಮಾಡುವ ಗುರಿ ಹೊಂದಿದ್ದು ತಮ್ಮೆಲ್ಲರ ಆಶೀರ್ವಾದ ಅವಳಿಗಿರಲಿ ಎಂದು ಆಶಿಸಿದರು.

    ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಹಾಗೂ ಪ್ರತಿಭಾವಂತ ಮಕ್ಕಳಿಗೆ ಸನ್ಮಾನ ಜರುಗಿತು. ಜತೆಗೆ ನೂತನವಾಗಿ ಶಿಕ್ಷಕರ ಸೇವಾ ಬ್ಲಾಗ್ ಅನಾವರಣಗೊಳಿಸಲಾಯಿತು. ನಿವೃತ್ತಿ ಹೊಂದಿದ ಶಿಕ್ಷಕರನ್ನು ಸನ್ಮಾನಿಸಲಾಯಿತು.
    ಅಧ್ಯಕ್ಷ ಸಿ.ಎಸ್. ಷಡಕ್ಷರಿ, ಪ್ರಧಾನ ಕಾರ್ಯದರ್ಶಿ ಜಗದೀಶ ಪಾಟೀಲ, ಆರ್‌ಎಫ್‌ಒ ಸುನೀತಾ ನಿಂಬರಗಿ, ಸಿಡಿಪಿಒ ಕಾಂಚನಾ ಅಮಠೆ, ಪ್ರಮೀಳಾ ಕಾಮನಹಳ್ಳಿ, ಆಶಾ ಯಮನಕಮರಡಿ, ಜಿಲ್ಲಾ ಉಪಾಧ್ಯಕ್ಷ ಆನಂದ ಮೂಗಬಸವ, ಸುರೇಶ ಬೆಳವಡಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts