More

    ನಗರದೆಲ್ಲೆಡೆ ‘ನಮ್ಮ ನಡೆ ಮತಗಟ್ಟೆಯ ಕಡೆ’ ಕಾರ್ಯಕ್ರಮ

    ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ ಹೆಚ್ಚಿನ ಪ್ರಮಾಣದ ಮತದಾನ ಆಗುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಹಾಗೂ ಬಿಬಿಎಂಪಿ ಜಂಟಿಯಾಗಿ ಭಾನುವಾರ ನಗರದ ವಿವಿಧೆಡೆ ಮತದಾರರ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

    ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯ ಚುನಾವಣಾಧಿಕಾರಿಗಳು, ಅಪರ ಜಿಲ್ಲಾ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಜಾಥಾ ನಡೆಸಿ, ಸ್ಥಳೀಯ ಮತಗಟ್ಟೆ ವ್ಯಾಪ್ತಿಯ ಮತದಾರರೊಂದಿಗೆ ಮತದಾನ ಮಾಡುವಂತೆ ಅರಿವು ಮೂಡಿಸಲಾಯಿತು. ಮತದಾನಕ್ಕೆ ಆಯೋಗ ಎಲ್ಲ ಸಿದ್ಧತೆ ಮಾಡಿಕೊಂಡಿದ್ದು ಜನರು ನಿರ್ಭೀತಿಯಿಂದ ಮತ ಚಲಾಯಿಸಬೇಕು ಎಂದು ಚುನಾವಣಾಧಿಕಾರಿಗಳು ಮನವಿ ಮಾಡಿದರು.

    ಯಲಹಂಕ ವಲಯದ ಜಕ್ಕೂರು ಬಡಾವಣೆಯಲ್ಲಿ ಆಯೋಜಿಸಿದ್ದ ‘ನಮ್ಮ ನಡೆ ಮತಗಟ್ಟೆಯ ಕಡೆ ’ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಹಾಗೂ ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಚಾಲನೆ ನೀಡಿದರು.

    ಇದೇ ವೇಳೆ ಪಾಲಿಕೆಯ ಅಧಿಕಾರಿ/ಸಿಬ್ಬಂದಿಗಳು, ನಾಗರಿಕರು, ವಿದ್ಯಾರ್ಥಿಗಳು, ಸೈಕಲ್ ಹಾಗೂ ಕಾಲ್ನಡಿಗೆ ಮೂಲಕ ನಡೆದ ಜಾಥಾಕಾರ್ಯಕ್ರಮದಲ್ಲಿ ಎಲ್ಇಡಿ ಪರೆದೆಯುಳ್ಳ ವಾಹನದಲ್ಲಿ ಚುನಾವಣಾ ಗೀತೆಯನ್ನು ಬಳಸಿಕೊಂಡು, ರಸ್ತೆಯುದ್ದಕ್ಕೂ ಭಿತ್ತಿಪತ್ರಗಳನ್ನು ಪ್ರದರ್ಶಿಸುತ್ತಾ, ಘೋಷಣೆ ಮೊಳಗಿಸಿ ರಸ್ತೆಯುದ್ದಕ್ಕೂ ಮತದಾರರಲ್ಲಿ ಏ.26ರಂದು ತಪ್ಪದೇ ಮತದಾನ ಮಾಡಲು ಮನವಿ ಮಾಡಲಾಯಿತು.

    ಮಾನವ ಸರಪಳಿ ಹಾಗೂ ಜಾಗೃತ ಗೀತೆ:

    ಜಕ್ಕೂರು ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ನಾಗರಿಕರಲ್ಲಿ ಮತದಾನ ಮಾಡಲು ಜಾಗೃತಿ ಮೂಡಿಸಲಾಯಿತು. ಜತೆಗೆ ಮತದಾನದ ಕುರಿತು ಜಾಗೃತಿ ಗೀತೆಯನ್ನು ಹಾಡಲಾಯಿತು.

    ಜಾಥಾದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಪಿ.ಎಸ್. ಕಾಂತರಾಜು, ಪಾಲಿಕೆಯ ಯಲಹಂಕ ವಲಯ ಆಯುಕ್ತ ಕರೀಗೌಡ, ಜಂಟಿ ಆಯುಕ್ತ ಮೊಹ್ಮದ್ ನಯೀಮ್ ಮೊಮಿನ್, ಉಪ ಆಯುಕ್ತ ಮಮತಾ, ಚುನಾವಣಾ ರಾಯಭಾರಿ ನೀತು ವನಜಾಕ್ಷಿ ಸೇರಿ ಇನ್ನಿತರರು ಹಾಜರಿದ್ದರು.

    ಮತಗಟ್ಟೆಗಳ ಬಳಿ ಸೌಲಭ್ಯಗಳ ಪರಿಶೀಲನೆ:

    ಜಕ್ಕೂರಿನ ಸರ್ಕಾರಿ ಮಾದರಿ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ 7 ಮತಗಟ್ಟೆಗಳು ಬರಲಿದ್ದು, ಕನಿಷ್ಠ ಸೌಲಭ್ಯಗಳಿರುವುದನ್ನು ಪರಿಶೀಲಿಸಿ, ಮತದಾನದ ದಿನ ಯಾವುದೇ ರೀತಿಯ ಸಮಸ್ಯೆಯಾಗದಂತೆ ಎಲ್ಲ ರೀತಿಯ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕೆಂದು ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts