More

  ಬರ ಸಿಡಿಲು ನಾನಾ ಗೋಳು: ರಾಜ್ಯದೆಲ್ಲೆಡೆ ರಾಸುಗಳಿಗೆ ಮೇವಿಲ್ಲ, ಬೆಂಕಿ ನಂದಿಸಲೂ ನೀರಿಲ್ಲ

  ಭೀಕರ ಬರಗಾಲ ಕೃಷಿ ಮೇಲಷ್ಟೇ ಅಲ್ಲ, ರೈತರ ಜೀವನಕ್ಕೆ ಆಧಾರವಾಗಿದ್ದ ಹೈನುಗಾರಿಕೆಗೂ ಬರೆ ಎಳೆದಿದೆ. ನೀರಿನ ಸಮಸ್ಯೆ ಜತೆಗೆ ಮೇವಿಗೆ ಹಣ ಹೊಂದಿಸಲಾಗದೆ ರೈತರು ಜಾನುವಾರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಜೋಡಿ, ಹೋರಿ, ಎತ್ತುಗಳ ದರ ಕುಸಿತವಾಗಿರುವುದು ರೈತರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ. ಮತ್ತೊಂದೆಡೆ ರಣಬಿಸಿಲಿನ ವಾತಾವರಣದಲ್ಲಿ ರಾಜ್ಯದಲ್ಲಿ ಅಗ್ನಿ ಅವಘಡ ಪ್ರಕರಣ ಹೆಚ್ಚಾಗುತ್ತಿದೆ. ಕೆಲವೆಡೆ ಬೆಂಕಿ ನಂದಿಸುವುದಕ್ಕೂ ನೀರಿಲ್ಲದ ಪರಿಸ್ಥಿತಿ ನಿರ್ವಣವಾಗಿರುವುದು ಆತಂಕ ಮೂಡಿಸಿದೆ.

  | ಮಂಜುನಾಥ ಕೋಳಿಗುಡ್ಡ ಬೆಳಗಾವಿ

  ಬರದಿಂದ ಮಳೆ-ಬೆಳೆ, ಆದಾಯ ಇಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರು ಇದೀಗ ಜಾನುವಾರುಗಳ ನಿರ್ವಹಣೆ ಮಾಡಲಾಗದೆ ಹೈರಾಣಾಗಿದ್ದಾರೆ. ಮತ್ತೊಂದೆಡೆ ವಾರದ ಸಂತೆ, ಜಾತ್ರೆಗಳಲ್ಲಿ ಜೋಡಿ ಎತ್ತು, ಹೋರಿಗಳ ಬೆಲೆ ಕುಸಿದಿರುವುದು ಮತ್ತಷ್ಟು ಸಂಕಷ್ಟ ಹೆಚ್ಚಿಸಿದೆ.

  ರಾಜ್ಯದಲ್ಲಿ ಬರದಿಂದಾಗಿ ಬಿತ್ತಿದ ಬೀಜಗಳು ಮೊಳಕೆಯೊಡೆ ಯುತ್ತಿಲ್ಲ. ಇದರಿಂದ ಲಕ್ಷಾಂತರ ರೂ. ಬಂಡವಾಳ ಹೂಡಿದ ರೈತರ ಸ್ಥಿತಿ ಅಯೋಮಯವಾಗಿದೆ. ಜತೆಗೆ ಸಂಸಾರದ ಬಂಡಿ ಸಾಗಿಸಲು ಕಷ್ಟ ಎನ್ನುತ್ತಿರುವ ರೈತರಿಗೆ ಜಾನುವಾರುಗಳಿಗೆ ನೀರು, ಮೇವು ಒದಗಿಸುವುದೇ ಸವಾಲಾಗಿದೆ. ಒಂದು ಟೇಲರ್ ಮೇವಿನ ದರ 18 ರಿಂದ 30 ಸಾವಿರ ರೂ. ಏರಿಕೆ ಕಂಡಿದೆ. ಹೀಗಾಗಿ ರೈತರು ಎಮ್ಮೆ, ಹಸುಗಳನ್ನು ನಿರ್ವಹಣೆ ಮಾಡಲು ಸಾಧ್ಯವಾಗದೆ ಮಾರಾಟ ಮಾಡುತ್ತಿದ್ದಾರೆ.

  ಹಸಿ ಮೇವು ಕೊರತೆ ಯಿಂದಾಗಿ ಸ್ವಂತ ಜಮೀನು ಇಲ್ಲದಿರುವವರು ಎಮ್ಮೆ, ಹಸುಗಳನ್ನು ಅಗ್ಗದ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿದ್ದರಿಂದ ರೈತರು ಎತ್ತು, ಹೋರಿಗಳನ್ನು ಮಾರಾಟ ಮಾಡುವ ಪ್ರಮಾಣ ಹೆಚ್ಚಳವಾಗಿದೆ. 2023ಕ್ಕೆ ಹೋಲಿಸಿದರೆ ಈ ವರ್ಷ ಮಾರಾಟ ಪ್ರಮಾಣ ಶೇ.21ರಷ್ಟು ಹೆಚ್ಚಳವಾಗಿದೆ. ಆದರೆ, ಖರೀದಿಸುವ ರೈತರ ಪ್ರಮಾಣ ಕಡಿಮೆಯಾಗಿದೆ ಎಂದು ಎಪಿಎಂಸಿ ಮಾರುಕಟ್ಟೆ ಅಧಿಕಾರಿಗಳು ತಿಳಿಸಿದ್ದಾರೆ.

  Januvaru

  ಮೇಯಿಸೋದು ಕಷ್ಟ: ಮಳೆ ಇಲ್ಲ, ಬೆಳೆ ಇಲ್ಲ, ಎತ್ತು, ಎಮ್ಮೆ, ಆಕಳುಗಳನ್ನು ಮೇಯಿಸೋದು ಬಹಳ ಕಷ್ಟವಾಗಿದೆ. ಕಾರ್ವಿುಕರ ಕೂಲಿ ದಿನಕ್ಕೆ 500 ರೂ. ಆಗೈತಿ. ಕಬ್ಬು ಕಟಾವು ಮುಗಿದೈತಿ, ಮೇವು ಇಲ್ಲ. ಅದಕ್ಕೆ ಎಮ್ಮೆ, ಆಕಳು ಬಿಟ್ಟು ಎತ್ತು, ಹೋರಿಗಳನ್ನು ಮಾರಾಕ ಬಂದೀನಿ. ಆದರೆ, ಯಾರೂ ಕೇಳುತ್ತಿಲ್ಲ. ಮಧ್ಯವರ್ತಿಗಳು ಅಡ್ಡಾದಿಡ್ಡಿ ಕೇಳಕತಾರ. ಕಳೆದ ವರ್ಷ ಜೋಡತ್ತಿಗೆ 2.30 ಲಕ್ಷ ರೂ. ಮಾರಾಟ ಮಾಡಿದ್ವಿ. ಈ ವರ್ಷ 1 ಲಕ್ಷ ಕೇಳತಾರ. ಹೊಲದಾಗ ಕೆಲಸಿಲ್ಲ. ಎಲ್ಲದಕ್ಕೂ ಟ್ರ್ಯಾಕ್ಟರ್ ಬಳಕೆ ಮಾಡ್ತೀವಿ. ಎತ್ತಗಳನ್ನು ಕೊಳ್ಳುವವರ ರೈತರ ಸಂಖ್ಯೆ ಕಡಿಮೆ ಇದೆ. ಈ ವರ್ಷ ಮಳೆ ಆಗದಿದ್ದರೆ ಜಾನುವಾರುಗಳನ್ನು ನಿರ್ವಹಣೆ ಮಾಡುವುದು ಕಷ್ಟವಾಗಲಿದೆ ಎಂದು ಮೂಡಲಗಿ, ರಾಮದುರ್ಗ, ಸವದತ್ತಿ ತಾಲೂಕಿನ ರೈತರಾದ ನಿಂಗಪ್ಪ ಹೊರಟ್ಟಿ, ಮಾರುತಿ ಪೂಜೇರ, ವಿಠ್ಠಲ ನಾಯಕ ಆತಂಕ ವ್ಯಕ್ತಪಡಿಸಿದ್ದಾರೆ.

  ಕೆಲ ಭಾಗದಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಎತ್ತುಗಳನ್ನು ಮಾರಾಟ ಮಾಡುತ್ತಾರೆೆ. ಮಳೆಗಾಲ ಆರಂಭವಾದರೆ ಮತ್ತೆ ಖರೀದಿಸುತ್ತಾರೆ. ಬೇಸಿಗೆಯಲ್ಲಿ ಎತ್ತು, ಹೋರಿ, ಹಸುಗಳ ದರದಲ್ಲಿ ಏರಿಳಿತ ಆಗುತ್ತದೆ.

  | ಡಾ.ರಾಜೀವ ಕೂಲೇರ ಪಶು ಸಂಗೋಪನೆ ಇಲಾಖೆ ಜಂಟಿ ನಿರ್ದೇಶಕ

  ಹಾಲು ಉತ್ಪಾದನೆಯೂ ಕುಂಠಿತ
  ಬರದ ಪರಿಣಾಮ ಹಾಲು ಉತ್ಪಾದನೆಗೂ ತಟ್ಟಿದೆ. 2022ರ ಬೇಸಿಗೆಗೆ ಹೋಲಿಸಿದರೆ 2023ರಲ್ಲಿ ಕರ್ನಾಟಕದಲ್ಲಿ 8.15 ಲಕ್ಷ ಲೀಟರ್ ಹಾಲು ಉತ್ಪಾದನೆ ಹೆಚ್ಚಳವಾಗಿತ್ತು. ಆದರೆ ಈ ಬಾರಿ ಬರದ ತೀವ್ರತೆ ಹೆಚ್ಚಿರುವುದರಿಂದ ನೀರು, ಮೇವಿನ ಸಮಸ್ಯೆಯಿಂದಾಗಿ ಅರ್ಧಕ್ಕರ್ಧದಷ್ಟು ಹಾಲು ಉತ್ಪಾದನೆ ಕುಂಠಿತವಾಗಿದೆ.

  ಅಗ್ನಿ ಅವಘಡ, ಆತಂಕ ಉಲ್ಬಣ

  | ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ

  ಬರ, ಬಿಸಿಲ ತಾಪ ಕರುನಾಡಿಗೆ ಜಲಾಘಾತವನ್ನಷ್ಟೇ ತಂದಿಲ್ಲ, 2024ರ ಜನವರಿಯಿಂದ ಅಗ್ನಿ ದುರಂತ ಪ್ರಕರಣಗಳು ಹೆಚ್ಚಾಗಿದ್ದು, ರಾಜ್ಯದ ಅಗ್ನಿಶಾಮಕ ಠಾಣೆಗಳಿಗೆ ನಿತ್ಯ 150ಕ್ಕೂ ಹೆಚ್ಚು ಕರೆಗಳು ಬರುತ್ತಿವೆ. ರಾಜ್ಯದ ವಿವಿಧ ಅಗ್ನಿಶಾಮಕ ಠಾಣೆಗಳಿಗೆ 2023ರ ಜನವರಿಯಿಂದ ಡಿಸೆಂಬರ್​ವರೆಗೆ 28,178 ಕರೆಗಳು ಬಂದಿರುವುದು ಗಂಭೀರತೆಗೆ ಸಾಕ್ಷಿ. ಅಗ್ನಿ ಅವಘಡ ಹೆಚ್ಚುತ್ತಿರುವಂತೆಯೇ, ಬೆಂಕಿ ನಂದಿಸುವುದಕ್ಕೂ ನೀರಿನ ಕೊರತೆ ಕಾಡುತ್ತಿರುವುದು ಅನಾಹುತ ಹೆಚ್ಚಲು ಕಾರಣವಾಗುತ್ತಿದೆ. ಈ ಬಾರಿ ಸಕಾಲಕ್ಕೆ ಮಳೆಯಾಗದಿದ್ದರೆ ದುರಂತಗಳ ಸಂಖ್ಯೆ ಹೆಚ್ಚಳವಾಗುವ ಆತಂಕ ಕಾಡುತ್ತಿದೆ. ನಿತ್ಯದ 150 ಪ್ರಕರಣಗಳಲ್ಲಿ ಎಲ್ಲವೂ ಅಸಲಿ ಕರೆ ಆಗಿರುವುದಿಲ್ಲ, ಕೆಲವು ಹುಸಿ ಕರೆಗಳಾಗಿರುತ್ತವೆ. ಆದರೂ, ಫೆಬ್ರವರಿ ನಂತರದಲ್ಲಿ ಅಗ್ನಿ ದುರಂತ ಪ್ರಕರಣಗಳ ಗಂಭೀರ ಕರೆಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಆತಂಕ ಮೂಡಿಸಿದೆ.

  ಹೇಗೆಲ್ಲ ಅವಘಡ?
  * ಬಿಸಿಲಲ್ಲಿ ಕಸದ ರಾಶಿಗೆ ಬೆಂಕಿ ಹಚ್ಚುವುದು
  * ಒಣಹುಲ್ಲು, ಮರ, ಎಲೆಗಳಿಗೆ ಕಾಳ್ಗಿಚ್ಚು
  * ಶಾರ್ಟ್​ಸರ್ಕ್ಯೂಟ್​ನಿಂದ ಅವಘಡಗಳು, ಬೀಡಿ, ಸಿಗರೇಟು ಎಲ್ಲೆಂದರಲ್ಲಿ ಎಸೆಯುವುದು
  * ಎಲ್​ಪಿಜಿಗಳ ಅಸಮರ್ಪಕ ನಿರ್ವಹಣೆ

  ಸುರಕ್ಷತೆ ಸಲಹೆಗಳು
  * ಬೀಡಿ, ಸಿಗರೇಟು ಬಳಸಿದ ಬಳಿಕ ನಂದಿಸಿ, ಒಡೆದ ಗಾಜು, ತ್ಯಾಜ್ಯ ಸೂಕ್ತ ವಿಲೇವಾರಿ
  * ಅಗ್ನಿಶಾಮಕದಳದ ನಿಯಮ ಪಾಲಿಸಿರಿ, ಎಲ್​ಪಿಜಿ, ಸ್ವಿಚ್​ಬೋರ್ಡ್ ನಿಗಾ ಇಡಿ
  * ಸುತ್ತಮುತ್ತ ಅವಘಡ ಕಂಡರೆ ಮಾಹಿತಿ ನೀಡಿ

  ಬೆಂಕಿ ನಂದಿಸಲು ತೀವ್ರ ಪರದಾಟ

  ಬೆಂಗಳೂರು: ಕೊತ್ತನೂರಿನ ಗೋದಾಮಿಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಭಾರಿ ಪ್ರಮಾಣದ ವಸ್ತುಗಳು ಸುಟ್ಟು ಕರಕಲಾಗಿವೆ. ಗವಿಸಿದ್ದೇಶ್ವರ ದೇವಸ್ಥಾನ ಸಮೀಪದ ಗೋದಾಮಿನಲ್ಲಿ ಸೋಮವಾರ ಮುಂಜಾನೆ 4 ಗಂಟೆಗೆ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ, ಬೆಂಕಿ ನಂದಿಸಲು ನೀರಿನ ಕೊರತೆ ಉಂಟಾಗಿ ಅಗ್ನಿಶಾಮಕ ಸಿಬ್ಬಂದಿ ಕೆಲಕಾಲ ಪರದಾಡಿತು. ಬಳಿಕ ಭಾರತಿ ಸಿಟಿ, ಮಾನ್ಯತಾ ಟೆಕ್​ಪಾರ್ಕ್, ಪೂರವಂಕರ ಅಪಾರ್ಟ್​ವೆುಂಟ್ ಸ್ವಿಮ್ಮಿಂಗ್ ಪೂಲ್​ಗಳ ನೀರನ್ನು ಬಳಸಿಕೊಳ್ಳಲಾಯಿತು.

  ನೀರಿಗಾಗಿ ಅಪಾರ್ಟ್​ವೆುಂಟ್​ಗಳಿಗೆ ಮೊರೆ: ಅಕ್ಕಿ, ಬೇಳೆ, ಗೋಧಿ ಹಿಟ್ಟು, ಅಡುಗೆ ಎಣ್ಣೆ ಸೇರಿ ವಿವಿಧ ಬಗೆಯ ದಿನಸಿ ಸಾಮಗ್ರಿಗಳನ್ನು ಗೋದಾಮಿನಲ್ಲಿ ಶೇಖರಿಸಿ ಇಡಲಾಗಿತ್ತು. ತ್ವರಿತಗತಿಯಲ್ಲಿ ಬೆಂಕಿ ಆರಿಸಲು ಸ್ಥಳೀಯ ಅಪಾರ್ಟ್​ವೆುಂಟ್​ಗಳ ಈಜುಕೊಳದಲ್ಲಿದ್ದ ನೀರನ್ನು ತರಿಸಿಕೊಂಡು 9 ಅಗ್ನಿಶಾಮಕ ವಾಹನಗಳಿಂದ 80 ಮಂದಿ ಸಿಬ್ಬಂದಿಯು ಅಗ್ನಿಯನ್ನು ನಂದಿಸಿದ್ದಾರೆ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನೀರಿನ ಕೊರತೆಯಿಂದಾಗಿ ಬೆಂಕಿ ನಂದಿಸುವ ಕಾರ್ಯಾಚರಣೆ ಕೆಲಕಾಲ ಸ್ಥಗಿತವಾಗಿತ್ತು. ಇತ್ತ ಬೆಂಕಿ ಮತ್ತೆ ಮತ್ತೆ ಹೆಚ್ಚಾಗುತ್ತಲೇ ಇತ್ತು. ಇದರಿಂದಾಗಿ ಭಾರತಿ ಸಿಟಿ, ಮಾನ್ಯತಾ ಟೆಕ್ ಪಾರ್ಕ್, ಪೂರ್ವಂಕರ ಅಪಾರ್ಟ್​ವೆುಂಟ್​ಗಳಿಗೆ ನೀರಿಗಾಗಿ ಮೊರೆಯಿಡಲಾಯಿತು. ಅಲ್ಲಿದ್ದ ಸ್ವಿಮ್ಮಿಂಗ್ ಪೂಲ್​ನ ನೀರನ್ನು ಬಳಸಿಕೊಳ್ಳಲಾಯಿತು.

  ಕರ್ಮದ ಫಲ ಸಿಲ್ಕ್​ ಸ್ಮಿತಾ ಸಾವಿಗೆ ಕಾರಣವಾಯ್ತಾ? ಅತಿದೊಡ್ಡ ರಹಸ್ಯ ಬಯಲು ಮಾಡಿದ ಹಿರಿಯ ನಟಿ

  ಶಾಸ್ತ್ರೋಕ್ತವಾಗಿ ಸಹೋದರನನ್ನೇ ಮದುವೆಯಾದ ಮಹಿಳೆ! ಕಾರಣ ತಿಳಿದರೆ ಹೌಹಾರ್ತೀರಾ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts